
ಗೃಹಜ್ಯೋತಿಗೆ ಕತ್ತರಿ ಹಾಕಲು ಸರ್ಕಾರದ ಹುನ್ನಾರ?": ದಾಖಲೆ ಮರುಪರಿಶೀಲನೆಗೆ ಬಿಜೆಪಿ ಕಿಡಿ
ಫಲಾನುಭವಿಗಳ ಮರುಪರಿಶೀಲನೆಯ ಹೆಸರಿನಲ್ಲಿ ಪ್ಯಾನ್ ಕಾರ್ಡ್ ಮತ್ತು ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸುತ್ತಿರುವುದು ತೀವ್ರ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಘೋಷಿಸಿದ್ದ ಗ್ಯಾರಂಟಿ ಯೋಜನೆಗಳ ಪೈಕಿ ಅತ್ಯಂತ ಮಹತ್ವದ ಗೃಹಜ್ಯೋತಿ ಯೋಜನೆ ಇದೀಗ ವಿವಾದದ ಸುಳಿಯಲ್ಲಿ ಸಿಲುಕಿದೆ. ಚುನಾವಣೆ ಸಂದರ್ಭದಲ್ಲಿ ಯಾವುದೇ ಷರತ್ತಿಲ್ಲದೆ ಎಲ್ಲರಿಗೂ 200 ಯೂನಿಟ್ ಉಚಿತ ವಿದ್ಯುತ್" ಎಂದು ಭರವಸೆ ನೀಡಿದ್ದ ಸರ್ಕಾರ, ಇದೀಗ ಫಲಾನುಭವಿಗಳ ಮರುಪರಿಶೀಲನೆಯ ಹೆಸರಿನಲ್ಲಿ ಪ್ಯಾನ್ ಕಾರ್ಡ್ ಮತ್ತು ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯಗೊಳಿಸುತ್ತಿರುವುದು ತೀವ್ರ ರಾಜಕೀಯ ಸಂಚಲನಕ್ಕೆ ಕಾರಣವಾಗಿದೆ. ಈ ಕ್ರಮವು ಬಡ ಮತ್ತು ಮಧ್ಯಮ ವರ್ಗದವರನ್ನು ಯೋಜನೆಯಿಂದ ವಂಚಿಸುವ 'ಯು-ಟರ್ನ್' ನೀತಿಯಾಗಿದೆ ಎಂದು ಪ್ರತಿಪಕ್ಷ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ವೇದಿಕೆಗಳ ಮೇಲೆ "ಕಾಕಾ ಪಾಟೀಲನಿಗೂ ಫ್ರೀ, ಮಹಾದೇವಪ್ಪನಿಗೂ ಫ್ರೀ, ಎಲ್ಲರಿಗೂ ಫ್ರೀ" ಎಂದು ಬೊಬ್ಬೆ ಹೊಡೆದು ಜನರಿಗೆ ಭರವಸೆ ನೀಡಿದ್ದರು. ಅಧಿಕಾರಕ್ಕೆ ಬಂದ ತಕ್ಷಣ ಗ್ಯಾರಂಟಿಗಳನ್ನು ಜಾರಿಗೆ ತಂದ ಸರ್ಕಾರಕ್ಕೆ, ಇದೀಗ ರಾಜ್ಯದ ಖಜಾನೆಯ ನಿರ್ವಹಣೆ ಸವಾಲಾಗಿ ಪರಿಣಮಿಸಿದೆ. ಖಜಾನೆ ಸಂಪೂರ್ಣ ದಿವಾಳಿಯಾಗಿದ್ದು, ಆರ್ಥಿಕ ಮುಗ್ಗಟ್ಟಿನಿಂದ ಪಾರಾಗಲು ಸರ್ಕಾರ ಈಗ ಫಲಾನುಭವಿಗಳ ಸಂಖ್ಯೆಗೆ ಕತ್ತರಿ ಹಾಕಲು ಈ ಹೊಸ 'ಮನೆ-ಮನೆ ಪರಿಶೀಲನೆ'ಯ ಹುನ್ನಾರ ನಡೆಸಿದೆ ಎಂದು ಆರೋಪಿಸಿದ್ದಾರೆ.
ವಿವಾದಕ್ಕೆ ಕಾರಣವಾದ ದಾಖಲೆಗಳ ಸಂಗ್ರಹ
ಇತ್ತೀಚೆಗೆ ಗೃಹಜ್ಯೋತಿ ಫಲಾನುಭವಿಗಳ ಅರ್ಹತೆಯನ್ನು ಮರುಪರಿಶೀಲಿಸಲು ಎಸ್ಕಾಂ ಸಿಬ್ಬಂದಿ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ವೇಳೆ ಸಾರ್ವಜನಿಕರಲ್ಲಿ ಪ್ಯಾನ್ ಕಾರ್ಡ್ ಮತ್ತು ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸುವಂತೆ ಕೇಳಲಾಗುತ್ತಿದೆ. ಸರ್ಕಾರಿ ಯೋಜನೆಗಳ ಫಲಾನುಭವಿಗಳನ್ನು ಗುರುತಿಸಲು ಆಧಾರ್ ಕಾರ್ಡ್ ಅಥವಾ ಮತದಾರರ ಗುರುತಿನ ಚೀಟಿಯೇ ಸಾಕು ಎಂಬುದು ಸಾರ್ವತ್ರಿಕ ಅಭಿಪ್ರಾಯ. ಹೀಗಿರುವಾಗ, ಜಾತಿ ಪ್ರಮಾಣ ಪತ್ರ ಮತ್ತು ಪ್ಯಾನ್ ಕಾರ್ಡ್ ಅನ್ನು ಕೇಳುತ್ತಿರುವುದು ಏಕೆ? ಉಚಿತ ವಿದ್ಯುತ್ ಯೋಜನೆಗೂ ಜಾತಿಗೂ ಏನು ಸಂಬಂಧ? ಫಲಾನುಭವಿಯ ಆರ್ಥಿಕ ಸ್ಥಿತಿಗೂ ಜಾತಿಗೂ ಸಂಬಂಧ ಕಲ್ಪಿಸುವ ಮೂಲಕ ಸರ್ಕಾರ ಸಮಾಜದಲ್ಲಿ ಹೊಸದಾದ ವರ್ಗೀಕರಣವನ್ನು ಮಾಡುತ್ತಿದೆಯೇ? ವಿದ್ಯುತ್ ಬಳಕೆದಾರರ ಆದಾಯದ ಮಿತಿಯನ್ನು ಪರಿಶೀಲಿಸಲು ಪ್ಯಾನ್ ಕಾರ್ಡ್ ಕೇಳುವುದು, ತೆರಿಗೆ ಪಾವತಿಸುವವರನ್ನು ಯೋಜನೆಯಿಂದ ಹೊರಗಿಡುವ ಸರ್ಕಾರದ ಪರೋಕ್ಷ ತಂತ್ರವೇ? ಅಧಿಕಾರಕ್ಕೆ ಬರುವ ಮೊದಲು 'ಷರತ್ತಿಲ್ಲದ ಉಚಿತ' ಎಂದಿದ್ದ ಸರ್ಕಾರ, ಇದೀಗ ಷರತ್ತುಗಳನ್ನು ಹೇರುವ ಮೂಲಕ ಜನರ ದಾರಿ ತಪ್ಪಿಸುತ್ತಿದೆಯೇ? ಎಂದು ಆಕ್ರೋಶ ನಡೆಸಿದ್ದಾರೆ.
ಸರ್ಕಾರದ ನಡೆಯ ಹಿಂದಿನ ಉದ್ದೇಶವೇನು?
ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಪ್ರತಿದಿನ ಸಾವಿರಾರು ಕೋಟಿ ರೂಪಾಯಿಗಳ ಅಗತ್ಯವಿದೆ. ಇಷ್ಟು ದೊಡ್ಡ ಮೊತ್ತದ ಹಣವನ್ನು ಕ್ರೋಢೀಕರಿಸಲು ಸಾಧ್ಯವಾಗದ ಸರ್ಕಾರ, ಹಂತ ಹಂತವಾಗಿ ಫಲಾನುಭವಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ಮೂಲಕ ಆರ್ಥಿಕ ಹೊರೆ ತಗ್ಗಿಸಿಕೊಳ್ಳಲು ನೋಡುತ್ತಿದೆ. ಲಕ್ಷಾಂತರ ಬಡ ಮತ್ತು ಮಧ್ಯಮ ವರ್ಗದವರನ್ನು ಈ ಯೋಜನೆಯಿಂದ ವಂಚಿಸಲು ಸರ್ಕಾರ ಈ ಹೊಸ ದಾಖಲೆಗಳ ಆಟವನ್ನು ಆಡುತ್ತಿದೆ. ಇದು ಜನರಿಗೆ ಮಾಡಿರುವ ದ್ರೋಹ. ಸುಳ್ಳು ಭರವಸೆಗಳನ್ನು ನೀಡಿ ಅಧಿಕಾರಕ್ಕೆ ಬಂದ ಸರ್ಕಾರ, ಈಗ ತಾನು ಕೊಟ್ಟ ಮಾತಿನಿಂದ ಹಿಂದೆ ಸರಿಯುತ್ತಿದೆ. ಜನರ ಹಕ್ಕನ್ನು ಕಸಿದುಕೊಳ್ಳುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ. ದಾಖಲೆಗಳ ಹೆಸರಿನಲ್ಲಿ ಸಾರ್ವಜನಿಕರನ್ನು ಸತಾಯಿಸುವುದು ಮತ್ತು ಗೊಂದಲ ಸೃಷ್ಟಿಸುವುದು ಸರ್ಕಾರದ ಜನವಿರೋಧಿ ನೀತಿಯ ಸಂಕೇತವಾಗಿದೆ ಎಂದು ಕಿಡಿಕಾರಿದ್ದಾರೆ.
ಜನಸಾಮಾನ್ಯರ ಮೇಲಿನ ಪರಿಣಾಮ
ಅನಕ್ಷರಸ್ಥರು ಮತ್ತು ಬಡ ಜನರಿಗೆ ತಮ್ಮ ಬಳಿ ಇರುವ ಎಲ್ಲಾ ದಾಖಲೆಗಳನ್ನು ಒದಗಿಸುವುದು ಕಷ್ಟಕರವಾದ ಕೆಲಸ. ಮನೆ ಬಾಗಿಲಿಗೆ ಬರುವ ಸಿಬ್ಬಂದಿ ಕೇಳುವ ದಾಖಲೆಗಳನ್ನು ನೀಡಲಾಗದಿದ್ದರೆ, ಫಲಾನುಭವಿಗಳ ಪಟ್ಟಿಯಿಂದ ಹೆಸರು ಕೈಬಿಡುವ ಭಯದಲ್ಲಿ ಜನಸಾಮಾನ್ಯರು ಇದ್ದಾರೆ. ಆನ್‌ಲೈನ್ ನೋಂದಣಿಯ ಸಮಯದಲ್ಲೇ ಪರಿಶೀಲನೆ ನಡೆದಿದ್ದರೂ, ಈಗ ಮತ್ತೆ ಮರುಪರಿಶೀಲನೆ ಏಕೆ? ಎಂಬ ಗೊಂದಲ ಗ್ರಾಮೀಣ ಪ್ರದೇಶದ ಜನರಲ್ಲಿ ಮನೆಮಾಡಿದೆ ಎಂದು ಹೇಳಿದ್ದಾರೆ.

