ರಾಮಮಂದಿರ ಹೆಸರಲ್ಲಿ ರಾಜಕೀಯ ಅಸ್ತಿತ್ವ ಪಡೆದ ಮೋದಿ, ಬಿಜೆಪಿ; ಪ್ರಿಯಾಂಕ್‌ ಖರ್ಗೆ ವಾಗ್ದಾಳಿ
x

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ

ರಾಮಮಂದಿರ ಹೆಸರಲ್ಲಿ ರಾಜಕೀಯ ಅಸ್ತಿತ್ವ ಪಡೆದ ಮೋದಿ, ಬಿಜೆಪಿ; ಪ್ರಿಯಾಂಕ್‌ ಖರ್ಗೆ ವಾಗ್ದಾಳಿ

ಅಯೋಧ್ಯೆಯ ದೇಣಿಗೆ ಕಳ್ಳತನ ಪ್ರಕರಣವನ್ನು ತೇಲಿಸಲು ಮುಂದಾಗಿರುವುದು ಅವರ ಅವಕಾಶವಾದ ರಾಜಕಾರಣ ಮಾತ್ರವಲ್ಲದೆ ಅಧಿಕಾರದ ಹಸಿವು ಮತ್ತು ಕೋಟ್ಯಂತರ ಜನರ ನಂಬಿಕೆಗಳ ದುರುಪಯೋಗವನ್ನೂ ಬಹಿರಂಗಪಡಿಸುತ್ತದೆ ಎಂದು ಖರ್ಗೆ ಟೀಕಿಸಿದ್ದಾರೆ.


ಬಿಜೆಪಿ ಮತ್ತು ನರೇಂದ್ರ ಮೋದಿ ಅವರು ತಮ್ಮ ರಾಜಕೀಯ ಅಸ್ತಿತ್ವವನ್ನು ರಾಮ ಮಂದಿರದ ಹೆಸರಿನಲ್ಲಿ ನಿರ್ಮಿಸಿಕೊಂಡಿದ್ದಾರೆ ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಗಂಭೀರ ಆರೋಪ ಮಾಡಿದ್ದಾರೆ.

1990 ರ ದಶಕದಿಂದಲೂ ಆರ್‌ಎಸ್‌ಎಸ್‌ನ ಪ್ರಮುಖ ಉದ್ದೇಶ ರಾಮ ಮಂದಿರವಾಗಿತ್ತು. ಈಗ ದೇಣಿಗೆ ಕಳವಿನ ಮುಜುಗರದಿಂದ ಪಾರಾಗಲು ಯತ್ನಿಸುತ್ತಿರುವುದು ಸ್ಪಷ್ಟವಾಗಿದೆ. ರಾಮ ಮಂದಿರ ದೇಣಿಗೆ ಕಳ್ಳತನದ ಬಗ್ಗೆ ಜನರಿಗೆ ಸಂಯಮದ ಪಾಠ ಹೇಳುತ್ತಿರುವುದು ಅವರ ನಿಜವಾದ ಮುಖವನ್ನು ಅನಾವರಣಗೊಳಿಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣ ʼಎಕ್ಸ್‌ʼ ಖಾತೆಯಲ್ಲಿ ಆರ್‌ಎಸ್‌ಎಸ್ ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರ ಹೇಳಿಕೆ ಉಲ್ಲೇಖಿಸಿ ಪೋಸ್ಟ್‌ ಮಾಡಿರುವ ಅವರು, ಈಗಾಗಲೇ ರಾಮಮಂದಿರದ ಹೆಸರಲ್ಲಿ ಆರ್‌ಎಸ್‌ಎಸ್‌ ಹಾಗೂ ಬಿಜೆಪಿಯು ಪ್ರಶ್ನಾತೀತ, ಅಚಲ ಶಕ್ತಿ ಪಡೆದುಕೊಂಡಿದೆ. ಜನರು ಪ್ರಶ್ನೆ ಮಾಡುವುದನ್ನು ಅವರು ಬಯಸುವುದಿಲ್ಲ. ಇಬ್ಬರೂ ರಾಮನ ಹೆಸರಿನಲ್ಲಿ ರಾಜಕೀಯ ಅಸ್ತಿತ್ವ ಕಂಡುಕೊಂಡು, ಆರ್ಥಿಕವಾಗಿ ಶ್ರೀಮಂತರಾಗಿದ್ದಾರೆ ಎಂದು ದೂರಿದ್ದಾರೆ.

ಅಯೋಧ್ಯೆಯ ದೇಣಿಗೆ ಕಳ್ಳತನ ಪ್ರಕರಣವನ್ನು ತೇಲಿಸಲು ಮುಂದಾಗಿರುವುದು ಅವರ ಅವಕಾಶವಾದ ರಾಜಕಾರಣ ಮಾತ್ರವಲ್ಲದೆ ಅಧಿಕಾರದ ಹಸಿವು ಮತ್ತು ಕೋಟ್ಯಂತರ ಜನರ ನಂಬಿಕೆಗಳ ದುರುಪಯೋಗವನ್ನೂ ಬಹಿರಂಗಪಡಿಸುತ್ತದೆ ಎಂದು ಖರ್ಗೆ ಟೀಕಿಸಿದ್ದಾರೆ.

ಬಿಜೆಪಿ ಮತ್ತು ಆರ್‌ಎಸ್‌ಎಸ್‌ಗೆ ರಾಮ ಮಂದಿರ ಎಂದಿಗೂ ನಂಬಿಕೆಯಾಗಿರಲಿಲ್ಲ. ಅದು ಯಾವಾಗಲೂ ಅಧಿಕಾರ ಮತ್ತು ಹಣದ ಯಂತ್ರವಾಗಿತ್ತು. 1990ರ ದಶಕದ ರಾಮಜನ್ಮಭೂಮಿ ಹೋರಾಟದ ದಿನಗಳನ್ನು ಸ್ಮರಿಸಿದ ಸಚಿವರು, ಅಂದಿನಿಂದಲೂ ಆರ್ಎಸ್ಎಸ್‌ನವರು ರಾಮಮಂದಿರವನ್ನೇ ಕೇಂದ್ರವಾಗಿಟ್ಟುಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಾ ಬಂದಿದ್ದಾರೆ. ಈಗ ಕೋಟ್ಯಂತರ ಭಕ್ತರು ಶ್ರದ್ಧೆಯಿಂದ ನೀಡಿದ ಹುಂಡಿ ಹಣಕ್ಕೇ ಕನ್ನ ಬಿದ್ದಿರುವುದು ಇವರ ನೈತಿಕತೆಗೆ ಹಿಡಿದ ಕನ್ನಡಿಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಈ ಹಗರಣದ ಕುರಿತು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ಅವರು ಮೌನ ಮುರಿಯಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತಿದ್ದು, ಸಚಿವ ಪ್ರಿಯಾಂಕ್ ಖರ್ಗೆ ಅವರ ಈ ಹೇಳಿಕೆ ರಾಜ್ಯ ರಾಜಕಾರಣದಲ್ಲೂ ಭಾರಿ ಸಂಚಲನ ಮೂಡಿಸಿದೆ.

Read More
Next Story