ಎಸ್ಐಆರ್ ಗೊಂದಲ: ಪರಿಷ್ಕರಣೆ ಪ್ರಕ್ರಿಯೆ ಒಂದು ವರ್ಷ ಮುಂದೂಡಲು ಸಿಎಂಗೆ ಒತ್ತಾಯ
x

ಎಸ್ಐಆರ್ ಗೊಂದಲ: ಪರಿಷ್ಕರಣೆ ಪ್ರಕ್ರಿಯೆ ಒಂದು ವರ್ಷ ಮುಂದೂಡಲು ಸಿಎಂಗೆ ಒತ್ತಾಯ

ರಾಜ್ಯದಲ್ಲಿ ಸುಮಾರು 1.9 ಕೋಟಿ ಮತದಾರರು ಆತಂಕಕಾರಿ ಪರಿಸ್ಥಿತಿಯಲ್ಲಿದ್ದು, ಬೆಂಗಳೂರಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರ ಹೆಸರು ಪಟ್ಟಿಯಿಂದ ಅಳಿಸಿಹೋಗಿದೆ ಎಂದು ಎದ್ದೇಳು ಕರ್ನಾಟಕ ಆರೋಪಿಸಿದೆ.


Click the Play button to hear this message in audio format

ಕರ್ನಾಟಕದಾದ್ಯಂತ ಮತದಾರರ ಪಟ್ಟಿಯಲ್ಲಿ ಕಂಡುಬಂದಿರುವ ಗಂಭೀರ ಲೋಪದೋಷಗಳು ಮತ್ತು ಎಸ್ಐಆರ್ ಪ್ರಕ್ರಿಯೆಗಳಲ್ಲಿನ ಅವ್ಯವಸ್ಥೆಯ ಕುರಿತು ನಟ ಪ್ರಕಾಶ್ ರಾಜ್ ನೇತೃತ್ವದ 'ಎದ್ದೇಳು ಕರ್ನಾಟಕ' ಸಂಘಟನೆಯು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಗಂಭೀರ ಚರ್ಚೆ ನಡೆಸಿದೆ. ಪ್ರಜಾಪ್ರಭುತ್ವದ ಅಡಿಪಾಯವಾಗಿರುವ ಮತದಾರರ ಪಟ್ಟಿಯ ಪಾವಿತ್ರ್ಯತೆಯನ್ನು ಕಾಪಾಡುವ ತುರ್ತು ಅಗತ್ಯ ಕ್ರಮಕೈಗೊಳ್ಳುವಂತೆ ಮನವಿ ಮಾಡಿದೆ.

ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯು ಅಸ್ತವ್ಯಸ್ತವಾಗಿದೆ ಎಂದು ಸಂಘಟನೆ ಆರೋಪಿಸಿದೆ. ರಾಜ್ಯದಲ್ಲಿ ಸುಮಾರು 1.9 ಕೋಟಿ ಮತದಾರರು ಆತಂಕಕಾರಿ ಪರಿಸ್ಥಿತಿಯಲ್ಲಿದ್ದು, ಬೆಂಗಳೂರಿನಲ್ಲಿ ಹೆಚ್ಚಿನ ಸಂಖ್ಯೆಯ ಮತದಾರರ ಹೆಸರು ಪಟ್ಟಿಯಿಂದ ಅಳಿಸಿಹೋಗಿದೆ. ಬದುಕಿರುವ ಅನೇಕ ಹಿರಿಯ ನಾಗರಿಕರನ್ನು ಮೃತಪಟ್ಟವರು ಎಂದು ತಪ್ಪಾಗಿ ಗುರುತಿಸಲಾಗಿದೆ. ಕೆಲಸದ ನಿಮಿತ್ತ ಹೊರಗಿರುವವರನ್ನು 'ಗೈರು' ಎಂದು ಪಟ್ಟಿ ಮಾಡಿ, ಮುಂದಿನ ದಿನಗಳಲ್ಲಿ ಅವರನ್ನು ಪಟ್ಟಿಯಿಂದಲೇ ತೆಗೆದುಹಾಕುವ ಹುನ್ನಾರ ನಡೆಯುತ್ತಿದೆ. ಬಿಎಲ್ಒ ಮಟ್ಟದಲ್ಲಿ ಸೂಕ್ತ ತರಬೇತಿ ಇಲ್ಲದಿರುವುದು, ಸರಿಯಾದ ಮಾಹಿತಿ ನೀಡದಿರುವುದು ಮತ್ತು ಜನಸಾಮಾನ್ಯರಿಗೆ ಎನ್ರೋಲ್ಮೆಂಟ್ ಫಾರ್ಮ್‌ಗಳ ಲಭ್ಯತೆಯ ಕೊರತೆಯು ಈ ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸಿದೆ ಎಂದು ಸಂಘಟನೆಗೆ ದೂರಿದೆ.

ಪ್ರಮುಖ ಆಕ್ಷೇಪಣೆಗಳು

'ಎದ್ದೇಳು ಕರ್ನಾಟಕ' ಸಂಘಟನೆಯು ಸಲ್ಲಿಸಿರುವ ದೂರಿನ ಪತ್ರದಲ್ಲಿ ಮುಖ್ಯವಾಗಿ ಮೂರು ಅಂಶಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಲಾಗಿದೆ. ಸೂಕ್ಷ್ಮವಾದ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಅತ್ಯಂತ ಆತುರದಿಂದ ಮಾಡಲಾಗುತ್ತಿದೆ. ಜನರಿಗೆ ಇದರ ಮಹತ್ವದ ಅರಿವು ಮೂಡಿಸುವ ಕೆಲಸವಾಗಿಲ್ಲ. ಆಯೋಗದ ಮಾರ್ಗಸೂಚಿಗಳು ಜನಸಾಮಾನ್ಯರಿಗೆ ತಲುಪಿಲ್ಲ. ಕೇವಲ ಒಂದು ತಿಂಗಳ ಅವಧಿಯಲ್ಲಿ ಬಿಎಲ್ಒಗಳು ಮನೆ-ಮನೆಗೆ ಭೇಟಿ ನೀಡಿ ಫಾರ್ಮ್ ತುಂಬಿಸುವುದು ಅವ್ಯವಹಾರಗಳಿಗೆ ದಾರಿ ಮಾಡಿಕೊಡುತ್ತಿದೆ. ಸರಿಯಾದ ಪರಿಶೀಲನೆ ಇಲ್ಲದೆ ಮತದಾರರನ್ನು ಪಟ್ಟಿಯಿಂದ ಕೈಬಿಡುವುದು ಪ್ರಜಾಪ್ರಭುತ್ವಕ್ಕೆ ಅಪಮಾನವಾಗಿದೆ. ವಲಸೆ ಕಾರ್ಮಿಕರು, ಮದುವೆಯಾಗಿ ಗಂಡನ ಮನೆಗೆ ತೆರಳಿದ ಮಹಿಳೆಯರು ಮತ್ತು ಬಾಡಿಗೆ ಮನೆ ಬದಲಾಯಿಸುವವರನ್ನು ಗೈರು ಎಂದು ಗುರುತಿಸಿ ಪಟ್ಟಿಯಿಂದ ತೆಗೆದುಹಾಕಲಾಗುತ್ತಿದೆ. ಇದು ಮತದಾರರ ಪಟ್ಟಿ ಪರಿಷ್ಕರಣೆಯ ಮೂಲ ಉದ್ದೇಶವನ್ನೇ ನಾಶಪಡಿಸುತ್ತಿದೆ.

ಸಂಘಟನೆ ಮುಂದಿಟ್ಟಿರುವ ಬೇಡಿಕೆಗಳು

ಮುಖ್ಯಮಂತ್ರಿಯವರ ಮುಂದೆ ಸಂಘಟನೆಯು ನಾಲ್ಕು ಪ್ರಮುಖ ಬೇಡಿಕೆಗಳನ್ನು ಇಟ್ಟಿದೆ. ಪರಿಷ್ಕರಣೆ ಅವಧಿಯ ಪ್ರಕ್ರಿಯೆಯನ್ನು ಕನಿಷ್ಠ ಒಂದು ವರ್ಷದ ಅವಧಿಗೆ ವಿಸ್ತರಿಸಬೇಕು. ಆತುರದ ನಿರ್ಧಾರಗಳನ್ನು ಕೈಬಿಟ್ಟು ವ್ಯವಸ್ಥಿತವಾಗಿ ಮತದಾರರನ್ನು ಸೇರ್ಪಡೆಗೊಳಿಸಬೇಕು. ಗೈರು ಅಥವಾ ಸ್ಥಳಾಂತರಗೊಂಡಿರುವವರನ್ನು ನೇರವಾಗಿ ಅಳಿಸಿಹಾಕುವ ಬದಲು, ಬಿ.ಎಲ್.ಒಗಳ ಮೂಲಕ ಮರು ಪರಿಶೀಲನೆ ನಡೆಸಿ ಅವರಿಗೆ ಮತದಾನದ ಅವಕಾಶವನ್ನು ಖಾತರಿಪಡಿಸಬೇಕು. ಚುನಾವಣಾ ಆಯೋಗದ ಜವಾಬ್ದಾರಿಯನ್ನು ಸರ್ಕಾರ ಮರೆಮಾಡಬಾರದು. ರಾಜ್ಯ ಸರ್ಕಾರವೇ ಮುತುವರ್ಜಿ ವಹಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ಸರ್ಕಾರಿ ನೌಕರರನ್ನು ಬಳಸಿಕೊಂಡು ತಳಮಟ್ಟದಲ್ಲಿ ಜನರಿಗೆ ನೆರವು ನೀಡಬೇಕು. ಕೇಂದ್ರ ಚುನಾವಣಾ ಆಯೋಗಕ್ಕೆ ಕರ್ನಾಟಕ ಸರ್ಕಾರವು ಈ ಗೊಂದಲಗಳ ಬಗ್ಗೆ ವರದಿ ನೀಡಬೇಕು. ಅರ್ಹ ಮತದಾರರನ್ನು ಅಕ್ರಮವಾಗಿ ಕೈಬಿಡುವ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಒಪ್ಪಬಾರದು ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಬೇಕು ಎಂದು ಆಗ್ರಹಿಸಲಾಗಿದೆ.

ಪ್ರಕಾಶ್ ರಾಜ್ ಸೇರಿದಂತೆ ಹಲವು ಸಾಮಾಜಿಕ ಹೋರಾಟಗಾರರು, ಆರ್ಥಿಕ ತಜ್ಞರು ಮತ್ತು ನಾಗರಿಕ ಸಂಘಟನೆಗಳ ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು. ಮತದಾನದ ಹಕ್ಕು ಪ್ರತಿಯೊಬ್ಬ ನಾಗರಿಕನ ಸಂವಿಧಾನಾತ್ಮಕ ಆಸ್ತಿ. ಅದನ್ನು ಕಸಿಯುವ ಯಾವುದೇ ಪ್ರಯತ್ನವನ್ನು ಸಹಿಸುವುದಿಲ್ಲ ಎಂಬುದು ಹೋರಾಟಗಾರರ ಒಕ್ಕೊರಲ ಅಭಿಪ್ರಾಯವಾಗಿದೆ. ರಾಜ್ಯ ಸರ್ಕಾರವು ಈ ವಿಚಾರವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಚುನಾವಣಾ ಆಯೋಗದೊಂದಿಗೆ ಸಮನ್ವಯ ಸಾಧಿಸಿ, ಮತದಾರರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯಬೇಕು. ಪ್ರಜಾಪ್ರಭುತ್ವದ ಹಬ್ಬದಲ್ಲಿ ಪ್ರತಿಯೊಬ್ಬ ನಾಗರಿಕನು ಭಾಗವಹಿಸುವಂತೆ ಮಾಡಲು ಸರ್ಕಾರವು ಪಾರದರ್ಶಕ ಮತ್ತು ನ್ಯಾಯಯುತವಾದ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಒತ್ತಾಯಿಸಲಾಗಿದೆ.

Read More
Next Story