ಬೆಂಗಳೂರು ಹೊರವಲಯದ ಕ್ವಾರಿಯಲ್ಲಿ ಭೀಕರ ದುರಂತ: ಏಳು ಕಾರ್ಮಿಕರ ಸಾವು
ಬೆಂಗಳೂರು ಹೊರವಲಯದ ಕ್ವಾರಿ ದುರಂತದಲ್ಲಿ 7 ಸಾವು, ನಗರದಲ್ಲಿ ಮುಂದುವರಿದ ಬಿಬಿಎಂಪಿ ಫುಟ್‌ಪಾತ್ ತೆರವು ಹಾಗೂ 52 ಕ್ರಿಮಿನಲ್ ಪ್ರಕರಣಗಳ ಹಿಂಪಡೆಯುವಿಕೆಗೆ ಹೈಕೋರ್ಟ್ ತಡೆ ನೀಡಿದ ಸಮಗ್ರ ವರದಿ.
ಬೆಂಗಳೂರಿನ ಹೊರವಲಯದ ತಾವರಕೆರೆ ಸಮೀಪದ ಮಾಗಡಿ ರಸ್ತೆಯ ಕಲ್ಲು ಕ್ವಾರಿಯಲ್ಲಿ ಬೆಳ್ಳಂಬೆಳಗ್ಗೆ ಭೀಕರ ದುರಂತವೊಂದು ಸಂಭವಿಸಿದೆ. ಕ್ವಾರಿಯಲ್ಲಿದ್ದ ಬಂಡೆಯೊಂದು ಏಕಾಏಕಿ ಕುಸಿದು ಬಿದ್ದ ಪರಿಣಾಮವಾಗಿ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಏಳು ಮಂದಿ ಕಾರ್ಮಿಕರು ಮೃತರಾಗಿದ್ದಾರೆ ಮತ್ತು ಐವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಮೃತರನ್ನು ರಾಮು, ರಾಜಪಾಲ್ ಸಿಂಗ್, ಸತ್ಯನಾರಾಯಣ ಸಿಂಗ್, ರಾಮವರ್ತರ್ ಸಿಂಗ್, ರಾಜೇಂದ್ರ ಪ್ರಸಾದ್, ನೋಹರ್ ಸಿಂಗ್ ಮತ್ತು ಭುವನೇಶ್ವರ್ ಸಿಂಗ್ ಎಂದು ಗುರುತಿಸಲಾಗಿದೆ. ಸಾವನ್ನಪ್ಪಿದವರಲ್ಲಿ ಬಹುತೇಕರು ಉತ್ತರ ಭಾರತದ ಮೂಲದವರಾಗಿದ್ದು, ಒಬ್ಬರು ಯಾದಗಿರಿ ಜಿಲ್ಲೆಯವರೆಂದು ತಿಳಿದುಬಂದಿದೆ. ಗಾಯಾಳುಗಳನ್ನು ಮೈಸೂರು ರಸ್ತೆಯ ಆರ್.ಆರ್. ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇವರಲ್ಲಿ ಒಬ್ಬರ ಸ್ಥಿತಿ ಅತ್ಯಂತ ಗಂಭೀರವಾಗಿದೆ.
"ಮಾಗಡಿ ರಸ್ತೆಯಲ್ಲಿ ಎರಡು ಕ್ವಾರಿಯಲ್ಲಿ ಕುಸಿತವಾಗಿದೆ ಅಂತ ಹೇಳಿ ವರದಿ ಬಂದಿದೆ. ಸುಮಾರು ಆರರಿಂದ ಏಳು ಜನಕ್ಕೆ ಮಣ್ಣು ಕುಸಿತವಾಗಿ ಸತ್ತಿದ್ದಾರೆ ಅಂತ ಹೇಳಿ ಮಾಹಿತಿ ಬಂದಿದೆ. ಆಮೇಲೆ ಅದಕ್ಕೆ ಏನು ಮಾಡಬೇಕು, ಏನು ಸೂಕ್ತ ಕ್ರಮ ಕೈಗೊಳ್ಳಬೇಕು, ಜಾಗೃತಿ ಕ್ರಮ ಕೈಗೊಳ್ಳಬೇಕು, ಆ ಕ್ವಾರಿ ಲೀಗಲೋ ಅಥವಾ ಇಲ್ಲಿಗಲೋ ಅನ್ನೋದು ಕೂಡ ವರದಿಯನ್ನು ಅಫಿಷಿಯಲ್ ಆಗಿ ನಾನು ತರಿಸಿಕೊಳ್ಳುತ್ತೇನೆ. ಆಮೇಲೆ ಅದಕ್ಕೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಅಂತ ಹೇಳಿ ತೀರ್ಮಾನವನ್ನು ಮಾಡುತ್ತೇವೆ,'' ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದೇನು?
"ಕ್ವಾರಿ ಕೆಲಸ ಮಾಡಬೇಕಾದರೆ ಅದರ ಮಾಲೀಕರುಗಳು ಇದ್ದಾರಲ್ಲ, ಅವರಿಗೆ ಬರಿ ದುಡ್ಡು ಮಾಡುವುದು ಅಷ್ಟೇ ಚಿಂತನೆ. ಯಾವ ರೀತಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಅಂತಕ್ಕಂತದ್ದು ಇಂತಹ ಒಂದು ಪ್ರಕರಣದಲ್ಲಿ ನಾವು ಇಲ್ಲಿಯವರೆಗೆ ನೋಡಲೇ ಇಲ್ಲ. ಬಹುಶಃ ಹಿಂದೆ ಶಿವಮೊಗ್ಗದಲ್ಲಿ ಒಂದು ಪ್ರಕರಣ ಆಯಿತು, ಆಮೇಲೆ ನಾವು ಚಿಕ್ಕಬಳ್ಳಾಪುರದಲ್ಲೂ ಇದೇ ರೀತಿ ಪ್ರಕರಣ ದೊಡ್ಡ ಮಟ್ಟದಲ್ಲಿ ಆಗಿತ್ತು, ಆಗಲೂ ಸಹ ಚರ್ಚೆ ಮಾಡಿದೆವು. ಆದರೆ ಸರ್ಕಾರ ಇಂತಹ ಪ್ರಕರಣಗಳು ಪುನಃ ಪುನಃ ಮರುಕಳಿಸುತ್ತಾ ಇರತಕ್ಕಂತದ್ದಕ್ಕೆ ಕ್ರಮ ತಗೊಂಡಿದ್ದಂತೂ ನಾನು ನೋಡಲಿಲ್ಲ, " ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ರಾಜಧಾನಿಯಲ್ಲಿ ಮುಂದುವರಿದ ಫುಟ್‌ಪಾತ್ ಒತ್ತುವರಿ
ಬೆಂಗಳೂರು ನಗರದಲ್ಲಿ ಪಾದಚಾರಿಗಳ ಸುಗಮ ಸಂಚಾರಕ್ಕಾಗಿ ಹಮ್ಮಿಕೊಳ್ಳಲಾಗಿರುವ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆಯು ಯಶಸ್ವಿಯಾಗಿ ಎರಡನೇ ದಿನಕ್ಕೆ ಕಾಲಿಟ್ಟಿದೆ. ಬಿಬಿಎಂಪಿ ನೇತೃತ್ವದಲ್ಲಿ ಐದು ಪಾಲಿಕೆ ವ್ಯಾಪ್ತಿಯಲ್ಲಿ ನಡೆದ ಈ ಬೃಹತ್ ಕಾರ್ಯಾಚರಣೆಯಲ್ಲಿ ಕೇವಲ ಎರಡು ದಿನಗಳಲ್ಲಿ ಒಟ್ಟು 115 ಕಿಲೋಮೀಟರ್ ವ್ಯಾಪ್ತಿಯ ಫುಟ್‌ಪಾತ್ ಒತ್ತುವರಿಯನ್ನು ಮುಕ್ತಗೊಳಿಸಲಾಗಿದೆ. ಈ ಅವಧಿಯಲ್ಲಿ ಫುಟ್‌ಪಾತ್‌ಗಳನ್ನು ಆಕ್ರಮಿಸಿಕೊಂಡಿದ್ದ ಸುಮಾರು 2700ಕ್ಕೂ ಹೆಚ್ಚು ಅನಧಿಕೃತ ಅಂಗಡಿಗಳು, ಹೋಟೆಲ್‌ಗಳು ಮತ್ತು ಶೆಡ್‌ಗಳನ್ನು ಧ್ವಂಸಗೊಳಿಸಲಾಗಿದೆ. ಈ ನಿರ್ಧಾರವನ್ನು ಪಾದಚಾರಿಗಳು ಮುಕ್ತಕಂಠದಿಂದ ಸ್ವಾಗತಿಸಿದ್ದರೆ, ಬೀದಿ ಬದಿ ವ್ಯಾಪಾರಿಗಳು ಮುನ್ಸೂಚನೆ ನೀಡದೆ ಏಕಾಏಕಿ ತೆರವುಗೊಳಿಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಕಾಟನ್ ಪೇಟೆಯಲ್ಲಿ ತೆರವು ಕಾರ್ಯಾಚರಣೆ ನಡೆಸುವಾಗ ಎರಡು ಅಂತಸ್ತಿನ ಕಟ್ಟಡದ ಗೋಡೆ ಕುಸಿದು ಆಟೋವೊಂದು ಜಖಂಗೊಂಡಿದ್ದು, ಕಟ್ಟಡದಲ್ಲಿದ್ದ ಇಬ್ಬರನ್ನು ರಕ್ಷಿಸಲಾಗಿದೆ.
"ಆಗಬೇಕಾದರೆ ಕನಿಷ್ಠ ಕೆಲವು ರಸ್ತೆಗಳಾದರೂ ಜನ ಓಡಾಡೋದಕ್ಕೆ ಸುರಕ್ಷಿತವಾಗಿರಬೇಕು ಅನ್ನುವುದು ಎಲ್ಲಾ ಬೆಂಗಳೂರಿನ ನಾಗರಿಕರ ಬಯಕೆ. ಇದನ್ನು ನಾವು ಸರ್ಕಾರ ಈಡೇರಿಸಬೇಕಾಗಿರುವುದು ನಮ್ಮ ಕರ್ತವ್ಯ. ಈ ಪ್ರಯತ್ನ ಯಶಸ್ಸಾಗಬೇಕಾದರೆ ಸಾರ್ವಜನಿಕರ ಸಹಕಾರ ಇದ್ದರೆ ಮಾತ್ರ ಸಾಧ್ಯ. ಹಾಗಾಗಿ ನಾನು ಮತ್ತೊಮ್ಮೆ ತಮ್ಮಲ್ಲಿ ಮನವಿ ಮಾಡುತ್ತೇನೆ. ನೀವು ಕಮರ್ಷಿಯಲ್ ಕಾಂಪ್ಲೆಕ್ಸ್ ಏನೋ ಮಾಡಿಕೊಂಡಿದ್ದು ಫುಟ್‌ಪಾತ್ ಮೇಲೂ ಕೂಡ ಎಕ್ಸ್ಟೆನ್ಶನ್ ಮಾಡಿಕೊಂಡಿದ್ದರೆ ದಯವಿಟ್ಟು ತಾವಾಗಿ ತಾವು ಅದನ್ನು ತಕ್ಕೊಳ್ಳಿ. ಅಂಗಡಿಗಳನ್ನು ಇಟ್ಟುಕೊಂಡಿದ್ದು ಅಂಗಡಿಯಿಂದ ಮುಂದೆ ಬಂದು ಫುಟ್‌ಪಾತ್ ಮೇಲೂ ನೀವು ಎಕ್ಸ್ಟೆನ್ಶನ್ ಮಾಡಿಕೊಂಡಿದ್ದರೆ ದಯವಿಟ್ಟು ನೀವಾಗಿ ನೀವು ಅದನ್ನು ತಗೊಂಡು ಜನ ಓಡಾಡೋದಕ್ಕೆ ಬಿಡಿ. ಅಥವಾ ಫುಟ್‌ಪಾತ್ ಅಲ್ಲಿ ನೀವು ವ್ಯಾಪಾರ ಮಾಡುತ್ತಿದ್ದರೆ ಮೇನ್ ರೋಡ್‌ಗಳು ಬಿಟ್ಟು ಬೇರೆ ರೋಡಿಗೆ ಸ್ಥಳಾಂತರ ಮಾಡಿ ನೀವು ಅಲ್ಲಿ ವ್ಯಾಪಾರ ಮಾಡಿಕೊಂಡು ಜೀವನ ಮಾಡಿ. ನಾವು ಯಾರ ಜೀವನಕ್ಕೂ ಕೂಡ ತೊಂದರೆ ಮಾಡುವ ಉದ್ದೇಶ ಇಲ್ಲ. ಆದರೆ ಜನ ಓಡಾಡೋದಕ್ಕೆ ಆಗದೆ ಪ್ರಾಣ ಕಳೆದುಕೊಳ್ಳುತ್ತಿದ್ದರೆ ಅದನ್ನು ನೋಡಿಕೊಂಡು ಸುಮ್ಮನೆ ಇರೋದಕ್ಕೂ ಕೂಡ ಸರ್ಕಾರಕ್ಕೆ ಸಾಧ್ಯ ಆಗೋದಿಲ್ಲ,ʼʼ ಎಂದು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ.
52 ಕ್ರಿಮಿನಲ್ ಪ್ರಕರಣಗಳ ಹಿಂಪಡೆಯುವಿಕೆ ನಿರ್ಧಾರಕ್ಕೆ ಹೈಕೋರ್ಟ್ ತಡೆ
ರಾಜ್ಯಾದ್ಯಂತ ದಾಖಲಾಗಿದ್ದ ಸುಮಾರು 52ಕ್ಕೂ ಹೆಚ್ಚು ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ಮುಂದಾಗಿದ್ದ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಬಿಗ್ ಬ್ರೇಕ್ ನೀಡಿದೆ. ಮುಖ್ಯ ನ್ಯಾಯಮೂರ್ತಿ ವಿಭು ಭಕ್ರ ಮತ್ತು ನ್ಯಾಯಮೂರ್ತಿ ಕೆ.ಎಸ್. ಹೇಮಲೇಖ ಅವರನ್ನೊಳಗೊಂಡ ವಿಭಾಗೀಯ ಪೀಠವು ಸರ್ಕಾರದ ಈ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಹಿಂಪಡೆಯಲು ಉದ್ದೇಶಿಸಲಾಗಿದ್ದ ಪ್ರಕರಣಗಳಲ್ಲಿ ಕಲಬುರ್ಗಿಯ ಲಾಡ್ಲೆ ಮಶಾಕ್ ದರ್ಗಾ ಗಲಭೆ, ಕೋಮು ಗಲಭೆಗಳು, ಸಾರ್ವಜನಿಕ ಆಸ್ತಿಪಾಸ್ತಿ ಹಾನಿ, ಕೊಲೆ ಯತ್ನ ಹಾಗೂ ಹಿಜಾಬ್ ಪ್ರತಿಭಟನೆಗೆ ಸಂಬಂಧಿಸಿದ ಗಂಭೀರ ಐಪಿಸಿ ಸೆಕ್ಷನ್‌ಗಳ ಅಡಿಯಲ್ಲಿದ್ದ ಪ್ರಕರಣಗಳು ಸೇರಿದ್ದವು. ಕಳೆದ ಮೇ 21 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರಕ್ಕೆ ಅನುಮೋದನೆ ನೀಡಲಾಗಿತ್ತು. ಸರ್ಕಾರದ ಈ ರಾಜಕೀಯ ಪ್ರೇರಿತ ನಿರ್ಧಾರವನ್ನು ಪ್ರಶ್ನಿಸಿ ಸಾಮಾಜಿಕ ಕಾರ್ಯಕರ್ತ ಗಿರೀಶ್ ಭಾರದ್ವಾಜ್ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದರು. ಅರ್ಜಿಯಲ್ಲಿ ಅಂದಿನ ಸ್ಪೀಕರ್ ಯು.ಟಿ. ಖಾದರ್ ಅವರು ಗೃಹ ಸಚಿವರಿಗೆ ಬರೆದಿದ್ದ ಪತ್ರದ ಪ್ರಭಾವ ಇರುವುದಾಗಿ ಆರೋಪಿಸಲಾಗಿತ್ತು. ಹೈಕೋರ್ಟ್ ಗೃಹ ಇಲಾಖೆ ಮತ್ತು ಪ್ರಾಸಿಕ್ಯೂಷನ್ ನಿರ್ದೇಶನಾಲಯಕ್ಕೆ ನೋಟಿಸ್ ಜಾರಿಗೊಳಿಸಿದ್ದು, ಎರಡು ವಾರದೊಳಗೆ ಉತ್ತರಿಸುವಂತೆ ಕಡಕ್ ಸೂಚನೆ ನೀಡಿದೆ. ಆರ್ಟಿಐ ದಾಖಲೆಗಳ ಪ್ರಕಾರ, ಸರ್ಕಾರದ ಈ ನಡೆಗೆ ಸ್ವತಃ ಪ್ರಾಸಿಕ್ಯೂಷನ್ ಇಲಾಖೆಯೇ ಮೊದಲೇ ವಿರೋಧ ವ್ಯಕ್ತಪಡಿಸಿತ್ತು ಎಂಬ ಅಂಶವೂ ಬಯಲಾಗಿದೆ.
"ರೀತಿನಲ್ಲಿ ಅಥವಾ ಬೇರೆ ಮಾನದಂಡಗಳನ್ನು ಅಳವಡಿಸಿಕೊಂಡು ನಾವು ಮಾಡಿಲ್ಲ. ಯಾಕಂದರೆ ನೀವು ಅದು ನೋಡಿದರೆ ಬರೆ ಅದು ಗುಲ್ಬರ್ಗ ಇರಬಹುದು ಅಥವಾ ಬೇರೆ ರೈತರದ್ದು ಇರಬಹುದು, ಕನ್ನಡಪರ ಸಂಘಟನೆಯದ್ದು... ಇಷ್ಟೇ ಅಲ್ಲ ಸಾಕಷ್ಟು ನಿಮ್ಮ ಬಿಜೆಪಿಯವರ ಬೆಂಬಲಿಗರು ಇದ್ದಾರೆ. ಏನಿದೆ ನೋಡೋಣ, ಆರ್ಡರ್ ಬಂದಾದಮೇಲೆ ನೋಡೋಣ. ನೋಡಿ ಕ್ಯಾಬಿನೆಟ್ ಸಬ್ ಕಮಿಟಿನಲ್ಲಿ ಅವಾಗ ನಾವು ಇರಲಿಲ್ಲ. ಅದು ಏನಾಗಿದೆ ಅದರಲ್ಲಿ ಅವರ ರೆಕಮೆಂಡೇಶನ್ ನನಗೆ ಸಂಪೂರ್ಣ ಮಾಹಿತಿ ಇಲ್ಲ. ಇವತ್ತು ಕೋರ್ಟ್ ಆದೇಶ ಇರ್ರೆಸ್ಪೆಕ್ಟಿವ್ ಆಫ್ ವಾಟ್ ಕ್ಯಾಬಿನೆಟ್ ಸಬ್ ಕಮಿಟಿ ಹ್ಯಾಸ್ ಟೇಕನ್ ಡಿಸಿಷನ್, ಕ್ಯಾಬಿನೆಟ್‌ಗೆ ಬಂದಿದೆ ಅದು. ಯಾಕಂದರೆ ಅಲ್ಲಿ ಬಹುಶಃ ಅಲ್ಲಿ ಯಾವುದೇ ರೀತಿಯಾದಂತಹ ಒಂದು ತೀರ್ಮಾನ ಬರಲಿಕ್ಕೆ ಸಾಧ್ಯ ಆಗಿಲ್ಲ. ಅದು ಕ್ಯಾಬಿನೆಟ್ ಸಬ್ ಕಮಿಟಿ ಡಿಸಿಷನ್ ಪರ ಇರಬಹುದು, ವಿರೋಧ ಇರಬಹುದು ಬಟ್ ಇಟ್ ಹ್ಯಾಸ್ ಟು ಕಮ್ ಟು ಕ್ಯಾಬಿನೆಟ್, ಅಲ್ಟಿಮೇಟ್ಲಿ ಕ್ಯಾಬಿನೆಟ್ ಡಿಸೈಡ್ಸ್. ಒಂದು ನಿಮಿಷ, ಒಂದು ನಿಮಿಷ ಸರ್... ಅದಾದ ಮೇಲೆ ಕೋರ್ಟ್‌ಗೆ ಕೆಲವು ಜನ ಹೋಗಿದ್ದಾರೆ, ಇವತ್ತು ಕೋರ್ಟ್‌ಗೆ ಒಂದು ಆದೇಶ ನೀಡಿದ್ದಾರೆ ಅಂತ ಹೇಳ್ತಾ ಇದ್ದಾರೆ. ಈಗ ಅರ್ಧ ಗಂಟೆ ಆಗಿದೆ, ಆರ್ಡರ್ ಬರಲಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ತಿಳಿಸಿದ್ದಾರೆ.


