ಅಗ್ನಿಶಾಮಕ ದಳವನ್ನು ಅಗತ್ಯಕ್ಕನುಗುಣವಾಗಿ ಬಲಪಡಿಸಲಾಗುವುದು: ಪ್ರಿಯಾಂಕ್ ಖರ್ಗೆ
x

ಅಗ್ನಿಶಾಮಕ ದಳವನ್ನು ಅಗತ್ಯಕ್ಕನುಗುಣವಾಗಿ ಬಲಪಡಿಸಲಾಗುವುದು: ಪ್ರಿಯಾಂಕ್ ಖರ್ಗೆ

ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡುವುದರ ಜೊತೆಗೆ ಅಗತ್ಯವಿರುವ ಹೊಸ ಅಗ್ನಿಶಾಮಕ ಠಾಣೆಗಳ ನಿರ್ಮಾಣಕ್ಕೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.


Click the Play button to hear this message in audio format

ಕರ್ನಾಟಕವು ವೇಗವಾಗಿ ಕೈಗಾರಿಕೀಕರಣ, ನಗರೀಕರಣ ಹಾಗೂ ತಂತ್ರಜ್ಞಾನ ಆಧಾರಿತ ನವೋದ್ಯಮಗಳ ಬೆಳವಣಿಗೆಯತ್ತ ಸಾಗುತ್ತಿರುವ ಹಿನ್ನೆಲೆಯಲ್ಲಿ, ಜನಸಂಖ್ಯೆ ಹಾಗೂ ಕೈಗಾರಿಕಾ ವಿಸ್ತರಣೆಗೆ ಅನುಗುಣವಾಗಿ ಅಗ್ನಿಶಾಮಕ ಮತ್ತು ವಿಪತ್ತು ನಿರ್ವಹಣಾ ಸೇವೆಗಳನ್ನು ಮರುಪರಿಶೀಲಿಸಿ ಬಲಪಡಿಸುವುದು ಅತ್ಯಗತ್ಯ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಹಾಗೂ ರಾಜ್ಯ ವಿಪತ್ತು ಸ್ಪಂದನಾ ಪಡೆಯ ಮುಖ್ಯ ಕಚೇರಿಗೆ ಭೇಟಿ ನೀಡಿ ಇಲಾಖೆಯ ಕಾರ್ಯಚಟುವಟಿಕೆಗಳು, ಮೂಲಸೌಕರ್ಯ, ಸಿಬ್ಬಂದಿ, ತರಬೇತಿ, ಆಧುನೀಕರಣ ಹಾಗೂ ಭವಿಷ್ಯದ ಅಭಿವೃದ್ಧಿ ಯೋಜನೆಗಳ ಕುರಿತು ಅಧಿಕಾರಿಗಳಿಂದ ಸಮಗ್ರ ಪ್ರಾತ್ಯಕ್ಷಿಕೆ ಸ್ವೀಕರಿಸಿದರು. ಇಲಾಖೆಯ ಇತಿಹಾಸ, ಸಂಘಟನೆ, ಕಾರ್ಯವೈಖರಿ, ಅಗ್ನಿಶಾಮಕ ಠಾಣೆಗಳ ಸ್ಥಿತಿ, ಆಧುನಿಕ ವಾಹನಗಳು ಮತ್ತು ಉಪಕರಣಗಳು, ತರಬೇತಿ, ಡಿಜಿಟಲೀಕರಣ ಹಾಗೂ ರಾಜ್ಯ ವಿಪತ್ತು ಸ್ಪಂದನಾ ಪಡೆಯ ಕಾರ್ಯಕ್ಷಮತೆ ಕುರಿತು ಸಚಿವರಿಗೆ ವಿವರಿಸಲಾಯಿತು.

ಈ ಹಿನ್ನೆಲೆಯಲ್ಲಿ ಮುಂದಿನ ಹಲವು ವರ್ಷಗಳ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಅಗ್ನಿಶಾಮಕ ಹಾಗೂ ವಿಪತ್ತು ನಿರ್ವಹಣಾ ಸೇವೆಗಳ ಸಮಗ್ರ ನೀಲನಕ್ಷೆ ಸಿದ್ಧಪಡಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಆಧುನಿಕ ತಂತ್ರಜ್ಞಾನ, ಮೂಲಸೌಕರ್ಯ, ಮಾನವ ಸಂಪನ್ಮೂಲ, ತರಬೇತಿ ಮತ್ತು ತುರ್ತು ಸ್ಪಂದನಾ ಸಾಮರ್ಥ್ಯವನ್ನು ಒಳಗೊಂಡ ಕಾರ್ಯತಂತ್ರ ರೂಪಿಸುವಂತೆ ಸೂಚಿಸಿದರು. ಸಭೆಯಲ್ಲಿ ಮಾತನಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಹಂತ ಹಂತವಾಗಿ ಭರ್ತಿ ಮಾಡುವುದರ ಜೊತೆಗೆ ಅಗತ್ಯವಿರುವ ಹೊಸ ಅಗ್ನಿಶಾಮಕ ಠಾಣೆಗಳ ನಿರ್ಮಾಣಕ್ಕೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಮುಂಬಡ್ತಿ, ಸೇವಾ ಸೌಲಭ್ಯಗಳು ಮತ್ತು ಕಲ್ಯಾಣ ಕ್ರಮಗಳ ಕುರಿತು ಸರ್ಕಾರ ಸಕಾರಾತ್ಮಕವಾಗಿ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದರು.

ಪ್ರಾತ್ಯಕ್ಷಿಕೆಯ ವೇಳೆ ಇಲಾಖೆಯು ಪ್ರಸ್ತುತ ರಾಜ್ಯದಾದ್ಯಂತ 219 ಅಗ್ನಿಶಾಮಕ ಠಾಣೆಗಳು, ಆರು ಅಗ್ನಿ ನಿಯಂತ್ರಣ ಘಟಕಗಳು, ಅಗ್ನಿಶಾಮಕ ತರಬೇತಿ ಅಕಾಡೆಮಿ, ಆಧುನಿಕ ಅಗ್ನಿಶಾಮಕ ವಾಹನಗಳು, ರಕ್ಷಣಾ ಉಪಕರಣಗಳು, ಅಗ್ನಿ-2 ಡಿಜಿಟಲ್ ಸೇವಾ ವ್ಯವಸ್ಥೆ, ರಾಜ್ಯ ವಿಪತ್ತು ಸ್ಪಂದನಾ ಪಡೆಯ ಐದು ಕಂಪನಿಗಳು ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿರುವುದರ ಜೊತೆಗೆ ಹೊಸ ಠಾಣೆಗಳ ನಿರ್ಮಾಣ, ವಾಹನಗಳ ಖರೀದಿ ಹಾಗೂ ಇಲಾಖೆಯ ಆಧುನೀಕರಣಕ್ಕೆ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಗೃಹರಕ್ಷಕ ಪಡೆಯನ್ನು ಇನ್ನಷ್ಟು ಸಮರ್ಥವಾಗಿ ಬಳಸಿಕೊಳ್ಳಲು ಸಮಗ್ರ ಕಾರ್ಯಸೂಚಿ ರೂಪಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಗೃಹರಕ್ಷಕರ ಸೇವೆಯನ್ನು ವಿವಿಧ ಸಾರ್ವಜನಿಕ ಭದ್ರತೆ ಹಾಗೂ ತುರ್ತು ಪರಿಸ್ಥಿತಿಗಳಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಬಗ್ಗೆ ಯೋಜನೆ ರೂಪಿಸುವಂತೆ ತಿಳಿಸಿದರು. ಅದೇ ವೇಳೆ, ಗೃಹರಕ್ಷಕ ಪಡೆಯ ಸಿಬ್ಬಂದಿಯ ಸೇವಾ ಸೌಲಭ್ಯಗಳು ಹಾಗೂ ಗೌರವಧನವನ್ನು ಹೆಚ್ಚಿಸಲು ಅಗತ್ಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಅಡುಗೆ ಅನಿಲ ಸೋರಿಕೆಯಿಂದ ಉಂಟಾಗುವ ಅವಘಡಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಅಗ್ನಿಶಾಮಕ ಸಿಬ್ಬಂದಿಗೆ ವಿಶೇಷ ತಾಂತ್ರಿಕ ತರಬೇತಿ ನೀಡುವ ವ್ಯವಸ್ಥೆ ರೂಪಿಸಬೇಕು. ಈ ತರಬೇತಿ ಕಾರ್ಯಕ್ರಮಗಳಿಗೆ ಅಗತ್ಯವಾಗುವ ವೆಚ್ಚವನ್ನು ಅಡುಗೆ ಅನಿಲ ಸರಬರಾಜು ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ಅಥವಾ ಇತರೆ ವ್ಯವಸ್ಥೆಗಳ ಮೂಲಕ ಭರಿಸುವ ಕುರಿತು ಅವುಗಳೊಂದಿಗೆ ಚರ್ಚೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಸಾರ್ವಜನಿಕರ ಜೀವ ಹಾಗೂ ಆಸ್ತಿ ರಕ್ಷಣೆಯಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಆಧುನಿಕ ತಂತ್ರಜ್ಞಾನ, ಸಮರ್ಪಕ ಮಾನವ ಸಂಪನ್ಮೂಲ, ನಿರಂತರ ತರಬೇತಿ ಹಾಗೂ ಉತ್ತಮ ಮೂಲಸೌಕರ್ಯದ ಮೂಲಕ ಇಲಾಖೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಇಲಾಖೆಯ ಅಭಿವೃದ್ಧಿಗೆ ಅಗತ್ಯವಿರುವ ಎಲ್ಲ ಪ್ರಸ್ತಾವನೆಗಳನ್ನು ಆದ್ಯತೆಯ ಮೇರೆಗೆ ಪರಿಶೀಲಿಸಲಾಗುವುದು ಎಂದು ಅಶ್ವಾಸನೆ ನೀಡಿದರು. ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು ಪೊಲೀಸ್ ಮಹಾನಿರ್ದೇಶಕ ಪ್ರಶಾಂತ್ ಕುಮಾರ್ ಠಾಕೂರ್, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಂ.ನಂಜುಂಡಸ್ವಾಮಿ ಹಾಗೂ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Read More
Next Story