
ಪ್ರಜ್ವಲ್ ರೇವಣ್ಣ ಬಳಿ ಮೊಬೈಲ್ ಪತ್ತೆ ಪ್ರಕರಣದ ತನಿಖೆ ತೀವ್ರಗೊಂಡಿದೆ.
ಪ್ರಜ್ವಲ್ ಮೊಬೈಲ್ ಪ್ರಕರಣ: ಜೈಲರ್, ವಾರ್ಡನ್ ಸೇರಿ ಇಬ್ಬರು ಅಮಾನತು
ಡಿಐಜಿ ಜಿನೇಂದ್ರ ಖನಗಾವಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಪರಪ್ಪನ ಅಗ್ರಹಾರ ಜೈಲು ಎಸ್‌ಪಿ ಅನ್ಷುಕುಮಾರ್ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬಳಿ ಮೊಬೈಲ್ ಪತ್ತೆಯಾದ ಪ್ರಕರಣದ ತನಿಖೆ ಮತ್ತಷ್ಟು ತೀವ್ರಗೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಾಗ್ರಹ ಇಲಾಖೆಯ ಇಬ್ಬರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಮೊಬೈಲ್ ಜೈಲಿನೊಳಗೆ ಹೇಗೆ ತಲುಪಿತು, ಅದನ್ನು ಪ್ರಜ್ವಲ್ ಅವರಿಗೆ ನೀಡಿದವರು ಯಾರು ಎಂಬ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಡಿಐಜಿ ಜಿನೇಂದ್ರ ಖನಗಾವಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಪರಪ್ಪನ ಅಗ್ರಹಾರ ಜೈಲು ಎಸ್‌ಪಿ ಅನ್ಷುಕುಮಾರ್ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಬ್ಯಾರಕ್ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಯಾವುದೇ ಅಕ್ರಮ ತಮ್ಮ ಗಮನಕ್ಕೆ ಬಂದಿರಲಿಲ್ಲ ಎಂದು ಎಸ್‌ಪಿ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಮೊಬೈಲ್ ಯಾರಿಂದ ಪ್ರಜ್ವಲ್‌ಗೆ ತಲುಪಿತು ಎಂಬ ಮಾಹಿತಿ ತಮಗೆ ತಿಳಿದಿಲ್ಲ ಎಂದೂ ಅವರು ಹೇಳಿರುವುದಾಗಿ ತಿಳಿದುಬಂದಿದೆ.
ಜೈಲು ನಿಯಮ ಪಾಲನೆಗೆ ಸೂಚನೆ
ಪ್ರಜ್ವಲ್ ರೇವಣ್ಣ ಜೈಲು ಸಮವಸ್ತ್ರ ಧರಿಸುವ ವಿಚಾರದಲ್ಲಿಯೂ ಅಧಿಕಾರಿಗಳಿಗೆ ನಿಗಾ ವಹಿಸುವಂತೆ ಸೂಚನೆ ನೀಡಲಾಗಿತ್ತು ಎಂದು ಎಸ್‌ಪಿ ತಿಳಿಸಿದ್ದಾರೆ ಎನ್ನಲಾಗಿದೆ. ಜೈಲು ನಿಯಮಗಳನ್ನು ಎಲ್ಲ ಕೈದಿಗಳು ಕಡ್ಡಾಯವಾಗಿ ಪಾಲಿಸುವಂತೆ ಕ್ರಮ ಕೈಗೊಳ್ಳಬೇಕು ಮತ್ತು ಯಾವುದೇ ವ್ಯಕ್ತಿಗೂ ವಿಶೇಷ ವಿನಾಯಿತಿ ನೀಡಬಾರದು ಎಂಬ ಸೂಚನೆ ನೀಡಲಾಗಿತ್ತು ಎಂದು ಅವರು ಹೇಳಿದ್ದಾರೆ.
ವಾರದೊಳಗೆ ವರದಿ ಸಲ್ಲಿಸಲು ಸೂಚನೆ
ಎಸ್‌ಪಿಗೆ ನೀಡಲಾಗಿದ್ದ ಶೋಕಾಸ್ ನೋಟಿಸ್‌ಗೆ ಉತ್ತರ ಪಡೆದಿರುವ ಡಿಐಜಿ ಜಿನೇಂದ್ರ ಖನಗಾವಿ, ಸಂಬಂಧಿತ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮಗಳ ಕುರಿತು ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ ಎನ್ನಲಾಗಿದೆ. ತನಿಖೆಯ ಮುಂದಿನ ಹಂತದಲ್ಲಿ ಅಧಿಕಾರಿಗಳು ಹಾಗೂ ಇತರ ಸಂಬಂಧಿತ ವ್ಯಕ್ತಿಗಳ ಹೇಳಿಕೆಗಳನ್ನು ಪಡೆದು ಸಾಕ್ಷ್ಯಗಳನ್ನು ಸಂಗ್ರಹಿಸುವ ಸಾಧ್ಯತೆಯಿದೆ. ತನಿಖೆ ಪೂರ್ಣಗೊಂಡ ಬಳಿಕ ವರದಿಯನ್ನು ಜೈಲು ಇಲಾಖೆಯ ಡಿಜಿಪಿಗೆ ಸಲ್ಲಿಸಲಾಗುತ್ತದೆ.
ಜೈಲರ್, ವಾರ್ಡನ್ ಅಮಾನತು
ಪ್ರಜ್ವಲ್ ರೇವಣ್ಣ ಅವರ ಬಳಿ ಮೊಬೈಲ್ ಪತ್ತೆಯಾದ ಪ್ರಕರಣದಲ್ಲಿ ಕರ್ತವ್ಯಲೋಪ ಆರೋಪದ ಹಿನ್ನೆಲೆಯಲ್ಲಿ ಜೈಲರ್ ರಮೇಶ್ ಧರ್ಮಟ್ಟಿ ಹಾಗೂ ವಾರ್ಡನ್ ಮಹೇಶ್ ಸಜ್ಜನ್ ಅವರನ್ನು ಅಮಾನತುಗೊಳಿಸಲಾಗಿದೆ. ಜೈಲು ಡಿಜಿಪಿ ಅಲೋಕ್ ಕುಮಾರ್ ಅಮಾನತು ಆದೇಶ ಹೊರಡಿಸಿದ್ದಾರೆ ಎಂದು ತಿಳಿದುಬಂದಿದೆ.
ಸಾಮಾನ್ಯ ಬ್ಯಾರಕ್‌ಗೆ ಸ್ಥಳಾಂತರ
ಮೊಬೈಲ್ ಪತ್ತೆ ಪ್ರಕರಣದ ಬಳಿಕ ಪ್ರಜ್ವಲ್ ರೇವಣ್ಣ ಅವರನ್ನು ವಿಶೇಷ ಭದ್ರತಾ ವಿಭಾಗದ ಬ್ಯಾರಕ್‌ನಿಂದ ಸಾಮಾನ್ಯ ಕೈದಿಗಳಿರುವ ಬ್ಯಾರಕ್‌ಗೆ ಸ್ಥಳಾಂತರಿಸಲಾಗಿದೆ. ಒಂದೇ ಬ್ಯಾರಕ್‌ನಲ್ಲಿ ಹೆಚ್ಚಿನ ಸಂಖ್ಯೆಯ ಕೈದಿಗಳಿರುವುದರಿಂದ ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳಲು ಕಷ್ಟವಾಗುತ್ತಿದೆ ಎಂದು ಅವರು ಜೈಲು ಅಧಿಕಾರಿಗಳ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಸಹ ಕೈದಿಗಳೊಂದಿಗೆ ಒಂದೇ ಶೌಚಾಲಯ ಬಳಸಬೇಕಾಗಿರುವುದು ಹಾಗೂ ಆರೋಗ್ಯದ ಬಗ್ಗೆ ಆತಂಕವಿದೆ ಎಂದು ಅವರು ಅಧಿಕಾರಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಮೊಬೈಲ್ ಕುರಿತ ಪ್ರಜ್ವಲ್ ಹೇಳಿಕೆ
ತಮ್ಮ ಬಳಿ ಮೊಬೈಲ್ ಇರುವ ವಿಡಿಯೋ ಹಳೆಯದು ಎಂದು ಪ್ರಜ್ವಲ್ ರೇವಣ್ಣ ವಿಚಾರಣೆ ವೇಳೆ ಹೇಳಿರುವುದಾಗಿ ತಿಳಿದುಬಂದಿದೆ. 2024ರ ಸೆಪ್ಟೆಂಬರ್ 24ರಂದು ‘ರೌಡಿ ಭರತ್’ ಎಂಬಾತ ಜೆಡಿಎಸ್‌ನ ವ್ಯಕ್ತಿಯೊಬ್ಬರು ತಮ್ಮೊಂದಿಗೆ ಮಾತನಾಡಬೇಕಿದೆ ಎಂದು ಹೇಳಿ ಮೊಬೈಲ್ ನೀಡಿದ್ದ ಎಂದು ಅವರು ಹೇಳಿರುವುದಾಗಿ ಮೂಲಗಳು ತಿಳಿಸಿವೆ.
ಪ್ರಜ್ವಲ್ ಅವರ ಈ ಹೇಳಿಕೆಯನ್ನೂ ತನಿಖೆಯ ಭಾಗವಾಗಿ ಅಧಿಕಾರಿಗಳು ಪರಿಶೀಲಿಸುತ್ತಿದ್ದು, ಮೊಬೈಲ್‌ನ ಮೂಲ ಹಾಗೂ ಅದು ಜೈಲಿನೊಳಗೆ ತಲುಪಿದ ಸಂದರ್ಭದ ಕುರಿತು ಹೆಚ್ಚಿನ ಮಾಹಿತಿ ಕಲೆಹಾಕಲಾಗುತ್ತಿದೆ.

