
ಸಚಿವ ಪ್ರಿಯಾಂಕ್ ಖರ್ಗೆ
20 ವರ್ಷ ಪೂರೈಸಿದ ನರೇಗಾ: 'ಬಿಜೆಪಿ ಸರ್ಕಾರದಿಂದ ಯೋಜನೆಯ ಕಗ್ಗೊಲೆ' ಎಂದ ಪ್ರಿಯಾಂಕ್ ಖರ್ಗೆ
ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿರುವ ಅವರು, ನರೇಗಾ ಯೋಜನೆಯ ಮಹತ್ವ ಮತ್ತು ಪ್ರಸ್ತುತ ಎದುರಾಗಿರುವ ದುಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಗ್ರಾಮೀಣ ಭಾರತದ ಜೀವನಾಡಿಯಂತಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಗೆ (MGNREGA) ಇಂದಿಗೆ 20 ವರ್ಷ ತುಂಬಿದೆ. ಈ ಸಂದರ್ಭದಲ್ಲಿ ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಸೋಶಿಯಲ್ ಮೀಡಿಯಾದ ಮೂಲಕ ಕೇಂದ್ರ ಎನ್ಡಿಎ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, "ಲಕ್ಷಾಂತರ ಬಡವರ ಬದುಕನ್ನು ಹಸನು ಮಾಡಿದ್ದ ಯೋಜನೆಯನ್ನು ಕೇಂದ್ರ ಸರ್ಕಾರ ನಿರ್ನಾಮ ಮಾಡಿದೆ," ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿರುವ ಅವರು, ನರೇಗಾ ಯೋಜನೆಯ ಮಹತ್ವ ಮತ್ತು ಪ್ರಸ್ತುತ ಎದುರಾಗಿರುವ ದುಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಖರ್ಗೆ ಅವರ ಪೋಸ್ಟ್‌ನಲ್ಲಿಹಲವಾರು ವಿಷಯಗಳನ್ನು ಹೇಳಲಾಗಿದೆ
"ಕಳೆದ ಎರಡು ದಶಕಗಳಲ್ಲಿ ನರೇಗಾ ಕೇವಲ ಒಂದು ಯೋಜನೆಯಾಗಿರದೆ, ದೇಶದ ಸುಮಾರು 15.56 ಕೋಟಿ ಗ್ರಾಮೀಣ ಜನರಿಗೆ ಆಸರೆಯಾಗಿದೆ. ಇದುವರೆಗೆ 4,420 ಕೋಟಿ ಮಾನವ ದಿನಗಳ ಕೆಲಸವನ್ನು ಸೃಷ್ಟಿಸಿದ್ದು, ಸುಮಾರು 10 ಕೋಟಿ ಗ್ರಾಮೀಣ ಆಸ್ತಿಗಳನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದೆ," ಎಂದು ಖರ್ಗೆ ಅಂಕಿ-ಅಂಶಗಳನ್ನು ಮುಂದಿಟ್ಟಿದ್ದಾರೆ.
ರಾಜ್ಯದಲ್ಲಿ ನರೇಗಾ ಯೋಜನೆಯ ಪ್ರಭಾವದ ಬಗ್ಗೆ ಉಲ್ಲೇಖಿಸಿದ ಅವರು, "ಕರ್ನಾಟಕವೊಂದರಲ್ಲೇ ಈ ಯೋಜನೆಯು 183 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿಸಿದೆ ಮತ್ತು ಸುಮಾರು 83 ಲಕ್ಷ ಪಂಚಾಯತ್ ಮಟ್ಟದ ಆಸ್ತಿಗಳ ನಿರ್ಮಾಣಕ್ಕೆ ಕಾರಣವಾಗಿದೆ," ಎಂದು ತಿಳಿಸಿದ್ದಾರೆ.
"ನರೇಗಾ ಪಂಚಾಯತ್ ಸ್ವಯಂ ಆಡಳಿತ ಮತ್ತು 'ಗ್ರಾಮ ಸ್ವರಾಜ್ಯ'ದ ಪರಿಕಲ್ಪನೆಗೆ ಪ್ರಬಲ ಸಾಕ್ಷಿಯಾಗಿತ್ತು. ಇದು ಜನರಿಗೆ ಘನತೆಯಿಂದ ಬದುಕಲು, ಜೀವನೋಪಾಯ ಕಂಡುಕೊಳ್ಳಲು ಮತ್ತು ವಲಸೆಯನ್ನು ತಡೆಯಲು ನೆರವಾಗಿತ್ತು," ಎಂದು ಅವರು ಸ್ಮರಿಸಿದ್ದಾರೆ.
"ದುರದೃಷ್ಟವಶಾತ್, ಕೋಟ್ಯಂತರ ಜನರ ಬದುಕನ್ನು ಬದಲಿಸಿದ ಇಂತಹ ಯೋಜನೆಯನ್ನು ಬಿಜೆಪಿ ಸರ್ಕಾರ ವ್ಯವಸ್ಥಿತವಾಗಿ ನಾಶಪಡಿಸಿದೆ (Dismantled). ಇಂದು 20ನೇ ವರ್ಷಾಚರಣೆಯ ಸಂದರ್ಭದಲ್ಲಿ ಸಂಭ್ರಮಿಸುವ ಬದಲು, ಲಕ್ಷಾಂತರ ಗ್ರಾಮೀಣ ಕಾರ್ಮಿಕರು ತಮ್ಮ 'ಕೆಲಸದ ಹಕ್ಕಿಗಾಗಿ' (Right to Work) ಬೀದಿಗಿಳಿದು ಹೋರಾಡುವಂತಾಗಿದೆ," ಎಂದು ಖರ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಒಂದು ಕಾಲದಲ್ಲಿ ಅತ್ಯಂತ ದುರ್ಬಲ ವರ್ಗದವರನ್ನು ರಕ್ಷಿಸುತ್ತಿದ್ದ ಯೋಜನೆಯನ್ನು ಉಳಿಸಿಕೊಳ್ಳಲು ಇಂದು ಹೋರಾಟ ನಡೆಸಬೇಕಾದ ಪರಿಸ್ಥಿತಿ ಬಂದಿರುವುದು ದುರಂತ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.

