ಜೈಲಲ್ಲೂ ಪ್ರಜ್ವಲ್ ರೇವಣ್ಣ ʼವಿಡಿಯೋ ಲೀಲೆʼ; ವಿಧಾನಸಭೆ ಮೊದಲ ದಿನ ಸಿದ್ದರಾಮಯ್ಯ ಗೈರು; ರಾಜ್ಯ ಬಂದ್‌ಗೆ ಸಿಗದ ಜನಬೆಂಬಲ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣಗೆ ರಾಜಾತಿಥ್ಯದ ಆರೋಪ; ವಿಧಾನಸಭೆಯ ಮಳೆಗಾಲದ ಅಧೀವೇಶನ ಶುರುವಾಗಿದೆ; ಕಾವೇರಿ ವಿವಾದ ವಿಚಾರಣೆ ಸೋಮವಾರಕ್ಕೆ ಮುಂದೂಡಿದ ಸುಪೀಂಕೋರ್ಟ್
ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ, ರಾಜ್ಯದ ಅತಿದೊಡ್ಡ ಮತ್ತು ಅತಿ ಹೆಚ್ಚು ಭದ್ರತೆ ಇರಬೇಕಾದ ಕಾರಾಗೃಹ. ಆದರೆ, ಇತ್ತೀಚೆಗೆ ನಡೆದ ಸಿಸಿಬಿ ಅಧಿಕಾರಿಗಳ ದಾಳಿಯು ಈ ಜೈಲಿನ ಆಡಳಿತ ವ್ಯವಸ್ಥೆಯ ಅಧೋಗತಿಯನ್ನು ಬಯಲಿಗೆಳೆದಿದೆ. ಅತ್ಯಾಚಾರ ಪ್ರಕರಣದ ಅಪರಾಧಿಯಾಗಿರುವ ಮಾಜಿ ಸಂಸದ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಮಾಜಿ ಸಚಿವ ಎಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣನ ಸೆಲ್ನಲ್ಲಿ ಮೊಬೈಲ್ ಫೋನ್ ಮತ್ತು ಪೆನ್ಡ್ರೈವ್ ಪತ್ತೆಯಾಗಿರುವುದು ರಾಜ್ಯಾದ್ಯಂತ ತೀವ್ರ ಸಂಚಲನ ಮೂಡಿಸಿದೆ. ಜೈಲಿನ ನಿಯಮಗಳನ್ನೆಲ್ಲಾ ಗಾಳಿಗೆ ತೂರಿ, ಜೈಲನ್ನೇ ವಿಐಪಿ ಲಾಂಜ್ಆಗಿ ಪರಿವರ್ತಿಸಿದ್ದ ಈ ಪ್ರಕರಣವು ಗೃಹ ಇಲಾಖೆಯ ಕಾರ್ಯವೈಖರಿಯ ಮೇಲೆ ಕಪ್ಪು ಚುಕ್ಕೆ ಇಟ್ಟಿದೆ.
ಸಿಸಿಬಿ ಪೊಲೀಸರು ಜೈಲಿನ ಮೇಲೆ ಹಠಾತ್ ದಾಳಿ ನಡೆಸಿದಾಗ, ಪ್ರಜ್ವಲ್ ರೇವಣ್ಣನ ಸೆಲ್ನಲ್ಲಿ ಅತ್ಯಾಧುನಿಕ 'ರೆಡ್ಮಿ 5ಜಿ' ಮೊಬೈಲ್ ಫೋನ್, ಒಂದು ಚಾರ್ಜರ್, ಒಂದು ಪಾಕೆಟ್ ನೋಟ್ಬುಕ್ ಮತ್ತು ಕಪ್ಪು ಬಣ್ಣದ ಸ್ಯಾಂಡಿಸ್ಕ್ ಪೆನ್ಡ್ರೈವ್ ಪತ್ತೆಯಾಯಿತು. ಇದಕ್ಕಿಂತ ಆಘಾತಕಾರಿ ವಿಷಯವೆಂದರೆ, ಸದರಿ ಮೊಬೈಲ್ ಮತ್ತು ಪೆನ್ಡ್ರೈವ್ಗಳನ್ನು ಪರಿಶೀಲಿಸಿದಾಗ ಅದರಲ್ಲಿ ಸುಮಾರು 90ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳು ಪತ್ತೆಯಾಗಿವೆ. ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ, ಜೈಲು ಸಮವಸ್ತ್ರವನ್ನೂ ಧರಿಸದೆ, ಅತ್ಯಂತ ಆರಾಮದಾಯಕವಾಗಿ ಮೊಬೈಲ್ ಬಳಸುತ್ತಾ ಅಪರಿಚಿತ ವ್ಯಕ್ತಿಯೊಬ್ಬರೊಂದಿಗೆ ಮಾತನಾಡುತ್ತಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಅತ್ಯಾಧುನಿಕ ಮೊಬೈಲ್ ಜಾಮರ್ಗಳನ್ನು ಅಳವಡಿಸಲಾಗಿದೆ. ಜೈಲಿನ ಸುತ್ತಮುತ್ತಲಿನ ಸ್ಥಳೀಯರಿಗೆ ನೆಟ್ವರ್ಕ್ ಸಿಗದಷ್ಟು ಕಠಿಣ ನಿಯಮಗಳಿವೆ. ಆದರೂ, ಜೈಲಿನ ಒಳಗೆ ಏರ್ಟೆಲ್ ಕಂಪನಿಯ ಸಿಮ್ ಕಾರ್ಡ್ಗಳು, ಅದರಲ್ಲೂ ಆಂಧ್ರಪ್ರದೇಶದ ನೋಂದಣಿಯ ಸಿಮ್ಗಳು ಹೇಗೆ ಸಕ್ರಿಯವಾಗಿವೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಈ ಬಗ್ಗೆ ಅನೇಕ ಬಾರಿ ಎಚ್ಚರಿಕೆ ನೀಡಿದ್ದರೂ, ಜೈಲು ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಜೈಲು ಡಿಜಿಪಿ ಅಲೋಕ್ ಕುಮಾರ್ ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, "ಜಾಮರ್ ಇದ್ದರೂ ಸಿಗ್ನಲ್ ಹೇಗೆ ಲಭ್ಯವಾಗುತ್ತಿದೆ? ಇದರಲ್ಲಿ ಏರ್ಟೆಲ್ ಕಂಪನಿಯ ಕೈವಾಡವಿದೆಯೇ ಅಥವಾ ಜೈಲು ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದರೇ?" ಎಂಬ ಆಯಾಮದಲ್ಲಿ ತನಿಖೆಗೆ ಆದೇಶಿಸಿದ್ದಾರೆ. ಇದೇ ಮೊದಲ ಬಾರಿಗೆ, ಇಂತಹ ತಾಂತ್ರಿಕ ಲೋಪಕ್ಕಾಗಿ ಏರ್ಟೆಲ್ ಕಂಪನಿ ವಿರುದ್ಧ ಎಫ್ಐಆರ್ ದಾಖಲಿಸಲು ಸೂಚನೆ ನೀಡಲಾಗಿದೆ.
ನಿಧನರಾದ ಗಣ್ಯರಿಗೆ ಸಂತಾಪ
ರಾಜ್ಯ ರಾಜಕೀಯದಲ್ಲಿ ಹೊಸ ಅಧ್ಯಾಯವೊಂದಕ್ಕೆ ಸಾಕ್ಷಿಯಾಗುವಂತೆ, ರಾಜ್ಯ ವಿಧಾನಮಂಡಲದ ಮಳೆಗಾಲದ ಅಧಿವೇಶನವು ಇಂದಿನಿಂದ ಆರಂಭಗೊಂಡಿದೆ. ಮುಖ್ಯಮಂತ್ರಿಯಾಗಿ ಜವಾಬ್ದಾರಿ ವಹಿಸಿಕೊಂಡ ನಂತರ ಮೊದಲ ಬಾರಿಗೆ ಅಧಿವೇಶನದಲ್ಲಿ ಭಾಗವಹಿಸಿದ ಡಿ.ಕೆ. ಶಿವಕುಮಾರ್ ಅವರು, ಸದನದ ಪಾವಿತ್ರ್ಯತೆಯನ್ನು ಗೌರವಿಸುವ ಮೂಲಕ ಗಮನ ಸೆಳೆದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧದ ಅಧಿವೇಶನಕ್ಕೆ ಆಗಮಿಸುತ್ತಿದ್ದಂತೆ, ಪ್ರಜಾಪ್ರಭುತ್ವದ ದೇಗುಲದ ಬಾಗಿಲಿಗೆ ಶಿರಬಾಗಿ ನಮಸ್ಕರಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ಗೆ ಶಿರಬಾಗಿದ ಮಾದರಿಯಲ್ಲಿಯೇ ಡಿ.ಕೆ.ಶಿವಕುಮಾರ್ಅನುಕರಿಸಿದ್ದು ಆಕರ್ಷಕವಾಗಿತ್ತು. ಅಲ್ಲದೇ, ಸದನದ ಒಳ ಪ್ರವೇಶಿಸಿದ ನಂತರ, ಮುಖ್ಯಮಂತ್ರಿಗೆ ಮೀಸಲಾದ ಆಸನದ ಬಳಿ ತೆರಳಿ, ಆ ಪೀಠಕ್ಕೆ ಭಕ್ತಿಯಿಂದ ನಮಸ್ಕರಿಸಿ ತಮ್ಮ ಕರ್ತವ್ಯದ ಹಾದಿಯನ್ನು ಭಕ್ತಿಯಿಂದ ಆರಂಭಿಸಿದರು. ಈ ದೃಶ್ಯವು ಸದನದಲ್ಲಿ ನೆರೆದಿದ್ದ ಸದಸ್ಯರ ಗಮನ ಸೆಳೆಯಿತು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆಡಳಿತ ಪಕ್ಷದ ಸಾಲಿನಲ್ಲಿ ಕುಳಿತುಕೊಳ್ಳುವ ಬದಲು, ವಿರೋಧ ಪಕ್ಷದ ಸಾಲಿನತ್ತ ತೆರಳಿ ವಿಪಕ್ಷ ನಾಯಕ ಆರ್. ಅಶೋಕ್ ಅವರ ಕೈ ಕುಲುಕಿದರು. ಕೇವಲ ಔಪಚಾರಿಕತೆಯಷ್ಟೇ ಅಲ್ಲದೆ, ರಾಜ್ಯದ ಅಭಿವೃದ್ಧಿಗಾಗಿ ಸಹಕಾರ ನೀಡುವಂತೆ ಮನವಿ ಮಾಡಿದರು.
ಹಂಗಾಮಿ ಸಭಾಧ್ಯಕ್ಷ ಟಿ.ಬಿ. ಜಯಚಂದ್ರ ಅವರು ಸಂವಿಧಾನದ ಪೀಠಿಕೆಯನ್ನು ಬೋಧಿಸಿದ ನಂತರ, ನೂತನ ಸಚಿವರ ಪರಿಚಯದ ಪ್ರಕ್ರಿಯೆ ಆರಂಭಿಸಲು ಮುಂದಾದರು. ಈ ವೇಳೆ ಮಧ್ಯಪ್ರವೇಶಿಸಿದ ವಿಪಕ್ಷ ನಾಯಕ ಆರ್. ಅಶೋಕ್, "ಅಗಲಿದ ಗಣ್ಯರಿಗೆ ಮೊದಲು ಸಂತಾಪ ಸೂಚಿಸಿ. ನಂತರ ಸಚಿವರ ಪರಿಚಯ ಮಾಡಿಕೊಳ್ಳಿ. ಸಂತಾಪ ಮತ್ತು ಹೊಸದಾಗಿ ಸಚಿವರಾಗುವ ಖುಷಿಯ ವಿಚಾರಗಳನ್ನು ಒಂದೇ ದಿನ ಮಾಡುವುದು ಸರಿಯಲ್ಲ. ನಾಳೆ ಅಥವಾ ಸೋಮವಾರ ಹೊಸ ಸಚಿವರ ಪರಿಚಯ ಮಾಡಿಕೊಳ್ಳಿ" ಎಂದು ಸಲಹೆ ನೀಡಿದರು. ಇದಕ್ಕೆ ತಕ್ಷಣ ಸ್ಪಂದಿಸಿದ ಸಿಎಂ ಡಿ.ಕೆ. ಶಿವಕುಮಾರ್ ಅವರು, "ವಿಪಕ್ಷ ನಾಯಕರ ಭಾವನೆಗಳಿಗೆ ನಾವು ಗೌರವ ನೀಡುತ್ತೇವೆ" ಎಂದು ಒಪ್ಪಿಕೊಂಡು ಸಂತಾಪ ಸೂಚನೆಯನ್ನು ಮುಂದುವರಿಸಲು ಕೋರಿದರು.
ವಿಧಾನಪರಿಷತ್‌ನಲ್ಲಿಯೂ ಹಂಗಾಮಿ ಸಭಾಪತಿ ಪುಟ್ಟಣ್ಣ ಸದನವನ್ನು ನಡೆಸಿದರು. ಅಲ್ಲಿಯೂ ಸಂತಾಪ ಸೂಚನೆ ಮಂಡಿಸಲಾಯಿತು. ಅಗಲಿದ ಗಣ್ಯರ ಸಾಧನೆಗಳನ್ನು ಸ್ಮರಿಸಲಾಯಿತು. ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ಹಾಗೂ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಇತರರು ಅಗಲಿದ ಗಣ್ಯರ ಸೇವೆಯನ್ನು ಶ್ಲಾಘಿಸಲಾಯಿತು.
ಬಂದ್‌ಗೆ ನೀರಸ ಪ್ರತಿಕ್ರಿಯೆ
ಒಂದೆಡೆ ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಖಂಡಿಸಿ ಕರೆ ನೀಡಿರುವ ಕರ್ನಾಟಕ ಬಂದ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾದರೆ, ಮತ್ತೊಂದೆಡೆ ನೀರು ಬಿಡುವ ವಿಚಾರವಾಗಿ ತಮಿಳುನಾಡು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ಇದೇ ಆಗಸ್ಟ್ 17ಕ್ಕೆ ಮುಂದೂಡಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಾಲ್ಯಾ ಬಾಗ್ನಿ ಮತ್ತು ವಿ.ಮೋಹನಾ ಅವರನ್ನು ಒಳಗೊಂಡ ನ್ಯಾಯಪೀಠ, ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳುವುದಾಗಿ ಈ ಹಿಂದೆ ಹೇಳಿತ್ತು. ಪ್ರಕರಣದ ವಿಚಾರಣೆಯಿಂದ ನ್ಯಾಯಮೂರ್ತಿ ವಿ.ಮೋಹನಾ ಹಿಂದಕ್ಕೆ ಸರಿದಿದ್ದಾರೆ. ವಿಚಾರಣೆಯನ್ನು ನ್ಯಾಯಮೂರ್ತಿ ವಿಕ್ರಮ್ನಾಥ್ ನೇತೃತ್ವದ ಪೀಠ ಇವತ್ತು ನಡೆಸಬೇಕಿತ್ತು. ಅವರು ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಅರ್ಜಿಯ ವಿಚಾರಣೆ ಸೋಮವಾರ ನಡೆಯಲಿದೆ.
ತಮಿಳುನಾಡು ಸರ್ಕಾರವು ಸುಪ್ರೀಂ ಕೋರ್ಟ್ನಲ್ಲಿ ವಾದ ಮಂಡಿಸಿ, ಕರ್ನಾಟಕ ರಾಜ್ಯವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ -CWMA ನಿರ್ದೇಶನಗಳನ್ನು ಉಲ್ಲಂಘಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದೆ. ಕಾವೇರಿ ನೀರು ನಿಯಂತ್ರಣ ಸಮಿತಿಯ ಶಿಫಾರಸಿನ ಮೇರೆಗೆ, ಪ್ರಾಧಿಕಾರವು ಕರ್ನಾಟಕಕ್ಕೆ ಮುಂದಿನ 15 ದಿನಗಳ ಕಾಲ ಪ್ರತಿದಿನ 12 ಸಾವಿರ ಕ್ಯುಸೆಕ್ ನೀರನ್ನು ಬಿಡುಗಡೆ ಮಾಡಲು ಆದೇಶಿಸಿತ್ತು. ಆದರೆ, ಈ ಆದೇಶವನ್ನು ಕರ್ನಾಟಕ ಪಾಲಿಸುತ್ತಿಲ್ಲ ಎಂದು ಆರೋಪಿಸಲಾಗಿದೆ. ಜೂನ್ 1 ರಿಂದ ಆಗಸ್ಟ್ 12 ರವರೆಗೆ ತಮಿಳುನಾಡಿಗೆ ಬರಬೇಕಿದ್ದ ನೀರಿನ ಪ್ರಮಾಣದಲ್ಲಿ 26.954 ಟಿಎಂಸಿ ಕೊರತೆಯಾಗಿದೆ. ಇದನ್ನು ಕೂಡಲೇ ಭರಿಸಬೇಕೆಂದು ತಮಿಳುನಾಡು ಒತ್ತಾಯಿಸುತ್ತಿದೆ.
ಈ ನಡುವೆ, ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಮತ್ತು ರಾಜ್ಯದಲ್ಲಿ ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಜಾರಿಗೊಳಿಸಬೇಕೆಂದು ಆಗ್ರಹಿಸಿ, ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಕರೆ ನೀಡಿದ್ದ 'ಕರ್ನಾಟಕ ಬಂದ್'ಗೆ ರಾಜ್ಯಾದ್ಯಂತ ಅತ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾವೇರಿಯ ವಿಷಯದಲ್ಲಿ ಜನರ ಭಾವನೆಗಳು ತೀವ್ರವಾಗಿದ್ದರೂ, ಬಂದ್ ಎಂಬ ಅಸ್ತ್ರಕ್ಕೆ ಸಾರ್ವಜನಿಕರು ಮತ್ತು ವಾಣಿಜ್ಯ ಸಂಘಟನೆಗಳು ಬೆಂಬಲ ನೀಡದ ಹಿನ್ನೆಲೆಯಲ್ಲಿ ರಾಜ್ಯದ ಜನಜೀವನ ಸಂಪೂರ್ಣ ಸಹಜ ಸ್ಥಿತಿಯಲ್ಲಿದೆ.
ರಾಜಧಾನಿ ಬೆಂಗಳೂರಿನಲ್ಲಿ ಬಂದ್ನ ಪ್ರಭಾವ ಎಳ್ಳಷ್ಟೂ ಕಂಡುಬರಲಿಲ್ಲ. ಮೆಜೆಸ್ಟಿಕ್, ಕೆ.ಆರ್. ಮಾರ್ಕೆಟ್, ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣಗಳು ಸೇರಿದಂತೆ ನಗರದ ಪ್ರಮುಖ ಸಾರಿಗೆ ಕೇಂದ್ರಗಳಲ್ಲಿ ವಾಹನ ಸಂಚಾರ ಎಂದಿನಂತೆಯೇ ಇತ್ತು. ಬಿಎಂಟಿಸಿ ಮತ್ತು ಕೆಎಸ್ಆರ್ಟಿಸಿ ಬಸ್ಗಳು ಯಾವುದೇ ಅಡೆತಡೆಯಿಲ್ಲದೆ ಸಂಚರಿಸಿದವು. ನಮ್ಮ ಮೆಟ್ರೋ ಮತ್ತು ರೈಲು ಸೇವೆಗಳಲ್ಲೂ ಯಾವುದೇ ವ್ಯತ್ಯಯವಾಗಿಲ್ಲ. ಆಟೋ ರಿಕ್ಷಾ ಮತ್ತು ಕ್ಯಾಬ್ಗಳ ಸೇವೆಗಳು ಸುಗಮವಾಗಿದ್ದವು. ಶಾಲೆ-ಕಾಲೇಜುಗಳು, ಸರ್ಕಾರಿ ಕಚೇರಿಗಳು, ಬ್ಯಾಂಕ್ಗಳು ಮತ್ತು ವಾಣಿಜ್ಯ ಸಂಸ್ಥೆಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ತರಕಾರಿ, ಹಾಲು ಮತ್ತು ವೈದ್ಯಕೀಯದಂತಹ ತುರ್ತು ಸೇವೆಗಳಿಗೂ ಯಾವುದೇ ಧಕ್ಕೆ ಉಂಟಾಗಲಿಲ್ಲ.

