ಸಚಿವ ಜಮೀರ್‌ಗೆ ಸಿಎಂ ವಾರ್ನಿಂಗ್; ಸಚಿವ ಸ್ಥಾನಕ್ಕೆ ಕುತ್ತು ಸಾಧ್ಯತೆ
x
ಸಿಎಂ ಸಿದ್ದರಾಮಯ್ಯ ಜತೆ ಜಮೀರ್‌ ಅಹಮದ್‌ ಸಾಂದರ್ಭಿಕ ಚಿತ್ರ

ಸಚಿವ ಜಮೀರ್‌ಗೆ ಸಿಎಂ ವಾರ್ನಿಂಗ್; ಸಚಿವ ಸ್ಥಾನಕ್ಕೆ ಕುತ್ತು ಸಾಧ್ಯತೆ

ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು 'ಕಾವೇರಿ'ಯಲ್ಲಿ ಭೇಟಿ ಮಾಡಿದ ಜಮೀರ್ ಅಹ್ಮದ್ ಖಾನ್ ಅವರನ್ನು ಸಿಎಂ ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿಯಿದೆ.


Click the Play button to hear this message in audio format

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹಮದ್‌ ತಲೆದಂಡದ ಬೆನ್ನಲ್ಲೇ ಸಚಿವ ಜಮೀರ್‌ ಅಹಮದ್‌ ಅವರ ಸಚಿವ ಸ್ಥಾನಕ್ಕೆ ಕುತ್ತು ಬರುವ ಸಾಧ್ಯತೆಗಳು ದಟ್ಟವಾಗಿದೆ.

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಸಮುದಾಯದ ನಾಯಕರೇ ಕಾಂಗ್ರೆಸ್‌ ಅಭ್ಯರ್ಥಿ ಸೋಲಿಗೆ ಷಡ್ಯಂತ್ರ್ಯ ರೂಪಿಸಿದ್ದರು ಎಂದು ಶಾಸಕ ರಿಜ್ವಾನ್‌ ಅರ್ಷದ್‌, ವಿಧಾನ ಪರಿಷತ್‌ ಸದಸ್ಯ ಸಲೀಂ ಅಹಮದ್‌ ಆರೋಪಿಸಿದ್ದರು. ಉಪಚುನಾವಣೆ ಪ್ರಚಾರದಲ್ಲಿ ಕಾಂಗ್ರೆಸ್‌ ನಾಯಕರ ಪಾತ್ರದ ಬಗ್ಗೆಯೂ ಹೈಕಮಾಂಡ್ ವರದಿ ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ವರಿಷ್ಠರು, ನಸೀರ್‌ ಅಹಮದ್ ಅವರಿಗೆ ರಾಜೀನಾಮೆಗೆ ಸೂಚಿಸಿದ್ದರು. ಆದರೆ, ರಾಜೀನಾಮೆ ನೀಡಲು ವಿಳಂಬ ಮಾಡಿದ ಹಿನ್ನೆಲೆ ಸೋಮವಾರ ಹುದ್ದೆಯಿಂದ ವಜಾಗೊಳಿಸಲಾಗಿತ್ತು.

ಮಂಗಳವಾರ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಜಮೀರ್‌ ಅಹಮದ್‌ ಅವರು, ಅಬ್ದುಲ್ ಜಬ್ಬಾರ್ ರಾಜೀನಾಮೆ ಹಾಗೂ ನಸೀರ್ ಅಹಮದ್‌ ತಲೆದಂಡದ ವಿಚಾರವಾಗಿ ಮಾತನಾಡಿದ್ದರು. ಸಮುದಾಯದಲ್ಲಿ ತಲೆದೋರಿದ್ದ ಅಸಮಾಧಾನ ಸರಿ ಹೋಗಿದೆ. ಅದೇ ವಿಚಾರವನ್ನು ಸಿಎಂ ಜತೆ ಚರ್ಚಿಸಲು ಹೋಗುತ್ತಿರುವೆ ಎಂದು ಹೇಳಿದ್ದರು. ಆದರೆ, ಸಿಎಂ ಸಿದ್ದರಾಮಯ್ಯ ಅವರು ಜಮೀರ್ ವಿರುದ್ಧ ಕೆಂಡಾಮಂಡಲವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

'ಕಾವೇರಿ' ನಿವಾಸದಲ್ಲಿ ಹೈಡ್ರಾಮಾ

ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು 'ಕಾವೇರಿ'ಯಲ್ಲಿ ಭೇಟಿ ಮಾಡಿದ ಜಮೀರ್ ಅಹ್ಮದ್ ಖಾನ್ ಅವರನ್ನು ಸಿಎಂ ತರಾಟೆಗೆ ತೆಗೆದುಕೊಂಡಿದ್ದಾರೆ. ಪಕ್ಷದ ಆಂತರಿಕ ವಿದ್ಯಮಾನಗಳು ಮತ್ತು ಹೈಕಮಾಂಡ್ ಶಿಸ್ತುಕ್ರಮದ ಬಗ್ಗೆ ಸಿಎಂ ಎಚ್ಚರಿಕೆ ನೀಡಿದ್ದು, ಜಮೀರ್ ಅವರ ಸಚಿವ ಸ್ಥಾನಕ್ಕೆ ಕುತ್ತು ತರುವ ಆತಂಕ ಎದುರಾಗಿದೆ.

"ಬಂಡಾಯದ ವಿಚಾರವಾಗಿ ನಿನ್ನ ಮೇಲೆ ಹೈಕಮಾಂಡ್ ಸಿಟ್ಟಾಗಿದೆ. ನೀನೇ ಹೈಕಮಾಂಡ್‌ಗೆ ಸಮಜಾಯಿಷಿ ನೀಡಬೇಕು." ಎಂದು ಸಿಎಂ ಸಿದ್ದರಾಮಯ್ಯ ಅವರು ಜಮೀರ್‌ಗೆ ಸೂಚಿಸಿದ್ದಾರೆ ಎನ್ನಲಾಗಿದೆ.

ಜಮೀರ್ ವಿರುದ್ಧದ ಆರೋಪಗಳೇನು?

ಪಕ್ಷದ ಅಭ್ಯರ್ಥಿಯ ವಿರುದ್ಧ ಬಂಡಾಯ ಎದ್ದವರಿಗೆ ಜಮೀರ್ ಪ್ರಚೋದನೆ ನೀಡಿದ್ದರೆಂಬ ದೂರು ಹೈಕಮಾಂಡ್ ತಲುಪಿದೆ. ಅಲ್ಲದೇ, ಪ್ರಚಾರದ ಸಂದರ್ಭದಲ್ಲಿ ಕೇರಳ ಪ್ರಚಾರ ಮತ್ತು ವೈಯಕ್ತಿಕ ಕಾರಣ ನೀಡಿ ಮುಂಬೈಗೆ ತೆರಳಿದ್ದು ಕೂಡ ಹೈಕಮಾಂಡ್ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಇದಲ್ಲದೇ ಅಬ್ದುಲ್‌ ಜಬ್ಬಾರ್‌ಗೆ ಟಿಕೆಟ್‌ ಸಿಗದ ಕಾರಣ ಅಸಮಾಧಾನಗೊಂಡು ಎಸ್‌ಡಿಪಿಐ ಅಭ್ಯರ್ಥಿ ಹಾಗೂ ಇತರೆ ಪಕ್ಷೇತರ ಅಭ್ಯರ್ಥಿಗಳಿಗೆ ಹಣಕಾಸು ನೆರವು ನೀಡಿದ್ದರೆಂಬ ಆರೋಪಗಳು ಕೇಳಿ ಬಂದಿದ್ದವು. ಪಕ್ಷದ ಅಭ್ಯರ್ಥಿ ಸೋಲಿಗೆ ಪಕ್ಷದವರೇ ಷಡ್ಯಂತ್ರ್ಯ ರೂಪಿಸಿದ್ದರು ಎಂದು ಶಾಸಕ ರಿಜ್ವಾನ್‌ ಅರ್ಷದ್‌, ವಿಧಾನ ಪರಿಷತ್‌ ಸದಸ್ಯ ಸಲೀಂ ಅಹಮದ್‌ ಅವರು ಹೈಕಮಾಂಡ್‌ಗೆ ವರದಿ ನೀಡಿದ್ದರು.

ಸಮರ್ಥನೆ ನೀಡಿದ ಜಮೀರ್

ಸಿಎಂ ಆಕ್ರೋಶಕ್ಕೆ ಪ್ರತಿಕ್ರಿಯಿಸಿದ ಜಮೀರ್, "ನಾನು ಪಕ್ಷದ ವಿರುದ್ಧ ಯಾವುದೇ ಚಟುವಟಿಕೆ ನಡೆಸಿಲ್ಲ. ಕೇವಲ ನನ್ನ ಸಮುದಾಯಕ್ಕೆ ಟಿಕೆಟ್ ನೀಡುವಂತೆ ವಿನಂತಿಸಿದ್ದೆ ಅಷ್ಟೆ. ನಿಮ್ಮ ಸೂಚನೆಯಂತೆ ದಾವಣಗೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಅಭ್ಯರ್ಥಿ ಪರ ಕೆಲಸ ಮಾಡುವಂತೆ ಸೂಚಿಸಿದ್ದೇನೆ," ಎಂದು ಸಮಜಾಯಿಷಿ ನೀಡಲು ಯತ್ನಿಸಿದರು. ರಿಜ್ವಾನ್ ಅರ್ಷದ್ ಹಾಗೂ ಸಲೀಂ ಅಹ್ಮದ್ ಅವರಿಗೆ ಜವಾಬ್ದಾರಿ ಕೊಟ್ಟಿದ್ದರಿಂದ ನಾನು ಬೇರೆ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದೆ ಎಂದು ತಿಳಿಸಿದಾಗ ನೀನೇ ಸಮಜಾಯಿಷಿ ನೀಡು ಎಂದು ಸಿಎಂ ಹೇಳಿದ್ದಾಗಿ ತಿಳಿದುಬಂದಿದೆ.

ಪರಸ್ಪರ ಚರ್ಚೆಯ ಬಳಿಕ ಸಿಎಂ ಅವರೊಂದಿಗೇ ಜಮೀರ್‌ ಒಂದೇ ಕಾರಿನಲ್ಲಿ ವಿಧಾನಸೌಧಕ್ಕೆ ತೆರಳಿರುವುದು ರಾಜಕೀಯ ವಲಯದಲ್ಲಿ ಹಲವು ವ್ಯಾಖ್ಯಾನಗಳಿಗೆ ಎಡೆಮಾಡಿಕೊಟ್ಟಿದೆ.

Read More
Next Story