ಅಯೋಧ್ಯೆಯಲ್ಲಿ ಕಳ್ಳತನ ಆರೋಪ: ಆರ್‌ಎಸ್‌ಎಸ್ ವಿರುದ್ಧ ಹರಿಹಾಯ್ದ ಸಚಿವ ಖರ್ಗೆ
x

ಅಯೋಧ್ಯೆಯಲ್ಲಿ ಕಳ್ಳತನ ಆರೋಪ: ಆರ್‌ಎಸ್‌ಎಸ್ ವಿರುದ್ಧ ಹರಿಹಾಯ್ದ ಸಚಿವ ಖರ್ಗೆ

1990ರ ದಶಕದ ಮಂದಿರ ಆಂದೋಲನವೇ ಬಿಜೆಪಿ, ಆರ್‌ಎಸ್‌ಎಸ್‌ನ ರಾಜಕೀಯ ಅಸ್ತಿತ್ವಕ್ಕೆ ಅಡಿಪಾಯ ಹಾಕಿತು. ಮಂದಿರದ ಹೆಸರಿನಲ್ಲಿ ನಡೆದ ರಾಜಕೀಯವೇ ಬಿಜೆಪಿಯ ಅಧಿಕಾರದ ಭದ್ರಕೋಟೆಯನ್ನು ನಿರ್ಮಿಸಿತು.


Click the Play button to hear this message in audio format

ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿನ ದೇಣಿಗೆ ಸಂಗ್ರಹ ಪ್ರಕರಣವು ಇದೀಗ ದೇಶದ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಸಂಘಟನೆಗಳು ರಾಮನ ಹೆಸರನ್ನು ಕೇವಲ ಅಧಿಕಾರ ಮತ್ತು ಹಣಕ್ಕಾಗಿ ಬಳಸಿಕೊಳ್ಳುತ್ತಿವೆ ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಆರೋಪಿಸಿದ್ದಾರೆ.

1990ರ ದಶಕದ ಮಂದಿರ ಆಂದೋಲನವೇ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ರಾಜಕೀಯ ಅಸ್ತಿತ್ವಕ್ಕೆ ಅಡಿಪಾಯ ಹಾಕಿತು. ಮಂದಿರದ ಹೆಸರಿನಲ್ಲಿ ನಡೆದ ರಾಜಕೀಯವೇ ಇಂದಿನ ಬಿಜೆಪಿಯ ಅಧಿಕಾರದ ಭದ್ರಕೋಟೆಯನ್ನು ನಿರ್ಮಿಸಿತು. ಅಂತಹದರಲ್ಲಿ, ಮಂದಿರದ ಆಡಳಿತದಲ್ಲಿ ಲೋಪವಾದರೆ ಅದನ್ನು ಪ್ರಶ್ನಿಸುವ ಹಕ್ಕು ಭಕ್ತರಿಗೆ ಮತ್ತು ಜನರಿಗೆ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಅವರು, ಮಂದಿರದ ಕಾಣಿಕೆಯು ಚಂದಾ ಆಗಿದೆ. ಈ ಹಣದ ದುರ್ಬಳಕೆ ಅಥವಾ ಕಳ್ಳತನದ ಬಗ್ಗೆ ಪ್ರಶ್ನಿಸುವವರನ್ನು ತಡೆಯಲು ಸಂಯಮದ ಹೆಸರಿನಲ್ಲಿ ಬಾಯಿ ಮುಚ್ಚಿಸುವ ಪ್ರಯತ್ನ ನಡೆಯುತ್ತಿದೆ. ಒಂದು ಧಾರ್ಮಿಕ ಸಂಸ್ಥೆಯ ಹಣಕಾಸಿನ ಪಾರದರ್ಶಕತೆಯನ್ನು ಪ್ರಶ್ನಿಸುವುದು ಅಪರಾಧವಲ್ಲ. ಆದರೆ ಅದನ್ನು ಮುಚ್ಚಿಹಾಕಲು ಯತ್ನಿಸುವುದು ಭಕ್ತರಿಗೆ ಮಾಡುವ ದ್ರೋಹ. ಪ್ರಶ್ನಾತೀತ ಅಧಿಕಾರ ಚಲಾಯಿಸುತ್ತಿರುವ ಬಿಜೆಪಿ ನಾಯಕತ್ವಕ್ಕೆ, ತಮಗೆ ಯಾರೂ ಜವಾಬ್ದಾರರಲ್ಲ ಎಂಬ ಭಾವನೆ ಬಂದಿದೆ. ಅಯೋಧ್ಯೆಯ ಮಂದಿರವು ಸಾರ್ವಜನಿಕರ ದೇಣಿಗೆಯಿಂದ ನಿರ್ಮಾಣವಾದದ್ದು. ಹೀಗಾಗಿ, ಅದರ ಆಡಳಿತವು ಪಾರದರ್ಶಕವಾಗಿರಬೇಕು. ಆದರೆ, ಬಿಜೆಪಿ ಮತ್ತು ಆರ್‌ಎಸ್‌ಎಸ್ ಅದನ್ನು ತಮ್ಮ ಸ್ವಂತ ಆಸ್ತಿಯಂತೆ ಪರಿಗಣಿಸುತ್ತಿವೆ ಎಂದು ಟೀಕಿಸಿದ್ದಾರೆ.

ಮಂದಿರವು ಒಂದು 'ಲಾಭದ ಯಂತ್ರವೇ'?

ದಶಕಗಳ ಕಾಲ ರಾಮ ಮಂದಿರವನ್ನು ಅಜೆಂಡಾವಾಗಿ ಇಟ್ಟುಕೊಂಡಿದ್ದ ಪಕ್ಷವು, ಮಂದಿರ ನಿರ್ಮಾಣವಾದ ನಂತರ ಅದನ್ನು ತಮ್ಮ ರಾಜಕೀಯ ಮತ್ತು ಆರ್ಥಿಕ ಬಲವರ್ಧನೆಗೆ ಬಳಸಿಕೊಳ್ಳುತ್ತಿದೆ. ಭಕ್ತರ ಭಾವನೆಗಳನ್ನು ಬಂಡವಾಳವನ್ನಾಗಿಸಿಕೊಂಡು, ಆಡಳಿತದಲ್ಲಿನ ವೈಫಲ್ಯಗಳನ್ನು ಮುಚ್ಚಿಹಾಕುವ ತಂತ್ರಗಾರಿಕೆಯನ್ನು ವಿರೋಧ ಪಕ್ಷಗಳು ಖಂಡಿಸುತ್ತಿವೆ. ಆರ್‌ಎಸ್‌ಎಸ್ ಈ ವಿಷಯದಲ್ಲಿ ವಹಿಸಿರುವ ಮೌನ ಅಥವಾ ಸಂಯಮದ ಸಲಹೆ, ಅದರ ಸಂಘಟನಾತ್ಮಕ ಶಿಸ್ತಿನ ಭಾಗವಾಗಿರಬಹುದು. ಆದರೆ, ದೇಶದ ಅತ್ಯಂತ ಪ್ರಮುಖವಾದ ತೀರ್ಥಕ್ಷೇತ್ರದಲ್ಲಿ ಭದ್ರತಾ ಲೋಪ ಉಂಟಾಗಿರುವುದು ಆಡಳಿತಾರೂಢ ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಮಂದಿರದ ಒಳಭಾಗದಲ್ಲಿನ ಆಡಳಿತಾತ್ಮಕ ಲೋಪಗಳನ್ನು ಸರಿಪಡಿಸುವ ಬದಲು, ಅದಕ್ಕೆ ರಾಜಕೀಯ ಬಣ್ಣ ಬಳಿಯುತ್ತಿರುವ ಅಥವಾ ಪ್ರಶ್ನಿಸುವವರನ್ನು ಹತ್ತಿಕ್ಕುತ್ತಿರುವ ಧೋರಣೆಯು ಆರ್‌ಎಸ್‌ಎಸ್‌ನ ಮೇಲೂ ವಿರೋಧ ಪಕ್ಷಗಳ ಕಣ್ಣು ಬೀಳುವಂತೆ ಮಾಡಿದೆ ಎಂದು ಕಿಡಿಕಾರಿದ್ದಾರೆ.

Read More
Next Story