
ನಿರ್ಮಾಪಕ ಬಾ.ಮಾ.ಹರೀಶ್ ಪುತ್ರ ಉಲ್ಲಾಸ್ ಗೌಡ ನಿಧನರಾಗಿದ್ದಾರೆ.
ಟ್ರೆಕ್ಕಿಂಗ್ ವೇಳೆ ಹೃದಯಾಘಾತ- ಭಾ.ಮ.ಹರೀಶ್ ಪುತ್ರ ವಿಧಿವಶ
ಕೊಡಚಾದ್ರಿ ಚಾರಣ ಮುಗಿಸಿ ಇಳಿಯುವಾಗ ಚಿತ್ರ ನಿರ್ಮಾಪಕ ಭಾ.ಮಾ.ಹರೀಶ್ ಪುತ್ರ ಉಲ್ಲಾಸ್ ಗೌಡ (27) ಅವರಿಗೆ ಹಠಾತ್ ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ನಿಧನರಾಗಿದ್ದಾರೆ.
ಕೊಡಚಾದ್ರಿ ಬೆಟ್ಟಕ್ಕೆ ಚಾರಣ ಮುಗಿಸಿ ಇಳಿಯುವಾಗ ಖ್ಯಾತ ಚಲನಚಿತ್ರ ನಿರ್ಮಾಪಕ ಭಾ.ಮಾ.ಹರೀಶ್ ಪುತ್ರ ಉಲ್ಲಾಸ್ ಗೌಡ (27) ನಿಧನರಾಗಿದ್ದಾರೆ. ಸ್ನೇಹಿತರೊಂದಿಗೆ ಚಾರಣಕ್ಕೆ ಹೋಗಿದ್ದ ಉಲ್ಲಾಸ್ ಇಳಿಯುವಾಗ ಹಠಾತ್ತಾಗಿ ಕುಸಿದಿದ್ದಾರೆ. ಕೂಡಲೇ ಜತೆಗಾರರು ಹೊಸನಗರ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅವರು ಮಾರ್ಗ ಮಧ್ಯೆಯೇ ಮೃತಪಟ್ಟಿರುವುದನ್ನು ವೈದ್ಯರು ಖಚಿತಪಡಿಸಿದ್ದಾರೆ. ಮೃತದೇಹ ಹೊಸನಗರ ಸರಕಾರಿ ಆಸ್ಪತ್ರೆಯಲ್ಲಿದ್ದು, ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರಿನಿಂದ ತಮ್ಮ 13 ಮಂದಿ ಗೆಳೆಯರೊಂದಿಗೆ ಟಿ.ಟಿ.ವಾಹನದಲ್ಲಿ ಉಲ್ಲಾಸ್ ಗೌಡ ಅವರು ಕೊಡಚಾದ್ರಿಗೆ ಬಂದಿದ್ದರು. ಎಲ್ಲರೂ ಸೇರಿ ಕೊಡಚಾದ್ರಿಯ ಸರ್ವ ಪೀಠದವರೆಗೆ ಚಾರಣ ಮಾಡಿ ಮುಗಿಸಿದ್ದರು. ಇಳಿಯುವಾಗ ಬೆಟ್ಟದ ತಪ್ಪಲಲ್ಲಿರುವ ದೇವಸ್ಥಾನ ಬಳಿ ಉಲ್ಲಾಸ್‌ಗೆ ಹಠಾತ್ ಹೃದಯಾಘಾತವಾಗಿದೆ.
ತಕ್ಷಣ ಕೆಳಗೆ ಕರೆದುಕೊಂಡು ಬಂದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೊಸನಗರ ಆಸ್ಪತ್ರೆಗೆ ಕರೆದೊಯ್ಯುವಾಗ ಅವರು ಕೊನೆಯುಸಿರೆಳೆದಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರೂ ಆಗಿರುವ ಬಾ.ಮಾ ಹರೀಶ್ ಅವರ ಪುತ್ರನಾಗಿರುವ ಉಲ್ಲಾಸ್‌ಗೆ ಕೆಲವು ತಿಂಗಳ ಹಿಂದೆ ವಿವಾಹ ನಿಶ್ಚಿತಾರ್ಥವಾಗಿತ್ತು. ಮುಂಬರುವ ಡಿಸೆಂಬರ್‌ನಲ್ಲಿ ಮದುವೆ ನಿಗದಿಯಾಗಿತ್ತು ಎಂದು ಹೇಳಲಾಗಿದೆ.

