
ಎಸ್ಐಆರ್ ಹೆಸರಿನಲ್ಲಿ ಮತದಾರರ ಹಕ್ಕು ಕಸಿಯುವ ಹುನ್ನಾರ: ನಟ ಪ್ರಕಾಶ್ ರಾಜ್ ಕಿಡಿ
ಚುನಾವಣಾ ಆಯೋಗವು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುವ ಬದಲು, ಒಂದು ನಿರ್ದಿಷ್ಟ ಅಜೆಂಡಾದಂತೆ ಕೆಲಸ ಮಾಡುತ್ತಿದೆ ಎಂದು ನಟ ಪ್ರಕಾಶ್ ರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಭುತ್ವದ ಅತಿ ದೊಡ್ಡ ಶಕ್ತಿಯಾದ ಮತದಾನದ ಹಕ್ಕು ಇಂದು ತಂತ್ರಜ್ಞಾನ ಮತ್ತು ಆಡಳಿತಾತ್ಮಕ ಗೊಂದಲಗಳ ನಡುವೆ ನಲುಗುತ್ತಿದೆ ಎಂದು ನಟ ಪ್ರಕಾಶ್ ರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (ಎಸ್ಐಆರ್) ಪ್ರಕ್ರಿಯೆಯು ಅರ್ಹ ಮತದಾರರನ್ನು ಪಟ್ಟಿಯಿಂದ ಹೊರಹಾಕುವ ಹುನ್ನಾರವಾಗಿದೆ. ಈ ಪ್ರಕ್ರಿಯೆಯ ವಿರುದ್ಧ ರಾಜ್ಯಾದ್ಯಂತ ಜನಜಾಗೃತಿ ಮತ್ತು ಪ್ರತಿರೋಧಕ್ಕೆ ಕರೆ ನೀಡಿದ್ದಾರೆ.
ಕೊಪ್ಪಳದ ಶಾದಿ ಮಹಲ್ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಕಾಶ್ ರಾಜ್, ಜಾತ್ಯತೀತ ಪಕ್ಷಗಳು ಮತ್ತು ವಿವಿಧ ನಾಗರಿಕ ಸಂಘಟನೆಗಳ ಸಹಯೋಗದೊಂದಿಗೆ ‘ಎಸ್ಐಆರ್ ಕರ್ನಾಟಕ ಬೇಡ’ ಎಂಬ ಅಭಿಯಾನಕ್ಕೆ ಚಾಲನೆ ನೀಡಿದರು. ಮತದಾರರ ಪಟ್ಟಿಯ ಪರಿಷ್ಕರಣೆ ಎಂಬ ನೆಪದಲ್ಲಿ ಲಕ್ಷಾಂತರ ಜನರನ್ನು ಮತದಾನದ ಹಕ್ಕಿನಿಂದ ವಂಚಿತಗೊಳಿಸುವ ವ್ಯವಸ್ಥಿತ ಪ್ರಯತ್ನ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. "ಮತದಾನದ ಹಕ್ಕು ಎಂಬುದು ಸಂವಿಧಾನ ನಮಗೆ ನೀಡಿರುವ ಅತ್ಯಮೂಲ್ಯವಾದ ಆಯುಧ. ಅದನ್ನು ಕಸಿಯಲು ಯಾರಿಗೂ ಅಧಿಕಾರವಿಲ್ಲ. ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ತಾಂತ್ರಿಕ ಪ್ರಕ್ರಿಯೆಗಳು ಪಾರದರ್ಶಕವಾಗಿಲ್ಲ. ಅರ್ಹ ಮತದಾರರ ಹೆಸರುಗಳು ಕಾರಣವಿಲ್ಲದೆ ಮಾಯವಾಗುತ್ತಿರುವುದು ಪ್ರಜಾಪ್ರಭುತ್ವದ ಅಸ್ತಿತ್ವಕ್ಕೇ ಧಕ್ಕೆ ತರುವಂತಹ ವಿಚಾರ" ಎಂದು ಕಳವಳ ವ್ಯಕ್ತಪಡಿಸಿದರು.
ದಾಖಲೆಗಳ ಸಂಗ್ರಹಕ್ಕೆ ಮನವಿ: ಮೌನವೇ ಅನ್ಯಾಯದ ಭಾಗ
ಎಸ್ಐಆರ್ ಪ್ರಕ್ರಿಯೆಯ ಲೋಪದೋಷಗಳನ್ನು ಬಟಾಬಯಲು ಮಾಡಲು ಪ್ರಕಾಶ್ ರಾಜ್ ಸಾರ್ವಜನಿಕರಿಗೆ ಮನವಿ ಮಾಡಿದರು. "ಈ ಪ್ರಕ್ರಿಯೆಯಲ್ಲಿ ನಿಮಗೆ ಆಗಿರುವ ಅನ್ಯಾಯ, ನಿಮ್ಮ ಹೆಸರು ಪಟ್ಟಿಯಿಂದ ಡಿಲೀಟ್ ಆಗಿದ್ದರೆ ಅಥವಾ ಯಾವುದೇ ನೋಟಿಸ್ ಸಿಗದೇ ನಿಮ್ಮನ್ನು ಪಟ್ಟಿಯಿಂದ ಕೈಬಿಡಲಾಗಿದ್ದರೆ, ಅಂತಹ ದಾಖಲೆಗಳನ್ನು ಸಂಗ್ರಹಿಸಿ ನನ್ನ ಗಮನಕ್ಕೆ ತನ್ನಿ. ನಾವು ಇವುಗಳನ್ನು ಸಾರ್ವಜನಿಕವಾಗಿ ಚರ್ಚಿಸುತ್ತೇವೆ ಮತ್ತು ಆಯೋಗದ ದೋಷಗಳನ್ನು ಎಳೆಎಳೆಯಾಗಿ ಬಿಚ್ಚಿಡುತ್ತೇವೆ" ಎಂದರು. ಯಾವುದೇ ಅನ್ಯಾಯ ನಡೆದಾಗ ನಾವು ಮೌನವಾಗಿರುವುದು ಆ ಅನ್ಯಾಯವನ್ನು ಬೆಂಬಲಿಸಿದಂತೆಯೇ ಸರಿ. ಪ್ರತಿಯೊಬ್ಬ ಮತದಾರನು ತನ್ನ ಹಕ್ಕಿನ ರಕ್ಷಣೆಗಾಗಿ ಧ್ವನಿ ಎತ್ತಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿದರು. ಚುನಾವಣಾ ಆಯೋಗವು ಸ್ವತಂತ್ರವಾಗಿ ಮತ್ತು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸುವ ಬದಲು, ಒಂದು ನಿರ್ದಿಷ್ಟ ಅಜೆಂಡಾದಂತೆ ಕೆಲಸ ಮಾಡುತ್ತಿದೆ ಎಂಬ ಅನುಮಾನವನ್ನು ವ್ಯಕ್ತಪಡಿಸಿದರು. "ಸಂವಿಧಾನಬದ್ಧ ಸಂಸ್ಥೆಗಳು ತಮ್ಮ ಗೌರವವನ್ನು ಕಳೆದುಕೊಳ್ಳುತ್ತಿವೆ. ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇಲ್ಲದಿದ್ದರೆ, ಅದು ಜನರ ನಂಬಿಕೆಯನ್ನು ಕಳೆದುಕೊಳ್ಳುತ್ತದೆ. ಇಂತಹ ಆಯೋಗಕ್ಕೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕಿಲ್ಲ" ಎಂದು ವಾಗ್ದಾಳಿ ನಡೆಸಿದರು.
ಪರಿಶೋಧನಾ, ಪ್ರತಿರೋಧ ಪ್ರವಾಸ
ರಾಜ್ಯಾದ್ಯಂತ ಎಸ್ಐಆರ್ ಪ್ರಕ್ರಿಯೆಯ ವೈಫಲ್ಯಗಳನ್ನು ದಾಖಲಿಸಲು ಒಂದು ತಂಡ ರಚಿಸಲಾಗಿದ್ದು, ಅದು ಪರಿಶೋಧನಾ ಮತ್ತು ಪ್ರತಿರೋಧ ಪ್ರವಾಸ ನಡೆಸಲಿದೆ ಎಂದು ಕಾರ್ಯಕ್ರಮದಲ್ಲಿ ಘೋಷಿಸಲಾಯಿತು. ಮತದಾರರ ಪಟ್ಟಿಯಲ್ಲಿ ಉಂಟಾಗಿರುವ ತಾಂತ್ರಿಕ ಸಮಸ್ಯೆಗಳು, ಅಧಿಕಾರಿಗಳ ಉದಾಸೀನತೆ ಮತ್ತು ನಿಯಮ ಉಲ್ಲಂಘನೆಗಳ ಕುರಿತು ದತ್ತಾಂಶಗಳನ್ನು ಸಂಗ್ರಹಿಸುವುದು. ಗ್ರಾಮೀಣ ಮತ್ತು ನಗರ ಪ್ರದೇಶಗಳ ಜನರಿಗೆ ತಮ್ಮ ಮತದಾರರ ಪಟ್ಟಿಯನ್ನು ಪರಿಶೀಲಿಸಿಕೊಳ್ಳುವ ಹಕ್ಕಿನ ಬಗ್ಗೆ ಅರಿವು ಮೂಡಿಸುವುದು. ಸಂಗ್ರಹಿಸಲಾದ ದಾಖಲೆಗಳನ್ನು ಆಧರಿಸಿ ಉನ್ನತ ಮಟ್ಟದ ವೇದಿಕೆಗಳಲ್ಲಿ ಕಾನೂನು ಹೋರಾಟ ನಡೆಸುವ ಗುರಿಯಾಗಿದೆ.
ಪ್ರಕಾಶ್ ರಾಜ್ ಅವರು ಈ ಹಿಂದೆ ತಂತ್ರಜ್ಞಾನದ ದೋಷಗಳ ಬಗ್ಗೆ ಎತ್ತಿದ್ದ ಪ್ರಶ್ನೆಗಳನ್ನು ಮತ್ತೊಮ್ಮೆ ಪುನರುಚ್ಚರಿಸಿದರು. ಮನೆ ಬಾಗಿಲಿಗೆ ಬಾರದ ಬಿಎಲ್ಒಗಳು, ಆನ್ಲೈನ್ನಲ್ಲಿ ಸ್ವಯಂಚಾಲಿತವಾಗಿ ನಿರ್ಧಾರ ತೆಗೆದುಕೊಳ್ಳುವ ಅಲ್ಗಾರಿದಮ್ಗಳು ಮತ್ತು ಜನರಿಗೆ ತಲುಪದ ನೋಟಿಸ್ಗಳು – ಇವೆಲ್ಲವೂ ಪೂರ್ವನಿಯೋಜಿತವಾಗಿ ಮತದಾರರನ್ನು ಪಟ್ಟಿಯಿಂದ ತೆಗೆಯುವ ತಂತ್ರಗಳಾಗಿವೆ ಎಂದು ಹೇಳಿದರು.

