Notice to RSS if questions are not answered: Home Minister Priyank Kharge warns!
x
ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಹಾಗೂ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌

ಪ್ರಶ್ನೆಗಳಿಗೆ ಉತ್ತರಿಸದಿದ್ದರೆ ಆರ್‌ಎಸ್‌ಎಸ್‌ಗೆ ನೋಟಿಸ್: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆ!

ಆರ್‌ಎಸ್ಎಸ್ ಸಂಸ್ಥೆಯ ವಿರುದ್ಧ ಅನೇಕ ದೂರುಗಳು ಬಂದ ಹಿನ್ನೆಲೆಯಲ್ಲೇ ತನಿಖಾ ದೃಷ್ಟಿಯಿಂದ ಈ ಪ್ರಶ್ನೆಗಳನ್ನು ಕೇಳಲಾಗಿದೆ. ಈಗ ಮೊದಲ ಹಂತವಾಗಿ ಕೇವಲ ಪತ್ರ ಬರೆಯಲಾಗಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.


Click the Play button to hear this message in audio format

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ನೋಂದಣಿ ಹಾಗೂ ಆದಾಯದ ಮೂಲಕ್ಕೆ ಸಂಬಂಧಿಸಿದಂತೆ ತಾವು ಕೇಳಿರುವ ಪ್ರಶ್ನೆಗಳಿಗೆ ಸೂಕ್ತ ಉತ್ತರ ನೀಡದಿದ್ದರೆ, ಕಾನೂನು ಪ್ರಕಾರ ನೋಟಿಸ್ ನೀಡಿ ವಿಚಾರಣೆಗೆ ಕರೆಸಲಾಗುವುದು ಎಂದು ರಾಜ್ಯ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ.

'ದಿ ಫೆಡರಲ್ ಕರ್ನಾಟಕ'ಕ್ಕೆ ನೀಡಿದ ಎಕ್ಸ್‌ಕ್ಲೂಸಿವ್ ಸಂದರ್ಶನದಲ್ಲಿ ಮಾತನಾಡಿದ ಅವರು, ಆರ್‌ಎಸ್ಎಸ್ ಸಂಸ್ಥೆಯ ಕಾರ್ಯವೈಖರಿ ಮತ್ತು ಹೊಣೆಗಾರಿಕೆಯ ಕುರಿತು ಮತ್ತೊಮ್ಮೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.

ಲೆಟರ್ ಹೆಡ್‌ನಲ್ಲಿ ಉತ್ತರ ನೀಡಲಿ

"ಆರ್‌ಎಸ್ಎಸ್‌ನ ನೋಂದಣಿ, ಆದಾಯದ ಮೂಲ ಸೇರಿದಂತೆ ಒಟ್ಟು 8 ಪ್ರಮುಖ ಪ್ರಶ್ನೆಗಳನ್ನು ಕೇಳಿ ನಾನು ಈಗಾಗಲೇ ಪತ್ರ ಬರೆದಿದ್ದೆ. ಆದರೆ ಈವರೆಗೆ ಅದಕ್ಕೆ ಯಾವುದೇ ಅಧಿಕೃತ ಉತ್ತರ ಬಂದಿಲ್ಲ. ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನನ್ನ ಪ್ರಶ್ನೆಗಳಿಗೆ ನೇರ ಉತ್ತರ ನೀಡದೆ, ಕೇವಲ ಚಿತ್ತಾಪುರ ಘಟನೆಯ ಬಗ್ಗೆ ಮಾತ್ರ ಮಾತನಾಡಿದ್ದಾರೆ. ಅವರು ತಮ್ಮ ಅಧಿಕೃತ ಲೆಟರ್ ಹೆಡ್‌ನಲ್ಲಿ ನನ್ನ ಪ್ರಶ್ನೆಗಳಿಗೆ ಉತ್ತರ ನೀಡಲಿ. ಇಲ್ಲದಿದ್ದರೆ ಕಾನೂನುಬದ್ಧವಾಗಿ ಅವರಿಂದ ಹೇಗೆ ಉತ್ತರ ಪಡೆಯಬೇಕು ಎಂಬುದು ನಮಗೆ ಗೊತ್ತಿದೆ" ಎಂದು ಪ್ರಿಯಾಂಕ್ ಖರ್ಗೆ ಎಚ್ಚರಿಸಿದ್ದಾರೆ.

ಗೃಹ ಇಲಾಖೆ ಪ್ರಶ್ನೆ ಕೇಳದೆ ಇನ್ಯಾರು ಕೇಳಬೇಕು?

ಕಾನೂನು ಚೌಕಟ್ಟಿನಲ್ಲೇ ತಾವೂ ಪ್ರಶ್ನೆ ಕೇಳಿರುವುದಾಗಿ ಸಮರ್ಥಿಸಿಕೊಂಡ ಗೃಹ ಸಚಿವರು, "ಲಕ್ಷಾಂತರ ರಾಷ್ಟ್ರೀಯ ಸ್ವಯಂಸೇವಕರು ಬೀದಿಗೆ ಬಂದು ಕಾರ್ಯಕ್ರಮಗಳನ್ನು, ಪಥಸಂಚಲನಗಳನ್ನು ನಡೆಸುತ್ತಾರೆ. ಸಾರ್ವಜನಿಕವಾಗಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮಗಳು ನಡೆಯುವಾಗ ಅದು ಯಾರ ವ್ಯಾಪ್ತಿಗೆ ಬರುತ್ತದೆ? ಇದಕ್ಕೆ ಗೃಹ ಇಲಾಖೆ ಪ್ರಶ್ನೆ ಕೇಳದೆ, ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೋ ಅಥವಾ ಕೃಷಿ ಇಲಾಖೆಯೋ ಪ್ರಶ್ನೆ ಕೇಳಲು ಸಾಧ್ಯವೇ?" ಎಂದು ಲೇವಡಿ ಮಾಡಿದ್ದಾರೆ.

ದೂರುಗಳ ಆಧಾರದ ಮೇಲೆಯೇ ಪ್ರಶ್ನೆ

ಆರ್‌ಎಸ್ಎಸ್ ಸಂಸ್ಥೆಯ ವಿರುದ್ಧ ಅನೇಕ ದೂರುಗಳು ಬಂದ ಹಿನ್ನೆಲೆಯಲ್ಲೇ ತನಿಖಾ ದೃಷ್ಟಿಯಿಂದ ಈ ಪ್ರಶ್ನೆಗಳನ್ನು ಕೇಳಲಾಗಿದೆ. ಈಗ ಮೊದಲ ಹಂತವಾಗಿ ಕೇವಲ ಪತ್ರ ಬರೆಯಲಾಗಿದೆ. ಮುಂದಿನ ದಿನಗಳಲ್ಲಿ ಕಾನೂನು ಪ್ರಕ್ರಿಯೆಯ ಪ್ರಕಾರವೇ ಮತ್ತೊಮ್ಮೆ ಜ್ಞಾಪನಾ ಪತ್ರ ಕಳುಹಿಸಿ, ಅಗತ್ಯಬಿದ್ದರೆ ಅಧಿಕೃತವಾಗಿ ನೋಟಿಸ್ ಜಾರಿ ಮಾಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಬೆದರಿಕೆ ಕರೆಗಳಿಗೆ ಹೆದರಲ್ಲ

"ಆರ್‌ಎಸ್ಎಸ್ ವಿಚಾರ ಕೈಗೆತ್ತಿಕೊಂಡಾಗಿನಿಂದ ನನಗೆ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿವೆ. ಆದರೆ ಇಂತಹ ಬೆದರಿಕೆಗಳಿಗೆ ನಾನು ಕಿಂಚಿತ್ತೂ ತಲೆಕೆಡಿಸಿಕೊಳ್ಳುವುದಿಲ್ಲ. ನನ್ನ ಗಮನ ಮತ್ತು ಫೋಕಸ್ ಏನಿದ್ದರೂ ಕಾನೂನು ಸುವ್ಯವಸ್ಥೆ ಹಾಗೂ ಪಾರದರ್ಶಕತೆ ಕಾಪಾಡುವುದರ ಮೇಲಿದೆಯೇ ಹೊರತು ಇನ್ಯಾವುದಕ್ಕೂ ಅಲ್ಲ." ಎಂದು ತಿಳಿಸಿದ್ದಾರೆ.

ಸದ್ಯ ಗೃಹ ಸಚಿವರ ಈ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ಆರ್‌ಎಸ್ಎಸ್ ಹಾಗೂ ಕಾಂಗ್ರೆಸ್ ಸರ್ಕಾರದ ನಡುವಿನ ಸದ್ಧಾಂತಿಕ ಸಂಘರ್ಷ ದೆಹಲಿ ಮಟ್ಟದಲ್ಲೂ ದೊಡ್ಡ ಚರ್ಚೆಗೆ ಗ್ರಾಸವಾಗುವ ಮುನ್ಸೂಚನೆ ನೀಡಿದೆ.

Read More
Next Story