
ಥಣಿಸಂದ್ರದಲ್ಲಿ ಮಕ್ಕಳಿಗೆ ರಸ್ತೆ ನಿಯಮಗಳ ಪಾಠ ಕಲಿಸಲು ಹೈಟೆಕ್ ಟ್ರಾಫಿಕ್ ಪಾರ್ಕ್
ಉದ್ಯಾನವನವು ಮಕ್ಕಳಿಗೆ, ಸಾರ್ವಜನಿಕರಿಗೆ ರಸ್ತೆ ಸುರಕ್ಷತೆಯ ಕುರಿತು ಪ್ರಾಯೋಗಿಕ ಜ್ಞಾನ ನೀಡುವ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಮಾದರಿ ರಸ್ತೆಗಳು, ಸಂಚಾರ ದೀಪಗಳನ್ನು ನಿರ್ಮಿಸಲಾಗುತ್ತದೆ.
ರಸ್ತೆ ಸುರಕ್ಷತೆಯು ಕೇವಲ ಪೊಲೀಸರ ಕರ್ತವ್ಯವಲ್ಲ, ಅದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ ಎಂದು ಪ್ರತಿಪಾದಿಸಿದ ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ, ಬೆಂಗಳೂರಿನಲ್ಲಿ ರಸ್ತೆ ಸುರಕ್ಷತೆ ಮತ್ತು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಎರಡು ಮಹತ್ವದ ಉಪಕ್ರಮಗಳಿಗೆ ಚಾಲನೆ ನೀಡಿದ್ದಾರೆ.
ಬೆಂಗಳೂರಿನ ಥಣಿಸಂದ್ರದಲ್ಲಿರುವ 'ಸಂಚಾರ ತರಬೇತಿ ಮತ್ತು ರಸ್ತೆ ಸುರಕ್ಷತಾ ಸಂಸ್ಥೆ'ಯ ಆವರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ನೂತನ ಸಂಚಾರ ಉದ್ಯಾನವನಕ್ಕೆ ಶಿಲಾನ್ಯಾಸ ನೆರವೇರಿಸಿದರು. ಈ ಉದ್ಯಾನವನವು ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ರಸ್ತೆ ಸುರಕ್ಷತೆಯ ಕುರಿತು ಪ್ರಾಯೋಗಿಕ ಜ್ಞಾನ ನೀಡುವ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ. ಈ ಉದ್ಯಾನವನದಲ್ಲಿ ಮಾದರಿ ರಸ್ತೆಗಳು, ಸಂಚಾರ ದೀಪಗಳು, ರಸ್ತೆ ಸೂಚನಾ ಫಲಕಗಳು ಮತ್ತು ಪಾದಚಾರಿ ಮಾರ್ಗಗಳನ್ನು ನಿರ್ಮಿಸಲಾಗುತ್ತದೆ. ಇದು ಮಕ್ಕಳಿಗೆ ನೈಜ ರಸ್ತೆ ಪರಿಸ್ಥಿತಿಯನ್ನು ಹೋಲುವ ವಾತಾವರಣದಲ್ಲಿ ಸಂಚಾರ ನಿಯಮಗಳನ್ನು ಕಲಿಯಲು ಅವಕಾಶ ನೀಡುತ್ತದೆ. ಬಾಲ್ಯದಿಂದಲೇ ರಸ್ತೆ ಸುರಕ್ಷತೆಯ ಮೌಲ್ಯಗಳನ್ನು ಕಲಿಸುವುದರಿಂದ, ಮುಂದಿನ ಪೀಳಿಗೆ ಜವಾಬ್ದಾರಿಯುತ ಚಾಲಕರಾಗಿ ಮತ್ತು ಪಾದಚಾರಿಗಳಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
1.66 ಕೋಟಿ ರೂ. ಮೌಲ್ಯದ ಸಿಎಸ್ಆರ್ ನೆರವು
ಹೋಂಡಾ ಇಂಡಿಯಾ ಫೌಂಡೇಷನ್ನ ಸಹಯೋಗದಲ್ಲಿ ಬೆಂಗಳೂರು ಸಂಚಾರ ಪೊಲೀಸರಿಗೆ 1.66 ಕೋಟಿ ರೂ. ಮೌಲ್ಯದ ನೆರವನ್ನು ಸಚಿವರು ಹಸ್ತಾಂತರಿಸಿದರು. ಇದರಲ್ಲಿ 1 ಕೋಟಿ ರೂ. ಸಂಚಾರ ಉದ್ಯಾನವನ ನಿರ್ಮಾಣಕ್ಕೆ ಮೀಸಲಾಗಿದ್ದರೆ, 66 ಲಕ್ಷ ರೂ. ಮೌಲ್ಯದ 20 ಅತ್ಯಾಧುನಿಕ ಗಸ್ತು ಮೋಟಾರ್ಸೈಕಲ್ಗಳನ್ನು ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಗಿದೆ. ಈ ಗಸ್ತು ವಾಹನಗಳು ಆಧುನಿಕ ಸೈರನ್ಗಳು, ಸಾರ್ವಜನಿಕ ಪ್ರಕಟಣಾ ವ್ಯವಸ್ಥೆ ಮತ್ತು ಮಿನುಗುವ ಎಚ್ಚರಿಕೆ ದೀಪಗಳನ್ನು ಹೊಂದಿವೆ. ಇವು ಅಪಘಾತ ಸಂಭವಿಸಿದ ತಕ್ಷಣ ಸ್ಥಳಕ್ಕೆ ಧಾವಿಸಲು ಮತ್ತು ಸಂಚಾರ ದಟ್ಟಣೆಯನ್ನು ಸಮರ್ಥವಾಗಿ ನಿರ್ವಹಿಸಲು ಪೊಲೀಸರಿಗೆ ನೆರವಾಗಲಿವೆ.
ಶಾಲಾ ಮಕ್ಕಳಲ್ಲಿ ಜಾಗೃತಿ
ಬೆಂಗಳೂರು ಸಂಚಾರ ಪೊಲೀಸರು ಜಾರಿಗೊಳಿಸಿರುವ 'ವಿದ್ಯಾರ್ಥಿಗಳ ರಸ್ತೆ ಸುರಕ್ಷತಾ ಸಂಘ' ಮೂಲಕ 2026ನೇ ಸಾಲಿನಲ್ಲಿ ಇದುವರೆಗೆ 2.53 ಲಕ್ಷಕ್ಕೂ ಅಧಿಕ ಶಾಲಾ ಮಕ್ಕಳಿಗೆ ತರಬೇತಿ ನೀಡಲಾಗಿದೆ. ಈ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ ಸಚಿವರು, "ಶಾಲೆಗಳು, ಪೋಷಕರು ಮತ್ತು ಪೊಲೀಸರು ಒಟ್ಟಾಗಿ ಕೈಜೋಡಿಸಿದರೆ ಮಾತ್ರ ಸುರಕ್ಷಿತ ಸಂಚಾರ ವ್ಯವಸ್ಥೆಯನ್ನು ನಿರ್ಮಿಸಲು ಸಾಧ್ಯ" ಎಂದರು.
ಈ ನಡುವೆ, ವಿಧಾನಸೌಧದ ಮುಂಭಾಗದಲ್ಲಿ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ಏಕತಾ ಪರೇಡ್ ಮತ್ತು ಮೋಟಾರ್ಸೈಕಲ್ ರ್ಯಾಲಿಗೆ ಅವರು ಹಸಿರು ನಿಶಾನೆ ತೋರಿದರು. ಯುವಜನತೆಯನ್ನು ಮಾದಕ ವಸ್ತುಗಳ ಚಟದಿಂದ ದೂರವಿರಿಸುವುದು ಸರ್ಕಾರದ ಆದ್ಯತೆಯಾಗಿದೆ. "ಮಾದಕ ವಸ್ತುಗಳು ಸಮಾಜವನ್ನು ಒಳಗಿನಿಂದ ಕೊರೆಯುವ ಪಿಡುಗು. ಈ ಪಿಡುಗಿನ ವಿರುದ್ಧ ಇಡೀ ಸಮಾಜ ಒಂದಾಗಬೇಕು" ಎಂದು ಸಚಿವರು ಕರೆ ನೀಡಿದರು. ಪೊಲೀಸ್ ಇಲಾಖೆಯ ಈ ಸಾಂಕೇತಿಕ ರ್ಯಾಲಿಯು ಯುವಕರಲ್ಲಿ ಡ್ರಗ್ಸ್ ವಿರುದ್ಧದ ಹೋರಾಟದ ಕಿಚ್ಚನ್ನು ಹೆಚ್ಚಿಸುವ ಉದ್ದೇಶ ಹೊಂದಿದೆ.
ಸರ್ಕಾರದ ಕಾರ್ಯಕ್ರಮಗಳಿಗೆ ಖಾಸಗಿ ಸಂಸ್ಥೆಗಳ ಸಿಎಸ್ಆರ್ ಬೆಂಬಲ ದೊರೆತಾಗ ಯೋಜನೆಗಳು ಹೆಚ್ಚು ಪರಿಣಾಮಕಾರಿಯಾಗಿ ಜಾರಿಯಾಗುತ್ತವೆ ಎಂದು ಅಭಿಪ್ರಾಯಪಟ್ಟರು. ಬೆಂಗಳೂರಿನಂತಹ ಬೆಳೆಯುತ್ತಿರುವ ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ಒತ್ತಡವನ್ನು ನಿಭಾಯಿಸಲು ಆಧುನಿಕ ಸೌಲಭ್ಯಗಳ ಅಗತ್ಯವಿದೆ. ತಂತ್ರಜ್ಞಾನ ಮತ್ತು ಮಾನವ ಸಂಪನ್ಮೂಲಗಳ ಸಮರ್ಪಕ ಬಳಕೆಯ ಮೂಲಕ ನಗರವನ್ನು ಅಪಘಾತ ಮುಕ್ತವನ್ನಾಗಿಸುವುದು ನಮ್ಮ ಗುರಿ ಎಂದರು.

