ನಾವು ಅವರ ಆಳು ಮಕ್ಕಳಾಗಿ ದುಡಿಯಲು ಇದ್ದೇವಾ?: ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ
x

"ನಾವು ಅವರ ಆಳು ಮಕ್ಕಳಾಗಿ ದುಡಿಯಲು ಇದ್ದೇವಾ?": ಸಚಿವ ಪ್ರಿಯಾಂಕ್ ಖರ್ಗೆ ಆಕ್ರೋಶ

ಉತ್ತರ ಭಾರತ ರಾಜ್ಯಗಳಿಗಿಂತ ದಕ್ಷಿಣ ಭಾರತದ ರಾಜ್ಯಗಳ ಆಡಳಿತ ಉತ್ತಮವಾಗಿವೆ. ಅಲ್ಲದೇ, ತೆರಿಗೆ ಪಾವತಿಯಲ್ಲಿಯೂ ಮುಂಚೂಣಿಯಲ್ಲಿವೆ. ಆದರೂ ಕ್ಷೇತ್ರ ಪುನರ್‌ವಿಂಗಡಣೆಯಲ್ಲಿ ಅನ್ಯಾಯವಾಗುತ್ತಿದೆ.


Click the Play button to hear this message in audio format

ದೇಶದಲ್ಲಿ ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆಯು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕ್ಷೇತ್ರ ಪುನರ್‌ವಿಂಗಡಣೆಯು ಕೇವಲ ಅಂಕಿಅಂಶಗಳ ಆಟವಾಗಬಾರದು ಮತ್ತು ಒಕ್ಕೂಟ ವ್ಯವಸ್ಥೆಯ ಆಶಯಗಳಿಗೆ ಧಕ್ಕೆ ತರಬಾರದು ಎಂಬುದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ ಆಗ್ರಹವಾಗಿದೆ.

ಉತ್ತರ ಭಾರತ ರಾಜ್ಯಗಳಿಗಿಂತ ದಕ್ಷಿಣ ಭಾರತದ ರಾಜ್ಯಗಳ ಆಡಳಿತ ಉತ್ತಮವಾಗಿವೆ. ಅಲ್ಲದೇ, ತೆರಿಗೆ ಪಾವತಿಯಲ್ಲಿಯೂ ಮುಂಚೂಣಿಯಲ್ಲಿವೆ. ಆದರೂ ಕ್ಷೇತ್ರ ಪುನರ್‌ವಿಂಗಡಣೆಯಲ್ಲಿ ಅನ್ಯಾಯವಾಗುತ್ತಿದ್ದು, ನಾವು ಅವರ ಆಳು ಮಕ್ಕಳಾಗಿ ದುಡಿಯಲು ಇದ್ದೇವಾ? ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.

ಯಾವುದೇ ಒಂದು ಬೃಹತ್ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳುವ ಮೊದಲು ಅದಕ್ಕೆ ಪೂರಕವಾದ ನಿಖರವಾದ ಅಂಕಿಅಂಶಗಳು ಇರಬೇಕು. ಕ್ಷೇತ್ರ ಪುನರ್‌ವಿಂಗಡಣೆಗೆ ನಮ್ಮ ವಿರೋಧವಿಲ್ಲ. ಆದರೆ, ದತ್ತಾಂಶಗಳೇ ಇಲ್ಲದೆ ಈ ಪ್ರಕ್ರಿಯೆಯನ್ನು ಹೇಗೆ ನಡೆಸಲಾಗುತ್ತದೆ? ಜನಗಣತಿಯ ಆಧಾರದ ಮೇಲೆ ಕ್ಷೇತ್ರಗಳನ್ನು ಮರುಹಂಚಿಕೆ ಮಾಡುವುದು ವಾಡಿಕೆ. ಆದರೆ, ಕಳೆದ ಹಲವು ವರ್ಷಗಳಿಂದ ಸರಿಯಾದ ಜನಗಣತಿ ನಡೆದಿಲ್ಲದಿರುವಾಗ, ಯಾವ ಆಧಾರದ ಮೇಲೆ ಕ್ಷೇತ್ರಗಳನ್ನು ವಿಂಗಡಿಸಲಾಗುತ್ತದೆ ಎಂಬುದು ಗಂಭೀರವಾದ ಪ್ರಶ್ನೆಯಾಗಿದೆ. ವೈಜ್ಞಾನಿಕ ದತ್ತಾಂಶಗಳಿಲ್ಲದ ಪ್ರಕ್ರಿಯೆಯು ಪಾರದರ್ಶಕವಾಗಿರಲು ಸಾಧ್ಯವಿಲ್ಲ ಎಂದು ಟೀಕಾಪ್ರಹಾರ ನಡೆಸಿದರು.

ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗಲಿದೆ. ಕಳೆದ ನಾಲ್ಕೈದು ದಶಕಗಳಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಕೇಂದ್ರ ಸರ್ಕಾರದ ಜನಸಂಖ್ಯಾ ನಿಯಂತ್ರಣ ನೀತಿಗಳನ್ನು ಅತ್ಯಂತ ಯಶಸ್ವಿಯಾಗಿ ಜಾರಿಗೆ ತಂದಿವೆ. ಶಿಕ್ಷಣ, ಆರೋಗ್ಯ ಮತ್ತು ಆರ್ಥಿಕತೆಯಲ್ಲಿ ಈ ರಾಜ್ಯಗಳು ಮುಂಚೂಣಿಯಲ್ಲಿವೆ. ಉತ್ತಮ ಆಡಳಿತ ನೀಡಿದರೂ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗಲಿದೆ. ನಮಗೆ ಯಾಕೆ ಶಿಕ್ಷೆ? ಎಂಬ ಅವರ ಪ್ರಶ್ನೆ ಇಡೀ ದಕ್ಷಿಣ ಭಾರತದ ದನಿಯನ್ನು ಪ್ರತಿಧ್ವನಿಸುತ್ತದೆ. ಜನಸಂಖ್ಯೆಯನ್ನು ಯಶಸ್ವಿಯಾಗಿ ನಿಯಂತ್ರಿಸಿದ ಕಾರಣಕ್ಕೆ ಸಂಸತ್ತಿನಲ್ಲಿ ಈ ರಾಜ್ಯಗಳ ಪ್ರಾತಿನಿಧ್ಯ ಕಡಿಮೆಯಾಗುವುದು ಮತ್ತು ಜನಸಂಖ್ಯೆ ಹೆಚ್ಚಿರುವ ಉತ್ತರ ಭಾರತದ ರಾಜ್ಯಗಳ ಸ್ಥಾನಗಳು ಹೆಚ್ಚಾಗುವುದು ಪ್ರಜಾಪ್ರಭುತ್ವದ ಅಸಮತೋಲನಕ್ಕೆ ದಾರಿ ಮಾಡಿಕೊಡುತ್ತದೆ. ಇದು ಅಭಿವೃದ್ಧಿ ಹೊಂದಿದ ರಾಜ್ಯಗಳನ್ನು ರಾಜಕೀಯವಾಗಿ ಅಪ್ರಸ್ತುತಗೊಳಿಸುವ ಪಿತೂರಿಯೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಆಳು ಮಕ್ಕಳಾಗಿ ದುಡಿಯಲು ಇದ್ದೇವಾ?

ದಕ್ಷಿಣ ಭಾರತದ ರಾಜ್ಯಗಳು ಕೇಂದ್ರಕ್ಕೆ ಅತಿ ಹೆಚ್ಚು ತೆರಿಗೆಯನ್ನು ನೀಡುತ್ತವೆ. ಆದರೆ, ಕೇಂದ್ರದಿಂದ ವಾಪಸ್ ಬರುವ ಅನುದಾನದಲ್ಲಿ ಮತ್ತು ರಾಜಕೀಯ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ದಕ್ಷಿಣದ ರಾಜ್ಯಗಳ ಪಾತ್ರ ಕುಸಿಯುತ್ತಿದೆ. ಕ್ಷೇತ್ರ ಪುನರ್‌ ವಿಂಗಡನೆಯಲ್ಲಿಯೂ ಅನ್ಯಾಯವಾಗುತ್ತಿದೆ. ಅವರ ಆಳು ಮಕ್ಕಳಾಗಿ ದುಡಿಯಲು ಇದ್ದೇವಾ? ಎನ್ನುವ ಮೂಲಕ, ನಾವು ಕಷ್ಟಪಟ್ಟು ದುಡಿದು ದೇಶದ ಬೊಕ್ಕಸ ತುಂಬಿಸುತ್ತೇವೆ. ಆದರೆ ನಮಗೆ ರಾಜಕೀಯ ಪ್ರಾತಿನಿಧ್ಯ ಮತ್ತು ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ ಎಂಬ ನೋವನ್ನು ಹೊರಹಾಕಿದರು.

ಆತುರದ ನಿರ್ಧಾರ ಯಾಕೆ?

ಲೋಕಸಭಾ ಚುನಾವಣೆಗೆ ಇನ್ನೂ ಸಾಕಷ್ಟು ಸಮಯಾವಕಾಶವಿದೆ. ಹೀಗಿರುವಾಗ ಕೇಂದ್ರ ಸರ್ಕಾರವು ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆಯನ್ನು ಆತುರಾತುರವಾಗಿ ಕೈಗೆತ್ತಿಕೊಳ್ಳುತ್ತಿರುವುದರ ಹಿಂದೆ ಯಾವುದೋ ರಾಜಕೀಯ ದುರುದ್ದೇಶವಿದೆಯೇ ಎಂಬ ಸಂಶಯ ಇದೆ. ದತ್ತಾಂಶ ಇಲ್ಲದೇ, ಅತುರ ಆತುರವಾಗಿ ಮಾಡುವುದು ಸರಿಯಲ್ಲ ನಿಖರವಾದ ಜನಗಣತಿ ವರದಿ ಇರಬೇಕು. ಜನಸಾಮಾನ್ಯರ ಹಾಗೂ ರಾಜಕೀಯ ಪಕ್ಷಗಳ ಆಕ್ಷೇಪಣೆಗಳನ್ನು ಆಲಿಸಬೇಕು. ಕೇವಲ ಜನಸಂಖ್ಯೆಯನ್ನೇ ಮಾನದಂಡವನ್ನಾಗಿ ಮಾಡದೆ, ಭೌಗೋಳಿಕ ವಿಸ್ತೀರ್ಣ, ಆಡಳಿತಾತ್ಮಕ ಅನುಕೂಲ ಮತ್ತು ಆರ್ಥಿಕ ಕೊಡುಗೆಯನ್ನು ಪರಿಗಣಿಸಬೇಕು ಎಂದರು.

ಕ್ಷೇತ್ರ ಪುನರ್‌ವಿಂಗಡಣೆಯು ಕೇವಲ ಗಡಿಗಳನ್ನು ಗುರುತಿಸುವುದಲ್ಲ, ಅದು ಒಂದು ಪ್ರದೇಶದ ಧ್ವನಿಯನ್ನು ಸಂಸತ್ತಿನಲ್ಲಿ ನಿರ್ಧರಿಸುವ ಪ್ರಕ್ರಿಯೆ. ಉತ್ತರ ಭಾರತದ ರಾಜ್ಯಗಳಲ್ಲಿ ಸೀಟುಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿ, ದಕ್ಷಿಣದಲ್ಲಿ ಕಡಿಮೆ ಉಳಿದರೆ, ದಕ್ಷಿಣ ಭಾರತದ ಸಮಸ್ಯೆಗಳು ಸಂಸತ್ತಿನಲ್ಲಿ ಪ್ರತಿಧ್ವನಿಸುವುದೇ ಇಲ್ಲ. ಇದು ಪ್ರಾದೇಶಿಕ ಅಸಮಾನತೆಗೆ ಕಾರಣವಾಗಿ, ಭವಿಷ್ಯದಲ್ಲಿ ದೇಶದ ಐಕ್ಯತೆಗೆ ಧಕ್ಕೆ ತರಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದರು.



Read More
Next Story