Supreme stay on Sringeri recount result: T.D. Rajegowdas seat as MLA continued
x

ಬಿಜೆಪಿಯ ಡಿ.ಎನ್‌. ಜೀವರಾಜ್‌ ಹಾಗೂ ಕಾಂಗ್ರೆಸ್‌ನ ಟಿ.ಡಿ. ರಾಜೇಗೌಡ 

ಶೃಂಗೇರಿ ಮರುಎಣಿಕೆ ಫಲಿತಾಂಶಕ್ಕೆ ಸುಪ್ರೀಂ ತಡೆ: ಟಿ.ಡಿ. ರಾಜೇಗೌಡ ಶಾಸಕ ಸ್ಥಾನ ಮುಂದುವರಿಕೆ

ಚುನಾವಣಾಧಿಕಾರಿಗಳ ಪರಿಷ್ಕೃತ ಫಲಿತಾಂಶದಿಂದ ಶಾಸಕ ಸ್ಥಾನ ಕಳೆದುಕೊಂಡ ಟಿ.ಡಿ. ರಾಜೇಗೌಡ ಅವರು, ಹೈಕೋರ್ಟ್ ಆದೇಶ ಹಾಗೂ ಮರುಎಣಿಕೆ ಪ್ರಕ್ರಿಯೆಯನ್ನು ಪ್ರಶ್ನಿಸಿ ತಮ್ಮ ವಕೀಲರಾದ ತುಷಾರ್ ಗಿರಿ ಅವರ ಮೂಲಕ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.


Click the Play button to hear this message in audio format

ಕರ್ನಾಟಕದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಚುನಾವಣಾ ವಿವಾದದಲ್ಲಿ ಕಾಂಗ್ರೆಸ್ ನಾಯಕ ಟಿ.ಡಿ. ರಾಜೇಗೌಡ ಅವರಿಗೆ ದೊಡ್ಡ ರಿಲೀಫ್ ಸಿಕ್ಕಿದೆ. ಅಂಚೆ ಮತಗಳ ಮರುಎಣಿಕೆ ನಡೆಸಿ, ಬಿಜೆಪಿಯ ಡಿ.ಎನ್. ಜೀವರಾಜ್ ಅವರನ್ನು ವಿಜೇತರೆಂದು ಘೋಷಿಸಿದ್ದ ಪ್ರಕ್ರಿಯೆಗೆ ಸುಪ್ರೀಂ ಕೋರ್ಟ್ ಇದೀಗ ತಡೆಯಾಜ್ಞೆ ನೀಡಿದೆ. ಇದರೊಂದಿಗೆ ಟಿ.ಡಿ. ರಾಜೇಗೌಡ ಅವರ ಶಾಸಕ ಸ್ಥಾನ ತಾತ್ಕಾಲಿಕವಾಗಿ ಮುಂದುವರಿದಿದೆ.

2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಅವರು ಕೇವಲ 201 ಮತಗಳ ಅಂತರದಿಂದ ಜಯಗಳಿಸಿದ್ದರು. ಆದರೆ, ಈ ಫಲಿತಾಂಶವನ್ನು ಪ್ರಶ್ನಿಸಿ ಪರಾಜಿತ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ತಿರಸ್ಕೃತಗೊಂಡಿದ್ದ 279 ಅಂಚೆ ಮತಗಳ ಬಗ್ಗೆ ಜೀವರಾಜ್ ಆಕ್ಷೇಪ ವ್ಯಕ್ತಪಡಿಸಿದ್ದರು.

ಹೈಕೋರ್ಟ್ ಆದೇಶವೇನಿತ್ತು?

ಏಪ್ರಿಲ್ 6 ರಂದು ತೀರ್ಪು ನೀಡಿದ್ದ ಕರ್ನಾಟಕ ಹೈಕೋರ್ಟ್, ತಿರಸ್ಕೃತಗೊಂಡ 279 ಅಂಚೆ ಮತಗಳ ಮರುಪರಿಶೀಲನೆ ಮತ್ತು ಮರುಎಣಿಕೆಗೆ ಚುನಾವಣಾಧಿಕಾರಿಗೆ ಆದೇಶಿಸಿತ್ತು. ಆದರೆ, ಮೇಲ್ಮನವಿ ಸಲ್ಲಿಸಲು ಅವಕಾಶ ಕಲ್ಪಿಸುವ ದೃಷ್ಟಿಯಿಂದ ಈ ಆದೇಶಕ್ಕೆ ಎರಡು ವಾರಗಳ ಕಾಲ ತಡೆಯಾಜ್ಞೆಯನ್ನೂ ನೀಡಿತ್ತು.

ಹೈಕೋರ್ಟ್ ಆದೇಶದಂತೆ ಮೇ 3 ರಂದು ಅಂಚೆ ಮತಗಳ ಮರುಎಣಿಕೆ ನಡೆದಾಗ, ಅಚ್ಚರಿಯ ಬೆಳವಣಿಗೆಯೊಂದು ನಡೆದಿತ್ತು. ಮರುಎಣಿಕೆಯ ನಂತರ ಟಿ.ಡಿ. ರಾಜೇಗೌಡ ಅವರ ಮತಗಳ ಸಂಖ್ಯೆಯಲ್ಲಿ 255 ರಷ್ಟು ಇಳಿಕೆಯಾಗಿ, ಬಿಜೆಪಿಯ ಡಿ.ಎನ್. ಜೀವರಾಜ್ ಅವರು 52 ಮತಗಳ ಅಂತರದಿಂದ ವಿಜಯಶಾಲಿಯಾಗಿದ್ದಾರೆ ಎಂದು ಚುನಾವಣಾಧಿಕಾರಿಗಳು ಪರಿಷ್ಕೃತ ಫಲಿತಾಂಶವನ್ನು ಘೋಷಿಸಿದ್ದರು.

ಸುಪ್ರೀಂ ಮೆಟ್ಟಿಲೇರಿದ ರಾಜೇಗೌಡ

ಚುನಾವಣಾಧಿಕಾರಿಗಳ ಪರಿಷ್ಕೃತ ಫಲಿತಾಂಶದಿಂದ ಶಾಸಕ ಸ್ಥಾನ ಕಳೆದುಕೊಂಡ ಟಿ.ಡಿ. ರಾಜೇಗೌಡ ಅವರು, ಹೈಕೋರ್ಟ್ ಆದೇಶ ಹಾಗೂ ಮರುಎಣಿಕೆ ಪ್ರಕ್ರಿಯೆಯನ್ನು ಪ್ರಶ್ನಿಸಿ ತಮ್ಮ ವಕೀಲರಾದ ತುಷಾರ್ ಗಿರಿ ಅವರ ಮೂಲಕ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಮೇ 11 ರಂದು ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮರುಎಣಿಕೆಯ ಫಲಿತಾಂಶಕ್ಕೆ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ. ಸುಪ್ರೀಂ ಆದೇಶದಿಂದಾಗಿ ಸದ್ಯಕ್ಕೆ ಟಿ.ಡಿ. ರಾಜೇಗೌಡ ಅವರೇ ಶೃಂಗೇರಿ ಶಾಸಕರಾಗಿ ಮುಂದುವರಿಯಲಿದ್ದಾರೆ.

Read More
Next Story