ಸ್ಟಿಂಗ್ ಆಪರೇಷನ್ ಬಿರುಗಾಳಿ: ತಡರಾತ್ರಿ ಆಪ್ತ ಸಚಿವರ ಜೊತೆ ಸಿಎಂ ಸಭೆ; 2 ಗಂಟೆಗಳ ಕಾಲ ಮಹತ್ವದ ಚರ್ಚೆ
ಸ್ಟಿಂಗ್ ಆಪರೇಷನ್ ವಿವಾದದ ಬೆನ್ನಲ್ಲೇ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಡರಾತ್ರಿ ತಮ್ಮ ಆಪ್ತ ಸಚಿವರೊಂದಿಗೆ ಸಭೆ ನಡೆಸಿದ್ದಾರೆ. ಸುಮಾರು ಎರಡು ಗಂಟೆಗಳ ಕಾಲ ನಡೆದ ಸಭೆಯಲ್ಲಿ ರಾಜಕೀಯ ಬೆಳವಣಿಗೆಗಳು ಮತ್ತು ಮುಂದಿನ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ.
ರಾಜ್ಯ ರಾಜಕಾರಣದಲ್ಲಿ ಸ್ಟಿಂಗ್ ಆಪರೇಷನ್ ವಿವಾದ ತೀವ್ರ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ತಡರಾತ್ರಿ ತಮ್ಮ ಆಪ್ತ ಸಚಿವರೊಂದಿಗೆ ಮಹತ್ವದ ಸಭೆ ನಡೆಸಿದ್ದಾರೆ. ಕುಮಾರಕೃಪ ರಸ್ತೆಯಲ್ಲಿರುವ ಮುಖ್ಯಮಂತ್ರಿಗಳ ಸರ್ಕಾರಿ ನಿವಾಸದಲ್ಲಿ ನಡೆದ ಈ ಸಭೆ ಸುಮಾರು ಎರಡು ಗಂಟೆಗಳ ಕಾಲ ನಡೆದಿದ್ದು, ಸ್ಟಿಂಗ್ ಆಪರೇಷನ್ ವಿವಾದದಿಂದ ಸರ್ಕಾರ ಮತ್ತು ಪಕ್ಷಕ್ಕೆ ಉಂಟಾಗಿರುವ ರಾಜಕೀಯ ಹಿನ್ನಡೆ ಹಾಗೂ ಮುಂದಿನ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆದಿದೆ ಎನ್ನಲಾಗಿದೆ.
ಸ್ಟಿಂಗ್ ವಿವಾದದ ನಡುವೆ ಡ್ಯಾಮೇಜ್ ಕಂಟ್ರೋಲ್ ಚರ್ಚೆ?
ಸ್ಟಿಂಗ್ ಆಪರೇಷನ್ ಆರೋಪ-ಪ್ರತ್ಯಾರೋಪಗಳು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿರುವ ಸಂದರ್ಭದಲ್ಲಿ ನಡೆದ ಈ ಸಭೆ ಕುತೂಹಲ ಮೂಡಿಸಿದೆ. ವಿವಾದದಿಂದ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದ ವರ್ಚಸ್ಸಿನ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ಸಚಿವರೊಂದಿಗೆ ಚರ್ಚೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.
ವಿವಾದವನ್ನು ಎದುರಿಸುವುದು, ಪಕ್ಷದ ನಿಲುವನ್ನು ಸ್ಪಷ್ಟಪಡಿಸುವುದು ಹಾಗೂ ರಾಜಕೀಯವಾಗಿ ಎದುರಾಳಿಗಳಿಗೆ ತಿರುಗೇಟು ನೀಡುವ ಸಾಧ್ಯತೆಗಳ ಬಗ್ಗೆಯೂ ಸಮಾಲೋಚನೆ ನಡೆದಿದೆ ಎನ್ನಲಾಗಿದೆ. ಆದರೆ ಸಭೆಯಲ್ಲಿ ನಡೆದ ಚರ್ಚೆಗಳ ಕುರಿತು ಮುಖ್ಯಮಂತ್ರಿಗಳ ಕಡೆಯಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಸಭೆಯಲ್ಲಿ ಭಾಗವಹಿಸಿದ ಸಚಿವರು ಯಾರು?
ಮುಖ್ಯಮಂತ್ರಿಗಳ ನಿವಾಸದಲ್ಲಿ ನಡೆದ ಸಭೆಯಲ್ಲಿ ಹಲವು ಸಚಿವರು ಭಾಗವಹಿಸಿದ್ದರು ಎಂದು ತಿಳಿದುಬಂದಿದೆ. ಕೆ.ಎಚ್. ಮುನಿಯಪ್ಪ, ಚಲುವರಾಯಸ್ವಾಮಿ, ಹೆಚ್.ಸಿ. ಬಾಲಕೃಷ್ಣ, ರಿಜ್ವಾನ್ ಅರ್ಷದ್, ಜಮೀರ್ ಅಹಮದ್ ಖಾನ್, ಕೃಷ್ಣ ಬೈರೇಗೌಡ, ಶಿವಲಿಂಗೇಗೌಡ, ರಾಮಲಿಂಗಾ ರೆಡ್ಡಿ ಸಭೆಯಲ್ಲಿ ಭಾಗಿಯಾದ ಸಚಿವರು.
ಸ್ಟಿಂಗ್ ಆಪರೇಷನ್ ವಿವಾದದ ಹಿನ್ನೆಲೆಯಲ್ಲಿ ತಡರಾತ್ರಿ ನಡೆದ ಈ ಸಭೆಯು ರಾಜ್ಯ ಕಾಂಗ್ರೆಸ್‌ನ ಮುಂದಿನ ರಾಜಕೀಯ ನಡೆ ಕುರಿತು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಸಚಿವರೊಂದಿಗೆ ನಡೆದ ಸುದೀರ್ಘ ಚರ್ಚೆಯ ಬಳಿಕ ಸರ್ಕಾರ ಮತ್ತು ಪಕ್ಷ ಯಾವ ರೀತಿಯ ನಿಲುವು ಪ್ರಕಟಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.

