
ಬಲಿಷ್ಠ ಯುವ ಕರ್ನಾಟಕ ನಿರ್ಮಾಣವೇ ನಮ್ಮ ಗುರಿ: ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ
ಯುವಕರಿಗೆ ಉದ್ಯೋಗಾಧಾರಿತ ಕೌಶಲ್ಯ ನೀಡಲು ಕಲಬುರಗಿಯಲ್ಲಿ ಸ್ಕಿಲ್ ಪಾರ್ಕ್ ಸ್ಥಾಪಿಸಲಾಗುತ್ತಿದೆ ಎಂದು ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ನವ ಭಾರತ ನಿರ್ಮಾಣ ಮಾಡಲು ಬಲಿಷ್ಠ ಯುವ ಕರ್ನಾಟಕ ನಿರ್ಮಿಸುವುದು ನಮ್ಮ ಸಂಕಲ್ಪವಾಗಿದೆ. ಈ ನಿಟ್ಟಿನಲ್ಲಿ ಯುವಕರಿಗೆ ಉದ್ಯೋಗಾಧಾರಿತ ಕೌಶಲ್ಯ ನೀಡಲು ಕಲಬುರಗಿಯಲ್ಲಿ ಸ್ಕಿಲ್ ಪಾರ್ಕ್ ಸ್ಥಾಪಿಸಲಾಗುತ್ತಿದೆ ಎಂದು ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕಲಬುರಗಿ ನಗರದ ಪೊಲೀಸ್ ಪರೇಡ್ ಮೈದಾನದಲ್ಲಿ 80ನೇ ಸ್ವಾತಂತ್ರ‍್ಯ ದಿನಾಚರಣೆ ಪ್ರಯುಕ್ತ ರಾಷ್ಟ್ರಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಲಬುರಗಿ ವಿಭಾಗದಲ್ಲಿ ಕೌಶಲ್ಯಾಭಿವೃದ್ಧಿ ಇಲಾಖೆಯಿಂದ ಎಂ.ಎಸ್.ಡಿ.ಸಿ. ಸ್ಥಾಪನೆ, ಜಿ.ಟಿ.ಟಿ.ಸಿ. ಸೆಂಟರ್ ಹೀಗೆ ಸುಮಾರು 250 ಕೋಟಿ ರೂ. ಕೌಶಲ್ಯ ಕ್ಷೇತ್ರಕ್ಕೆ ವಿನಿಯೋಗಿಸಲಾಗಿದೆ. ಯುವಜನರಲ್ಲಿ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು, ವೈಜ್ಞಾನಿಕ ಮನೋಭಾವ ಮತ್ತು ಸಾಮಾಜಿಕ ಸಾಮರಸ್ಯವನ್ನು ಬೆಳೆಸುವ ಹಾಗೂ ಸಂವಿಧಾನಿಕ ಮೌಲ್ಯಗಳನ್ನು ಗಟ್ಟಿಗೊಳಿಸುವ ಉದ್ದೇಶದಿಂದ ರಾಜ್ಯಾದ್ಯಂತ ಒಟ್ಟು 10 ಸಾವಿರ ಭಾರತ್ ಜೋಡೋ ಯುವ ಸಂಘಗಳನ್ನು ರಚಿಸಲು ಉದ್ದೇಶಿಸಿದ್ದು, ಇದಕ್ಕಾಗಿ 1,010 ಕೋಟಿ ಅನುದಾನ ಮೀಸಲಿರಿಸಿದೆ. ಪ್ರತಿ ಸಂಘಕ್ಕೆ ವಿವಿಧ ಹಂತಗಳಲ್ಲಿ ವಾರ್ಷಿಕವಾಗಿ 10 ಲಕ್ಷ ರೂ. ವರೆಗೆ ಅನುದಾನ ದೊರೆಯಲಿದೆ ಎಂದರು.
ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವ ಐತಿಹಾಸಿಕ ನಿರ್ಧಾರ ಇತ್ತೀಚೆಗೆ ನಮ್ಮ ಸರ್ಕಾರ ತೆಗೆದುಕೊಂಡಿದ್ದು, ಕಲಬುರಗಿ ಜಿಲ್ಲೆಯಲ್ಲಿ ಇದೂವರೆಗೆ 26,564 ವಿದ್ಯಾರ್ಥಿಗಳು ಇದರ ಲಾಭ ಪಡೆಯುತ್ತಿದ್ದಾರೆ. ಇನ್ನು ಕಲಬುರಗಿಯಲ್ಲಿರುವ ಪ್ರಬುದ್ಧ ಅಕಾಡೆಮಿಯಲ್ಲಿ ವಿದ್ಯಾರ್ಥಿಗಳ ಬೇಡಿಕೆಯಂತೆ 10 ಕೋಟಿ ರೂ. ವೆಚ್ಚದಲ್ಲಿ ಹಾಸ್ಟೆಲ್ ನಿರ್ಮಾಣ ಮಾಡಲಾಗುತ್ತಿದ್ದು, ಇದರಿಂದ ವಸತಿ ಸಹಿತ ತರಬೇತಿ ಪಡೆಯಲು ನಿರುದ್ಯೋಗಿ ಅಭ್ಯರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ಕಲ್ಯಾಣಕ್ಕೆ 32,177 ಜನರಿಗೆ ಉದ್ಯೋಗ
ರಾಜ್ಯದಾದ್ಯಂತ 72,186 ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆಗೆ ನಮ್ಮ ಸರ್ಕಾರ ಈಗಾಗಲೆ ಚಾಲನೆ ನೀಡಿದೆ. ಇದರಲ್ಲಿ ಕಲ್ಯಾಣ ಕರ್ನಾಟಕ ಭಾಗದ 32,177 ಜನರಿಗೆ ಉದ್ಯೋಗ ಸಿಗಲಿದ್ದು, ನಾಡಿನಾದ್ಯಂತ ಉದ್ಯೋಗ ಪರ್ವ ಆರಂಭವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು, ಪರೀಕ್ಷಾ ಅಕ್ರಮ ತಡೆಯಲು ಶೀಘ್ರದಲ್ಲೇ ಕಟ್ಟುನಿಟ್ಟಿನ ಕಾಯ್ದೆ ರಾಜ್ಯದಲ್ಲಿ ಜಾರಿಗೆ ತರಲಾಗುರತ್ತಿದೆ ಎಂದರು. ಕಲ್ಯಾಣ ಕರ್ನಾಟಕದ ಗ್ರಾಮೀಣ ಭಾಗಗಳ ಜನರಿಗೆ ಹೆಚ್ಚಿನ ಹಾಗೂ ಸುಗಮ ಸಾರಿಗೆ ಸೌಲಭ್ಯ ಕಲ್ಪಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ 152 ಕೋಟಿ ರೂ. ವೆಚ್ಚದಲ್ಲಿ 400 ಹೊಸ ಎಲೆಕಟ್ರಿಕ್ ಬಸ್‌ಗಳ ಖರೀದಿಗೆ ಅನುಮೋದನೆ ನೀಡಿದೆ. ನಗರದ ನಾಲ್ಕು ದಿಕ್ಕಿನಲ್ಲಿ ಸ್ಯಾಟಲೈಟ್ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುತ್ತದೆ. ಇದಲ್ಲದೆ ಗ್ರಾಮೀಣ ಭಾಗದಲ್ಲಿ ಸಾರಿಗೆ ಸಂಪರ್ಕ ಉತ್ತಮಗೊಳಿಸಲು ಕಲ್ಯಾಣ ಪಥ ಯೋಜನೆಯಡಿ ಜಿಲ್ಲೆಯ ಒಟ್ಟು 9 ವಿಧಾನಸಭಾ ಕ್ಷೇತ್ರಗಳಲ್ಲಿ 254.66 ಕಿ.ಮೀ. ಉದ್ಧದ 64 ರಸ್ತೆಗಳನ್ನು 226.10 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದೂವರೆಗೆ 152.60 ಕಿ.ಮೀ. ರಸ್ತೆ ಪೂರ್ಣಗೊಳಿಸಿದ್ದು, ಬರುವ ನವೆಂಬರ್ ವೇಳೆಗೆ ಪ್ರಗತಿಯಲ್ಲಿರುವ ಇನ್ನುಳಿದ 102.06 ಕಿ.ಮೀ. ಪೂರ್ಣಗೊಂಡು ಸಂಚಾರಕ್ಕೆ ಮುಕ್ತವಾಗಲಿದೆ. ಅದೇ ರೀತಿ “ಪ್ರಗತಿ ಪಥ” ಯೋಜನೆಯಡಿ ಜಿಲ್ಲೆಯ 8 ತಾಲೂಕುಗಳಲ್ಲಿ 257.775 ಕಿ.ಮೀ. ಉದ್ದದ 59 ರಸ್ತೆಗಳನ್ನು 185.33 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಇದೆಲ್ಲವು ಪ್ರದೇಶದಲ್ಲಿ ಸಾರಿಗೆ ಕ್ರಾಂತಿಗೆ ಮುನ್ನುಡಿ ಬರೆಯಲಿದೆ ಎಂದರು.
ಬೇಡ ಬ್ರೋ ಅಭಿಯಾನಕ್ಕೆ ಕೈಜೋಡಿಸಿ
ಕರ್ನಾಟಕ ರಾಜ್ಯವನ್ನು ಹಾಗೂ ಕಲಬುರಗಿ ನಗರವನ್ನು ಮಾದಕ ವಸ್ತು ಮುಕ್ತಗೊಳಿಸಲು ಪೊಲೀಸ್ ಇಲಾಖೆಯು 'ಆಪರೇಷನ್ ರೈಸ್’ ಮತ್ತು 'ಬೇಡ ಬ್ರೋ' ಜಾಗೃತಿ ಅಭಿಯಾನಗಳನ್ನು ಹಮ್ಮಿಕೊಂಡಿದೆ. ಕಲಬುರಗಿ ನಗರ ಪೊಲೀಸ್ ಆಯುಕ್ತಾಲಯದಿಂದ ಇದೂವರೆಗೆ 297 ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಅಭಿಯಾನ ಕೈಗೊಂಡು 64,490 ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳಿಂದ ದೂರವಿರಲು ಕರೆ ನೀಡಲಾಗಿದೆ. ಬರೀ ಪೊಲೀಸ್ ಇಲಾಖೆಯಿಂದಲೇ ಮಾದಕ ವಸ್ತುಗಳ ನಿರ್ಮೂಲನೆ ಸಾಧ್ಯವಿಲ್ಲ; ಇದಕ್ಕೆ ಯುವಜನತೆ, ಸಮುದಾಯ ಹಾಗೂ ಸಾರ್ವಜನಿಕರ ಸಹಭಾಗಿತ್ವ ಅಗತ್ಯವಿದ್ದು, ಎಲ್ಲರು ಕೈಜೋಡಿಸಬೇಕೆಂದು ಮನವಿ ಮಾಡಿದರು.
ಕಲಬುರಗಿ ನಗರವನ್ನು ಸುಸ್ಥಿರ ಮತ್ತು ಸ್ಮಾರ್ಟ್ ಸಿಟಿಯನ್ನಾಗಿ ಮಾಡಲು ನೀಲಿ ನಕ್ಷೆ ಸಿದ್ದಪಡಿಸಲಾಗಿದೆ. ಬರುವ ಸೆ.17ಕ್ಕೆ ಮುಖ್ಯಮಂತ್ರಿಗಳು ನವೀಕೃತ ಅಪ್ಪ ಕೆರೆ ಸೌಂದರ್ಯೀಕರಣ ಕಾಮಗಾರಿ ಮತ್ತು ಸ್ಥಳೀಯವಾಗಿ ಆರ್ಥಿಕ ಚಟುವಟಿಕೆಗೆ ವೇಗ ನೀಡುವ ಲೀಪ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ವಿವಿಧ ಬಡಾವಣೆಯಲ್ಲಿ 30 ಉದ್ಯಾನವನ ನಿರ್ಮಾಣ ಮಾಡಲಾಗುತ್ತಿದೆ. ಇದಲ್ಲದೆ ಕಲಬುರಗಿ ಕೋಟೆ, ಮಳಖೇಡ್ ಕೋಟೆ, ಕಾಳಗಿಯ ಸೂರ್ಯನಾರಾಯಣ ದೇವಸ್ಥಾನ, ಸನ್ನತ್ತಿದಂತಹ ಐತಿಹಾಸಿಕ ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ದೇವಲ ಗಾಣಗಾಪೂರ ಮಾಸ್ಟರ್ ಪ್ಲ್ಯಾನ್ ಸಿದ್ದಗೊಂಡಿದ್ದು, ಮೊದಲನೇ ಹಂತದ ಕಾಮಗಾರಿಗಳಿಗೆ ಶೀಘ್ರವೆ ಚಾಲನೆ ನೀಡಲಾಗುವುದು. ನವ ಕಲಬುರಗಿ ನಿರ್ಮಾಣದ ಸಂಕಲ್ಪದೊಙದಿಗೆ ಕಲೆ, ಸಾಹಿತ್ಯ, ಪ್ರವಾಸೋದ್ಯಮ, ಕೃಷಿ, ಇಂಧನ, ಕೈಗಾರಿಕೆ ಹಾಗೂ ಸ್ಮಾರ್ಟ್ ಸಿಟಿ ಯೋಜನೆಗಳಿಗೆ ಆದ್ಯತೆ ನೀಡಿ ಅಭಿವೃದ್ಧಿಯತ್ತ ಮುನ್ನಡೆಯಲಾಗುತ್ತಿದೆ ಎಂದು ಹೇಳಿದರು.

