ನಾಡಿನಲ್ಲಿ ಕನ್ನಡಕ್ಕೆ ಅನ್ಯಾಯ: ನೇಮಕಾತಿ ಕರಡು ನಿಯಮ ವಿರುದ್ಧ ಡಾ.ಬಿಳಿಮಲೆ  ಕಿಡಿ
x

ನಾಡಿನಲ್ಲಿ ಕನ್ನಡಕ್ಕೆ ಅನ್ಯಾಯ: ನೇಮಕಾತಿ ಕರಡು ನಿಯಮ ವಿರುದ್ಧ ಡಾ.ಬಿಳಿಮಲೆ ಕಿಡಿ

ನಾಡಿನ ಆಡಳಿತ ಭಾಷೆ ಕನ್ನಡವಾಗಿರುವಾಗ, ಉದ್ಯೋಗ ನೇಮಕಾತಿಯಲ್ಲಿ ಇಂಗ್ಲೀಷ್‌ಗೆ ಸಮಾನ ಸ್ಥಾನ ಕಲ್ಪಿಸುವುದು 1963ರ ಕರ್ನಾಟಕ ರಾಜಭಾಷಾ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆರೋಪಿಸಲಾಗಿದೆ.


Click the Play button to hear this message in audio format

ಆಡಳಿತ ವ್ಯವಸ್ಥೆಯ ಭದ್ರ ಬುನಾದಿಯಾಗಿರುವ ಕನ್ನಡ ಭಾಷೆಗೆ, ಸ್ವತಃ ರಾಜ್ಯ ಸರ್ಕಾರವೇ ಹೊರಡಿಸಿರುವ ನೂತನ ನೇಮಕಾತಿ ಕರಡು ನಿಯಮಗಳಲ್ಲಿ ಅವಮಾನ ಎದುರಾಗಿದೆ. ಸರ್ಕಾರಿ ಇಲಾಖೆಗಳ ಲಿಪಿಕ ವರ್ಗದ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಇತ್ತೀಚೆಗೆ ಪ್ರಕಟಿಸಿರುವ ಕರಡು ನಿಯಮಗಳು, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದ ಗ್ರಾಮೀಣ ಅಭ್ಯರ್ಥಿಗಳ ಪಾಲಿಗೆ ಮಾರಕವಾಗಿ ಪರಿಣಮಿಸಿವೆ. ಈ ಕುರಿತಂತೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ, ಕೂಡಲೇ ಸರ್ಕಾರ ಈ ಕನ್ನಡ ವಿರೋಧಿ ಧೋರಣೆಯನ್ನು ಕೈಬಿಟ್ಟು, ಕನ್ನಡ ಸ್ನೇಹಿ ತಿದ್ದುಪಡಿಯನ್ನು ಜಾರಿಗೆ ತರಬೇಕೆಂದು ಆಗ್ರಹಿಸಿದ್ದಾರೆ.

ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಪ್ರಕಟಿಸಿದ ಕರಡು ನಿಯಮಗಳ ಪ್ರಕಾರ, ಸರ್ಕಾರಿ ಹುದ್ದೆಗಳಿಗೆ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳು ಕನ್ನಡ ಮತ್ತು ಆಂಗ್ಲ ಭಾಷೆಗಳಲ್ಲಿ ತಲಾ 35 ಅಂಕಗಳ ಪರೀಕ್ಷೆಯನ್ನು ಕಡ್ಡಾಯವಾಗಿ ಬರೆಯಬೇಕಿದೆ. ಅಂದರೆ, ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೆ ಆಂಗ್ಲ ಭಾಷೆಯಷ್ಟೇ ಸಮಾನ ಅಂಕಗಳನ್ನು ನಿಗದಿಪಡಿಸಲಾಗಿದೆ. ಈ ಬಗ್ಗೆ ಪತ್ರ ಬರೆದಿರುವ ಡಾ. ಪುರುಷೋತ್ತಮ ಬಿಳಿಮಲೆ, "ಕನ್ನಡ ನಾಡಿನ ಆಡಳಿತ ಭಾಷೆ ಕನ್ನಡವಾಗಿರುವಾಗ, ಉದ್ಯೋಗ ನೇಮಕಾತಿಯಲ್ಲಿ ಇಂಗ್ಲೀಷ್‌ಗೆ ಸಮಾನ ಸ್ಥಾನ ಕಲ್ಪಿಸುವುದು 1963ರ ಕರ್ನಾಟಕ ರಾಜಭಾಷಾ ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಇದು ಸಾವಿರಾರು ಗ್ರಾಮೀಣ ಮತ್ತು ಕನ್ನಡ ಮಾಧ್ಯಮ ಅಭ್ಯರ್ಥಿಗಳ ಬದುಕಿನೊಂದಿಗೆ ಚೆಲ್ಲಾಟವಾಡುವ ನಿರ್ಧಾರ" ಎಂದು ಕಿಡಿಕಾರಿದ್ದಾರೆ.

ಗ್ರಾಮೀಣ ವಿದ್ಯಾರ್ಥಿಗಳಿಗೆ ಮಾರಕವೇ ಈ ನಿಯಮ?

ರಾಜ್ಯದ ಬಹುತೇಕ ಗ್ರಾಮೀಣ ವಿದ್ಯಾರ್ಥಿಗಳು ತಮ್ಮ ಶಾಲಾ-ಕಾಲೇಜು ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಪೂರೈಸುತ್ತಾರೆ. ಇಂತಹ ವಿದ್ಯಾರ್ಥಿಗಳು ಕನ್ನಡದಲ್ಲಿ ಪ್ರಭುತ್ವ ಹೊಂದಿದ್ದರೂ, ಆಂಗ್ಲ ಭಾಷೆಯಲ್ಲಿ ಅಷ್ಟೇ ಪರಿಣಿತಿ ಹೊಂದಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಆಂಗ್ಲ ಭಾಷೆಗೆ 35 ಅಂಕಗಳನ್ನು ಕಡ್ಡಾಯಗೊಳಿಸುವುದು ಮತ್ತು ಕನ್ನಡಕ್ಕೆ ಕೇವಲ 35 ಅಂಕಗಳಿಗೆ ಮಾತ್ರ ಸೀಮಿತಗೊಳಿಸುವುದು, ಬಹುಸಂಖ್ಯಾತ ಕನ್ನಡಿಗ ಅಭ್ಯರ್ಥಿಗಳನ್ನು ನೇಮಕಾತಿ ಪ್ರಕ್ರಿಯೆಯಿಂದ ದೂರವಿಡುವ ಹುನ್ನಾರವಾಗಿದೆ. ಸರ್ಕಾರದ ಈ ಏಕಪಕ್ಷೀಯ ನಿರ್ಧಾರವನ್ನು ತರಾಟೆಗೆ ತೆಗೆದುಕೊಂಡಿರುವ ಡಾ. ಬಿಳಿಮಲೆ, ನ್ಯಾಯಸಮ್ಮತವಾದ ಬದಲಾವಣೆಗೆ ದಾರಿ ಸೂಚಿಸಿದ್ದಾರೆ. ಸರ್ಕಾರದ ಆಡಳಿತದ ಮೂಲ ಭಾಷೆ ಕನ್ನಡವೇ ಆಗಿರಬೇಕು. ಹೀಗಾಗಿ ಕನ್ನಡ ಭಾಷಾ ಪರೀಕ್ಷೆಗೆ ಕನಿಷ್ಠ 50 ಅಂಕಗಳನ್ನು ನಿಗದಿಪಡಿಸಬೇಕು ಮತ್ತು ಆಂಗ್ಲ ಭಾಷಾ ಪರೀಕ್ಷೆಗೆ 20 ಅಂಕಗಳನ್ನು ಮಾತ್ರ ನಿಗದಿಪಡಿಸಬೇಕು. ಈ ಮೂಲಕ ಆಡಳಿತದಲ್ಲಿ ಕನ್ನಡಕ್ಕೆ ಪ್ರಥಮ ಪ್ರಾಶಸ್ತ್ಯ ನೀಡುವ ಸಂವಿಧಾನಾತ್ಮಕ ಜವಾಬ್ದಾರಿಯನ್ನು ಸರ್ಕಾರ ಮರೆತಿದೆ. ಇಂಗ್ಲಿಷ್ ಕೇವಲ ಒಂದು ಸಂಪರ್ಕ ಭಾಷೆಯಾಗಿರಬೇಕೇ ಹೊರತು, ರಾಜ್ಯದ ಉದ್ಯೋಗಗಳನ್ನು ಪಡೆಯುವಲ್ಲಿ ಅದು ಅಡಚಣೆಯಾಗಬಾರದು ಎಂದು ಹೇಳಿದ್ದಾರೆ.

ರಾಜಭಾಷಾ ನೀತಿಯ ಉಲ್ಲಂಘನೆ

1963ರ ಕರ್ನಾಟಕ ರಾಜಭಾಷಾ ಕಾಯ್ದೆಯು ಕನ್ನಡವನ್ನು ಆಡಳಿತದ ಪ್ರತಿಯೊಂದು ಹಂತದಲ್ಲೂ ಕಡ್ಡಾಯಗೊಳಿಸಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಪ್ರತಿಯೊಂದು ಇಲಾಖೆಯ ನೇಮಕಾತಿಗಳಲ್ಲಿಯೂ ಕನ್ನಡವನ್ನು ದ್ವಿತೀಯ ದರ್ಜೆಗೆ ತಳ್ಳುವ ಪ್ರಯತ್ನಗಳು ನಡೆಯುತ್ತಿವೆ. ಈ ಕರಡು ನಿಯಮವು ಆ ಪ್ರಯತ್ನದ ಮುಂದುವರಿದ ಭಾಗವಾಗಿದೆ. ಸರ್ಕಾರಿ ಉದ್ಯೋಗ ಎಂದರೆ ಅದು ಕನ್ನಡಿಗರ ಹಕ್ಕು. ಆ ಹಕ್ಕನ್ನು ಪಡೆಯಲು ಕನ್ನಡದಲ್ಲಿ ಪಾಂಡಿತ್ಯವಿರುವವರಿಗೆ ಆದ್ಯತೆ ಸಿಗಬೇಕೇ ಹೊರತು, ಇಂಗ್ಲಿಷ್ ಬಲ್ಲವರಿಗೆ ಹೆಚ್ಚಿನ ಅಂಕಗಳ ಆಮಿಷ ತೋರಿಸಿ ನೇಮಕಾತಿ ಮಾಡಿಕೊಳ್ಳುವುದಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬಿಳಿಮಲೆ ಅವರ ಈ ನಿಲುವಿಗೆ ಸಾಹಿತಿಗಳು, ಶಿಕ್ಷಣ ತಜ್ಞರು ಮತ್ತು ಕನ್ನಡ ಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. "ಸರ್ಕಾರ ಈ ಕೂಡಲೇ ಕರಡು ನಿಯಮವನ್ನು ಹಿಂಪಡೆದು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ನೀಡಿರುವ ಸಲಹೆಗಳನ್ನು ಆಧರಿಸಿ ಹೊಸ ಅಧಿಸೂಚನೆ ಹೊರಡಿಸಬೇಕು. ಇಲ್ಲವಾದಲ್ಲಿ ಕನ್ನಡಿಗರ ಹೋರಾಟವನ್ನು ಎದುರಿಸಬೇಕಾಗುತ್ತದೆ" ಎಂದು ಎಚ್ಚರಿಕೆ ನೀಡಲಾಗಿದೆ.

Read More
Next Story