ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಲ್ಲ; ಪ್ರಿಯಾಂಕ್ ಖರ್ಗೆ ಸ್ಪಷ್ಟನೆ
x

ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡಲ್ಲ; ಪ್ರಿಯಾಂಕ್ ಖರ್ಗೆ ಸ್ಪಷ್ಟನೆ

ಜೈಲಿನ ಮೇಲೆ ನಡೆದ ದಾಳಿ ವೇಳೆ ಸಿಕ್ಕಿಬಿದ್ದ ಮೊಬೈಲ್ ಹಾಗೂ ಇತರ ಅಕ್ರಮ ವಸ್ತುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಳಿಕ ಕ್ರಮ ಜರುಗಿಸಲಾಗುವುದು ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.


ಕಾರಾಗೃಹಗಳಲ್ಲಿ ಅಕ್ರಮ ಚಟುವಟಿಕೆ ತಡೆಯಲು ಸರ್ಕಾರ ಬದ್ಧವಾಗಿದ್ದು, ಯಾವುದೇ ಕಾರಣಕ್ಕೂ ಜೈಲಿನಲ್ಲಿ ಕೈದಿಗಳಿಗೆ ವಿಐಪಿ ಸೌಲಭ್ಯ ನೀಡುವುದಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ವಿಧಾನಸಭೆಯ ಅಧಿವೇಶನದಲ್ಲಿ ಶಾಸಕ ಎಸ್.ಟಿ. ಸೋಮಶೇಖರ್ ಅವರು ಕಾರಾಗೃಹಗಳಲ್ಲಿ ಅಕ್ರಮವಾಗಿ ಮೊಬೈಲ್ ಬಳಕೆ ಹಾಗೂ ಕೈದಿಗಳಿಗೆ ನೀಡಲಾಗುತ್ತಿರುವ ವಿಶೇಷ ಸೌಲಭ್ಯಗಳ ಕುರಿತು ಎತ್ತಿದ ಪ್ರಶ್ನೆಗೆ ಗೃಹ ಸಚಿವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಕಾರಾಗೃಹಗಳ ಮೇಲೆ ದಿಢೀರ್ ದಾಳಿ

ಜೈಲುಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಕುರಿತು ಖಚಿತ ಮಾಹಿತಿ ಲಭ್ಯವಾದ ತಕ್ಷಣವೇ ಮುಖ್ಯಮಂತ್ರಿಗಳ ಅನುಮತಿ ಪಡೆದು ಕಾರಾಗೃಹಗಳ ಮೇಲೆ ದಿಢೀರ್ ದಾಳಿ ನಡೆಸಲಾಗಿತ್ತು ಎಂದು ಸಚಿವರು ಸದನಕ್ಕೆ ತಿಳಿಸಿದ್ದಾರೆ.

ಈ ದಾಳಿಯ ವೇಳೆ ಕೆಲವು ಕೈದಿಗಳ ಕೊಠಡಿಗಳಲ್ಲಿ (ಬ್ಯಾರಕ್) ಮೊಬೈಲ್ ಫೋನ್‌ಗಳು ಸೇರಿದಂತೆ ನಿಷೇಧಿತ ಹಾಗೂ ಅಕ್ರಮ ವಸ್ತುಗಳು ಪತ್ತೆಯಾಗಿವೆ. ಕಾರಾಗೃಹದ ನಿಯಮಾವಳಿ ಪ್ರಕಾರ ಕಾನೂನಿನ ಮುಂದೆ ಎಲ್ಲಾ ಕೈದಿಗಳು ಸಮಾನರು. ಯಾವುದೇ ರೇಂಜ್ ಅಥವಾ ಪ್ರಭಾವಿ ಕೈದಿಗೂ ಪ್ರತ್ಯೇಕ ಅಥವಾ ರಾಜಾತಿಥ್ಯ ನೀಡಲು ಅವಕಾಶವಿಲ್ಲ. ದಾಳಿ ವೇಳೆ ಸಿಕ್ಕಿಬಿದ್ದ ಮೊಬೈಲ್ ಹಾಗೂ ಇತರ ಅಕ್ರಮ ವಸ್ತುಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ತನಿಖೆಯ ನಂತರ ಕ್ರಮ

ಎಫ್‌ಎಸ್‌ಎಲ್ ವರದಿ ಮತ್ತು ತನಿಖೆ ಪೂರ್ಣಗೊಂಡ ನಂತರ ಇದರ ಹಿಂದಿರುವ ಸತ್ಯಾಸತ್ಯತೆ ಹೊರಬರಲಿದ್ದು, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಜೈಲು ಆಡಳಿತದಲ್ಲಿ ಪಾರದರ್ಶಕತೆ ತರಲು ಹಾಗೂ ಅಕ್ರಮಗಳನ್ನು ಸಂಪೂರ್ಣವಾಗಿ ತಡೆಯಲು ಗೃಹ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಸಚಿವರು ಸದನಕ್ಕೆ ಭರವಸೆ ನೀಡಿದ್ದಾರೆ.

ಜೈಲಿಗೆ ಭೇಟಿ ನೀಡಿದ್ದ ಮಹಿಳಾ ಆಯೋಗದ ಅಧ್ಯಕ್ಷೆ

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರು ನಿನ್ನೆಯಷ್ಟೇ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ಮಹಿಳಾ ಕೈದಿಗಳಿಗೆ ನೀಡುವ ಸವಲತ್ತುಗಳನ್ನು ಪರಿಶೀಲಿಸಿದ್ದರು. ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾ ಗೌಡ ಸೇರಿದಂತೆ ಹಲವು ಮಹಿಳಾ ಕೈದಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

ಜೈಲಿನಲ್ಲಿ ಆಹಾರ ಗುಣಮಟ್ಟ ಪರೀಕ್ಷೆ

ಮಹಿಳಾ ಬ್ಯಾರಕ್‌ಗಳಲ್ಲಿ ಕೈದಿಗಳಿಗೆ ನೀಡಲಾಗುತ್ತಿರುವ ಸೌಲಭ್ಯಗಳ ಪರಿಶೀಲನೆ ನಡೆಸಿದ ಅಧ್ಯಕ್ಷರು, ಕೈದಿಗಳಿಗೆ ವಿತರಿಸುವ ಊಟ, ಸೋಪು, ಪೇಸ್ಟ್ ಹಾಗೂ ದಿನಸಿ ಸರಕುಗಳನ್ನು ವೀಕ್ಷಿಸಿದ್ದರು. ಬ್ಯಾರಕ್‌ಗಳಲ್ಲಿ ವಿಪರೀತ ಸೊಳ್ಳೆಗಳ ಕಾಟವಿದೆ ಎಂದು ಹಲವು ಮಹಿಳಾ ಕೈದಿಗಳು ದೂರು ನೀಡಿದ್ದು, ತಕ್ಷಣವೇ ಫಾಗಿಂಗ್ ಹಾಗೂ ಸೂಕ್ತ ನೈರ್ಮಲ್ಯ ವ್ಯವಸ್ಥೆ ಮಾಡುವಂತೆ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

Read More
Next Story