ಕಲ್ಯಾಣ ಕರ್ನಾಟಕದ ಬೇಳೆಕಾಳುಗಳಿಗೆ ಹೊಸ ರೂಪ: ಬಿಬಿಸಿಯಿಂದ ಎನರ್ಜಿ ಬಾರ್ ಆವಿಷ್ಕಾರ
x

ಕಲ್ಯಾಣ ಕರ್ನಾಟಕದ ಬೇಳೆಕಾಳುಗಳಿಗೆ ಹೊಸ ರೂಪ: ಬಿಬಿಸಿಯಿಂದ ಎನರ್ಜಿ ಬಾರ್ ಆವಿಷ್ಕಾರ

ಬೇಳೆಕಾಳುಗಳನ್ನು ಬಳಸಿ ಅತ್ಯಾಧುನಿಕ ಎನರ್ಜಿ ಬಾರ್‌ಗಳನ್ನು ಅಭಿವೃದ್ಧಿಪಡಿಸಿದೆ. ಈ ಮೂಲಕ ಸ್ಥಳೀಯ ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆ ತಂದುಕೊಡುವ ಕಾರ್ಯಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡಿದೆ.


Click the Play button to hear this message in audio format

ಕಲ್ಯಾಣ ಕರ್ನಾಟಕ ಭಾಗವು ಬೇಳೆಕಾಳುಗಳ ಕಣಜ ಎಂದು ಪ್ರಸಿದ್ಧವಾಗಿದೆ. ಆದರೆ ಇಲ್ಲಿ ಬೆಳೆಯುವ ತೊಗರಿ, ಉದ್ದು, ಹೆಸರು ಮತ್ತು ಕಡಲೆಕಾಳುಗಳು ಕಚ್ಚಾ ಧಾನ್ಯದ ರೂಪದಲ್ಲೇ ಮಾರುಕಟ್ಟೆಗೆ ತೆರಳುವುದರಿಂದ ರೈತರಿಗೆ ಸಿಗಬೇಕಾದ ಲಾಭ ಮಧ್ಯವರ್ತಿಗಳ ಪಾಲಾಗುತ್ತಿದೆ. ಈ ಸಮಸ್ಯೆಗೆ ಪರಿಹಾರವಾಗಿ, ಬೆಂಗಳೂರು ಜೈವಿಕ ನಾವೀನ್ಯತಾ ಕೇಂದ್ರ ಕಲ್ಯಾಣ ಕರ್ನಾಟಕದ ಬೇಳೆಕಾಳುಗಳನ್ನು ಬಳಸಿ ಅತ್ಯಾಧುನಿಕ ಎನರ್ಜಿ ಬಾರ್‌ಗಳನ್ನು (ಶಕ್ತಿವರ್ಧಕ ತಿನಿಸು) ಅಭಿವೃದ್ಧಿಪಡಿಸಿದೆ. ಈ ಮೂಲಕ ಸ್ಥಳೀಯ ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆ ತಂದುಕೊಡುವ ಮಹತ್ವದ ಕಾರ್ಯಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡಿದೆ.

ಕೃಷಿ ಇಲಾಖೆಯ ಸಹಯೋಗದಲ್ಲಿ ಕಲಬುರಗಿ ಬೇಳೆಕಾಳುಗಳ ಉಪಕ್ರಮದಡಿಯಲ್ಲಿ ಈ ಹೊಸ ತಿನಿಸುಗಳನ್ನು ಅಭಿವೃದ್ಧಿಪಡಿಸಲಾಗಿದೆ. 2014ರಲ್ಲಿ ರಾಜ್ಯ ಸರ್ಕಾರದ ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಇಲಾಖೆಯಿಂದ ಸ್ಥಾಪಿಸಲ್ಪಟ್ಟ ಬಿಬಿಸಿ, ಜೀವ ವಿಜ್ಞಾನದ ಕ್ಷೇತ್ರದಲ್ಲಿ ನಾವೀನ್ಯತೆಯನ್ನು ಬೆಳೆಸುವ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಈಗ ಇದೇ ಕೇಂದ್ರವು ತೊಗರಿ, ಉದ್ದು, ಹೆಸರು ಮತ್ತು ಕಡಲೆಬೇಳೆಯನ್ನು ಬಳಸಿ ಆರು ವಿಧದ ಶಕ್ತಿವರ್ಧಕ ತಿನಿಸುಗಳನ್ನು ತಯಾರಿಸಿದೆ.

ಉತ್ಪನ್ನದ ವೈಶಿಷ್ಟ್ಯಗಳು

ಪ್ರತಿ 30 ಗ್ರಾಂನ ಎನರ್ಜಿ ಬಾರ್‌ನಲ್ಲಿ ಸುಮಾರು 4 ಗ್ರಾಂ ಪ್ರೋಟೀನ್, 122-123 ಕ್ಯಾಲೋರಿ ಮತ್ತು 2 ಗ್ರಾಂ ನಾರಿನಂಶವಿದೆ. ವಿಶೇಷವಾಗಿ ಅಭಿವೃದ್ಧಿಪಡಿಸಿದ ಹೈ ಪ್ರೋಟೀನ್ ಉತ್ಪನ್ನದಲ್ಲಿ 4.85 ಗ್ರಾಂ ಪ್ರೋಟೀನ್ ಲಭ್ಯವಿದೆ. ಈ ಉತ್ಪನ್ನಗಳಲ್ಲಿ ಯಾವುದೇ ಕೃತಕ ಬಣ್ಣ, ರಾಸಾಯನಿಕ ಸಂರಕ್ಷಕಗಳು ಅಥವಾ ಕೃತಕ ಸುವಾಸನೆಗಳನ್ನು ಬಳಸಿಲ್ಲ. ಬೆಲ್ಲ, ಹುರಿದ ಕಡಲೆಕಾಯಿ, ಓಟ್ಸ್ ಮತ್ತು ಕುಂಬಳಕಾಯಿ ಬೀಜಗಳನ್ನು ಬಳಸಿ ರುಚಿಕರ ಹಾಗೂ ಆರೋಗ್ಯಕರವಾಗಿ ತಯಾರಿಸಲಾಗಿದೆ. ಈ ಉಪಕ್ರಮದ ಬಗ್ಗೆ ಮಾಹಿತಿ ನೀಡಿದ ಗೃಹ, ಮಾಹಿತಿ, ಜೈವಿಕ ತಂತ್ರಜ್ಞಾನ ಮತ್ತು ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ, ಕರ್ನಾಟಕದಲ್ಲಿ ಕೃಷಿ ಸಮೃದ್ಧವಾಗಿದೆ, ಆದರೆ ನಾವು ಬೆಳೆಯುವ ಉತ್ಪನ್ನಗಳ ಮೌಲ್ಯವರ್ಧನೆ ಮಾಡುವುದು ನಮ್ಮ ಮುಂದಿರುವ ಅತಿದೊಡ್ಡ ಅವಕಾಶ. ನಾವೀನ್ಯತೆ ಎಂದರೆ ಕೇವಲ ಹೊಸ ತಂತ್ರಜ್ಞಾನವಲ್ಲ; ಮಾರುಕಟ್ಟೆ ಮತ್ತು ಗ್ರಾಹಕರ ಬೇಡಿಕೆಗೆ ತಕ್ಕಂತೆ ನಮ್ಮ ಕೃಷಿ ಉತ್ಪನ್ನಗಳನ್ನು ಹೊಸ ಸ್ವರೂಪದಲ್ಲಿ ಜನರಿಗೆ ತಲುಪಿಸುವುದೂ ಒಂದು ದೊಡ್ಡ ನಾವೀನ್ಯತೆ ಎಂದು ಹೇಳಿದ್ದಾರೆ. ಬೆಂಗಳೂರಿನ ಬೌದ್ಧಿಕ ಶಕ್ತಿ ಮತ್ತು ಕಲ್ಯಾಣ ಕರ್ನಾಟಕದ ಕೃಷಿ ಸಾಮರ್ಥ್ಯ ಕೈಜೋಡಿಸಿದರೆ ಎಂತಹ ಅದ್ಭುತಗಳನ್ನು ಸಾಧಿಸಬಹುದು ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ರೈತರಿಗೆ ಆರ್ಥಿಕ ಸ್ವಾವಲಂಬನೆ

ಈ ಯೋಜನೆಯ ಪ್ರಮುಖ ಉದ್ದೇಶ ಲಾಭವನ್ನು ಸ್ಥಳೀಯವಾಗಿಯೇ ಉಳಿಸಿಕೊಳ್ಳುವುದು. ಈಗ ರೈತರು ಬೆಳೆದ ಬೇಳೆಕಾಳುಗಳು ಕಚ್ಚಾ ರೂಪದಲ್ಲಿ ಹೊರಹೋಗುತ್ತವೆ. ಇದರಿಂದ ಸಿಗುವ ಮೌಲ್ಯವರ್ಧಿತ ಲಾಭ ಹೊರಗಿನ ಕಾರ್ಖಾನೆಗಳ ಪಾಲಾಗುತ್ತಿದೆ. ಈ ಎನರ್ಜಿ ಬಾರ್‌ಗಳ ತಂತ್ರಜ್ಞಾನವನ್ನು ಭವಿಷ್ಯದಲ್ಲಿ ರೈತ ಉತ್ಪಾದಕ ಸಂಘಟನೆಗಳು, ಸ್ವಸಹಾಯ ಸಂಘಗಳು ಮತ್ತು ಸ್ಥಳೀಯ ಸಣ್ಣ ಕೈಗಾರಿಕೆಗಳಿಗೆ ವರ್ಗಾಯಿಸಲಾಗುತ್ತದೆ. ಇದರಿಂದ ಕಲಬುರಗಿಯ ಬೇಳೆಕಾಳುಗಳಿಗೆ ಒಂದು ಸ್ವಂತ ಬ್ರ್ಯಾಂಡ್ ಸಿಗುವುದಲ್ಲದೆ, ಸ್ಥಳೀಯವಾಗಿ ಉದ್ಯೋಗಾವಕಾಶಗಳೂ ಸೃಷ್ಟಿಯಾಗಲಿವೆ.

ಮಿಷನ್‌ನ ಮುಂದಿನ ಗುರಿ

'ಕಲ್ಯಾಣ ಕರ್ನಾಟಕ ಜೈವಿಕ ಆರ್ಥಿಕತೆ ಮಿಷನ್' ಕೇವಲ ಬೇಳೆಕಾಳುಗಳಿಗೆ ಮಾತ್ರ ಸೀಮಿತವಾಗಿಲ್ಲ. ಈ ಭಾಗದಲ್ಲಿ ಬೆಳೆಯುವ ತೊಗರಿ, ಕೆಂಪು ಬಾಳೆಹಣ್ಣು ಮತ್ತು ಕಬ್ಬಿನಂತಹ ಪ್ರಮುಖ ಬೆಳೆಗಳಿಗೆ ಜೈವಿಕ ತಂತ್ರಜ್ಞಾನದ ಸ್ಪರ್ಶ ನೀಡುವ ಯೋಜನೆಗಳನ್ನು ರೂಪಿಸಲಾಗಿದೆ. ಅಂಗಾಂಶ ಕೃಷಿಯು ರೋಗಮುಕ್ತ ಸಸಿಗಳ ಉತ್ಪಾದನೆ, ಜೈವಿಕ ಗೊಬ್ಬರ, ಸ್ಥಳೀಯವಾಗಿ ಮಣ್ಣಿನ ಫಲವತ್ತತೆ ಹೆಚ್ಚಿಸಲು ಜೈವಿಕ ಪದಾರ್ಥಗಳ ತಯಾರಿ, ಮಾರುಕಟ್ಟೆ ಸಂಪರ್ಕವು ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗುವಂತೆ ಜಾಲವನ್ನು ಬಲಪಡಿಸುವುದಾಗಿದೆ.

ತಾಂತ್ರಿಕ ಪ್ರಕ್ರಿಯೆ, ಭವಿಷ್ಯ

ಬಿಬಿಸಿಯ ವ್ಯವಸ್ಥಾಪಕ ನಿರ್ದೇಶಕ ಡಾ. ಮೊಹಮ್ಮದ್ ಆದಿಲ್ ಎ.ಎ. ಮಾತನಾಡಿ, ಸದ್ಯ ಅಭಿವೃದ್ಧಿಪಡಿಸಲಾದ ಉತ್ಪನ್ನಗಳು ಪ್ರಯೋಗಾಲಯದ ಹಂತದಲ್ಲಿದ್ದು, ಶೀಘ್ರವೇ ಬಾಳಿಕೆ ಅವಧಿ, ಪೌಷ್ಟಿಕಾಂಶದ ದೃಢೀಕರಣ ಮತ್ತು ಗ್ರಾಹಕರ ಅಭಿಪ್ರಾಯ ಸಂಗ್ರಹಣೆ ನಡೆಯಲಿದೆ. ಎಫ್‌ಎಸ್‌ಎಸ್‌ಎಐ ಪರವಾನಗಿ ಪಡೆದ ನಂತರ ತಂತ್ರಜ್ಞಾನವನ್ನು ಆಸಕ್ತ ಸ್ಥಳೀಯ ಉದ್ಯಮಿಗಳಿಗೆ ಹಸ್ತಾಂತರಿಸಲಾಗುತ್ತದೆ. ಒಟ್ಟಾರೆ, ಕಲ್ಯಾಣ ಕರ್ನಾಟಕದ ಮಣ್ಣಿನ ವಾಸನೆಯುಳ್ಳ ಈ ಬೇಳೆಕಾಳುಗಳು ಈಗ ಪೌಷ್ಟಿಕಾಂಶದ ಬಾರ್‌ಗಳ ರೂಪದಲ್ಲಿ ಪ್ಯಾಕೇಜ್ಡ್ ಫುಡ್ ಮಾರುಕಟ್ಟೆಯನ್ನು ಪ್ರವೇಶಿಸಲು ಸಜ್ಜಾಗಿವೆ. ಇದು ರೈತರಿಗೆ ಕೇವಲ ಬೆಳೆಯುವವರಾಗಿರದೆ, ತಮ್ಮ ಉತ್ಪನ್ನದ ಮೌಲ್ಯವನ್ನು ಹೆಚ್ಚಿಸುವ ಉದ್ಯಮಿಗಳಾಗುವ ದಾರಿಯನ್ನು ತೆರೆದುಕೊಟ್ಟಿದೆ. ಈ ಉಪಕ್ರಮವು ಕಲ್ಯಾಣ ಕರ್ನಾಟಕದ ಜೈವಿಕ ಆರ್ಥಿಕತೆಗೆ ಹೊಸ ಭದ್ರ ಬುನಾದಿಯನ್ನು ಹಾಕುವುದರಲ್ಲಿ ಸಂಶಯವಿಲ್ಲ.

Read More
Next Story