Voice clone: ​​Former minister Zameer Ahmed speaks out against viral audio!
x

ಮಾಜಿ ಸಚಿವ ಜಮೀರ್ ಅಹ್ಮದ್

ಧ್ವನಿ ಕ್ಲೋನ್‌: ವೈರಲ್ ಆಡಿಯೋ ವಿರುದ್ಧ ಮಾಜಿ ಸಚಿವ ಜಮೀರ್ ಅಹ್ಮದ್ ಗರಂ!

ಆಡಿಯೋ ವಿವಾದದ ಬೆನ್ನಲ್ಲೇ ತೀವ್ರ ಆಕ್ರೋಶ ಹೊರಹಾಕಿರುವ ಜಮೀರ್ ಅಹ್ಮದ್ ಖಾನ್, ಇದೊಂದು ನಕಲಿ ಆಡಿಯೋ ಹಾಗೂ ತನ್ನ ರಾಜಕೀಯ ಭವಿಷ್ಯ ಮುಗಿಸಲು ಹೆಣೆದಿರುವ ಭಾರಿ ಷಡ್ಯಂತ್ರ ಎಂದು ಗುಡುಗಿದ್ದಾರೆ!


Click the Play button to hear this message in audio format

ರಾಜ್ಯ ರಾಜಕಾರಣದಲ್ಲಿ ಸಿಎಂ ಬದಲಾವಣೆ ಪರ್ವದ ನಡುವೆಯೇ ಈಗ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಅವರದ್ದೆನ್ನಲಾದ 'ಆಡಿಯೋ ಬಾಂಬ್' ಒಂದು ಭಾರಿ ಸಂಚಲನ ಸೃಷ್ಟಿಸಿದೆ. ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಸ್ವಪಕ್ಷದ ವಿರುದ್ಧವೇ ಕೆಲಸ ಮಾಡಲಾಗಿತ್ತು ಎಂಬ ಗಂಭೀರ ಆರೋಪ ಹೊತ್ತಿರುವ ಈ ವೈರಲ್ ಆಡಿಯೋ ಕ್ಲಿಪ್ ಕಾಂಗ್ರೆಸ್ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ.

ಈ ವಿವಾದದ ಬೆನ್ನಲ್ಲೇ ತೀವ್ರ ಆಕ್ರೋಶ ಹೊರಹಾಕಿರುವ ಜಮೀರ್ ಅಹ್ಮದ್ ಖಾನ್, ಇದೊಂದು ನಕಲಿ ಆಡಿಯೋ ಹಾಗೂ ತನ್ನ ರಾಜಕೀಯ ಭವಿಷ್ಯ ಮುಗಿಸಲು ಹೆಣೆದಿರುವ ಭಾರಿ ಷಡ್ಯಂತ್ರ ಎಂದು ಗುಡುಗಿದ್ದಾರೆ!

ಇತ್ತೀಚೆಗೆ ನಡೆದ ದಾವಣಗೆರೆ ದಕ್ಷಿಣ ಉಪಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಮೊಹಮ್ಮದ್ ಸಿರಾಜ್ ಹಾಗೂ ಜಮೀರ್ ಅಹ್ಮದ್ ಖಾನ್ ನಡುವೆ ನಡೆದಿದೆ ಎನ್ನಲಾದ ದೂರವಾಣಿ ಸಂಭಾಷಣೆ ಇದಾಗಿದೆ. ಸಂಭಾಷಣೆಯಲ್ಲಿ, "ಇದು ನನ್ನ ಗೌರವಕ್ಕೆ ಸವಾಲು" ಎಂದು ಜಮೀರ್ ಹೇಳಿರುವುದು ಹಾಗೂ ಒಟ್ಟಾರೆ ಮತದಾನದ ಬಗ್ಗೆ ಕೇಳಿರುವುದು ಕೇಳಿಬಂದಿದೆ ಎನ್ನಲಾಗಿದೆ. ಇದಕ್ಕೆ ಪ್ರತಿಯಾಗಿ ಸಿರಾಜ್ ಅವರು, "ಕುಕ್ಕರ್.. ಕೇವಲ ಕುಕ್ಕರ್" ಎಂದು ಉತ್ತರಿಸಿದ್ದಾರೆ. 'ಕುಕ್ಕರ್' ಎಂಬುದು ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆ ಅವರ ಚುನಾವಣಾ ಚಿಹ್ನೆಯಾಗಿತ್ತು.

ಎಸ್‌ಡಿಪಿಐ ಅಭ್ಯರ್ಥಿಗೆ ಮತ

ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಮಲ್ಲಿಕಾರ್ಜುನ್ ಪರವಾಗಿ ಮುಸ್ಲಿಂ ಮತಗಳು ಬೀಳದಂತೆ ತಡೆದು, ಎಸ್‌ಡಿಪಿಐ ಅಭ್ಯರ್ಥಿಗೆ ಮತ ಹಾಕಿಸುವ ಮೂಲಕ ಪಕ್ಷ ವಿರೋಧಿ ಚಟುವಟಿಕೆ ನಡೆಸಲಾಗಿದೆ ಎಂದು ಕೆಲವು ಮುಖಂಡರು ಗಂಭೀರ ಆರೋಪ ಮಾಡಿದ್ದಾರೆ.

ಎಐ ತಂತ್ರಜ್ಞಾನದ ಕರಾಳ ಮುಖ: ಜಮೀರ್‌

ಆಡಿಯೋ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಜಮೀರ್ ಅಹ್ಮದ್ ಖಾನ್ ಸುದೀರ್ಘ ಹೇಳಿಕೆ ಬಿಡುಗಡೆ ಮಾಡಿದ್ದು, "ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಆಡಿಯೋ ಸಂಪೂರ್ಣ ನಕಲಿ. ಇತ್ತೀಚಿನ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಮತ್ತು ವಾಯ್ಸ್ ಕ್ಲೋನಿಂಗ್ ಬಳಸಿ ನನ್ನ ಧ್ವನಿಯನ್ನು ಸೃಷ್ಟಿಸಲಾಗಿದೆ. "ಕಾಂಗ್ರೆಸ್ ಪಕ್ಷದೊಳಗೆ ಗೊಂದಲ ಮೂಡಿಸಲು ಮತ್ತು ನನ್ನ ಇಮೇಜ್ ಹಾಳು ಮಾಡಲು ಕಿಡಿಗೇಡಿಗಳು ಮಾಡಿರುವ ಕೃತ್ಯವಿದು. ಸಾರ್ವಜನಿಕರು ಹಾಗೂ ಕಾರ್ಯಕರ್ತರು ಇದನ್ನು ನಂಬಬಾರದು. ಯಾವ ತನಿಖೆಗೆ ಬೇಕಾದರೂ ಒಳಪಡಿಸಲಿ, ನಾನು ಯಾವುದೇ ತಪ್ಪು ಮಾಡಿಲ್ಲ. ಈ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಅಧಿಕೃತ ದೂರು ದಾಖಲಿಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಡಿಸಿಎಂ ರೇಸ್‌ನಿಂದ ಹೊರದಬ್ಬುವ ತಂತ್ರ?

ಈ ಆಡಿಯೋ ಲೀಕ್ ಆಗಿರುವ ಸಮಯ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಜೂ.೩ ರಂದು (ಬುಧವಾರ) ಡಿ.ಕೆ. ಶಿವಕುಮಾರ್ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಬಣದ ನಿಷ್ಠಾವಂತರಾಗಿರುವ ಜಮೀರ್ ಅಹ್ಮದ್ ಖಾನ್ ಉಪಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿದ್ದಾರೆ ಎಂಬ ವದಂತಿ ದಟ್ಟವಾಗಿತ್ತು. ಜಮೀರ್ ಅಪ್ತ ವಲಯದ ಪ್ರಕಾರ, "ಜಮೀರ್ ಅಹ್ಮದ್ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಅಥವಾ ಪ್ರಮುಖ ಖಾತೆ ಸಿಗದಂತೆ ತಡೆಯಲು ಪಕ್ಷದ ಒಳಗಿನ ಹಾಗೂ ಹೊರಗಿನ ಶತ್ರುಗಳು ಜಂಟಿಯಾಗಿ ಈ ಯೋಜನೆ ಹಾಕಿದ್ದಾರೆ. ಹೊಸ ಸಚಿವ ಸಂಪುಟ ರಚನೆಯಾಗುವ ಮುನ್ನವೇ ಅವರ ಘನತೆಗೆ ಕಳಂಕ ಹಚ್ಚುವುದು ಇದರ ಅಸಲಿ ಉದ್ದೇಶ" ಎಂದು ಆಪ್ತ ಮೂಲಗಳು ತಿಳಿಸಿವೆ.

Read More
Next Story