
ಕರಾವಳಿಗೆ ಬಿಜೆಪಿ ಕೊಡುಗೆ ಶೂನ್ಯ; ಬಿಜೆಪಿಯ ಟೀಕೆಗೆ ಪ್ರಿಯಾಂಕ್ ಖರ್ಗೆ ತಿರುಗೇಟು
ಕರಾವಳಿ ಪ್ರದೇಶವನ್ನು ಬಿಜೆಪಿ ಕಳೆದ ಹಲವು ವರ್ಷಗಳಿಂದ ಕೇವಲ ಕೋಮುವಾದದ ಪ್ರಯೋಗಶಾಲೆಯನ್ನಾಗಿ ಮಾತ್ರ ಬಳಸಿಕೊಂಡಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡ ಕರಾವಳಿ ಭಾಗದಲ್ಲಿ ರಾಜ್ಯ ಸರ್ಕಾರ ನಡೆಸಿದ ಸಚಿವ ಸಂಪುಟ ಸಭೆ ಮತ್ತು ಘೋಷಿಸಿದ ಭಾರಿ ಮೊತ್ತದ ಅಭಿವೃದ್ಧಿ ಯೋಜನೆಗಳು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಈ ಬೆಳವಣಿಗೆಯನ್ನು ಬಿಜೆಪಿ ಮೂಗಿಗೆ ತುಪ್ಪ ಸವರುವ ಕ್ಯಾಬಿನೆಟ್ ಎಂದು ಟೀಕಿಸಿದ್ದು, ಇದಕ್ಕೆ ಪ್ರತಿಯಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಬಿಜೆಪಿಯ ದಶಕಗಳ ಆಡಳಿತ ವೈಖರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ಅವರು, ಕರಾವಳಿಯ ಅಭಿವೃದ್ಧಿಗಾಗಿ ಸರ್ಕಾರ ಐತಿಹಾಸಿಕವಾಗಿ 32,611 ಕೋಟಿ ರೂಪಾಯಿಗಳ ಯೋಜನೆಗಳನ್ನು ಘೋಷಿಸಿದೆ. ಆದರೆ, ಈ ಅಭಿವೃದ್ಧಿಪರ ನಿಲುವನ್ನು ಸಹಿಸದ ಬಿಜೆಪಿಗರು ಇದನ್ನು ಮೂಗಿಗೆ ತುಪ್ಪ ಸವರುವ ಕೆಲಸ ಎಂದು ಜರೆಯುತ್ತಿದ್ದಾರೆ. ಇದು ಅವರ ಹತಾಶೆಯ ಮನಸ್ಥಿತಿಯನ್ನು ತೋರಿಸುತ್ತದೆ. ದಶಕಗಳಿಂದ ಕರಾವಳಿಯ ಜನರ ಕೈಗೆ ರಕ್ತ ಸವರುವ ಕೆಲಸವನ್ನೇ ಮಾಡಿಕೊಂಡಿದ್ದ ಬಿಜೆಪಿಗೆ, ಇಂದು ನಮ್ಮ ಅಭಿವೃದ್ಧಿ ಕಾರ್ಯಗಳು ಕಣ್ಣಿಗೆ ಚುಚ್ಚುತ್ತಿವೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಕೋಮುವಾದದ ಪ್ರಯೋಗಶಾಲೆ
ಕರಾವಳಿ ಪ್ರದೇಶವನ್ನು ಬಿಜೆಪಿ ಕಳೆದ ಹಲವು ವರ್ಷಗಳಿಂದ ಕೇವಲ ತಮ್ಮ ಕೋಮುವಾದದ ಪ್ರಯೋಗಶಾಲೆಯನ್ನಾಗಿ ಮಾತ್ರ ಬಳಸಿಕೊಂಡಿದೆ ಎಂದು ದೂರಿದರು. ಬಿಜೆಪಿಗರಿಗೆ ಕರಾವಳಿ ಎಂದರೆ ಕೇವಲ ಒಂದು ಮತಬ್ಯಾಂಕ್ ಅಷ್ಟೆ. ಅವರು ಇಲ್ಲಿಗೆ ಬಂದರೆ ಮಾಡುವುದು ಕೇವಲ ಪ್ರಚೋದನಕಾರಿ ಭಾಷಣಗಳನ್ನು ಮಾತ್ರ. ಆದರೆ, ಕಾಂಗ್ರೆಸ್ ಸರ್ಕಾರ ಕರಾವಳಿಯನ್ನು ಅಭಿವೃದ್ಧಿಯ ಪ್ರಯೋಗಶಾಲೆಯನ್ನಾಗಿ ಪರಿವರ್ತಿಸಲು ಶ್ರಮಿಸುತ್ತಿದೆ. ಜನ ಈಗ ಕೋಮು ಭಾವನೆಗಳಿಗಿಂತ ತಮ್ಮ ಬದುಕಿನ ಪ್ರಗತಿಯತ್ತ ಆಲೋಚಿಸುತ್ತಿದ್ದಾರೆ, ಇದು ಬಿಜೆಪಿಗೆ ತಮ್ಮ ಅಸ್ತಿತ್ವದ ಭಯವನ್ನು ಹುಟ್ಟುಹಾಕಿದೆ ಎಂದು ಹೇಳಿದ್ದಾರೆ.
ಹಿಂದಿನ ಆಡಳಿತ ಮತ್ತು ಈಗಿನ ಆಡಳಿತದ ನಡುವಿನ ವ್ಯತ್ಯಾಸವನ್ನು ವಿವರಿಸಿದ ಅವರು, "ಬಿಜೆಪಿ ಕರಾವಳಿಯಲ್ಲಿ ಯಾವಾಗಲೂ ಕೋಮು ಕಲಹಗಳು, ದ್ವೇಷದ ಚರ್ಚೆಗಳನ್ನು ಹುಟ್ಟುಹಾಕುತ್ತಿತ್ತು. ಆದರೆ, ನಾವು ಇಂದು ಡೇಟಾ ಸೆಂಟರ್, ವಾಟರ್ ಮೆಟ್ರೋ, ಪ್ರವಾಸೋದ್ಯಮದ ಅಭಿವೃದ್ಧಿ, ಮರೀನ್ ಬಯೋಟೆಕ್ ಮತ್ತು ಮಾಹಿತಿ ತಂತ್ರಜ್ಞಾನದಂತಹ ಪ್ರಗತಿಪರ ವಿಷಯಗಳ ಬಗ್ಗೆ ಚರ್ಚೆಯನ್ನು ಮುನ್ನೆಲೆಗೆ ತಂದಿದ್ದೇವೆ. ಇದು ಕರಾವಳಿಯ ಯುವಜನತೆಯ ಭವಿಷ್ಯ ಬದಲಿಸುವಂತಹ ಪ್ರಯತ್ನವಾಗಿದೆ" ಎಂದಿದ್ದಾರೆ.
ಸಾಧನೆಗಳ ಪಟ್ಟಿಯಲ್ಲಿ ಬಿಜೆಪಿ ಕೊಡುಗೆ ಶೂನ್ಯ
ತುಳು ಭಾಷೆಯ ವಿಚಾರವನ್ನು ಪ್ರಸ್ತಾಪಿಸಿದ ಸಚಿವರು, "ದಕ್ಷಿಣ ಕನ್ನಡದ ಜನರ ದಶಕಗಳ ಬೇಡಿಕೆಯಾದ ತುಳುವನ್ನು ಎರಡನೇ ಹೆಚ್ಚುವರಿ ಭಾಷೆಯನ್ನಾಗಿ ಘೋಷಿಸಿದ್ದು ನಮ್ಮ ಸರ್ಕಾರವೇ ಹೊರತು, ದಶಕಗಳ ಕಾಲ ಆಡಳಿತ ನಡೆಸಿದ ಬಿಜೆಪಿ ಅಲ್ಲ. ಕೋಮು ಪ್ರಚೋದನೆ ಮತ್ತು ಜನರನ್ನು ಒಡೆಯುವ ರಾಜಕಾರಣವನ್ನು ಹೊರತುಪಡಿಸಿದರೆ, ಕರಾವಳಿಗೆ ಬಿಜೆಪಿ ಕೊಟ್ಟ ಕೊಡುಗೆ ಏನು? ಅವರ ಸಾಧನೆ ಶೂನ್ಯ" ಎಂದು ಆರೋಪ ಮಾಡಿದರು. ಕರಾವಳಿಯ ಜನರು ಈಗ ಬದಲಾವಣೆಯನ್ನು ಬಯಸುತ್ತಿದ್ದಾರೆ. ಅಭಿವೃದ್ಧಿ ಎಂದರೆ ಕೇವಲ ರಸ್ತೆಗಳ ನಿರ್ಮಾಣವಲ್ಲ, ಅದು ಜನರ ಬದುಕಿನ ಗುಣಮಟ್ಟವನ್ನು ಹೆಚ್ಚಿಸುವುದು. ನಮ್ಮ ಸರ್ಕಾರ ಆ ನಿಟ್ಟಿನಲ್ಲಿ ಬದ್ಧತೆಯಿಂದ ಕೆಲಸ ಮಾಡುತ್ತಿದೆ. ಬಿಜೆಪಿಯವರು ಈ ಅಭಿವೃದ್ಧಿಯನ್ನು 'ಮೂಗಿಗೆ ತುಪ್ಪ' ಎನ್ನಬಹುದು, ಆದರೆ ಕರಾವಳಿಯ ಜನರಿಗೆ ಅರಿವಿದೆ, ನಮ್ಮದು ದಶಕಗಳ ಅಭಿವೃದ್ಧಿ ಕಾರ್ಯಸೂಚಿ ಎಂದು ಸ್ಪಷ್ಟಪಡಿಸಿದರು.

