ಖಾಸಗಿ ವಲಯದಲ್ಲಿ ಕನ್ನಡ ಕಡ್ಡಾಯಕ್ಕೆ ಆಗ್ರಹ: ಸರ್ಕಾರಕ್ಕೆ ಪುರುಷೋತ್ತಮ ಬಿಳಿಮಲೆ ಪತ್ರ
x

ಖಾಸಗಿ ವಲಯದಲ್ಲಿ ಕನ್ನಡ ಕಡ್ಡಾಯಕ್ಕೆ ಆಗ್ರಹ: ಸರ್ಕಾರಕ್ಕೆ ಪುರುಷೋತ್ತಮ ಬಿಳಿಮಲೆ ಪತ್ರ

ಖಾಸಗಿ ಕಂಪನಿಗಳು ಸಾರ್ವಜನಿಕ ಸಂಪರ್ಕ, ಡಿಜಿಟಲ್ ಸೇವೆಗಳಲ್ಲಿ ಕನ್ನಡವನ್ನು ಬಳಸುವುದನ್ನು ಕಡ್ಡಾಯಗೊಳಿಸಿದರೆ, ಅದು ಲಕ್ಷಾಂತರ ಕನ್ನಡಿಗ ಯುವಕರಿಗೆ ನೇರ ಉದ್ಯೋಗಾವಕಾಶವನ್ನು ಸೃಷ್ಟಿಸುತ್ತದೆ.


Click the Play button to hear this message in audio format

ರಾಜ್ಯವು ಜಾಗತಿಕ ಮಟ್ಟದಲ್ಲಿ ಮಾಹಿತಿ ತಂತ್ರಜ್ಞಾನ, ಕೈಗಾರಿಕೆ ಮತ್ತು ಸೇವಾ ವಲಯಗಳ ಕೇಂದ್ರಬಿಂದುವಾಗಿ ಬೆಳೆದಿದೆ. ಸಾವಿರಾರು ಬಹುರಾಷ್ಟ್ರೀಯ ಕಂಪನಿಗಳು ಮತ್ತು ಖಾಸಗಿ ಸಂಸ್ಥೆಗಳು ರಾಜ್ಯದಲ್ಲಿ ತಮ್ಮ ವ್ಯವಹಾರವನ್ನು ವಿಸ್ತರಿಸಿವೆ. ಆದರೆ, ಈ ಕಂಪನಿಗಳ ದೈನಂದಿನ ಕಾರ್ಯಚಟುವಟಿಕೆಗಳಲ್ಲಿ ಕನ್ನಡದ ಬಳಕೆಯು ಇನ್ನೂ ನಾಮಮಾತ್ರವಾಗಿದೆ. ಈ ಹಿನ್ನೆಲೆಯಲ್ಲಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದು, ಖಾಸಗಿ ವಲಯದಲ್ಲಿ ಕನ್ನಡವನ್ನು ಕಡ್ಡಾಯಗೊಳಿಸುವ ಮೂಲಕ ಕನ್ನಡಿಗ ಯುವಜನರಿಗೆ ಉದ್ಯೋಗ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಇಲ್ಲಿಯವರೆಗೆ ಕನ್ನಡವನ್ನು ಕೇವಲ ಸಾಂಸ್ಕೃತಿಕ ಪರಂಪರೆ ಅಥವಾ ಭಾಷಾ ಸಂರಕ್ಷಣೆಯ ದೃಷ್ಟಿಯಿಂದ ಮಾತ್ರ ನೋಡಲಾಗುತ್ತಿತ್ತು. ಆದರೆ, ಭಾಷೆಯನ್ನು ಒಂದು ಉದ್ಯೋಗ ಕೌಶಲ್ಯ ಮತ್ತು ಆರ್ಥಿಕ ಶಕ್ತಿಯಾಗಿ ಬೆಳೆಸಬೇಕು ಎಂಬುದು ಅವರ ಮೂಲ ಉದ್ದೇಶವಾಗಿದೆ. ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಕಂಪನಿಗಳು ಗ್ರಾಹಕ ಸೇವೆ , ಸಾರ್ವಜನಿಕ ಸಂಪರ್ಕ ಮತ್ತು ಡಿಜಿಟಲ್ ಸೇವೆಗಳಲ್ಲಿ ಕನ್ನಡವನ್ನು ಬಳಸುವುದನ್ನು ಕಡ್ಡಾಯಗೊಳಿಸಿದರೆ, ಅದು ಲಕ್ಷಾಂತರ ಕನ್ನಡಿಗ ಯುವಕರಿಗೆ ನೇರ ಉದ್ಯೋಗಾವಕಾಶವನ್ನು ಸೃಷ್ಟಿಸುತ್ತದೆ ಎಂದು ಹೇಳಿದ್ದಾರೆ.

ಡಿಜಿಟಲ್ ಯುಗ, ಭಾಷಾ ತಂತ್ರಜ್ಞಾನ

ಇಂದಿನ ಕೃತಕ ಬುದ್ಧಿಮತ್ತೆ (ಎಐ) ಮತ್ತು ಡಿಜಿಟಲ್ ತಂತ್ರಜ್ಞಾನದ ಯುಗದಲ್ಲಿ ಭಾಷಾ ದತ್ತಾಂಶಕ್ಕೆ ಹೆಚ್ಚಿನ ಬೇಡಿಕೆಯಿದೆ. ಗೂಗಲ್, ಮೈಕ್ರೋಸಾಫ್ಟ್, ಚಾಟ್ ಜಿಪಿಟಿ ನಂತಹ ತಂತ್ರಜ್ಞಾನಗಳು ಸ್ಥಳೀಯ ಭಾಷೆಗಳಲ್ಲಿ ಪರಿಣತಿಯನ್ನು ಹುಡುಕುತ್ತಿವೆ. ಈ ಸಂದರ್ಭದಲ್ಲಿ ಜಾಗತಿಕ ಕಂಪನಿಗಳ ಆಪ್‌ಗಳು ಮತ್ತು ವೆಬ್‌ಸೈಟ್‌ಗಳನ್ನು ಕನ್ನಡೀಕರಿಸಲು ಕನ್ನಡಿಗರ ಅವಶ್ಯಕತೆ ಇದೆ. ಸಾಮಾಜಿಕ ಮಾಧ್ಯಮಗಳಲ್ಲಿ ಕನ್ನಡ ವಿಷಯ ರಚನೆಗೆ ಇಂದು ಭಾರಿ ಬೇಡಿಕೆಯಿದೆ. ಯಂತ್ರಗಳೊಂದಿಗೆ ಕನ್ನಡದಲ್ಲಿ ಸಂವಾದ ನಡೆಸುವಂತೆ ಮಾಡಲು ನ್ಯಾಚುರಲ್ ಲ್ಯಾಂಗ್ವೇಜ್ ಪ್ರೊಸೆಸಿಂಗ್ ತಜ್ಞರ ಅಗತ್ಯವಿದ್ದು, ಇದು ಕನ್ನಡಿಗರಿಗೆ ಹೊಸ ತಾಂತ್ರಿಕ ಉದ್ಯೋಗಗಳನ್ನು ತಂದುಕೊಡಲಿದೆ ಎಂದು ತಿಳಿಸಿದ್ದಾರೆ.

ಕಂಪನಿಗಳಿಗೆ ಲಾಭವೇನು?

ಖಾಸಗಿ ಸಂಸ್ಥೆಗಳು ಕನ್ನಡವನ್ನು ಬಳಸುವುದರಿಂದ ಕೇವಲ ಕನ್ನಡಿಗರಿಗೆ ಉದ್ಯೋಗ ಸಿಗುವುದು ಮಾತ್ರವಲ್ಲ, ಕಂಪನಿಗಳಿಗೂ ಅದರಿಂದ ಲಾಭವಿದೆ. ಸ್ಥಳೀಯ ಭಾಷೆಯಲ್ಲಿ ಗ್ರಾಹಕರಿಗೆ ಸೇವೆ ಒದಗಿಸುವುದರಿಂದ ಸಂಸ್ಥೆ ಮತ್ತು ಸಾರ್ವಜನಿಕರ ನಡುವೆ ಉತ್ತಮ ಬಾಂಧವ್ಯ ಏರ್ಪಡುತ್ತದೆ. ಗ್ರಾಹಕರು ತಮ್ಮ ಮಾತೃಭಾಷೆಯಲ್ಲಿ ಸೇವೆಯನ್ನು ಪಡೆದಾಗ ಕಂಪನಿಯ ಮೇಲಿನ ವಿಶ್ವಾಸಾರ್ಹತೆ ಹೆಚ್ಚುತ್ತದೆ. ಇದು ದೀರ್ಘಾವಧಿಯಲ್ಲಿ ಕಂಪನಿಯ ಮಾರುಕಟ್ಟೆಯನ್ನು ವಿಸ್ತರಿಸಲು ಸಹಕಾರಿಯಾಗುತ್ತದೆ ಎಂದಿದ್ದಾರೆ.

ಡಾ. ಬಿಳಿಮಲೆ ಅವರ ಈ ಪ್ರಸ್ತಾವನೆಯು ಕೇವಲ ಒಂದು ಸಲಹೆಯಲ್ಲ, ಇದು ಒಂದು ನೀತಿಯಾಗಬೇಕಾದ ಅಗತ್ಯವಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬರೆದಿರುವ ಪತ್ರದಲ್ಲಿ, ಸರ್ಕಾರವು ಇಂತಹ ಕ್ರಮಗಳನ್ನು ಕಾನೂನಿನ ಮೂಲಕ ಜಾರಿಗೊಳಿಸಬೇಕೆಂದು ಒತ್ತಾಯಿಸಲಾಗಿದೆ. ಖಾಸಗಿ ಕಂಪನಿಗಳು ತಮ್ಮ ಸಾರ್ವಜನಿಕ ಸಂಪರ್ಕ ಮತ್ತು ಗ್ರಾಹಕ ಸೇವೆಗಳಲ್ಲಿ ಕನ್ನಡವನ್ನು ಬಳಕೆ ಮಾಡುವುದನ್ನು ಕಡ್ಡಾಯಗೊಳಿಸುವ ಮೂಲಕ ಸ್ಥಳೀಯರಿಗೆ ಉದ್ಯೋಗ ಮೀಸಲಾತಿಯನ್ನು ಪರೋಕ್ಷವಾಗಿ ಭದ್ರಪಡಿಸಬಹುದಾಗಿದೆ ಎಂದು ಹೇಳಿದ್ದಾರೆ.

ಕನ್ನಡವನ್ನು ಕೇವಲ ಬಳಸಬೇಕಾದ ಭಾಷೆಯನ್ನಾಗಿ ಮಾತ್ರ ನೋಡುವ ಮನಸ್ಥಿತಿಯಿಂದ ಸಮಾಜ ಹೊರಬರಬೇಕಿದೆ. ಭಾಷೆಯನ್ನು ಒಂದು ಆರ್ಥಿಕ ಅವಕಾಶದ ರೂಪದಲ್ಲಿ ಕಂಡಾಗ ಮಾತ್ರ ಅದು ಉಳಿದು ಬೆಳೆಯಲು ಸಾಧ್ಯ. ಇಂಗ್ಲಿಷ್ ತಿಳಿದಿದ್ದರೆ ಮಾತ್ರ ಉದ್ಯೋಗ ಎಂಬ ನಂಬಿಕೆಯನ್ನು ಹೋಗಲಾಡಿಸಿ, ಕನ್ನಡ ತಿಳಿದಿದ್ದರೂ ಉದ್ಯೋಗ ಸಿಗುತ್ತದೆ, ಕನ್ನಡವೇ ಉದ್ಯೋಗದ ಕೌಶಲ್ಯವಾಗಿದೆ ಎಂಬ ಸಂದೇಶವನ್ನು ಯುವಜನರಿಗೆ ತಲುಪಿಸುವುದು ಅತ್ಯಗತ್ಯವಾಗಿದೆ.

Read More
Next Story