
ವೈದ್ಯಕೀಯ ಶಿಕ್ಷಣದಲ್ಲಿ ಕನ್ನಡ ಸಾಹಿತ್ಯ-ಸಂಸ್ಕೃತಿ ಅಳವಡಿಕೆ ಮಹತ್ವದ ಹೆಜ್ಜೆ
ವೈದ್ಯಕೀಯ ಶಿಕ್ಷಣವೆಂದರೆ ವೈದ್ಯಕೀಯ ಜ್ಞಾನ, ಚಿಕಿತ್ಸಾ ವಿಧಾನಗಳನ್ನು ಕಲಿಸುವುದಷ್ಟೇ ಅಲ್ಲ, ರೋಗಿಗಳ ಮನಸ್ಥಿತಿ ಅರ್ಥ ಮಾಡಿಕೊಳ್ಳುವ ಮನೋಭಾವ ಅಗತ್ಯ ಎಂದು ಪುರೋಷತ್ತಮ ಬಳಿಮಲೆ ಹೇಳಿದ್ದಾರೆ.
ವೈದ್ಯಕೀಯ ಶಿಕ್ಷಣದಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಅಧ್ಯಯನವನ್ನು ಪಠ್ಯಕ್ರಮದ ಭಾಗವಾಗಿ ಅಳವಡಿಸಿಕೊಳ್ಳುವ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ (ಆರ್ಜಿಯುಎಚ್ಎಸ್) ಚಿಂತನೆಯು ಅತ್ಯಂತ ಮಹತ್ವದ ಹೆಜ್ಜೆಯಾಗಿದ್ದು, ಇದು ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ವೃತ್ತಿಪರ ಕ್ಷಮತೆಯ ಜೊತೆಗೆ ಮಾನವೀಯ ಮೌಲ್ಯಗಳು, ಸಹಾನುಭೂತಿ ಮತ್ತು ಸಹಜೀವಿಗಳ ಕುರಿತಾದ ಸಂವೇದನೆಯನ್ನು ಬೆಳೆಸುವಲ್ಲಿ ಪರಿಣಾಮಕಾರಿಯಾಗಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಹಮ್ಮಿಕೊಂಡಿರುವ 'ಪ್ರಥಮ ಕನ್ನಡ ಸಮಗ್ರ ವೈದ್ಯಕೀಯ ಸಾಹಿತ್ಯ ಸಮ್ಮೇಳನ'ದಲ್ಲಿ ಶನಿವಾರ ನಡೆದ "ಕನ್ನಡದಲ್ಲಿ ವೈದ್ಯಕೀಯ ಶಿಕ್ಷಣ, ಸವಾಲುಗಳು ಮತ್ತು ನಿವಾರಣಾ ಮಾರ್ಗೋಪಾಯಗಳು" ಎಂಬ ಗೋಷ್ಠಿಯಲ್ಲಿ ಅವರು ಭಾಗವಹಿಸಿ ಮಾತನಾಡಿದರು. ವೈದ್ಯಕೀಯ ಶಿಕ್ಷಣವನ್ನು ಕೇವಲ ತಾಂತ್ರಿಕ ಕಲಿಕೆಗೆ ಸೀಮಿತಗೊಳಿಸದೆ, ಸಾಹಿತ್ಯ-ಸಂಸ್ಕೃತಿಯೊಂದಿಗೆ ಬೆಸೆಯುವ ಮತ್ತು ಶಾಲಾ ಹಂತದಿಂದಲೇ ವೈದ್ಯಕೀಯ ಹಾಗೂ ಮಾನಸಿಕ ಆರೋಗ್ಯದ ಅರಿವು ಮೂಡಿಸಬೇಕಿದೆ ಎಂದು ತಿಳಿಸಿದರು.
"ವೈದ್ಯಕೀಯ ಶಿಕ್ಷಣವೆಂದರೆ ಕೇವಲ ವೈದ್ಯಕೀಯ ಜ್ಞಾನ ಮತ್ತು ಚಿಕಿತ್ಸಾ ವಿಧಾನಗಳನ್ನು ಕಲಿಸುವುದಷ್ಟೇ ಅಲ್ಲ; ಬದಲಾಗಿ ರೋಗಿಗಳ ಮನಸ್ಥಿತಿ ಹಾಗೂ ಅವರ ಬದುಕಿನ ಸವಾಲುಗಳನ್ನು ಮಾನವೀಯ ನೆಲೆಯಲ್ಲಿ ಅರ್ಥ ಮಾಡಿಕೊಳ್ಳುವ ಸಂವೇದನಾಶೀಲ ಮನೋಭಾವವನ್ನು ಬೆಳೆಸಬೇಕಾದ ಅವಶ್ಯಕತೆ ಇದೆ" ಎಂದು ಪ್ರತಿಪಾದಿಸಿದರು.
ವೈದ್ಯಕೀಯ ವೃತ್ತಿಯು ನೇರವಾಗಿ ಮನುಷ್ಯನ ನೋವು, ನಲಿವು ಮತ್ತು ಬದುಕಿನೊಂದಿಗೆ ಬೆಸೆದುಕೊಂಡಿರುವ ಕ್ಷೇತ್ರವಾಗಿದೆ. ಕೇವಲ ಯಾಂತ್ರಿಕವಾಗಿ ರೋಗಲಕ್ಷಣಗಳನ್ನು ಪರೀಕ್ಷಿಸಿ ಚಿಕಿತ್ಸೆ ನೀಡುವುದಕ್ಕಿಂತ, ರೋಗಿಯ ಭಾವನಾತ್ಮಕ ಹಾಗೂ ಬದುಕಿನ ವಾಸ್ತವಗಳನ್ನು ಅರಿತು ಸ್ಪಂದಿಸುವ ಗುಣ ವೈದ್ಯರಲ್ಲಿರಬೇಕು ಎಂಬುದು ಅವರ ಮಾತಿನ ಆಶಯವಾಗಿತ್ತು. ಸಾಹಿತ್ಯ ಮತ್ತು ಸಂಸ್ಕೃತಿಯ ಅಧ್ಯಯನವು ವಿದ್ಯಾರ್ಥಿಗಳಲ್ಲಿ ಇಂತಹ ಮಾನವೀಯ ದೃಷ್ಟಿಕೋನವನ್ನು ಬೆಳೆಸಲು ನೆರವಾಗಲಿದೆ. ಸಾಹಿತ್ಯವು ಮನುಷ್ಯನ ಬದುಕಿನ ವಿವಿಧ ಮಗ್ಗುಲುಗಳನ್ನು ಪರಿಚಯಿಸುವುದರಿಂದ ವಿದ್ಯಾರ್ಥಿಗಳಲ್ಲಿ ಸಹಾನುಭೂತಿ ಮತ್ತು ಸಹಜೀವಿಗಳ ಕುರಿತ ಸಂವೇದನೆ ಮೂಡುತ್ತದೆ. ಈ ಹಿನ್ನೆಲೆಯಲ್ಲಿ ಪಠ್ಯಕ್ರಮದಲ್ಲಿ ಕನ್ನಡ ಸಾಹಿತ್ಯ-ಸಂಸ್ಕೃತಿಯನ್ನು ಅಳವಡಿಸುವ ವಿಶ್ವವಿದ್ಯಾಲಯದ ಪ್ರಯತ್ನವು ವೈದ್ಯಕೀಯ ಶಿಕ್ಷಣಕ್ಕೆ ಒಂದು ಹೊಸ ಆಯಾಮವನ್ನು ನೀಡಲಿದೆ ಎಂದು ಅಭಿಪ್ರಾಯಪಟ್ಟರು.
ಶಾಲಾ ಶಿಕ್ಷಣದಲ್ಲಿ ವೈದ್ಯಕೀಯ ಪಠ್ಯ ಅಳವಡಿಕೆ
ವೈದ್ಯಕೀಯ ಶಿಕ್ಷಣದ ಸುಧಾರಣೆಯ ಜೊತೆಜೊತೆಗೆ, ಶಾಲಾ ಹಂತದಲ್ಲಿಯೂ ಆರೋಗ್ಯ ವಿಜ್ಞಾನದ ಅರಿವು ಮೂಡಿಸುವ ಅಗತ್ಯ ಇದೆ. ಶಾಲಾ ಶಿಕ್ಷಣದಲ್ಲಿಯೂ ಸಹ ವೈದ್ಯಕೀಯ ವಿಜ್ಞಾನದ ಬೋಧನೆಯನ್ನು ಅಳವಡಿಸಿಕೊಳ್ಳಬೇಕು ಎನ್ನುವುದು ನನ್ನ ಅಭಿಮತವಾಗಿದೆ. ಈ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಪಠ್ಯ ಪರಿಷ್ಕರಣೆಗಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಈಗಾಗಲೇ ಪೂರ್ವಭಾವಿ ಕೆಲಸಗಳನ್ನು ಆರಂಭಿಸಲಾಗಿದೆ. ಶಾಲಾ ಹಂತದಲ್ಲಿ ವೈದ್ಯಕೀಯ ವಿಜ್ಞಾನದ ಮೂಲಭೂತ ಅಂಶಗಳನ್ನು ಕಲಿಸುವುದರಿಂದ ಸಾಕಷ್ಟು ಪ್ರಯೋಜನಗಳಾಗಿವೆ. ಮಕ್ಕಳಲ್ಲಿ ಬಾಲ್ಯದಿಂದಲೇ ಮಾನವ ದೇಹದ ರಚನೆ ಮತ್ತು ಅದರ ಕಾರ್ಯನಿರ್ವಹಣೆಯ ಬಗೆಗಿನ ಜ್ಞಾನ ಮೂಡಿದಲ್ಲಿ, ಅದು ವೈಜ್ಞಾನಿಕ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಸೂಕ್ತ ಆರೋಗ್ಯ ನಡವಳಿಕೆಗಳನ್ನು ಅಳವಡಿಸಿಕೊಳ್ಳಲು ಹಾಗೂ ಪಾಲಿಸಲು ಸಹಕಾರಿಯಾಗಲಿದೆ. ಆರೋಗ್ಯದ ಕುರಿತು ವೈಜ್ಞಾನಿಕ ತಿಳಿವಳಿಕೆ ಹೊಂದಿರುವ ಪೀಳಿಗೆ ಬೆಳೆದರೆ, ಅದು ತನ್ನದೇ ಆದ ರೀತಿಯಲ್ಲಿ ಭವಿಷ್ಯದ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕಾರಣವಾಗಲಿದೆ ಎಂದು ಹೇಳಿದರು.
8ನೇ ತರಗತಿಯಿಂದ ಮಾನಸಿಕ ಆರೋಗ್ಯ, ಜೀವನ ಕೌಶಲ್ಯ
ಶಾಲಾ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಯಾವೆಲ್ಲಾ ಅಂಶಗಳು ಸೇರ್ಪಡೆಯಾಗಬೇಕು ಎಂಬುದರ ಕುರಿತು ಡಾ. ಬಿಳಿಮಲೆ ಅವರು ಸ್ಪಷ್ಟ ರೂಪುರೇಷೆಯನ್ನು ಹಂಚಿಕೊಂಡರು. ವಿಶೇಷವಾಗಿ ಹದಿಹರೆಯಕ್ಕೆ ಕಾಲಿಡುವ 8ನೇ ತರಗತಿಯಿಂದಲೇ ಸಮಗ್ರ ಆರೋಗ್ಯ ಶಿಕ್ಷಣ ಆರಂಭವಾಗಬೇಕು ಎಂದು ಪ್ರತಿಪಾದಿಸಿದರು. 8ನೇ ತರಗತಿಯಿಂದ ಶಾಲಾ ಪಠ್ಯಪುಸ್ತಕಗಳಲ್ಲಿ ದೈಹಿಕ ಅರಿವು, ಸ್ವಚ್ಛತೆಯ ಅಭ್ಯಾಸ ಮತ್ತು ಪೌಷ್ಟಿಕಾಂಶದ ಅರಿವಿನ ಪಾಠಗಳನ್ನು ಅಳವಡಿಸಬೇಕು. ಇದರ ಜೊತೆಯಲ್ಲಿಯೇ, ಭಾವನಾತ್ಮಕ ಸಮತೋಲನ ಹಾಗೂ ಒತ್ತಡ ನಿರ್ವಹಣೆಯಂತಹ ಪಾಠಗಳನ್ನು ಸೇರ್ಪಡೆ ಮಾಡಿ, ಹದಿಹರೆಯದ ಮಕ್ಕಳಲ್ಲಿ ಮಾನಸಿಕ ಆರೋಗ್ಯದ ಪ್ರಾಮುಖ್ಯತೆಯ ಕುರಿತಂತೆ ಜಾಗೃತಿ ಮೂಡಿಸಬೇಕಾಗಿದೆ ಎಂದು ಬಿಳಿಮಲೆ ಹೇಳಿದರು.
ಇದಷ್ಟೇ ಅಲ್ಲದೆ, ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ವೈದ್ಯಕೀಯ ಹಾಗೂ ಆರೋಗ್ಯ ಸೇವಾ ವಲಯದ ಭವಿಷ್ಯದ ದಾರಿಗಳನ್ನು ಪರಿಚಯಿಸುವ ಅಗತ್ಯವನ್ನೂ ಅವರು ಒತ್ತಿ ಹೇಳಿದರು. ವಿದ್ಯಾರ್ಥಿಗಳಲ್ಲಿ ವೈದ್ಯಕೀಯ, ನರ್ಸಿಂಗ್ ಹಾಗೂ ಬಯೋ ಟೆಕ್ನಾಲಜಿಯಂತಹ ವೈದ್ಯಕೀಯ ಕ್ಷೇತ್ರದ ವಿವಿಧ ವೃತ್ತಿಜೀವನದ ಅವಕಾಶಗಳ ಬಗ್ಗೆ ಆಸಕ್ತಿ ಮೂಡಿಸುವ ಕೆಲಸವೂ ಆಗಬೇಕಾಗಿದೆ. ಪಠ್ಯಪುಸ್ತಕಗಳ ಪರಿಷ್ಕರಣೆಯ ಸಂದರ್ಭದಲ್ಲಿ ಶಿಕ್ಷಣ ಇಲಾಖೆಗೆ ಈ ಕುರಿತಂತೆ ಸಲಹೆ ನೀಡಲಾಗುತ್ತದೆ ಎಂದು ತಿಳಿಸಿದರು.
ವಿಶ್ವವಿದ್ಯಾಲಯಕ್ಕೆ ಪ್ರಾಧಿಕಾರದ ಸಂಪೂರ್ಣ ಸಹಕಾರ
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮಹತ್ವದ ಯೋಜನೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಬೆಂಬಲವನ್ನು ಘೋಷಿಸಿದ ಡಾ. ಪುರುಷೋತ್ತಮ ಬಿಳಿಮಲೆ ಅವರು, "ವೈದ್ಯ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಪಠ್ಯ ವಸ್ತುವನ್ನು ರೂಪಿಸುವ ಮಹತ್ವದ ಆಶಯವನ್ನು ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರವು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಅಗತ್ಯ ಸಹಕಾರವನ್ನು ನೀಡಲಿದೆ" ಎಂದು ಭರವಸೆ ನೀಡಿದರು. ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಶೈಕ್ಷಣಿಕ ಚಿಂತನೆ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಭಾಷಾ-ಸಾಂಸ್ಕೃತಿಕ ಬದ್ಧತೆ ಒಂದಾದಾಗ, ವೈದ್ಯಕೀಯ ಪಠ್ಯಕ್ರಮದಲ್ಲಿ ಮಹತ್ವದ ಬದಲಾವಣೆ ಸಾಧ್ಯವಾಗಲಿದೆ ಎಂದರು.

