
ಸೈಬರ್ ವಂಚಕರಿಗೆ ಪೊಲೀಸರ 'ಡಿಜಿಟಲ್ ಬ್ರೇಕ್': 216 ಕೋಟಿ ಹಣ ರಕ್ಷಿಸಿ ದಾಖಲೆ
ಸೈಬರ್ ವಂಚನೆಗಳು ವಂಚಕರಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ಅತ್ಯಾಧುನಿಕ ತಂತ್ರಜ್ಞಾನ ಮತ್ತು ದಿಟ್ಟ ಕ್ರಮಗಳ ಮೂಲಕ ರಾಜ್ಯವನ್ನು ಸೈಬರ್ ಸುರಕ್ಷಿತ ತಾಣವನ್ನಾಗಿ ಪರಿವರ್ತಿಸುತ್ತಿದೆ.
ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಸೈಬರ್ ವಂಚನೆಗಳು ಹೊಸ ರೂಪ ಪಡೆಯುತ್ತಿದ್ದು, ನಾಗರಿಕರ ಕಷ್ಟದ ದುಡಿಮೆಯ ಹಣವನ್ನು ಲಪಟಾಯಿಸುವುದು ವಂಚಕರಿಗೆ ಹವ್ಯಾಸವಾಗಿದೆ. ಆದರೆ, ಇಂತಹ ವಂಚಕರಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ಅತ್ಯಾಧುನಿಕ ತಂತ್ರಜ್ಞಾನ ಮತ್ತು ದಿಟ್ಟ ಕ್ರಮಗಳ ಮೂಲಕ ರಾಜ್ಯವನ್ನು ಸೈಬರ್ ಸುರಕ್ಷಿತ ತಾಣವನ್ನಾಗಿ ಪರಿವರ್ತಿಸುತ್ತಿದೆ. ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿರುವ ಪೊಲೀಸ್ ವೈರ್‌ಲೆಸ್ ಕೇಂದ್ರ ಕಚೇರಿಗೆ ಭೇಟಿ ನೀಡಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯದ ಸೈಬರ್ ತನಿಖಾ ಸಾಧನೆಗಳನ್ನು ಹೆಮ್ಮೆಯಿಂದ ಹಂಚಿಕೊಂಡಿದ್ದಾರೆ.
ಸೈಬರ್ ವಂಚನೆಗೊಳಗಾದ ಹಣವನ್ನು ಬ್ಯಾಂಕ್ ಖಾತೆಗಳಲ್ಲಿ ಲೀನ್ ಮಾರ್ಕ್ ಅಂದರೆ ತಕ್ಷಣವೇ ಫ್ರೀಜ್ ಮಾಡುವ ಪ್ರಕ್ರಿಯೆಯಲ್ಲಿ ಕರ್ನಾಟಕವು ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ವಂಚನೆಗೊಳಗಾದ ಹಣವನ್ನು ಬ್ಯಾಂಕುಗಳಲ್ಲೇ ತಡೆಹಿಡಿಯುವಲ್ಲಿ ಪೊಲೀಸ್ ಇಲಾಖೆಯು ಅತ್ಯಂತ ವೇಗವಾಗಿ ಕಾರ್ಯನಿರ್ವಹಿಸುತ್ತಿದೆ. ಕರ್ನಾಟಕದಲ್ಲಿ ವರದಿಯಾದ 2,640 ಕೋಟಿ ರೂ. ವಂಚನೆ ಪ್ರಕರಣಗಳ ಪೈಕಿ 436 ಕೋಟಿ ಅಂದರೆ ಸುಮಾರು ಶೇ.17 ಹಣವನ್ನು ಯಶಸ್ವಿಯಾಗಿ ಬ್ಲಾಕ್ ಮಾಡಲಾಗಿದೆ. ಇದು ಮಹಾರಾಷ್ಟ್ರದ ಸಾಧನೆಗೆ (ಶೇ.17) ಸಮನಾಗಿದ್ದು, ದೇಶದ ಪ್ರಮುಖ ರಾಜ್ಯಗಳ ಸಾಲಿನಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ವಿಶೇಷವಾಗಿ 2026ರ ಮೊದಲ 5 ತಿಂಗಳ ಅಂಕಿ-ಅಂಶಗಳನ್ನು ಗಮನಿಸಿದರೆ, 807 ಕೋಟಿ ರೂ. ವಂಚನೆ ಪ್ರಕರಣಗಳಲ್ಲಿ ಶೇ. 27ರಷ್ಟು ಅಂದರೆ 216 ಕೋಟಿ ರೂ. ಹಣವನ್ನು ವಂಚಕರ ಕೈಸೇರದಂತೆ ತಡೆಯಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ತಂತ್ರಜ್ಞಾನವೇ ಅಸ್ತ್ರ: ವಾಟ್ಸಾಪ್ ಮತ್ತು ವೆಬ್ ಚಾಟ್‌ಬಾಟ್‌ಗಳ ಬಳಕೆ
ಸಾರ್ವಜನಿಕರು ದೂರು ನೀಡಲು ಪೊಲೀಸ್ ಠಾಣೆಗೆ ಅಲೆಯುವ ಅವಶ್ಯಕತೆ ಇಲ್ಲದಂತೆ ಮಾಡಲು ಇಲಾಖೆಯು ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿದೆ. 2025ರ ವೆಬ್-ಆಧಾರಿತ ಕಂಪ್ಲೇಂಟ್ ಬಾಟ್ ದೂರುದಾರರು ನೇರವಾಗಿ ಆನ್‌ಲೈನ್ ಮೂಲಕ ದೂರು ದಾಖಲಿಸಲು ಅವಕಾಶ ನೀಡಲಾಯಿತು. 2026ರ ವಾಟ್ಸಾಪ್ ಕಂಪ್ಲೇಂಟ್ ಬಾಟ್ ವಾಟ್ಸಾಪ್ ಸಾಮಾನ್ಯ ಜನರ ಅವಿಭಾಜ್ಯ ಅಂಗವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ವಾಟ್ಸಾಪ್ ಮೂಲಕವೇ ದೂರು ನೀಡುವ ಸೌಲಭ್ಯವನ್ನು ಸರ್ಕಾರ ಪರಿಚಯಿಸಿತು. ಕರೆಗಳನ್ನು ಸ್ವಯಂಚಾಲಿತವಾಗಿ ನಿರ್ವಹಿಸಲು ಮತ್ತು ಆದ್ಯತೆಯ ಮೇರೆಗೆ ಕರೆಗಳನ್ನು ವಿಂಗಡಿಸಲು ಐವಿಆರ್‌ಎಸ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಆಟೋ-ಲಿಂಕ್ ಸೌಲಭ್ಯ ದೂರುದಾರರ ಕರೆ ಕಟ್ ಆದರೂ, ತಕ್ಷಣವೇ ಅವರಿಗೆ ದೂರು ಅಪ್‌ಲೋಡ್ ಮಾಡಲು ಲಿಂಕ್ ಕಳುಹಿಸುವ ಸ್ವಯಂಚಾಲಿತ ಬಾಟ್ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.
ವಿಶೇಷ ತರಬೇತಿ - ಪ್ರತ್ಯೇಕ ತಂಡಗಳ ರಚನೆ
ಕೇವಲ ತಂತ್ರಜ್ಞಾನ ಅಳವಡಿಸಿದರೆ ಸಾಲದು, ಅದನ್ನು ನಿರ್ವಹಿಸುವ ಅಧಿಕಾರಿಗಳು ಪರಿಣತರಾಗಿರಬೇಕು. ಈ ಉದ್ದೇಶದಿಂದ ಇಲಾಖೆಯು ಕೆಲವು ಕ್ರಮಗಳನ್ನು ಕೈಗೊಂಡಿದೆ. ವಂಚನೆಯಾದ ಹಣವನ್ನು ತಕ್ಷಣವೇ ಫ್ರೀಜ್ ಮಾಡಲು ಪ್ರತ್ಯೇಕ ತಂಡಗಳ ರಚನೆ. ಬ್ಯಾಂಕುಗಳೊಂದಿಗೆ ನಿರಂತರ ಸಂಪರ್ಕದಲ್ಲಿರಲು, ಸಿಸಿಟಿವಿ ದೃಶ್ಯಾವಳಿಗಳನ್ನು ವಶಪಡಿಸಿಕೊಳ್ಳಲು ಮತ್ತು ಎಫ್‌ಐಆರ್ ದಾಖಲಿಸಲು ವಿಶೇಷ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಕೇಂದ್ರ ಸರ್ಕಾರದ ಸೈಬರ್ ಕ್ರೈಮ್ ಕೋಆರ್ಡಿನೇಷನ್ ಸೆಂಟರ್ ಬಳಸುವ ಬಗ್ಗೆ ವೈರ್‌ಲೆಸ್ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗಿದೆ. 51 ಪಿಎಸ್ಐಗಳು ಮತ್ತು ಹೆಡ್ ಕಾನ್‌ಸ್ಟೆಬಲ್‌ಗಳನ್ನು ವಿಶೇಷವಾಗಿ ಈ ಕಾರ್ಯಕ್ಕಾಗಿ ನೇಮಿಸಲಾಗಿದೆ. 2026ರಲ್ಲಿ (ಜನವರಿ-ಮೇ) ಕೇವಲ ಐದು ತಿಂಗಳ ಅವಧಿಯಲ್ಲಿ ಸುಮಾರು 10,33,352 ಕರೆಗಳು ಪೊಲೀಸ್ ವೈರ್‌ಲೆಸ್ ಘಟಕಕ್ಕೆ ಬಂದಿವೆ. ಇದರಲ್ಲಿ 90,225 ದೂರುಗಳು ದಾಖಲಾಗಿವೆ. ದೂರುಗಳ ಸಂಖ್ಯೆಯಲ್ಲಿನ ಈ ಏರಿಕೆಯು ಸಾರ್ವಜನಿಕರಲ್ಲಿ ಜಾಗೃತಿ ಮೂಡಿರುವುದನ್ನು ಸೂಚಿಸುವುದಲ್ಲದೆ, ದೂರು ನೀಡುವ ವ್ಯವಸ್ಥೆ ಎಷ್ಟು ಸುಲಭವಾಗಿದೆ ಎಂಬುದನ್ನು ಸಾಬೀತುಪಡಿಸುತ್ತದೆ.
ಮುಂದಿನ ದಾರಿ: ವೈರ್‌ಲೆಸ್ ಘಟಕದ ಆಧುನೀಕರಣ
ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯದ ಪೊಲೀಸ್ ವೈರ್‌ಲೆಸ್ ವ್ಯವಸ್ಥೆಯನ್ನು ಇಂದಿನ ಸೈಬರ್ ಯುಗಕ್ಕೆ ಅನುಗುಣವಾಗಿ ಮತ್ತಷ್ಟು ಬಲಪಡಿಸಬೇಕಾದ ಅಗತ್ಯವಿದೆ ಎಂದು ಹೇಳಿದರು. ಹಳೆ ಕಾಲದ ವೈರ್‌ಲೆಸ್ ಅನ್ನು ಅತ್ಯಾಧುನಿಕ ಡಿಜಿಟಲ್ ತಂತ್ರಜ್ಞಾನದೊಂದಿಗೆ ಸಂಯೋಜಿಸುವುದರಿಂದ, ಸೈಬರ್ ವಂಚಕರನ್ನು ಪತ್ತೆ ಹಚ್ಚುವ ಪ್ರಕ್ರಿಯೆ ಇನ್ನಷ್ಟು ಚುರುಕುಗೊಳ್ಳಲಿದೆ. ಸೈಬರ್ ವಂಚನೆಗಳು ದಿನದಿಂದ ದಿನಕ್ಕೆ ಸಂಕೀರ್ಣವಾಗುತ್ತಿವೆ. ಸರ್ಕಾರವು ಎಷ್ಟು ಕ್ರಮಗಳನ್ನು ಕೈಗೊಂಡರೂ, ಸಾರ್ವಜನಿಕರ ಜಾಗೃತಿಯೇ ಪ್ರಥಮ ರಕ್ಷಾ ಕವಚವಾಗಿದೆ. ಅಜ್ಞಾತ ಲಿಂಕ್‌ಗಳನ್ನು ಕ್ಲಿಕ್ ಮಾಡದಿರುವುದು, ಒಟಿಪಿ ಹಂಚಿಕೊಳ್ಳದಿರುವುದು ಮತ್ತು ಯಾವುದೇ ಅನುಮಾನಾಸ್ಪದ ಕರೆ ಬಂದ ತಕ್ಷಣ 1930 ಸೈಬರ್ ಕ್ರೈಮ್ ಸಹಾಯವಾಣಿಗೆ ಕರೆ ಮಾಡುವುದು ಅತ್ಯಗತ್ಯ ಎಂದು ಹೇಳಿದರು.

