ಆರ್‌ಎಸ್‌ಎಸ್ ನೋಂದಣಿಗೆ ಖರ್ಗೆ ಆಗ್ರಹ; ತಿರಸ್ಕರಿಸಿದ ಮೋಹನ್ ಭಾಗವತ್
x

ಆರ್‌ಎಸ್‌ಎಸ್ ಸಂಘಟನೆಯ ನೋಂದಣಿ ಮತ್ತು ಆರ್ಥಿಕ ಪಾರದರ್ಶಕತೆಯನ್ನು ಆಗ್ರಹಿಸಿ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡುತ್ತಿರುವ ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ.

ಆರ್‌ಎಸ್‌ಎಸ್ ನೋಂದಣಿಗೆ ಖರ್ಗೆ ಆಗ್ರಹ; ತಿರಸ್ಕರಿಸಿದ ಮೋಹನ್ ಭಾಗವತ್

ಆರ್‌ಎಸ್‌ಎಸ್ ನೋಂದಣಿ ಹಾಗೂ ಆರ್ಥಿಕ ಮೂಲ ಬಹಿರಂಗಪಡಿಸಲು ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದು, ಇದನ್ನು ರಾಜಕೀಯ ಗಿಮಿಕ್ ಎಂದು ಮೋಹನ್ ಭಾಗವತ್ ತಳ್ಳಿಹಾಕಿದ್ದಾರೆ.


Click the Play button to hear this message in audio format

ರಾಷ್ಟ್ರ ರಾಜಕಾರಣ ಮತ್ತು ಸಿದ್ಧಾಂತಗಳ ನಡುವಿನ ಸಂಘರ್ಷ ಈಗ ಹೊಸ ತಿರುವು ಪಡೆದುಕೊಂಡಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ನೋಂದಣಿ ವಿಚಾರವಾಗಿ ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಆರಂಭಿಸಿದ ಚರ್ಚೆ ಈಗ ಕೇವಲ ರಾಜ್ಯಕ್ಕೆ ಸೀಮಿತವಾಗಿರದೆ ದೇಶವ್ಯಾಪಿ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿದೆ.

ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸುವ ಬದಲು ದೆಹಲಿಯಲ್ಲೇ ಜಂಟಿ ಸುದ್ದಿಗೋಷ್ಠಿ ನಡೆಸಿ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಪತ್ರ ಬರೆದಿರುವ ಪ್ರಿಯಾಂಕ್ ಖರ್ಗೆ, ಸಂಘಟನೆಯ ನೋಂದಣಿ ಮತ್ತು ಆರ್ಥಿಕ ಮೂಲಗಳ ಬಗ್ಗೆ ನೇರ ಪ್ರಶ್ನೆಗಳನ್ನು ಎತ್ತಿದ್ದಾರೆ.

"ನಮ್ಮ ದೇಶದಲ್ಲಿ ಒಬ್ಬ ಸಫಾಯಿ ಕರ್ಮಚಾರಿಗೂ ಸರ್ಕಾರಿ ಸೌಲತ್ತು ಅಥವಾ ಕೆಲಸಕ್ಕಾಗಿ ರಿಜಿಸ್ಟ್ರೇಷನ್ ಕೇಳುತ್ತೀರಿ, ಆದರೆ ಇವರಿಗೆ ಏಕೆ ರಿಜಿಸ್ಟ್ರೇಷನ್ ಇಲ್ಲ? ಏನಾದರೂ ಕೇಳಿದರೆ ಧರ್ಮದ ಹೆಸರು ತರುತ್ತೀರಾ? ನನ್ನ ಪತ್ರದಲ್ಲಿ ಹಿಂದೂ ಅಥವಾ ಧರ್ಮ ಎನ್ನುವ ಪದ ಎಲ್ಲಾದರೂ ಬಂದಿದೆಯಾ? ನಾವು ರಿಜಿಸ್ಟ್ರೇಷನ್ ಕೇಳುತ್ತಿರುವುದು ನಿಮ್ಮ ಸಂಘಟನೆಗೆ, ಧರ್ಮಕ್ಕಲ್ಲ. ನಿಮಗೆ ಇನ್ಕಮ್ ಟ್ಯಾಕ್ಸ್ ಅಪೆಲೇಟ್ ಟ್ರಿಬ್ಯೂನಲ್ ಬ್ಲಾಂಕೆಟ್ ಇಮ್ಯೂನಿಟಿ ಕೊಟ್ಟಿದೆಯೇ?" ಎಂದು ಖರ್ಗೆ ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ರಾಹುಲ್ ಗಾಂಧಿ ಪ್ರೇರಣೆ ಮತ್ತು ಕಾಂಗ್ರೆಸ್ ನಾಯಕರ ಬೆಂಬಲ

ಈ ವಿವಾದ ಕರ್ನಾಟಕದಿಂದ ದೆಹಲಿ ತಲುಪುತ್ತಿದ್ದಂತೆ ಕಾಂಗ್ರೆಸ್ ಹೈಕಮಾಂಡ್ ಹಾಗೂ ಮೈತ್ರಿ ಪಕ್ಷಗಳ ಹಿರಿಯ ನಾಯಕರು ಇದಕ್ಕೆ ಧ್ವನಿಗೂಡಿಸಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಆರ್‌ಎಸ್‌ಎಸ್ ವಿರೋಧಿ ಸಿದ್ಧಾಂತದ ಪ್ರೇರಣೆಯೇ ಈ ಜಂಟಿ ವಾಗ್ದಾಳಿಗೆ ಮೂಲ ಕಾರಣ ಎಂಬ ವಿಶ್ಲೇಷಣೆಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

ಖರ್ಗೆ ಅವರ ಹೇಳಿಕೆಯನ್ನು ಬೆಂಬಲಿಸಿರುವ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಲೋಟ್, "ಹಿಂದೆ ಕಾಂಗ್ರೆಸ್ ಆರ್‌ಎಸ್‌ಎಸ್ ಬಗ್ಗೆ ಮೃದು ಧೋರಣೆ ಹೊಂದಿದ್ದರಿಂದಲೇ ಅದು ಇಂದು ಇಷ್ಟೊಂದು ಗಟ್ಟಿಯಾಗಿ ಬೆಳೆಯಲು ಸಾಧ್ಯವಾಯಿತು. ಒಂದುವೇಳೆ ಬಿಜೆಪಿ ಇಂದು ತನ್ನ ವಿರೋಧಿಗಳನ್ನು ನಡೆಸಿಕೊಳ್ಳುತ್ತಿರುವ ರೀತಿಯಲ್ಲೇ ಅಂದು ಕಾಂಗ್ರೆಸ್ ಆರ್‌ಎಸ್‌ಎಸ್ ಅನ್ನು ನಡೆಸಿಕೊಂಡಿದ್ದರೆ, ಅದು ಇಷ್ಟೊಂದು ಬಲಿಷ್ಠವಾಗುತ್ತಿರಲಿಲ್ಲ" ಎಂದು ಹೇಳಿದ್ದಾರೆ.

ವಿವಾದಾತ್ಮಕ ಹೋಲಿಕೆ ಹಾಗೂ ದಕ್ಷಿಣದ ಧ್ವನಿ

ಇದೇ ವಿಚಾರವಾಗಿ ಕಾಂಗ್ರೆಸ್‌ನ ಮತ್ತೊಬ್ಬ ಹಿರಿಯ ನಾಯಕ ಪವನ್ ಖೇರಾ ವಿವಾದಾತ್ಮಕ ಹೋಲಿಕೆ ಮಾಡುತ್ತಾ, "ಆರ್‌ಎಸ್‌ಎಸ್ ನೋಂದಣಿ ಮಾಡಿಕೊಳ್ಳಲೇಬೇಕು. ಡಿ-ಕಂಪನಿಯ ದಾವೂದ್ ಗ್ಯಾಂಗ್ ಕೂಡ ನೋಂದಣಿ ಮಾಡಿಕೊಂಡಿಲ್ಲ, ಆ ರೀತಿ ನಿಮ್ಮನ್ನು ಅಂದುಕೊಳ್ಳಲು ಸಾಧ್ಯವಿಲ್ಲ. ನೀವು ಭಾರತದಲ್ಲಿರುವ ಸಂಸ್ಥೆಯಾಗಿದ್ದರೆ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಲೇಬೇಕು. ಆರ್‌ಎಸ್‌ಎಸ್ ನೋಂದಣಿಯಾಗಿಲ್ಲ ಎಂದರೆ ಅದರ ಅರ್ಥವೇನು?" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಭಾರತದಲ್ಲೂ ಈ ಚರ್ಚೆ ಜೋರಾಗಿದ್ದು, ಡಿಎಂಕೆ ಹಿರಿಯ ನಾಯಕ ಟಿ.ಕೆ.ಎಸ್. ಇಳಂಗೋವನ್ ಆರ್‌ಎಸ್‌ಎಸ್ ನಿಷೇಧದ ಇತಿಹಾಸವನ್ನು ನೆನಪಿಸಿದ್ದಾರೆ.

"ಆರ್‌ಎಸ್‌ಎಸ್ ಒಂದು ಅಪಾಯಕಾರಿ ಸಂಘಟನೆ. ಮಹಾತ್ಮಾ ಗಾಂಧೀಜಿಯವರ ಹತ್ಯೆಯ ಬಳಿಕ ಆರ್‌ಎಸ್‌ಎಸ್ ಅನ್ನು ನಿಷೇಧಿಸಲಾಗಿತ್ತು, ಹಿಂದೂ ಧರ್ಮವನ್ನಲ್ಲ. ಆರ್‌ಎಸ್‌ಎಸ್ ಮತ್ತು ಹಿಂದೂ ಧರ್ಮ ಎರಡೂ ಒಂದೇ ಅಲ್ಲ. ರಾಜಕೀಯ ಪಕ್ಷಗಳು ಚುನಾವಣಾ ಆಯೋಗದಲ್ಲಿ ನೋಂದಾಯಿಸಿಕೊಳ್ಳುವಂತೆ ಆರ್‌ಎಸ್‌ಎಸ್ ಕೂಡ ತನ್ನನ್ನು ನೋಂದಾಯಿಸಿಕೊಳ್ಳಬೇಕು. ಅವರು ನಿಧಿ ಸಂಗ್ರಹಿಸುತ್ತಿಲ್ಲ ಎಂದು ಹೇಳಲು ಸಾಧ್ಯವಿಲ್ಲ, ಏಕೆಂದರೆ ಅವರಿಗೆ ದೊಡ್ಡ ಮಟ್ಟದಲ್ಲಿ ಧನಸಹಾಯ ಸಿಗುತ್ತಿದೆ" ಎಂದು ಅವರು ಆರೋಪಿಸಿದ್ದಾರೆ.

ತಿರುಗೇಟು ನೀಡಿದ ಬಿಜೆಪಿ ಮತ್ತು ಬಲಪಂಥೀಯ ಪಡೆ

ಮತ್ತೊಂದೆಡೆ, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ಈ ಸರಣಿ ಆರೋಪಗಳನ್ನು ಬಿಜೆಪಿ ಹಾಗೂ ಬಲಪಂಥೀಯ ಸಂಘಟನೆಗಳು ಕಡಾಖಂಡಿತವಾಗಿ ಖಂಡಿಸಿವೆ. "ಕಾಂಗ್ರೆಸ್ ಇಂದಿಗೂ ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಯ ಗುಲಾಮಿ ಹಾಗೂ ವಸಾಹತುಶಾಹಿ ಮನಸ್ಥಿತಿಯಲ್ಲೇ ಬದುಕುತ್ತಿದೆ. ಆರ್‌ಎಸ್‌ಎಸ್‌ನಂತಹ ಸಮಾಜಮುಖಿ ಸಂಘಟನೆಯ ಬೆಳವಣಿಗೆಯನ್ನು ಸಹಿಸಿಕೊಳ್ಳಲು ಅದಕ್ಕೆ ಸಾಧ್ಯವಾಗುತ್ತಿಲ್ಲ. ತನ್ನ ರಾಜಕೀಯ ಪತನಕ್ಕೆ ಆರ್‌ಎಸ್‌ಎಸ್ ಕಾರಣ ಎಂಬ ಹತಾಶೆಯಿಂದ ಕಾಂಗ್ರೆಸ್ ಇಂತಹ ಆರೋಪಗಳನ್ನು ಮಾಡುತ್ತಿದೆ" ಎಂದು ಬಿಜೆಪಿ ನಾಯಕರು ವಿವಿಧ ವೇದಿಕೆಗಳಲ್ಲಿ ತಿರುಗೇಟು ನೀಡಿದ್ದಾರೆ.

ರಾಜಕೀಯ ತಂತ್ರಗಾರಿಕೆ ಮತ್ತು ಭವಿಷ್ಯದ ಲೆಕ್ಕಾಚಾರ

ವಿಶ್ಲೇಷಕರ ಪ್ರಕಾರ, ಕರ್ನಾಟಕದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಂತಹ ನಾಯಕರು ಮೃದು ಹಿಂದುತ್ವದ ನಿಲುವು ಹೊಂದಿರುವ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಪ್ರಬಲ ಆರ್‌ಎಸ್‌ಎಸ್ ವಿರೋಧಿ ಸಿದ್ಧಾಂತವನ್ನು ಜೀವಂತವಾಗಿಡಲು ಹೈಕಮಾಂಡ್ ಪ್ರಿಯಾಂಕ್ ಖರ್ಗೆ ಮತ್ತು ಬಿ.ಕೆ. ಹರಿಪ್ರಸಾದ್ ಅವರಂತಹ ನಾಯಕರನ್ನು ಮುಂಚೂಣಿಗೆ ತಂದಿದೆ.

ಬಿಜೆಪಿಯ ಮತಬ್ಯಾಂಕ್ ಆಗಿರುವ ಆರ್‌ಎಸ್‌ಎಸ್ ಸಿದ್ಧಾಂತವನ್ನೇ ನೇರವಾಗಿ ಪ್ರಶ್ನಿಸುವ ಮೂಲಕ ಬಿಜೆಪಿಯ ಅಡಿಪಾಯ ಅಲ್ಲಾಡಿಸುವುದು ಕಾಂಗ್ರೆಸ್‌ನ ಈ ದ್ವಿಮುಖ ಹೋರಾಟದ ತಂತ್ರವಾಗಿದೆ. ಆದರೆ, ಉತ್ತರ ಭಾರತದ ಹಿಂದಿ ಬೆಲ್ಟ್‌ನಲ್ಲಿ ಆರ್‌ಎಸ್‌ಎಸ್ ಹೊಂದಿರುವ ಹಿಡಿತದ ಹಿನ್ನೆಲೆಯಲ್ಲಿ ಈ ಸೈದ್ಧಾಂತಿಕ ಹೋರಾಟ ಕಾಂಗ್ರೆಸ್‌ಗೆ ರಾಜಕೀಯವಾಗಿ ಲಾಭ ತರುತ್ತದೆಯೇ ಅಥವಾ ಹಿನ್ನಡೆ ಉಂಟುಮಾಡುತ್ತದೆಯೇ ಎಂಬುದನ್ನು ಭವಿಷ್ಯವೇ ನಿರ್ಧರಿಸಬೇಕಿದೆ.

Read More
Next Story