
ಎಸ್ಐಆರ್ ಹೆಸರಿನಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ: ಪ್ರಕಾಶ್ ರಾಜ್ ಆಕ್ರೋಶ
ಎಸ್ಐಆರ್ ಎನ್ನುವುದು ಕೇವಲ ಚುನಾವಣಾ ಗೆಲುವಿನ ತಂತ್ರವಲ್ಲ, ಬದಲಿಗೆ ದಲಿತರು, ಆದಿವಾಸಿಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ಮತಗಳೇ ಬೇಡವೆಂಬ ಫ್ಯಾಶಿಸ್ಟ್ ಧೋರಣೆ ಎಂದು ನಟ ಪ್ರಕಾಶ್ ರಾಜ್ ಟೀಕಿಸಿದ್ದಾರೆ.
ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯು ಬಡವರು, ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರನ್ನು ಮತ ಹಕ್ಕಿನಿಂದ ವಂಚಿತರನ್ನಾಗಿಸುವ, ಭಾರತವನ್ನು ಎರಡು ಭಾಗವಾಗಿ ವಿಂಗಡಿಸುವ ಹುನ್ನಾರವಾಗಿದೆ ಎಂದು ಬಹುಭಾಷಾ ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಗಂಭೀರವಾಗಿ ಆರೋಪಿಸಿದ್ದಾರೆ.
ಬೆಂಗಳೂರಿನ ಶಾಸಕರ ಭವನದಲ್ಲಿ 'ಎಸ್ಐಆರ್ ವಿರೋಧಿ ಒಕ್ಕೂಟ' ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಎಸ್ಐಆರ್ ಪರಿಶೋಧನಾ ವರದಿ ಬಿಡುಗಡೆ ಮಾಡಿ ಮಾತನಾಡಿದ್ದಾರೆ.
ಎಸ್ಐಆರ್ ಎನ್ನುವುದು ಕೇವಲ ಚುನಾವಣಾ ಗೆಲುವಿನ ತಂತ್ರವಲ್ಲ, ಬದಲಿಗೆ ದಲಿತರು, ಆದಿವಾಸಿಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ಮತಗಳೇ ಬೇಡವೆಂಬ ಫ್ಯಾಶಿಸ್ಟ್ ಧೋರಣೆ. ಇದು ಕೇವಲ ಮತದಾನದ ಸಮಸ್ಯೆಯಲ್ಲ, ಬದಲಿಗೆ ಸಂವಿಧಾನ, ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವವನ್ನೇ ಕೊಲೆ ಮಾಡುವ ಯತ್ನವಾಗಿದೆ ಎಂದು ಕಿಡಿಕಾರಿದ್ದಾರೆ.
2002ರ ಮ್ಯಾಪಿಂಗ್ ಮತ್ತು ಪದಗಳ ತಪ್ಪುಗಳನ್ನು ಹುಡುಕಿ, ಮನುಷ್ಯರಲ್ಲದ ಯಂತ್ರಗಳ ಮೂಲಕ ಜನರ ಮತಗಳನ್ನು ಡಿಲೀಟ್ ಮಾಡಲಾಗುತ್ತಿದೆ. ಮುಖ್ಯ ಚುನಾವಣಾ ಆಯುಕ್ತರ ಆಯ್ಕೆ ಪ್ರಕ್ರಿಯೆಯೇ ದೋಷಪೂರಿತವಾಗಿದೆ ಪ್ರಕಾಶ್ ರಾಜ್ ಆರೋಪಿಸಿದ್ದಾರೆ.
'ಎದ್ದೇಳು ಕರ್ನಾಟಕ'ದ ನೂರ್ ಶ್ರೀಧರ್ ಮಾತನಾಡಿ, ಅಲ್ಪಸಂಖ್ಯಾತ ಸಮುದಾಯವನ್ನೇ ಗುರಿ ಮಾಡಿಕೊಂಡು ಎಸ್ಐಆರ್ ನಡೆಸಲಾಗುತ್ತಿದೆ. ಚುನಾವಣಾ ಆಯೋಗದ ಅಂಕಿ-ಅಂಶ ಹಾಗೂ ಫೀಲ್ಡ್ ಪರಿಶೋಧನೆ ಪ್ರಕಾರ, ಅತಿಹೆಚ್ಚು ಮತಗಳು ಡಿಲೀಟ್ ಆಗಿರುವುದು ಅಲೆಮಾರಿಗಳು, ಆದಿವಾಸಿಗಳು, ದಲಿತರು ಮತ್ತು ಅತಿಹಿಂದುಳಿದ ಸಮುದಾಯಗಳ ಮತಗಳು. ಕೇಂದ್ರೀಕೃತ ಸಾಫ್ಟ್ವೇರ್ ಬಳಸಿ, ಮನವಿಗೂ ಅವಕಾಶ ನೀಡದೆ ಲಕ್ಷಾಂತರ ಜನರ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದ್ದು, ಇದು ತಲೆಬುಡವಿಲ್ಲದ ಕ್ರಿಮಿನಲ್ ಪ್ರಕ್ರಿಯೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನ್ಯಾ.ಗೋಪಾಲಗೌಡ ಖಂಡನೆ
ಸುಪ್ರೀಂಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಗೋಪಾಲಗೌಡ ಮಾತನಾಡಿ, 75 ವರ್ಷಗಳ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಇಂತಹ ದೊಡ್ಡ ಹಗರಣ ಎಲ್ಲೂ ನಡೆದಿರಲಿಲ್ಲ. ಸಂವಿಧಾನದತ್ತ ಹಕ್ಕುಗಳನ್ನು ಕಸಿದುಕೊಂಡು, ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಕೂಡಲೇ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದೇ ವೇಳೆ ಬಿಡುಗಡೆ ಮಾಡಿದ ಪರಿಶೋಧನಾ ವರದಿಯಲ್ಲಿ ಹಲವು ಹಕ್ಕೊತ್ತಾಯಗಳನ್ನು ಕೇಂದ್ರ , ರಾಜ್ಯ ಸರ್ಕಾರ ಹಾಗೂ ಚುನಾವಣಾ ಆಯೋಗದ ಮುಂದಿಡಲಾಗಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ತಕ್ಷಣ ರಾಜೀನಾಮೆ ನೀಡಬೇಕು. ಎಸ್ಐಆರ್ ಪ್ರಕ್ರಿಯೆಯನ್ನು ಸಂಪೂರ್ಣ ಸ್ಥಗಿತಗೊಳಿಸಿ, ಡಿಲೀಟ್ ಆದ ಮತದಾರರನ್ನು ಮರು ಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಲಾಗಿದೆ.
ಅದೇ ರೀತಿ ಕೇಂದ್ರ ಸರ್ಕಾರವು ಎಸ್ಐಆರ್ ಅನ್ನು ದೇಶದ್ರೋಹಿ ಕೃತ್ಯವೆಂದು ಪರಿಗಣಿಸಿ ಜ್ಞಾನೇಶ್ ಕುಮಾರ್ ವಿರುದ್ಧ ಸಂಸತ್ತಿನಲ್ಲಿ ಪದಚ್ಯುತಿ ಪ್ರಕ್ರಿಯೆ ಜರುಗಿಸಬೇಕು. ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ದೇಶದ ಕ್ಷಮೆ ಯಾಚಿಸಬೇಕು. ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ನಡೆದಿರುವ ಈ ಷಡ್ಯಂತ್ರದ ಕುರಿತು ಚರ್ಚಿಸಲು ವಿಶೇಷ ವಿಧಾನಸಭೆ ಅಧಿವೇಶನ ಕರೆಯಬೇಕು. ದೋಷಪೂರಿತ ಎಸ್ಐಆರ್ ಪಟ್ಟಿಯನ್ನು ರಾಜ್ಯ ಸರ್ಕಾರ ಸಂಪೂರ್ಣವಾಗಿ ತಿರಸ್ಕರಿಸಬೇಕು ಎಂದು ಆಗ್ರಹಿಸಲಾಗಿದೆ.

