
ಟಾಟಾ ಪವರ್ ದಾಖಲೆಗಳು ಕನ್ನಡದಲ್ಲಿರಲಿ - ಡಾ. ಪುರುಷೋತ್ತಮ ಬಿಳಿಮಲೆ ಆಗ್ರಹ
ಆಯೋಗದ ಮುಂದೆ ಟಾಟಾ ಪವರ್ ಸಲ್ಲಿಸಿರುವ ಅರ್ಜಿ ನಮೂನೆಗಳು, ಅನುಬಂಧಗಳು ಹಾಗೂ ಸಂಬಂಧಿತ ಎಲ್ಲಾ ದಾಖಲೆಗಳು ಸಂಪೂರ್ಣವಾಗಿ ಆಂಗ್ಲ ಭಾಷೆಯಲ್ಲಿರುವುದನ್ನು ಡಾ. ಪುರುಷೋತ್ತಮ ಬಿಳಿಮಲೆ ಆಕ್ಷೇಪಿಸಿದ್ದಾರೆ.
ರಾಜ್ಯದ ನೆಲದಲ್ಲಿ ಕಾರ್ಯನಿರ್ವಹಿಸಲು ಮುಂದಾಗುವ ಯಾವುದೇ ಖಾಸಗಿ ಅಥವಾ ಸಾರ್ವಜನಿಕ ಸಂಸ್ಥೆಗಳು ಸ್ಥಳೀಯ ಭಾಷೆ, ಸಂಸ್ಕೃತಿ ಮತ್ತು ಕನ್ನಡಿಗರ ಭಾಷಾ ಹಕ್ಕುಗಳಿಗೆ ಗೌರವ ನೀಡುವುದು ಮೂಲಭೂತ ಸಾಮಾಜಿಕ ಹೊಣೆಗಾರಿಕೆಯಾಗಿದೆ. ಆದರೆ, ರಾಜ್ಯದಲ್ಲಿ ಸಮಾನಾಂತರ ವಿದ್ಯುತ್ ವಿತರಣಾ ಪರವಾನಗಿ ಪಡೆಯಲು ಮುಂದಾಗಿರುವ ಟಾಟಾ ಪವರ್ ಸಂಸ್ಥೆಯು ಕನ್ನಡ ಭಾಷೆಯನ್ನು ನಿರ್ಲಕ್ಷಿಸಿರುವುದು ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗದ ಅಧ್ಯಕ್ಷರಿಗೆ ಪತ್ರ ಬರೆದಿರುವ ಡಾ. ಬಿಳಿಮಲೆ, ಆಯೋಗದ ಮುಂದೆ ಟಾಟಾ ಪವರ್ ಸಲ್ಲಿಸಿರುವ ಅರ್ಜಿ ನಮೂನೆಗಳು, ಅನುಬಂಧಗಳು ಹಾಗೂ ಸಂಬಂಧಿತ ಎಲ್ಲಾ ದಾಖಲೆಗಳು ಸಂಪೂರ್ಣವಾಗಿ ಆಂಗ್ಲ ಭಾಷೆಯಲ್ಲಿರುವುದನ್ನು ಬಲವಾಗಿ ಆಕ್ಷೇಪಿಸಿದ್ದಾರೆ. ಸಾರ್ವಜನಿಕ ಹಿತಾಸಕ್ತಿಯ ಈ ಮಹತ್ವದ ದಾಖಲೆಗಳನ್ನು ಕನ್ನಡದಲ್ಲಿ ಲಭ್ಯವಾಗುವಂತೆ ಮಾಡಲು ಆಯೋಗವು ಯಾವುದೇ ಕ್ರಮ ಕೈಗೊಂಡಿಲ್ಲದಿರುವುದು ವಿಷಾದನೀಯ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮನೆ ಮನೆಗೆ ಭೇಟಿ, ಭಾಷೆಯಲ್ಲೇ ಗೋಳು!
ಟಾಟಾ ಪವರ್ ಸಂಸ್ಥೆಯು ವಿದ್ಯುತ್ ಪೂರೈಕೆ ಕುರಿತಂತೆ ಸಾರ್ವಜನಿಕರ ಮಾಹಿತಿ ಸಂಗ್ರಹಿಸಲು ಪ್ರತಿನಿಧಿಗಳನ್ನು ಮನೆ ಮನೆಗೆ ಕಳುಹಿಸುತ್ತಿದೆ. ಆದರೆ, ಈ ವೇಳೆ ಬಳಸಲಾಗುತ್ತಿರುವ ನಮೂನೆಗಳು ಮತ್ತು ದಾಖಲೆಗಳು ಕೇವಲ ಇಂಗ್ಲಿಷ್ ಭಾಷೆಯಲ್ಲೇ ಇರುವುದು ಸಾಮಾನ್ಯ ನಾಗರಿಕರ ಪಾಲಿಗೆ ದೊಡ್ಡ ಸಮಸ್ಯೆಯಾಗಿದೆ. ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಬಿಳಿಮಲೆ, "ರಾಜ್ಯದ ಸಾಮಾನ್ಯ ಕನ್ನಡಿಗನಿಗೆ ತಾನು ಸಹಿ ಮಾಡುತ್ತಿರುವ ದಾಖಲೆಯ ಉದ್ದೇಶವೇನು? ಅದರ ಪರಿಣಾಮಗಳೇನು? ಎಂಬುದು ಅರ್ಥವಾಗದ ಅಸಹಾಯಕ ಪರಿಸ್ಥಿತಿಯನ್ನು ಸೃಷ್ಟಿಸುವುದು ತೀವ್ರ ಆಕ್ಷೇಪಣೀಯ. ಆಡಳಿತ ಮತ್ತು ಸಾರ್ವಜನಿಕ ಸೇವೆಗಳ ಭಾಷೆ ಕನ್ನಡವಾಗಿರಬೇಕು ಎನ್ನುವುದು ಕನ್ನಡಿಗರ ಹಕ್ಕು. ಅದನ್ನು ಕಡೆಗಣಿಸುವುದು ಕಾನೂನುಬಾಹಿರ ಎಂದು ಎಚ್ಚರಿಸಿದ್ದಾರೆ.
ಕನ್ನಡಿಗರಿಗೆ ಜಾಗೃತಿಯ ಕರೆ
ಕನ್ನಡಿಗರ ಭಾಷಾ ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದ ಡಾ. ಪುರುಷೋತ್ತಮ ಬಿಳಿಮಲೆ ಅವರು ರಾಜ್ಯದ ನಾಗರಿಕರಿಗೆ ಮಹತ್ವದ ಕರೆ ನೀಡಿದ್ದಾರೆ. ಸಂಸ್ಥೆಯ ಪ್ರತಿನಿಧಿಗಳು ಮನೆ ಬಾಗಿಲಿಗೆ ಬಂದಾಗ, ಅವರು ನೀಡುವ ಯಾವುದೇ ದಾಖಲೆ ಅಥವಾ ನಮೂನೆಗಳು ಇಂಗ್ಲಿಷ್‌ನಲ್ಲಿದ್ದರೆ, ಅದನ್ನು ತಿರಸ್ಕರಿಸಿ ಕನ್ನಡದಲ್ಲೇ ನೀಡುವಂತೆ ಒತ್ತಾಯಿಸಿದ್ದಾರೆ ವಿದ್ಯುತ್ ಬಿಲ್ ಹಾಗೂ ಅದಕ್ಕೆ ಸಂಬಂಧಿಸಿದ ಅರ್ಜಿಗಳು ಅತ್ಯಂತ ಮಹತ್ವದ ಕಾನೂನು ದಾಖಲೆಗಳಾಗಿರುತ್ತವೆ. ಇವುಗಳನ್ನು ಅರ್ಥಮಾಡಿಕೊಳ್ಳದೆ ಸಹಿ ಹಾಕುವುದು ಅಪಾಯಕಾರಿ. ಪ್ರತಿಯೊಬ್ಬ ಕನ್ನಡಿಗನು ತನ್ನ ಭಾಷಾ ಹಕ್ಕಿನ ಬಗ್ಗೆ ಜಾಗೃತರಾಗಿರಬೇಕು" ಎಂದು ಅವರು ಮನವಿ ಮಾಡಿದ್ದಾರೆ.
ಟಾಟಾ ಪವರ್ ಸಂಸ್ಥೆಯು ಸಾರ್ವಜನಿಕರಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಕನ್ನಡದಲ್ಲಿಯೇ ಒದಗಿಸುವುದನ್ನು ಆಯೋಗವು ಕಡ್ಡಾಯಗೊಳಿಸಬೇಕು. ವಿದ್ಯುತ್ ವಿತರಣೆಯಂತಹ ಸೇವೆಗಳು ಜನರ ದೈನಂದಿನ ಬದುಕಿನ ಭಾಗವಾಗಿರುವುದರಿಂದ, ಅಂತಹ ಸೇವೆಗಳಲ್ಲಿ ಭಾಷಾ ತಾರತಮ್ಯಕ್ಕೆ ಅವಕಾಶ ನೀಡಬಾರದು. ಇಂತಹ ದಾಖಲೆಗಳನ್ನು ಕನ್ನಡದಲ್ಲಿ ಪ್ರಕಟಿಸಲು ಆಯೋಗವು ಟಾಟಾ ಪವರ್ ಸಂಸ್ಥೆಗೆ ಕೂಡಲೇ ಸೂಚನೆ ನೀಡಬೇಕು. ಭಾಷಾ ನಿಯಮಗಳನ್ನು ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸಾಂಸ್ಕೃತಿಕ ಹಕ್ಕು ಮತ್ತು ಸಾಮಾಜಿಕ ಹೊಣೆಗಾರಿಕೆ
ರಾಜ್ಯದ ಮಾರುಕಟ್ಟೆಯನ್ನು ಲಾಭಕ್ಕಾಗಿ ಬಳಸಿಕೊಳ್ಳುವ ಯಾವುದೇ ಸಂಸ್ಥೆಯು, ಈ ನಾಡಿನ ಜನರ ಭಾಷೆಯನ್ನು ಕಡೆಗಣಿಸುವುದು ಅವರ ಭಾಷಾ ಸಂಸ್ಕೃತಿಯ ಮೇಲಿನ ಆಕ್ರಮಣವೇ ಸರಿ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕನ್ನಡಿಗರು ತಮ್ಮ ಭಾಷಾ ಅಸ್ತಿತ್ವಕ್ಕಾಗಿ ಹೋರಾಡುತ್ತಿರುವ ಸಂದರ್ಭದಲ್ಲಿ, ಇಂತಹ ಸಂಸ್ಥೆಗಳು ಇಂಗ್ಲಿಷ್ ಹೇರಿಕೆಯ ಮೂಲಕ ಜನರ ಹಕ್ಕುಗಳನ್ನು ಮೊಟಕುಗೊಳಿಸುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಡಾ. ಪುರುಷೋತ್ತಮ ಬಿಳಿಮಲೆ ಅವರ ಈ ಪತ್ರವು ಕೇವಲ ಒಂದು ಮನವಿಯಲ್ಲ, ಬದಲಾಗಿ ಭಾಷಾ ಹಕ್ಕುಗಳ ರಕ್ಷಣೆಗೆ ಸರ್ಕಾರಿ ಸಂಸ್ಥೆಗಳಿಗೆ ನೀಡಿದ ಎಚ್ಚರಿಕೆಯಾಗಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಈ ವಿಷಯವನ್ನು ಎಷ್ಟು ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ಸಂಸ್ಥೆಗೆ ಕನ್ನಡ ಭಾಷಾ ಬಳಕೆಯನ್ನು ಕಡ್ಡಾಯಗೊಳಿಸುತ್ತದೆಯೇ ಎಂಬುದು ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

