
ವಿಜಯೇಂದ್ರ ಮೆಟ್ರೋ ಪ್ರಯಾಣಕ್ಕಿಂತ ಜನರ ಸಮಸ್ಯೆ ಮುಖ್ಯ: ಸಚಿವ ಪ್ರಿಯಾಂಕ್ ಖರ್ಗೆ
ಪ್ರಧಾನಿ ನರೇಂದ್ರ ಮೋದಿ ವಿದೇಶದಿಂದ ತಂದಿದ್ದ ಪ್ರಾಣಿಗಳು ಸೂಕ್ತ ನಿರ್ವಹಣೆ ಇಲ್ಲದೆ ಮೃತಪಟ್ಟವು. ನಮ್ಮ ಸರ್ಕಾರ ಪ್ರಾಣಿಗಳನ್ನು ವೈಜ್ಞಾನಿಕ, ಜವಾಬ್ದಾರಿಯುತವಾಗಿ ನಿರ್ವಹಿಸಲಾಗುತ್ತಿದೆ ಎಂದು ಖರ್ಗೆ ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವ ವಿಚಾರ ಇದೀಗ ರಾಜಕೀಯ ಕಿತ್ತಾಟಕ್ಕೆ ಕಾರಣವಾಗಿವೆ. ಮೆಟ್ರೋ ಪ್ರಯಾಣವನ್ನು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ. ಈ ವೇಳೆ ರಾಜಕೀಯ ನಾಯಕರ ದಿನನಿತ್ಯದ ಚಟುವಟಿಕೆಗಳಿಗಿಂತ ಜನಸಾಮಾನ್ಯರನ್ನು ಕಾಡುವ ಸಮಸ್ಯೆಗಳ ಕುರಿತು ಮಾಧ್ಯಮಗಳು ಪ್ರಶ್ನಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜಕೀಯ ಮುಖಂಡರ ಸಂಚಾರದ ದೃಶ್ಯಗಳನ್ನು ವಿಜೃಂಭಿಸುವ ಬದಲು, ಜನಸಾಮಾನ್ಯರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳ ಕುರಿತು ಮಾಧ್ಯಮಗಳು ಧ್ವನಿಯೆತ್ತಬೇಕು ಎಂದರು. ಮಾಡಬೂಳ ಗ್ರಾಮದಲ್ಲಿ ಉದ್ಘಾಟನೆಗೊಂಡ ಮೃಗಾಲಯದ ಬಗ್ಗೆ ಮಾತನಾಡಿದ ಸಚಿವರು, ವನ್ಯಜೀವಿಗಳ ಸಂರಕ್ಷಣೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶದಿಂದ ತಂದಿದ್ದ ಪ್ರಾಣಿಗಳು ಸೂಕ್ತ ನಿರ್ವಹಣೆ ಇಲ್ಲದೆ ಮೃತಪಟ್ಟವು. ಆದರೆ, ನಮ್ಮ ಸರ್ಕಾರ ತರುತ್ತಿರುವ ಪ್ರಾಣಿಗಳನ್ನು ಅತ್ಯಂತ ವೈಜ್ಞಾನಿಕವಾಗಿ ಮತ್ತು ಜವಾಬ್ದಾರಿಯುತವಾಗಿ ನಿರ್ವಹಣೆ ಮಾಡಿ ಸಂರಕ್ಷಿಸಲಾಗುವುದು ಎಂದು ಭರವಸೆ ನೀಡಿದರು.
ದೇಶದ ಆರ್ಥಿಕ ಪರಿಸ್ಥಿತಿ ಮತ್ತು ವಿದೇಶಿ ಪ್ರವಾಸಗಳ ಕುರಿತು ನರೇಂದ್ರ ಮೋದಿಯವರನ್ನು ತರಾಟೆಗೆ ತೆಗೆದುಕೊಂಡ ಪ್ರಿಯಾಂಕ್ ಖರ್ಗೆ, ದೇಶ ಕಷ್ಟದ ಸ್ಥಿತಿಯಲ್ಲಿರುವಾಗ ಪ್ರಧಾನಿ ವಿದೇಶ ಪ್ರವಾಸ ಕೈಗೊಳ್ಳುತ್ತಾರೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ, ಆರ್ಥಿಕ ಕುಸಿತದಂತಹ ಗಂಭೀರ ವಿಷಯಗಳ ಕುರಿತು ಸಂಸತ್ತಿನಲ್ಲಿ ಚರ್ಚಿಸಬೇಕಿದ್ದ ಪ್ರಧಾನಿ, ನೆದರ್ಲೆಂಡ್ಸ್ ಪ್ರವಾಸಕ್ಕೆ ಯಾಕೆ ಹೋದರು? ಎಂದು ಪ್ರಶ್ನಿಸಿದರು.
ದೇಶದಲ್ಲಿ ಬೆಲೆ ಏರಿಕೆಯ ಬಿಸಿ ಜನಸಾಮಾನ್ಯರನ್ನು ಕಾಡುತ್ತಿದೆ. ಇದನ್ನು ಮರೆಮಾಚಲು ಪ್ರಧಾನಿ ಮೋದಿ ಅವರು ಚಿನ್ನ ಖರೀದಿ ಮಾಡಬೇಡಿ ಎಂದು ಜನರಿಗೆ ಸಲಹೆ ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಜನರ ಆರ್ಥಿಕ ಸಂಕಷ್ಟವನ್ನು ಬಗೆಹರಿಸುವ ಬದಲು ಇಂತಹ ಅಪ್ರಸ್ತುತ ಹೇಳಿಕೆಗಳನ್ನು ನೀಡುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹ
ದೇಶವ್ಯಾಪಿ ಸದ್ದು ಮಾಡುತ್ತಿರುವ 'ನೀಟ್' ಪರೀಕ್ಷೆಯ ಅಕ್ರಮದ ಬಗ್ಗೆ ಮಾತನಾಡಿದ ಸಚಿವರು, ಪ್ರಧಾನಿ ಮೋದಿಯವರ ಮೌನವನ್ನು ಪ್ರಶ್ನಿಸಿದರು. ಸುಮಾರು 22 ಲಕ್ಷ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಇಂತಹ ಬೃಹತ್ ಅಕ್ರಮ ನಡೆದರೂ ಪ್ರಧಾನಿ ಏಕೆ ತುಟಿಬಿಚ್ಚುತ್ತಿಲ್ಲ? ಇದಕ್ಕೆ ಹೊಣೆ ಯಾರು? ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಹಗರಣದ ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು. ಆದರೆ, ಅವರನ್ನೇ ಮತ್ತೆ ಸಚಿವರನ್ನಾಗಿ ಮುಂದುವರೆಸಿರುವುದು ಅಚ್ಚರಿಯನ್ನುಂಟು ಮಾಡಿದೆ ಎಂದು ಸಚಿವರು ಅಸಮಾಧಾನ ವ್ಯಕ್ತಪಡಿಸಿದರು.

