ಪೊಲೀಸ್ ಪಡೆಯ ಆರೋಗ್ಯ ಸುಧಾರಣೆಗೆ ಪ್ರಾಜೆಕ್ಟ್ ಖುಷಿಗೆ ಪ್ರಿಯಾಂಕ್‌ ಖರ್ಗೆ ಚಾಲನೆ
x

ಪೊಲೀಸ್ ಪಡೆಯ ಆರೋಗ್ಯ ಸುಧಾರಣೆಗೆ ಪ್ರಾಜೆಕ್ಟ್ ಖುಷಿಗೆ ಪ್ರಿಯಾಂಕ್‌ ಖರ್ಗೆ ಚಾಲನೆ

ಮೊದಲ ಹಂತ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ವಿಭಾಗದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಆರಂಭದಲ್ಲಿ ಈ ವಿಭಾಗದ ಸುಮಾರು 600 ಪೊಲೀಸ್ ಸಿಬ್ಬಂದಿಯನ್ನು ಇದರ ವ್ಯಾಪ್ತಿಗೆ ತರಲಾಗುತ್ತಿದೆ.


Click the Play button to hear this message in audio format

ಸಮಾಜದ ಸುರಕ್ಷತೆಗಾಗಿ ಹಗಲಿರುಳು ದುಡಿಯುವ ಪೊಲೀಸ್ ಸಿಬ್ಬಂದಿಯ ಆರೋಗ್ಯದ ಕಡೆಗೆ ವಿಶೇಷ ಗಮನಹರಿಸಲು ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಬೆಂಗಳೂರು ನಗರ ಪೊಲೀಸರು, ಸಿಬ್ಬಂದಿಯ ದೀರ್ಘಕಾಲೀನ ಆರೋಗ್ಯ ಮತ್ತು ಮಾನಸಿಕ ಕ್ಷೇಮಾಭಿವೃದ್ಧಿಯನ್ನು ಬೆಂಬಲಿಸುವ ಉದ್ದೇಶದಿಂದ ‘ಪ್ರಾಜೆಕ್ಟ್ ಖುಷಿ’ ಎಂಬ ಆರೋಗ್ಯ ಕಾರ್ಯಕ್ರಮಕ್ಕೆ ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಚಾಲನೆ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಸಚಿವ ಪ್ರಿಯಾಂಕ್‌ ಖರ್ಗೆ, ಈ ಮಹತ್ವಾಕಾಂಕ್ಷಿ ಕಾರ್ಯಕ್ರಮದ ಮೊದಲ ಹಂತವನ್ನು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ವಿಭಾಗದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಆರಂಭಿಕವಾಗಿ ಈ ವಿಭಾಗದ ಸುಮಾರು 600 ಪೊಲೀಸ್ ಸಿಬ್ಬಂದಿಯನ್ನು ಇದರ ವ್ಯಾಪ್ತಿಗೆ ತರಲಾಗುತ್ತಿದೆ. ಪ್ರತಿ ಬ್ಯಾಚ್‌ಗೆ ಮೂರು ತಿಂಗಳ ಅವಧಿಯ ತರಬೇತಿ ಮತ್ತು ಆರೋಗ್ಯ ಆರೈಕೆ ಕಾರ್ಯಕ್ರಮ ನಡೆಯಲಿದ್ದು, ಇದು ಪೊಲೀಸ್ ಸಿಬ್ಬಂದಿಯ ಜೀವನಶೈಲಿಯಲ್ಲಿ ಧನಾತ್ಮಕ ಬದಲಾವಣೆ ತರುವ ಗುರಿಯನ್ನು ಹೊಂದಿದೆ. 'ಪ್ರಾಜೆಕ್ಟ್ ಖುಷಿ'ಯು ಕೇವಲ ಆರೋಗ್ಯ ತಪಾಸಣೆಗೆ ಸೀಮಿತವಾಗಿಲ್ಲ. ಇದೊಂದು ಸಮಗ್ರ ಕ್ಷೇಮಾಭಿವೃದ್ಧಿ ಪ್ಯಾಕೇಜ್ ಆಗಿದೆ ಎಂದು ಹೇಳಿದರು. ಸಿಬ್ಬಂದಿಯ ಆರೋಗ್ಯದ ಪ್ರಸ್ತುತ ಸ್ಥಿತಿಯನ್ನು ಅರಿಯಲು ವೈದ್ಯಕೀಯ ತಪಾಸಣೆ, ಫಿಟ್‌ನೆಸ್ ತರಬೇತುದಾರರು ಮತ್ತು ವೈದ್ಯರಿಂದ ಪೌಷ್ಟಿಕಾಂಶ ಹಾಗೂ ಆರೋಗ್ಯದ ಕುರಿತು ಸಲಹೆಗಳು, ಒತ್ತಡ ನಿರ್ವಹಣೆ, ಉತ್ತಮ ನಿದ್ರೆಯ ಮಹತ್ವ, ಪೌಷ್ಟಿಕ ಆಹಾರದ ಸೇವನೆ ಮತ್ತು ದೈನಂದಿನ ದೈಹಿಕ ವ್ಯಾಯಾಮಗಳ ಕುರಿತು ಮಾರ್ಗದರ್ಶನ. ಆಧುನಿಕ ತಂತ್ರಜ್ಞಾನ ಬಳಸಿ ಸಿಬ್ಬಂದಿ ತಮ್ಮ ಆರೋಗ್ಯದ ಪ್ರಗತಿಯನ್ನು ಟ್ರ್ಯಾಕ್ ಮಾಡಲು ವ್ಯವಸ್ಥೆ ಆಗಿದೆ ಎಂದು ತಿಳಿಸಿದರು.

ಪ್ರಾಯೋಗಿಕ ಕಾರ್ಯಕ್ರಮದ ಯಶಸ್ಸು

ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುವ ಮುನ್ನ ನಡೆಸಲಾದ ಪ್ರಾಯೋಗಿಕ ಕಾರ್ಯಕ್ರಮವು ಅಚ್ಚರಿ ಮತ್ತು ಸಂತೋಷದಾಯಕ ಫಲಿತಾಂಶಗಳನ್ನು ನೀಡಿದೆ. ಈ ಸಂಶೋಧನಾತ್ಮಕ ಪ್ರಯೋಗದಲ್ಲಿ ಭಾಗವಹಿಸಿದ ಸಿಬ್ಬಂದಿಯ ಪೈಕಿ ಶೇ.61 ರಷ್ಟು ಮಂದಿಯ ರಕ್ತದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗಿದೆ. ಶೇ.70 ರಷ್ಟು ಮಂದಿಯ ದೇಹದಲ್ಲಿನ ವಿಟಮಿನ್ B12 ಕೊರತೆ ನಿವಾರಣೆಯಾಗಿದೆ. ಶೇ. 59ರಷ್ಟು ಮಂದಿ ತಮ್ಮ ಅತಿಯಾದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಅಂಕಿ-ಅಂಶಗಳು, ಸುವ್ಯವಸ್ಥಿತ ಆರೋಗ್ಯ ಕಾರ್ಯಕ್ರಮಗಳು ಪೊಲೀಸ್ ಪಡೆಯ ದಕ್ಷತೆಯನ್ನು ಹೇಗೆ ಹೆಚ್ಚಿಸಬಲ್ಲವು ಎಂಬುದಕ್ಕೆ ನಿದರ್ಶನವಾಗಿದೆ ಎಂದು ಅಭಿಪ್ರಾಯಪಟ್ಟರು.

ಸದೃಢ ಪೊಲೀಸ್ ವ್ಯವಸ್ಥೆಯ ಬೆನ್ನೆಲುಬು

ಪೊಲೀಸರು ನಿರಂತರ ಒತ್ತಡದ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಸಮಾಜವನ್ನು ರಕ್ಷಿಸುವವರು ಮೊದಲು ತಾವು ಆರೋಗ್ಯವಾಗಿರಬೇಕು. ಆರೋಗ್ಯವಂತ ಪೊಲೀಸ್ ಪಡೆಯೇ ಪರಿಣಾಮಕಾರಿ ಆಡಳಿತದ ಬೆನ್ನೆಲುಬು," ಎಂದರು. ಮಾನಸಿಕವಾಗಿ ಮತ್ತು ದೈಹಿಕವಾಗಿ ಸದೃಢರಾದಾಗ ಮಾತ್ರ ಪೊಲೀಸ್ ಸಿಬ್ಬಂದಿ ಸವಾಲುಗಳನ್ನು ಹೆಚ್ಚು ಆತ್ಮವಿಶ್ವಾಸದಿಂದ ಎದುರಿಸಲು ಸಾಧ್ಯ. ಈ ಉಪಕ್ರಮವನ್ನು ಯಶಸ್ವಿಗೊಳಿಸಲು ಖಾಸಗಿ ಮತ್ತು ಸಾಮಾಜಿಕ ಸಂಸ್ಥೆಗಳು ಕೈಜೋಡಿಸಿವೆ. ಹ್ಯಾಪಿಯೆಸ್ಟ್ ಹೆಲ್ತ್ , ಟೈಟಾನ್ ಕಂಪನಿ ಲಿಮಿಟೆಡ್ ಹಾಗೂ ಬೆಂಗಳೂರು ಇಂದಿರಾನಗರ ರೋಟರಿ ಟ್ರಸ್ಟ್ ಈ ಯೋಜನೆಯಲ್ಲಿ ಪಾಲುದಾರರಾಗಿವೆ. ಸರ್ಕಾರದೊಂದಿಗೆ ಖಾಸಗಿ ವಲಯದ ಸಹಭಾಗಿತ್ವವು ಇಂತಹ ಸಮಾಜಮುಖಿ ಯೋಜನೆಗಳಿಗೆ ಎಷ್ಟು ಸಹಕಾರಿ ಎಂಬುದನ್ನು ಈ ಯೋಜನೆ ತೋರಿಸಿಕೊಟ್ಟಿದೆ ಎಂದರು.

ಎಲೆಕ್ಟ್ರಾನಿಕ್ ಸಿಟಿ ವಿಭಾಗದಲ್ಲಿನ ಯಶಸ್ಸಿನ ನಂತರ, ಈ ಕಾರ್ಯಕ್ರಮವನ್ನು ಬೆಂಗಳೂರಿನ ಇತರ ವಿಭಾಗಗಳಿಗೂ ವಿಸ್ತರಿಸುವ ಆಲೋಚನೆಯನ್ನು ಸರ್ಕಾರ ಹೊಂದಿದೆ. ಪೊಲೀಸ್ ಸಿಬ್ಬಂದಿಯ ದೈನಂದಿನ ಕೆಲಸದ ಒತ್ತಡ ಮತ್ತು ಅವರ ಆರೋಗ್ಯದ ನಡುವೆ ಸಮತೋಲನ ಕಾಯ್ದುಕೊಳ್ಳಲು 'ಪ್ರಾಜೆಕ್ಟ್ ಖುಷಿ'ಯು ಒಂದು ದಾರಿದೀಪವಾಗಲಿದೆ. ಪೊಲೀಸ್ ಸಿಬ್ಬಂದಿಯ ಕ್ಷೇಮವೇ ಸಾರ್ವಜನಿಕ ಸುರಕ್ಷತೆಯ ಮೊದಲ ಆದ್ಯತೆ ಎಂಬುದನ್ನು ಈ ಯೋಜನೆ ಸಾಬೀತುಪಡಿಸುತ್ತಿದೆ. ಇದು ಪೊಲೀಸ್ ಇಲಾಖೆಯ ಸಂಸ್ಕೃತಿಯಲ್ಲಿ ಒಂದು ಆರೋಗ್ಯಕರ ಬದಲಾವಣೆಯ ಮುನ್ನುಡಿಯಾಗಲಿದೆ.

Read More
Next Story