ಪ್ರಚೋದನಕಾರಿ ಭಾಷಣ, ಪೊಲೀಸ್ ಅಧಿಕಾರಿಗೆ ಬೆದರಿಕೆ ಆರೋಪ: ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್
x

ಪ್ರಚೋದನಕಾರಿ ಭಾಷಣ, ಪೊಲೀಸ್ ಅಧಿಕಾರಿಗೆ ಬೆದರಿಕೆ ಆರೋಪ: ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್

ಇನ್ಸ್ ಪೆಕ್ಟರ್ ಧನಂಜಯ ಅವರನ್ನು ನಿಂದಿಸಿದ್ದಲ್ಲದೇ ಹೇ ಅಯೋಗ್ಯ, ಮುಂದಿನ ಒಂದೂವರೆ ವರ್ಷದಲ್ಲಿ ನಾವು ಅಧಿಕಾರಕ್ಕೆ ಬಂದಾಗ ಪ್ರತಿಯೊಂದಕ್ಕೂ ಲೆಕ್ಕ ಚುಕ್ತಾ ಮಾಡುತ್ತೇನೆ ಎಂದು ಪ್ರತಾಪ್ ಸಿಂಹ ಸಾರ್ವಜನಿಕವಾಗಿ ಎಚ್ಚರಿಕೆ ನೀಡಿದ್ದರು.


ಮೈಸೂರಿನ ಟಿ.ನರಸೀಪುರ ಪಟ್ಟಣದಲ್ಲಿ ಆಯೋಜಿಸಿದ್ದ ಗಣೇಶ ಮೂರ್ತಿ ವಿಸರ್ಜನಾ ಶೋಭಾಯಾತ್ರೆ ವೇಳೆ ಕರ್ತವ್ಯನಿರತ ಪೊಲೀಸ್ ಅಧಿಕಾರಿಗೆ ಸಾರ್ವಜನಿಕವಾಗಿ ಬೆದರಿಕೆ ಹಾಕಿ, ಧಾರ್ಮಿಕ ಭಾವನೆ ಕೆರಳಿಸುವ ರೀತಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಇತರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಟಿ.ನರಸೀಪುರದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ಮೆರವಣಿಗೆಯ ಮಾರ್ಗದ ವಿಚಾರವಾಗಿ ಸ್ಥಳೀಯ ಠಾಣಾ ಇನ್ಸ್‌ಪೆಕ್ಟರ್ ಧನಂಜಯ ಹಾಗೂ ಆಯೋಜಕರ ನಡುವೆ ಮಾತಿನ ಚಕಮಕಿ ನಡೆದಿತ್ತು ಎನ್ನಲಾಗಿದೆ.

ಈ ವೇಳೆ ಅಧಿಕಾರಿ ನೀಡಿದ್ದ ಸೂಚನೆಗೆ ಸೆಡ್ಡು ಹೊಡೆದ ಹಿಂದೂ ಮಹಾಸಭಾ ಹಾಗೂ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು, ಮಾಜಿ ಸಂಸದ ಪ್ರತಾಪ್ ಸಿಂಹ ನೇತೃತ್ವದಲ್ಲಿ ಶುಕ್ರವಾರ ಬೃಹತ್ ಗಣೇಶ ಶೋಭಾಯಾತ್ರೆ ಆಯೋಜಿಸಿದ್ದರು.

ಇನ್ಸ್ ಪೆಕ್ಟರ್ ಗೆ ಏಕವಚನದಲ್ಲೇ ವಾಗ್ದಾಳಿ

ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಯಲ್ಲಿ ಸಾಗುತ್ತಿದ್ದಾಗ ಮಸೀದಿಯೊಂದರ ಮುಂಭಾಗದಲ್ಲಿ ಶೋಭಾಯಾತ್ರೆ ತಡೆದು ಪ್ರತಾಪ್ ಸಿಂಹ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದರು. ಈ ವೇಳೆ ಇನ್ಸ್‌ಪೆಕ್ಟರ್ ಧನಂಜಯ ಅವರ ಹೆಸರು ಪ್ರಸ್ತಾಪಿಸಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು.

ಇನ್ಸ್ ಪೆಕ್ಟರ್ ಧನಂಜಯ ಅವರನ್ನು ನಿಂದಿಸಿದ್ದಲ್ಲದೇ ಹೇ ಅಯೋಗ್ಯ, ಮುಂದಿನ ಒಂದೂವರೆ ವರ್ಷದಲ್ಲಿ ನಾವು ಅಧಿಕಾರಕ್ಕೆ ಬಂದಾಗ ಪ್ರತಿಯೊಂದಕ್ಕೂ ಲೆಕ್ಕ ಚುಕ್ತಾ ಮಾಡುತ್ತೇನೆ ಎಂದು ಸಾರ್ವಜನಿಕವಾಗಿ ಎಚ್ಚರಿಕೆ ನೀಡಿದ್ದರು.

ಪೊಲೀಸರಿಂದ ಸ್ವಯಂಪ್ರೇರಿತ ಎಫ್‌ಐಆರ್

ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು, ವಿಭಿನ್ನ ಸಮುದಾಯಗಳ ನಡುವೆ ದ್ವೇಷ ಉತ್ತೇಜಿಸಿದ್ದು ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತಂದ ಹಿನ್ನೆಲೆಯಲ್ಲಿ ಟಿ.ನರಸೀಪುರ ಠಾಣೆ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 132 & 353(1)(b)(c)(ಸಾರ್ವಜನಿಕ ಸೇವಕರ ಕರ್ತವ್ಯ ನಿರ್ವಹಣೆಗೆ ತಡೆ ಹಾಗೂ ಅಡ್ಡಿಪಡಿಸುವಿಕೆ), ಸೆಕ್ಷನ್ 196(1)(a)(b)(ವಿವಿಧ ಗುಂಪುಗಳು ಅಥವಾ ಜಾತಿಗಳ ನಡುವೆ ಶತ್ರುತ್ವ ಮತ್ತು ದ್ವೇಷವನ್ನು ಉತ್ತೇಜಿಸುವುದು), ಸೆಕ್ಷನ್ 299 (ಧಾರ್ಮಿಕ ನಂಬಿಕೆಗಳಿಗೆ ಸಾರ್ವಜನಿಕವಾಗಿ ಅವಮಾನ ಮಾಡುವುದು), ಸೆಕ್ಷನ್ 190, 191, 194(ಅಕ್ರಮ ಕೂಟ ಸೇರಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿ ಶಾಂತಿ ಭಂಗ ತರುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಎಸ್‌ಪಿಗೆ ದೂರು ನೀಡಿದ ಕಾಂಗ್ರೆಸ್

ಪೋಲಿಸ್ ಅಧಿಕಾರಿಗೆ ಬಹಿರಂಗವಾಗಿ ಬೆದರಿಕೆ ಹಾಕಿದ ಪ್ರತಾಪ್ ಸಿಂಹ ಅವರ ನಡವಳಿಕೆಯನ್ನು ಮೈಸೂರು ಜಿಲ್ಲಾ ಕಾಂಗ್ರೆಸ್ ಘಟಕ ತೀವ್ರವಾಗಿ ಖಂಡಿಸಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಯತ್ನಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದೆ.

ಪ್ರಕರಣ ದಾಖಲಾಗಿರುವ ಬೆನ್ನಲ್ಲೇ ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದ್ದು, ತನಿಖೆ ಮುಂದುವರಿದಿದೆ.

Read More
Next Story