ಬಲಿತ ದಲಿತರು ವಿವಾದ: ಸಚಿವೆ ಶೋಭಾಗೆ ದಾಖಲೆ ತೋರಿಸಲು ಪ್ರಿಯಾಂಕ್ ಖರ್ಗೆ ಸವಾಲು
x

ಬಲಿತ ದಲಿತರು ವಿವಾದ: ಸಚಿವೆ ಶೋಭಾಗೆ ದಾಖಲೆ ತೋರಿಸಲು ಪ್ರಿಯಾಂಕ್ ಖರ್ಗೆ ಸವಾಲು

ಇವರ ಮನಸ್ಥಿತಿ ಮುಂಚೆಯಿಂದಲೂ ಹೀಗೆಯೇ ಇದೆ. ಕಳೆದ ಚುನಾವಣೆಯಲ್ಲಿ ಅಪಪ್ರಚಾರ ಮಾಡಿದರು. ಯಾಕೆ ನಾನು ಸೂಟು ಹಾಕಬಾರದಾ? ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Click the Play button to hear this message in audio format

ಬಲಿತ ದಲಿತರು ಎಷ್ಟು ಜನ ಇದ್ದಾರೆ ಎಂಬುದನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತೋರಿಸಲಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.

ದಲಿತ ಸಮುದಾಯದ ಮುಖಂಡರ ಆರ್ಥಿಕ ಸ್ಥಿತಿಗತಿಯನ್ನು ಉದ್ದೇಶಿಸಿ ಶೋಭಾ ಕರಂದ್ಲಾಜೆ ಮಾಡಿದ್ದ ಟೀಕೆಗೆ ಪ್ರಿಯಾಂಕ್ ಖರ್ಗೆ ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎಷ್ಟು ಜನ ಬಲಿತ ದಲಿತರು ಇದ್ದಾರೆ ಎಂಬುದನ್ನು ದಾಖಲೆ ಸಮೇತ ತೋರಿಸಲಿ. ಇವರ ಮನಸ್ಥಿತಿ ಮುಂಚೆಯಿಂದಲೂ ಹೀಗೆಯೇ ಇದೆ. ಕಳೆದ ಚುನಾವಣೆಯಲ್ಲಿ ಅಪಪ್ರಚಾರ ಮಾಡಿದರು. ಯಾಕೆ ನಾನು ಸೂಟು ಹಾಕಬಾರದಾ? ಆರ್ ಎಸ್ ಎಸ್ ಬಗ್ಗೆ ಕೇಳಿದರೇ ವೈಯಕ್ತಿಕವಾಗಿ ಮಾತನಾಡುತ್ತಿದ್ದಾರೆ. ಆರ್ ಎಸ್ ಎಸ್ ಆದಾಯ ಕೇಳಿದರೇ ಇವರಿಗೇಕೆ ಉರಿ. ಒಬ್ಬ ದಲಿತ ಆರ್ ಎಸ್ ಎಸ್ ಬಗ್ಗೆ ಕೇಳಲೇ ಬಾರದಾ ಎಂದು ಪ್ರಶ್ನಿಸಿದರು.

ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಬೆಂಗಳೂರಿಗೆ ಬರುತ್ತಿದ್ದಾರೆ, ತಮ್ಮ ಸಂಸ್ಥೆಯ ನೋಂದಣಿ ದಾಖಲೆಗಳನ್ನು ತರುತ್ತಾರೋ ಇಲ್ಲವೋ ನೋಡೋಣ" ಎಂದು ವ್ಯಂಗ್ಯವಾಡಿದ್ದಾರೆ. ಪ್ರಶ್ನೆಗಳಿಗೆ ಉತ್ತರ ನೀಡುವ ಬದಲು ಅಧಿಕಾರ ದುರ್ಬಲಗೊಳಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತನಿಖಾ ಸಂಸ್ಥೆಗಳ ಮೇಲೆ ದಾಳಿ: ರಾಜಕೀಯ ಕೈಗೊಂಬೆಗಳ ಆರೋಪ

ಸಚಿವ ಸತೀಶ್ ಜಾರಕಿಹೊಳಿ ಅವರ ಸಂಬಂಧಿಕರ ಮನೆಗಳ ಮೇಲೆ ನಡೆದ ಇಡಿ ದಾಳಿಯ ಕುರಿತು ಪ್ರತಿಕ್ರಿಯಿಸಿದ ಪ್ರಿಯಾಂಕ್ ಖರ್ಗೆ, ಕೇಂದ್ರ ತನಿಖಾ ಸಂಸ್ಥೆಗಳಾದ ಐಟಿ, ಇಡಿ ಮತ್ತು ಸಿಬಿಐ ಸಂಸ್ಥೆಗಳು ಬಿಜೆಪಿ ಸರ್ಕಾರದ ಕೈಗೊಂಬೆಗಳಾಗಿ ಕೆಲಸ ಮಾಡುತ್ತಿವೆ ಎಂದು ಆರೋಪಿಸಿದ್ದಾರೆ. ಕಳೆದ 12 ವರ್ಷಗಳಲ್ಲಿ ದೇಶಾದ್ಯಂತ ಇಡಿಯಿಂದ ಸಾವಿರಾರು ದಾಳಿಗಳು ನಡೆದಿವೆ. ಆದರೆ, ಈ ಪೈಕಿ ಶಿಕ್ಷೆಯಾದ ಅಥವಾ ಅಪರಾಧ ಸಾಬೀತಾದ ಪ್ರಕರಣಗಳ ಪ್ರಮಾಣ ಕೇವಲ ಶೇ. 1.5 ಕ್ಕಿಂತ ಕಡಿಮೆ ಇದೆ. ಇದು ಈ ದಾಳಿಗಳು ನ್ಯಾಯಯುತವಾಗಿ ನಡೆಯುತ್ತಿವೆಯೇ ಅಥವಾ ರಾಜಕೀಯ ದುರುದ್ದೇಶದಿಂದ ನಡೆಯುತ್ತಿವೆಯೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ ಎಂದರು.

'ಛೂ ಬಿಡುವ' ಸಂಸ್ಕೃತಿ ಮತ್ತು ಸ್ವಯಂ ಅರಿವು

ಸರ್ಕಾರದ ವಿರುದ್ಧ ಮಾತನಾಡುವ ಪ್ರತಿಯೊಬ್ಬ ನಾಯಕರ ಮೇಲೂ ಇಡಿ ದಾಳಿ ನಡೆಸುವ ಸಾಧ್ಯತೆ ಇದೆ. ನನ್ನ ಮೇಲೂ ದಾಳಿ ನಡೆಯಬಹುದು, ಇವತ್ತಲ್ಲ, ನಾಳೆ ಅದು ಆಗಬಹುದು, ಅದಕ್ಕೆ ನಾನು ಸಿದ್ಧನಿದ್ದೇನೆ ಎಂದು ಸವಾಲಿನ ಧೋರಣೆಯಲ್ಲಿ ಹೇಳಿದ್ದಾರೆ. ರಾಜಕೀಯ ವಿರೋಧಿಗಳನ್ನು ನಿಯಂತ್ರಿಸಲು ಸರ್ಕಾರ ತನಿಖಾ ಸಂಸ್ಥೆಗಳನ್ನು ಛೂ ಬಿಡುವ ಪ್ರಾಣಿಗಳಂತೆ ಬಳಸಿಕೊಳ್ಳುತ್ತಿದೆ ಎಂದು ಟೀಕಿಸಿದ್ದಾರೆ.

Read More
Next Story