DKS Apology | If you want a seat in Congress, you should give up patriotism: R. Ashok
x

ಕಾಂಗ್ರೆಸ್ ನಾಯಕರ ಒಳಜಗಳ ಹಾಗೂ ಅಧಿಕಾರದ ಕಿತ್ತಾಟದಿಂದಾಗಿ ಕಳೆದ ಹಲವು ವಾರಗಳಿಂದ ಆಡಳಿತ ಯಂತ್ರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ ಎಂದು ಅವರು ದೂರಿದ್ದಾರೆ. 

ಕಾಂಗ್ರೆಸ್ ಸರ್ಕಾರದ ಖಾತೆ ಹಂಚಿಕೆ ಪ್ರಹಸನ: ರಾಜ್ಯದ ಜನರ ಹಿತಕ್ಕಿಂತ ಲೂಟಿಯೇ ಆದ್ಯತೆ ಎಂದ ಆರ್. ಅಶೋಕ್

ಕಾಂಗ್ರೆಸ್ ನಾಯಕರ ಕಣ್ಣಿರುವುದು ಕೇವಲ 'ಲೂಟಿ' ಹೊಡೆಯುವ ಖಾತೆಗಳ ಮೇಲೆ ಮಾತ್ರ ಎಂದು ಆರ್. ಅಶೋಕ್ ಆರೋಪಿಸಿದ್ದಾರೆ.


Click the Play button to hear this message in audio format

ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಸಚಿವ ಸಂಪುಟದ ಖಾತೆ ಹಂಚಿಕೆ ಪ್ರಕ್ರಿಯೆಯನ್ನು ವಿಪಕ್ಷ ನಾಯಕ ಆರ್. ಅಶೋಕ್ ಅವರು ಕಟುವಾಗಿ ಟೀಕಿಸಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅಸಲಿ ಬಣ್ಣ ಹಾಗೂ ಆದ್ಯತೆಗಳು ರಾಜ್ಯದ ಜನರ ಮುಂದೆ ಬಯಲಾಗಿದೆ ಎಂದು ಅವರು ತಮ್ಮ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಗಂಭೀರ ಆರೋಪ ಮಾಡಿದ್ದಾರೆ.

ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗಿದ್ದು, ರೈತರು ಬಿತ್ತನೆ ಕಾರ್ಯಕ್ಕೆ ಸಿದ್ಧತೆ ನಡೆಸುತ್ತಿರುವ ಈ ಮಹತ್ವದ ಘಟ್ಟದಲ್ಲಿ ಕೃಷಿ ಇಲಾಖೆಗೆ ಒಬ್ಬ ಪೂರ್ಣಾವಧಿ ಸಚಿವರೇ ಇಲ್ಲದಿರುವುದು ವಿಪರ್ಯಾಸ. ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆ, ಬೆಳೆ ವಿಮೆ ಮತ್ತು ಮಳೆ ಪರಿಸ್ಥಿತಿಯ ನಿರ್ವಹಣೆಯಂತಹ ತುರ್ತು ವಿಚಾರಗಳನ್ನು ನಿಭಾಯಿಸಲು ಸಚಿವರೇ ಇಲ್ಲದೆ ಕೃಷಿ ಇಲಾಖೆ ಅನಾಥವಾಗಿದೆ ಎಂದು ಅಶೋಕ್ ಕಳವಳ ವ್ಯಕ್ತಪಡಿಸಿದ್ದಾರೆ.

ಅದೇ ರೀತಿ, ಹೊಸ ಶೈಕ್ಷಣಿಕ ವರ್ಷ ಪ್ರಾರಂಭವಾಗಿದ್ದರೂ ಶಿಕ್ಷಣ ಇಲಾಖೆಗೆ ಸಚಿವರ ನೇಮಕವಾಗಿಲ್ಲ. ಮಳೆ ಬಂದರೆ ಸೋರುವ ಸರ್ಕಾರಿ ಶಾಲೆಗಳ ದುರಸ್ತಿ, ಶೌಚಾಲಯಗಳ ಕೊರತೆ, ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಣೆಯಂತಹ ಬೆಟ್ಟದಷ್ಟು ಸವಾಲುಗಳಿದ್ದರೂ ಸರ್ಕಾರ ಮಾತ್ರ ಎಚ್ಚೆತ್ತುಕೊಂಡಿಲ್ಲ. ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಸರ್ಕಾರಕ್ಕೆ ಕಿಂಚಿತ್ತೂ ಕಾಳಜಿ ಇಲ್ಲ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಕಮಿಷನ್ ದಂಧೆಗೆ ಖಾತೆಗಳ ಪೈಪೋಟಿ

ಕಾಂಗ್ರೆಸ್ ನಾಯಕರ ಕಣ್ಣಿರುವುದು ಕೇವಲ 'ಲೂಟಿ' ಹೊಡೆಯುವ ಖಾತೆಗಳ ಮೇಲೆ ಮಾತ್ರ ಎಂದು ಆರ್. ಅಶೋಕ್ ಆರೋಪಿಸಿದ್ದಾರೆ. ಸಾವಿರಾರು ಕೋಟಿ ರೂಪಾಯಿಗಳ ಸಂಪನ್ಮೂಲ, ಗುತ್ತಿಗೆ ಮತ್ತು ಕಮಿಷನ್ ದಂಧೆಗೆ ಅನುಕೂಲವಾಗುವ ಲಾಭದಾಯಕ ಖಾತೆಗಳಿಗಾಗಿ ಮಾತ್ರ ಕಾಂಗ್ರೆಸ್ ನಾಯಕರ ನಡುವೆ ರಣಹದ್ದುಗಳಂತೆ ಭಾರೀ ಪೈಪೋಟಿ ನಡೆಯುತ್ತಿದೆ ಎಂದಿದ್ದಾರೆ.

ನಾಮಕಾವಸ್ಥೆಯಾದ ಬೆಂಗಳೂರು ಅಭಿವೃದ್ಧಿ ಸಚಿವರು

ಸಮರ್ಥ ಸಚಿವರಿಗೆ ಬೆಂಗಳೂರು ಅಭಿವೃದ್ಧಿ ಖಾತೆ ನೀಡಲಾಗಿದೆ ಎಂದು ಕಾಂಗ್ರೆಸ್ ಹೈಕಮಾಂಡ್ ಹೇಳಿಕೊಂಡರೂ, ವಾಸ್ತವದಲ್ಲಿ ನಗರದ ಯೋಜನೆ ಮತ್ತು ಅಭಿವೃದ್ಧಿಗೆ ಅತ್ಯಂತ ಮಹತ್ವವಾಗಿರುವ ಬಿಡಿಎ (BDA) ಮತ್ತು ಬಿಎಂಆರ್‌ಡಿಎ (BMRDA) ನಂತಹ ಪ್ರಮುಖ ಪ್ರಾಧಿಕಾರಗಳನ್ನು ಮುಖ್ಯಮಂತ್ರಿಗಳೇ ತಮ್ಮ ಬಳಿ ಉಳಿಸಿಕೊಂಡಿದ್ದಾರೆ. ಇದರಿಂದಾಗಿ ಬೆಂಗಳೂರು ಅಭಿವೃದ್ಧಿ ಸಚಿವರ ಪಾತ್ರ ಕೇವಲ ನಾಮಕಾವಸ್ಥೆಯಾಗಿದೆ, ಅವರು "ಆಟಕ್ಕುಂಟು ಲೆಕ್ಕಕ್ಕಿಲ್ಲ" ಎನ್ನುವಂತಾಗಿದೆ ಎಂದು ಟೀಕಿಸಿದ್ದಾರೆ.

ಸಂಪೂರ್ಣ ಸ್ಥಗಿತಗೊಂಡ ಆಡಳಿತ ಯಂತ್ರ

ಕಾಂಗ್ರೆಸ್ ನಾಯಕರ ಒಳಜಗಳ ಹಾಗೂ ಅಧಿಕಾರದ ಕಿತ್ತಾಟದಿಂದಾಗಿ ಕಳೆದ ಹಲವು ವಾರಗಳಿಂದ ಆಡಳಿತ ಯಂತ್ರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ ಎಂದು ಅವರು ದೂರಿದ್ದಾರೆ. ಯಾರಿಗೆ ಯಾವ ಖಾತೆ, ಎಷ್ಟು ಸಂಪನ್ಮೂಲ, ಮತ್ತು ಎಷ್ಟು ಲೂಟಿಯ ಅವಕಾಶ ಎಂಬ ಲೆಕ್ಕಾಚಾರವೇ ಕಾಂಗ್ರೆಸ್ ನಾಯಕರ ಏಕೈಕ ಅಜೆಂಡಾವಾಗಿದೆ. ರೈತರ, ವಿದ್ಯಾರ್ಥಿಗಳ ಮತ್ತು ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸುವ ಸಮಯ ಈ ಸರ್ಕಾರಕ್ಕಿಲ್ಲ ಎಂದು ಗುಡುಗಿದ್ದಾರೆ.

ಈ ಲಜ್ಜೆಗೆಟ್ಟ ಅಧಿಕಾರ ದಾಹವನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಕರ್ನಾಟಕದ ಜನತೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸುವುದು ನೂರಕ್ಕೆ ನೂರು ಗ್ಯಾರೆಂಟಿ ಎಂದು ಆರ್. ಅಶೋಕ್ ಎಚ್ಚರಿಕೆ ನೀಡಿದ್ದಾರೆ.

Read More
Next Story