ವಿನಯ್ ಕುಲಕರ್ಣಿ ಶಾಸಕ ಸ್ಥಾನ ನಾಳೆ ರದ್ದು? ಸಚಿವಾಲಯದಿಂದ ಅಧಿಕೃತ ಆದೇಶ
x

ವಿನಯ್ ಕುಲಕರ್ಣಿ ಶಾಸಕ ಸ್ಥಾನ ನಾಳೆ ರದ್ದು? ಸಚಿವಾಲಯದಿಂದ ಅಧಿಕೃತ ಆದೇಶ

ನ್ಯಾಯಾಲಯದ ಆದೇಶದ ಕುರಿತು ವಿಧಾನಸಭಾ ಸಚಿವಾಲಯದ ಕಾನೂನು ವಿಭಾಗವು ಪರಿಶೀಲನೆ ನಡೆಸುತ್ತಿದ್ದು, ಬುಧವಾರ ವಿನಯ್‌ ಕುಲಕರ್ಣಿ ಶಾಸಕತ್ವ ರದ್ದು ಆದೇಶ ಪ್ರಕಟವಾಗುವ ನಿರೀಕ್ಷೆ ಇದೆ.


ಬಿಜೆಪಿ ಮುಖಂಡ ಯೋಗೇಶ್‌ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೊಳಗಾಗಿರುವ ಹಿನ್ನೆಲೆಯಲ್ಲಿ ಶಾಸಕ ವಿನಯ್‌ ಕುಲಕರ್ಣಿ ಶಾಸಕತ್ವ ಸ್ಥಾನ ರದ್ದುಗೊಳಿಸುವ ಸಂಬಂಧ ಬುಧವಾರ ಆದೇಶ ಹೊರಬೀಳುವ ಸಾಧ್ಯತೆ ಇದೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು 16 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ನೀಡಿದೆ. ವಿನಯ್‌ ಕುಲಕರ್ಣಿ ಇದನ್ನು ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಆದೇಶವು ವಿಧಾನಸಭಾ ಸಚಿವಾಲಯಕ್ಕೆ ತಡವಾಗಿ ತಲುಪಿರುವ ಕಾರಣ ವಿನಯ್‌ ಕುಲಕರ್ಣಿ ಶಾಸಕತ್ವವನ್ನು ರದ್ದುಗೊಳಿಸಿಲ್ಲ. ನ್ಯಾಯಾಲಯದ ಆದೇಶದ ಕುರಿತು ವಿಧಾನಸಭಾ ಸಚಿವಾಲಯದ ಕಾನೂನು ವಿಭಾಗವು ಪರಿಶೀಲನೆ ನಡೆಸುತ್ತಿದ್ದು, ಬುಧವಾರ ಶಾಸಕತ್ವ ರದ್ದು ಆದೇಶ ಪ್ರಕಟವಾಗುವ ನಿರೀಕ್ಷೆ ಇದೆ. ಈ ಕುರಿತು ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿದ ವಿಧಾನಸಭಾ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ, ನ್ಯಾಯಾಲಯದ ಆದೇಶವು ತಲುಪಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಬುಧವಾರ ಆದೇಶ ಹೊರಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಶಾಸಕತ್ವ ರದ್ದುಗೊಳಿಸಲು ಸಭಾಧ್ಯಕ್ಷರಿಗೆ ಪತ್ರ

ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 16 ಮಂದಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶಿಕ್ಷೆವಿಧಿಸಲಾಗಿದ್ದು, ಈ ಬೆಳವಣಿಗೆಯ ನಂತರ ಅವರನ್ನು ಶಾಸಕ ಸ್ಥಾನದಿಂದ ಅನರ್ಹತೆ ಮಾಡಬೇಕು ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೆ ಕೊರವರ ಸಭಾಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಭಾರತೀಯ ಸಂವಿಧಾನದ ಪರಿಚ್ಛೇದ 191(1)(e) ಮತ್ತು 1951ರ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 8(3) ರ ಪ್ರಕಾರ, ಯಾವುದೇ ಶಾಸಕರು ಕ್ರಿಮಿನಲ್ ಪ್ರಕರಣದಲ್ಲಿ ದೋಷಿಯಾಗಿ ಸಾಬೀತಾಗಿ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಶಿಕ್ಷೆಗೆ ಗುರಿಯಾದರೆ, ಅವರು ತಕ್ಷಣವೇ ತಮ್ಮ ಸ್ಥಾನದಿಂದ ಅನರ್ಹರಾಗುತ್ತಾರೆ. ಸುಪ್ರೀಂ ಕೋರ್ಟ್‌ನ 'ಲಿಲಿ ಥಾಮಸ್ ಮತ್ತು ಕೇಂದ್ರ ಸರ್ಕಾರ' ತೀರ್ಪಿನನ್ವಯ, ಶಿಕ್ಷೆಯಾದ ತಕ್ಷಣವೇ ಅನರ್ಹತೆ ಜಾರಿಗೆ ಬರುತ್ತದೆ ಎಂಬುದು ಸ್ಪಷ್ಟವಾಗಿದೆ ಎಂದು ತಿಳಿಸಿದ್ದಾರೆ.


ಶಾಸಕ ಜಿ.ಜನಾರ್ದನ ರೆಡ್ಡಿ ಅವರನ್ನು ಹೈದರಾಬಾದ್‌ನ ಸಿಬಿಐ ವಿಶೇಷ ನ್ಯಾಯಾಲಯ ದೋಷಿ ಎಂದು ತೀರ್ಮಾನ ಮಾಡಿದ್ದರಿಂದ 2025 ಮೇ 6 ರಂದು ವಿಧಾನಸಭೆಯು ಕ್ರಮ ಕೈಗೊಂಡಿತ್ತು. ವಿಧಾನಸಭೆಯ ಕಾರ್ಯದರ್ಶಿಗಳು ಸಂವಿಧಾನದ ಪರಿಚ್ಛೇದ 191(1)(e) ರ ಅಡಿಯಲ್ಲಿ ಜನಾರ್ದನ ರೆಡ್ಡಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿ, ಅವರ ಸ್ಥಾನವು ತೆರವಾಗಿದೆ ಎಂದು ಘೋಷಿಸಿದ್ದಾರೆ. ಇದೇ ರೀತಿ ವಿನಯ್‌ ಕುಲಕರ್ಣಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Read More
Next Story