ಗಣೇಶೋತ್ಸವ ಗದ್ದಲ| ನಾನು ಜೈಲಿಗೆ ಹೋಗೋಕೆ ರೆಡಿ;  ಖರ್ಗೆಗೇಕೆ ಕನಸಲ್ಲೂ ಪರಪ್ಪನ ಅಗ್ರಹಾರದ ಭೀತಿ ಎಂದ ಪ್ರತಾಪ್‌ ಸಿಂಹ
x

ಗಣೇಶೋತ್ಸವ ಗದ್ದಲ| ನಾನು ಜೈಲಿಗೆ ಹೋಗೋಕೆ ರೆಡಿ; ಖರ್ಗೆಗೇಕೆ ಕನಸಲ್ಲೂ ಪರಪ್ಪನ ಅಗ್ರಹಾರದ ಭೀತಿ ಎಂದ ಪ್ರತಾಪ್‌ ಸಿಂಹ

ನಮ್ಮದೇ ದೇಶದಲ್ಲಿ ಮತ್ತು ನಮ್ಮದೇ ನೆಲದಲ್ಲಿ ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸಲು ಹಿಂದೂಗಳು ಗೋಗರೆಯಬೇಕಾದ ಪರಿಸ್ಥಿತಿ ಬಂದಿರುವುದು ಅತ್ಯಂತ ದುರ್ದೈವ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.


ಗಣೇಶೋತ್ಸವ ಆಚರಣೆಗಾಗಿ ಜೈಲಿಗೆ ಹೋಗುವುದಕ್ಕೂ ಸಿದ್ಧ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಗೃಹ ಸಚಿವರ ಎಚ್ಚರಿಕೆಗೆ ತಿರುಗೇಟು ನೀಡಿದ್ದಾರೆ. ಗಣೇಶೋತ್ಸವಕ್ಕೆ ಅಡ್ಡಿಪಡಿಸಿದರೆ ಪೊಲೀಸ್ ಠಾಣೆಗೆ ನುಗ್ಗುತ್ತೇವೆ ಎಂಬ ತಮ್ಮ ಹೇಳಿಕೆಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆ ನೀಡಿದ್ದರು. ನೀವು ಠಾಣೆಗೆ ನುಗ್ಗಿದ ಬಳಿಕ ಸೀದಾ ಪರಪ್ಪನ ಅಗ್ರಹಾರಕ್ಕೆ ಕಳುಹಿಸುವ ವ್ಯವಸ್ಥೆಯನ್ನು ಉಚಿತವಾಗಿ ಮಾಡುತ್ತೇವೆ ಎಂದು ತಿರುಗೇಟು ನೀಡಿದ್ದರು.

ಗೃಹ ಸಚಿವರ ಈ ಎಚ್ಚರಿಕೆಗೆ ಭಾನುವಾರ ಮೈಸೂರಿನಲ್ಲಿ ಪ್ರತಿಕ್ರಿಯಿಸಿರುವ ಪ್ರತಾಪ್ ಸಿಂಹ, ನನ್ನ ಮೇಲೆ 21 ಎಫ್ಐಆರ್‌ಗಳಿವೆ. ಇನ್ನೊಂದು ಕೇಸ್ ಹಾಕಿದರೂ ತಲೆ ಕೆಡಿಸಿಕೊಳ್ಳಲ್ಲ. ವಿಜೃಂಭಣೆಯ ಗಣೇಶೋತ್ಸವಕ್ಕಾಗಿ ಜೈಲಿಗೆ ಹೋಗಲೂ ಸಿದ್ಧ ಎಂದು ತಿರುಗೇಟು ಕೊಟ್ಟಿದ್ದಾರೆ.

ಎಚ್.ಡಿ. ಕುಮಾರಸ್ವಾಮಿ ಅವರು ಕೆಪಿಎಸ್ಸಿ ಹಗರಣದ ಬಗ್ಗೆ ಮಾತಾಡಿದ ಮೇಲೆ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಪರಪ್ಪನ ಅಗ್ರಹಾರ ಸೇರುವ ಸ್ಥಿತಿಯಲ್ಲಿದ್ದಾರೆ. ಆದ್ದರಿಂದಲೇ ಅವರಿಗೆ ಕನಸಿನಲ್ಲೂ ಬರೀ ಪರಪ್ಪನ ಅಗ್ರಹಾರವೇ ಬರ್ತಿದೆ ಎಂದು ವ್ಯಂಗ್ಯವಾಡಿದ್ದಾರೆ. ಯುವಕರಿಗೆ ಧಮಕಿ ಹಾಕಿದ ಟಿ.ನರಸೀಪುರ ಇನ್‌ಸ್ಪೆಕ್ಟರ್‌ ಧನಂಜಯ್‌ಗೆ ಕ್ಲಾಸ್ ತೆಗೆದುಕೊಳ್ಳಲು ಟಿ.ನರಸೀಪುರಕ್ಕೆ ವಿಪಕ್ಷ ನಾಯಕ ಆರ್. ಅಶೋಕ್ ಅವರೇ ಬರುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಪೊಲೀಸ್ ಠಾಣೆಗೆ ನುಗ್ಗುತ್ತೇವೆ ಎಂಬ ಪ್ರತಾಪ್ ಸಿಂಹ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಪ್ರಿಯಾಂಕ್ ಖರ್ಗೆ, ಮೈಸೂರಿನ ಪೇಟೆ ರೌಡಿಯೊಬ್ಬ ಪೊಲೀಸರನ್ನು ಬೆದರಿಸುವ ಮಾತಾಡಿದ್ದಾನೆ. ಠಾಣೆಗೆ ನುಗ್ಗುತ್ತೇನೆ ಎಂದಿರುವ ಆ ವ್ಯಕ್ತಿಗೆ ಮುಕ್ತ ಆಹ್ವಾನವಿದೆ. ಠಾಣೆಗೆ ನುಗ್ಗಿದ ಬಳಿಕ ಸೀದಾ ಪರಪ್ಪನ ಅಗ್ರಹಾರಕ್ಕೆ ನುಗ್ಗಿಸುವ ವ್ಯವಸ್ಥೆ ಉಚಿತವಾಗಿ ಕಲ್ಪಿಸಲಾಗುತ್ತೆ. ಪೊಲೀಸರ ಕರ್ತವ್ಯಕ್ಕೆ ಯಾರೇ ಅಡ್ಡಿಪಡಿಸಿದರೂ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಸಮಾಜದ ಸ್ವಾಸ್ಥ್ಯ ಕದಡುವ ಪ್ರಯತ್ನ ಸಹಿಸುವುದಿಲ್ಲ. ಪೊಲೀಸರ ನೈತಿಕ ಸ್ಥೈರ್ಯ ಕಸಿಯುವುದಕ್ಕೆ ಬಿಡುವುದಿಲ್ಲ ಎಂದು ಹೇಳಿದ್ದರು.

ಇನ್‌ಸ್ಪೆಕ್ಟರ್ ಅಮಾನತಿಗೆ ಆಗ್ರಹ

ಈ ಮಧ್ಯೆ, ಟಿ. ನರಸೀಪುರ ಠಾಣೆಯ ಇನ್‌ಸ್ಪೆಕ್ಟರ್‌ ಧನಂಜಯ್ ಅವರನ್ನು ತಕ್ಷಣವೇ ಸೇವೆಯಿಂದ ಅಮಾನತು ಮಾಡುವಂತೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಹಬ್ಬ ಆಚರಿಸಲು ಬಂದ ಯುವಕರಿಗೆ ಸಾರ್ವಜನಿಕವಾಗಿ ಇನ್‌ಸ್ಪೆಕ್ಟರ್ ಧಮ್ಕಿ ಹಾಕಿರುವುದು ಅಕ್ಷಮ್ಯ ಅಪರಾಧ. ನಮ್ಮದೇ ದೇಶದಲ್ಲಿ ಮತ್ತು ನಮ್ಮದೇ ನೆಲದಲ್ಲಿ ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸಲು ಹಿಂದೂಗಳು ಗೋಗರೆಯಬೇಕಾದ ಪರಿಸ್ಥಿತಿ ಬಂದಿರುವುದು ಅತ್ಯಂತ ದುರ್ದೈವ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಸಾರ್ವಜನಿಕವಾಗಿ ಯುವಕರಿಗೆ ಬೆದರಿಕೆ ಹಾಕುವಷ್ಟು ಧೈರ್ಯ ಆ ಅಧಿಕಾರಿಗೆ ಎಲ್ಲಿಂದ ಬಂತು ಎಂದು ಪ್ರಶ್ನಿಸಿರುವ ಅವರು, ಇದು ಪೊಲೀಸ್ ಇಲಾಖೆಗೆ ಗೃಹ ಸಚಿವರು ನೀಡಿದ ಅಧಿಕಾರವೋ ಅಥವಾ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ತುಷ್ಟಿಕರಣ ರಾಜಕಾರಣದ ಫರ್ಮಾನೋ? ಎಂದು ಕಿಡಿಕಾರಿದ್ದಾರೆ.

ಇನ್ನೊಂದೆಡೆ ಟಿ. ನರಸೀಪುರದಲ್ಲಿ ಗಣೇಶ ಮೂರ್ತಿ ಮೆರವಣಿಗೆ ಹಾಗೂ ಆಚರಣೆಯ ಮಾರ್ಗಗಳ ಮೇಲೆ ಪೊಲೀಸ್ ಇಲಾಖೆ ವಿಧಿಸಿರುವ ಷರತ್ತುಗಳನ್ನು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಖಂಡಿಸಿದ್ದಾರೆ.

ಮಸೀದಿ ಅಥವಾ ಯಾವುದೇ ಪ್ರಾರ್ಥನಾ ಮಂದಿರಗಳಿರುವ ರಸ್ತೆಗಳಲ್ಲಿ ಗಣೇಶ ಮೆರವಣಿಗೆಗೆ ತಡೆ ಒಡ್ಡುವುದು ಅಥವಾ ಷರತ್ತು ವಿಧಿಸುವುದನ್ನು ಖಂಡಿಸಿರುವ ಅವರು, "ಸಾರ್ವಜನಿಕ ರಸ್ತೆಗಳು ದೇಶದ ಪ್ರತಿಯೊಬ್ಬ ಪ್ರಜೆಗೂ ಸೇರಿದ್ದಾಗಿವೆ. ಸಂವಿಧಾನದಡಿ ಪ್ರತಿಯೊಬ್ಬರಿಗೂ ತಮ್ಮ ಧಾರ್ಮಿಕ ಮೆರವಣಿಗೆ ನಡೆಸುವ ಸಂಪೂರ್ಣ ಹಕ್ಕಿದೆ. ಧಾರ್ಮಿಕ ಸ್ಥಳಗಳ ಆಧಾರದ ಮೇಲೆ ಮೆರವಣಿಗೆ ಮಾರ್ಗ ತಡೆಯುವ ಅಥವಾ ಸೀಮಿತಗೊಳಿಸುವ ನಿರ್ಧಾರವು ನಾಗರಿಕರ ನಡುವೆ ಅನಗತ್ಯ ವಿಭಜನೆ ಹಾಗೂ ತಾರತಮ್ಯದ ಭಾವನೆ ಬಿತ್ತಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

Read More
Next Story