
ಚಾಮರಾಜನಗರದಲ್ಲಿ ವಿಪಕ್ಷ ನಾಯಕರಿಗೆ ರೈತರಿಂದ ಘೇರಾವ್
ಮುಂಗಾರು ಕೈಕೊಟ್ಟು ಇಡೀ ಚಾಮರಾಜನಗರ ಜಿಲ್ಲೆ ಬರಗಾಲದ ಸುಳಿಗೆ ಸಿಲುಕಿದೆ. ಇಂತಹ ಪರಿಸ್ಥಿತಿಯಲ್ಲಿ ವಿರೋಧ ಪಕ್ಷದ ನಾಯಕರಾಗಿ ನೀವು ಜಿಲ್ಲೆಯಾದ್ಯಂತ ಬರ ಅಧ್ಯಯನ ನಡೆಸಿ ರೈತರಿಗೆ ಧೈರ್ಯ ತುಂಬಬೇಕಿತ್ತು ಎಂದು ರೈತರು ಆಗ್ರಹಿಸಿದ್ದಾರೆ.
ಚಾಮರಾಜನಗರ ಜಿಲ್ಲೆಯಲ್ಲಿ ಮಳೆ ಕೊರತೆಯಿಂದ ಕಂಗಾಲಾಗಿರುವ ರೈತರು ಸೋಮವಾರ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರಿಗೆ ಘೇರಾವ್ ಹಾಕಿದ ಘಟನೆ ನಡೆದಿದೆ. ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಅಧ್ಯಯನಕ್ಕೆ ಆಗಮಿಸದ ವಿಪಕ್ಷ ನಾಯಕರ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ರೈತರು, ವಾಹನವನ್ನು ತಡೆದು ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಜಮಾಯಿಸಿದ್ದ ನೂರಾರು ರೈತರು ಆರ್. ಅಶೋಕ್ ಅವರ ಕಾರಿಗೆ ಮುತ್ತಿಗೆ ಹಾಕಿ ಘೋಷಣೆ ಕೂಗಿದರು. ಜಿಲ್ಲೆಗೆ ಕೇವಲ ಎಸ್ಐಆರ್ ಕುರಿತು ರಾಜಕೀಯ ಮಾತನಾಡಲು ಬಂದಿದ್ದೀರಾ?, ಜಿಲ್ಲೆಯಲ್ಲಿ ಮಳೆಯಾಗದೆ ಬೆಳೆ ಒಣಗುತ್ತಿದ್ದರೂ ನಿಮ್ಮ ಕಣ್ಣಿಗೆ ರೈತರ ಕಷ್ಟ ಕಾಣಿಸುತ್ತಿಲ್ಲವೇ ಎಂದು ನೇರವಾಗಿಯೇ ಪ್ರಶ್ನಿಸಿದ್ದಾರೆ.
ಮುಂಗಾರು ಕೈಕೊಟ್ಟು ಇಡೀ ಚಾಮರಾಜನಗರ ಜಿಲ್ಲೆ ಬರಗಾಲದ ಸುಳಿಗೆ ಸಿಲುಕಿದೆ. ಇಂತಹ ಪರಿಸ್ಥಿತಿಯಲ್ಲಿ ವಿರೋಧ ಪಕ್ಷದ ನಾಯಕರಾಗಿ ನೀವು ಜಿಲ್ಲೆಯಾದ್ಯಂತ ಬರ ಅಧ್ಯಯನ ನಡೆಸಿ ರೈತರಿಗೆ ಧೈರ್ಯ ತುಂಬಬೇಕಿತ್ತು. ಆದರೆ, ಅದನ್ನು ಬಿಟ್ಟು ಕೇವಲ ರಾಜಕೀಯ ವಿಚಾರಗಳಿಗೆ ಸೀಮಿತವಾಗಿದ್ದೀರಿ ಎಂದು ರೈತರು ಕಿಡಿಕಾರಿದ್ದಾರೆ.
ವಿಪಕ್ಷ ನಾಯಕರಾಗಿ ಕೇವಲ ಟೀಕೆ ಮಾಡುವುದಲ್ಲ, ಬರದಿಂದ ತತ್ತರಿಸಿರುವ ರೈತರಿಗೆ ಪರಿಹಾರ ಕೊಡಿಸಲು ಸರ್ಕಾರದ ಕಣ್ಣು ತೆರೆಸುವ ತೀಕ್ಷ್ಣ ಹೋರಾಟ ಮಾಡಬೇಕು. ರಾಜ್ಯದ ಬಿಜೆಪಿ ಸಂಸದರು ತಕ್ಷಣವೇ ಕರ್ನಾಟಕದ ನಿಖರ ಬರ ಪರಿಸ್ಥಿತಿಯ ಕುರಿತು ಕೇಂದ್ರ ಸರ್ಕಾರಕ್ಕೆ ವರದಿ ನೀಡಬೇಕು. ಅಲ್ಲಿಂದ ವಿಶೇಷ ಪ್ಯಾಕೇಜ್ ಕೊಡಿಸಲು ಒತ್ತಡ ಹೇರಬೇಕು ಎಂದು ಒತ್ತಾಯಿಸಿದ್ದಾರೆ.
ರೈತರ ಹಠಾತ್ ಆಕ್ರೋಶ ಹಾಗೂ ಘೇರಾವ್‌ನಿಂದ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣವೇ ಪರಿಸ್ಥಿತಿ ತಿಳಿಗೊಳಿಸಲು ಮುಂದಾದ ಆರ್. ಅಶೋಕ್ ಅವರು, ವಾಹನದಿಂದ ಕೆಳಗಿಳಿದು ರೈತರ ಅಹವಾಲು ಆಲಿಸಿದರು. ರಾಜ್ಯ ಕಬ್ಬು ಬೆಳೆಗಾರರ ಸಂಘದ ಪದಾಧಿಕಾರಿಗಳು ನೀಡಿದ ಮನವಿ ಪತ್ರ ಸ್ವೀಕರಿಸಿದ ಅವರು, ರೈತರ ಬೇಡಿಕೆಗಳು ನ್ಯಾಯಯುತವಾಗಿದ್ದು, ಸರ್ಕಾರದ ಮೇಲೆ ಒತ್ತಡ ತರುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೇ ಕೇಂದ್ರದ ಗಮನಕ್ಕೆ ತಂದು ವಿಶೇಷ ಪ್ಯಾಕೇಜ್ ಕೊಡಿಸುವುದಾಗಿ ಭರವಸೆ ನೀಡಿದ ಬಳಿಕ ರೈತರು ಪ್ರತಿಭಟನೆ ಹಿಂಪಡೆದಿದ್ದಾರೆ.

