ಜೈಲಿನಲ್ಲಿ ಮೊಬೈಲ್ ಬಳಕೆ ಪ್ರಕರಣ: ಪ್ರಜ್ವಲ್ ರೇವಣ್ಣ ಎರಡು ದಿನ ಪೊಲೀಸ್‌ ವಶಕ್ಕೆ
x

ಜೈಲಿನಲ್ಲಿ ಮೊಬೈಲ್ ಬಳಕೆ ಪ್ರಕರಣ: ಪ್ರಜ್ವಲ್ ರೇವಣ್ಣ ಎರಡು ದಿನ ಪೊಲೀಸ್‌ ವಶಕ್ಕೆ

ಆ.11ರಂದು ಪರಪ್ಪನ ಅಗ್ರಹಾರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ದಿಢೀರ್ ದಾಳಿ ನಡೆಸಿದ್ದರು. ಈ ವೇಳೆ, ಪ್ರಜ್ವಲ್ ರೇವಣ್ಣ ಇದ್ದ ಬ್ಯಾರಕ್‌ನಲ್ಲಿ ಮೊಬೈಲ್ ಫೋನ್ ಪತ್ತೆಯಾಗಿತ್ತು.


Click the Play button to hear this message in audio format

ಜೈಲಿನಲ್ಲಿ ಮೊಬೈಲ್ ಫೋನ್ ಬಳಸುತ್ತಿದ್ದ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣನನ್ನು ಪೊಲೀಸರು ಎರಡು ದಿನಗಳ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಜ್ವಲ್‌ ರೇವಣ್ಣ ಜತೆಗೆ ಆರೋಪಿ ಪ್ರತಾಪ್ ರಾಯ್ ಎಂಬಾತನನ್ನು ಸಹ ವಶಕ್ಕೆ ಪಡೆದುಕೊಳ್ಳಲಾಗಿದೆ. ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯವು ಇಬ್ಬರು ಆರೋಪಿಗಳನ್ನು ಎರಡು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿ ಆದೇಶ ಹೊರಡಿಸಿದೆ.

ಆಗಸ್ಟ್ 11ರಂದು ಪರಪ್ಪನ ಅಗ್ರಹಾರ ಕಾರಾಗೃಹದ ಮೇಲೆ ಸಿಸಿಬಿ ಪೊಲೀಸರು ದಿಢೀರ್ ದಾಳಿ ನಡೆಸಿದ್ದರು. ಈ ವೇಳೆ, ಅತ್ಯಾಚಾರ ಪ್ರಕರಣದ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ಪ್ರಜ್ವಲ್ ರೇವಣ್ಣ ಇದ್ದ ಬ್ಯಾರಕ್‌ನಲ್ಲಿ ಅಕ್ರಮವಾಗಿ ಮೊಬೈಲ್ ಫೋನ್ ಪತ್ತೆಯಾಗಿತ್ತು. ಕಾರಾಗೃಹದ ನಿಯಮಗಳನ್ನು ಗಾಳಿಗೆ ತೂರಿ ನಡೆಸುತ್ತಿದ್ದ ಈ ಅಕ್ರಮವು ರಾಜ್ಯಾದ್ಯಂತ ಭಾರೀ ಸಂಚಲನ ಮೂಡಿಸಿತ್ತು. ಪೊಲೀಸರು ಜಪ್ತಿ ಮಾಡಿದ ಮೊಬೈಲ್ ಫೋನ್ ಅನ್ನು ತಪಾಸಣೆಗೆ ಒಳಪಡಿಸಿದಾಗ, ಅದರಲ್ಲಿ ಫೇಸ್‌ಬುಕ್, ವಾಟ್ಸ್‌ಆ್ಯಪ್, ಇನ್‌ಸ್ಟಾಗ್ರಾಮ್ ಮತ್ತು ನೆಟ್‌ಫ್ಲಿಕ್ಸ್‌ನಂತಹ ಆ್ಯಪ್‌ಗಳು ಸಕ್ರಿಯವಾಗಿದ್ದವು. ಈ ಮೊಬೈಲ್ ಬಳಸಿಕೊಂಡು ಪ್ರಜ್ವಲ್ ರೇವಣ್ಣ ಅವರು ತಮ್ಮ ಕುಟುಂಬ ಸದಸ್ಯರು ಮತ್ತು ವಕೀಲರೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎಂಬುದು ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎಫ್‌ಐಆರ್ ದಾಖಲಿಸಲಾಗಿತ್ತು.

ಪೊಲೀಸ್ ಕಸ್ಟಡಿಗೆ ಮನವಿ, ನ್ಯಾಯಾಲಯದ ಆದೇಶ

ಜೈಲಿನಂತಹ ಪ್ರದೇಶದಲ್ಲಿ ಮೊಬೈಲ್ ಫೋನ್ ಎಲ್ಲಿಂದ ಬಂತು? ಅದನ್ನು ಜೈಲಿನೊಳಗೆ ತಲುಪಿಸಿದ್ದು ಯಾರು? ಮತ್ತು ಪ್ರಜ್ವಲ್ ರೇವಣ್ಣ ಅವರು ಆ ಫೋನ್ ಬಳಸಿ ಬೇರೆ ಯಾರೊಂದಿಗಾದರೂ ಸಂಪರ್ಕದಲ್ಲಿದ್ದಾರೆಯೇ ಎಂಬಿತ್ಯಾದಿ ವಿಷಯಗಳನ್ನು ತನಿಖೆ ಮಾಡುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ, ಪ್ರಕರಣದ ಕೂಲಂಕುಷ ತನಿಖೆಗೆ ಆರೋಪಿಗಳನ್ನು ವಶಕ್ಕೆ ಪಡೆಯುವುದು ಅತ್ಯಗತ್ಯ ಎಂದು ಸಿಸಿಬಿ ಪೊಲೀಸರು ನ್ಯಾಯಾಲಯದ ಮುಂದೆ ವಾದಿಸಿದ್ದರು. ಪೊಲೀಸರ ಮನವಿಯನ್ನು ಪರಿಗಣಿಸಿದ 42ನೇ ಎಸಿಎಂಎಂ ನ್ಯಾಯಾಲಯ, ಪ್ರಜ್ವಲ್ ರೇವಣ್ಣ ಮತ್ತು ಪ್ರತಾಪ್ ರಾಯ್ ಅವರನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಮುಂದಿನ 48 ಗಂಟೆಗಳ ಕಾಲ ತನಿಖಾಧಿಕಾರಿಗಳು ಇಬ್ಬರು ಆರೋಪಿಗಳನ್ನು ವಿಚಾರಣೆ ನಡೆಸಲಿದ್ದಾರೆ.

ತನಿಖೆಯ ಉದ್ದೇಶ

ಪೊಲೀಸರ ಪಾಲಿಗೆ ಈ ತನಿಖೆ ಅತ್ಯಂತ ಮಹತ್ವದ್ದಾಗಿದ್ದು, ಕೆಲವು ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ನಡೆಯಲಿದೆ. ಹೈ ಸೆಕ್ಯುರಿಟಿ ಇರುವ ಜೈಲಿನೊಳಗೆ ಮೊಬೈಲ್ ಫೋನ್ ನುಸುಳಿದ್ದು ಹೇಗೆ? ಇದರ ಹಿಂದೆ ಜೈಲು ಸಿಬ್ಬಂದಿಯ ಕೈವಾಡವಿದೆಯೇ? ಪ್ರಜ್ವಲ್ ರೇವಣ್ಣ ಅವರು ಕೇವಲ ವಕೀಲರು ಮತ್ತು ಕುಟುಂಬಸ್ಥರ ಜೊತೆ ಮಾತ್ರ ಮಾತನಾಡಿದ್ದಾರೆಯೇ ಅಥವಾ ಬೇರೆ ಯಾರೊಂದಿಗಾದರೂ ಸಂಪರ್ಕದಲ್ಲಿದ್ದರೇ? ಫೋನ್‌ನಲ್ಲಿನ ಡಿಲೀಟ್ ಮಾಡಲಾದ ಸಂದೇಶಗಳು ಮತ್ತು ಕರೆಗಳ ದಾಖಲೆಗಳನ್ನು ಮರುಪಡೆಯುವುದು. ಈ ಅಕ್ರಮಕ್ಕೆ ಸಹಕರಿಸಿದ ಜೈಲಿನ ಇತರೆ ಕೈದಿಗಳು ಅಥವಾ ಸಿಬ್ಬಂದಿಗಳ ಯಾರು? ಎಂಬುದರ ಕುರಿತು ವಿಚಾರಣೆ ನಡೆಸಲಿದ್ದಾರೆ.

ಪೊಲೀಸ್ ವಶದಲ್ಲಿರುವ ಅವಧಿ ಮುಗಿದ ಬಳಿಕ ಆರೋಪಿಗಳನ್ನು ಮತ್ತೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ. ಈ ಎರಡು ದಿನಗಳ ವಿಚಾರಣೆಯು ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸಾಕ್ಷ್ಯಗಳನ್ನು ನೀಡುವ ನಿರೀಕ್ಷೆಯಿದೆ. ಈ ಅಕ್ರಮಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಗೃಹ ಇಲಾಖೆ ಭರವಸೆ ನೀಡಿದ್ದು, ಮುಂದಿನ ದಿನಗಳಲ್ಲಿ ಜೈಲು ಸಿಬ್ಬಂದಿ ವರ್ಗಾವಣೆಯಾಗುವ ಅಥವಾ ಅಮಾನತಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

Read More
Next Story