Postal vote tampering is impossible, I am the genuine winner; Jeevaraj hits back at CM
x

ಸಿಎಂ ಸಿದ್ದರಾಮಯ್ಯ ಹಾಗೂ ಶೃಂಗೇರಿ ಬಿಜೆಪಿ ಶಾಸಕ ಜೀವರಾಜ್‌

'ಅಂಚೆ ಮತ ಟ್ಯಾಂಪರಿಂಗ್ ಅಸಾಧ್ಯ, ನಾನೇ ಅಸಲಿ ವಿಜೇತ'; ಸಿಎಂಗೆ ಜೀವರಾಜ್ ತಿರುಗೇಟು

ಕೋರ್ಟ್ ಆದೇಶದಂತೆ ಮರು ಎಣಿಕೆ ಪ್ರಕ್ರಿಯೆ ಮುಗಿದು, ಶಾಸಕನಾಗಿ ಆಯ್ಕೆಯಾದ ಪ್ರಮಾಣಪತ್ರ ಕೈಸೇರಿದ್ದರೂ, ತಾವು ಶಾಸಕನಾಗಿ ಪ್ರಮಾಣವಚನ ಸ್ವೀಕರಿಸಲಾಗದ ಅತಂತ್ರ ಪರಿಸ್ಥಿತಿಯಲ್ಲಿದ್ದೇನೆ ಎಂದು ಜೀವರಾಜ್ ಬೇಸರ ವ್ಯಕ್ತಪಡಿಸಿದ್ದಾರೆ.


Click the Play button to hear this message in audio format

ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಜಯಭೇರಿ ಬಾರಿಸಿರುವ ಬಿಜೆಪಿ ನಾಯಕ ಡಿ.ಎನ್. ಜೀವರಾಜ್, ಕಾಂಗ್ರೆಸ್ ನಾಯಕರ ಟ್ಯಾಂಪರಿಂಗ್ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. 'ದ ಫೆಡರಲ್ ಕರ್ನಾಟಕ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಆರೋಪಗಳಿಗೆ ತಿರುಗೇಟು ನೀಡಿದ್ದು, ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ವಿರುದ್ಧ ಗಂಭೀರ ಭೂಕಬಳಿಕೆ ಆರೋಪ ಮಾಡಿದ್ದಾರೆ.

ಟ್ಯಾಂಪರಿಂಗ್ ಆರೋಪಕ್ಕೆ ಜೀವರಾಜ್ ಆಕ್ರೋಶ

ಮರು ಎಣಿಕೆಯಲ್ಲಿ ಬಿಜೆಪಿ ಜಯಗಳಿಸಿದ ಬೆನ್ನಲ್ಲೇ ಕಾಂಗ್ರೆಸ್ ನಾಯಕರು ಇವಿಎಂ ಹಾಗೂ ಅಂಚೆ ಮತಗಳ ತಿರುಚುವಿಕೆ (ಟ್ಯಾಂಪರಿಂಗ್) ಆರೋಪ ಮಾಡುತ್ತಿರುವುದಕ್ಕೆ ಜೀವರಾಜ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. "ವಾಸ್ತವದಲ್ಲಿ 2023ರ ಚುನಾವಣೆಯಲ್ಲೇ ನಾನು ಗೆಲ್ಲಬೇಕಿತ್ತು. ಆದರೆ ಆಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದರಿಂದ, ಅವರ ಅಧೀನದಲ್ಲಿದ್ದ ಅಧಿಕಾರಿಗಳು ಅಂಚೆ ಮತಗಳ ಎಣಿಕೆಯಲ್ಲಿ ಮೋಸ ಮಾಡಿದ್ದರು," ಎಂದು ಅವರು ಆರೋಪಿಸಿದ್ದಾರೆ.

"ಇವಿಎಂ ಹಾಗೂ ಅಂಚೆ ಮತಗಳು ನೇರವಾಗಿ ಜಿಲ್ಲಾಧಿಕಾರಿಗಳ ಸುಪರ್ದಿಯಲ್ಲಿರುತ್ತವೆ. ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಅಧಿಕಾರದಲ್ಲಿರುವಾಗ, ಅವರದ್ದೇ ಅಧಿಕಾರಿಗಳಿರುವಾಗ ನಾವು ಹೇಗೆ ಅಂಚೆ ಮತಗಳನ್ನು ಟ್ಯಾಂಪರಿಂಗ್ ಮಾಡಲು ಸಾಧ್ಯ?" ಎಂದು ಅವರು ಮರುಪ್ರಶ್ನೆ ಹಾಕಿದ್ದಾರೆ.

ಪ್ರಮಾಣವಚನ ಸ್ವೀಕರಿಸಲಾಗದ ಅತಂತ್ರ ಸ್ಥಿತಿ

ಕೋರ್ಟ್ ಆದೇಶದಂತೆ ಮರು ಎಣಿಕೆ ಪ್ರಕ್ರಿಯೆ ಮುಗಿದು, ಶಾಸಕನಾಗಿ ಆಯ್ಕೆಯಾದ ಪ್ರಮಾಣಪತ್ರ ಕೈಸೇರಿದ್ದರೂ, ತಾವು ಶಾಸಕನಾಗಿ ಪ್ರಮಾಣವಚನ ಸ್ವೀಕರಿಸಲಾಗದ ಅತಂತ್ರ ಪರಿಸ್ಥಿತಿಯಲ್ಲಿದ್ದೇನೆ ಎಂದು ಜೀವರಾಜ್ ಬೇಸರ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ನಾಯಕರು ಉದ್ದೇಶಪೂರ್ವಕವಾಗಿ ತಮ್ಮ ವಿರುದ್ಧ ಪ್ರಕರಣಗಳನ್ನು ದಾಖಲಿಸಿದ್ದು, ಈ ಕಾನೂನು ತೊಡಕುಗಳನ್ನು ನಿವಾರಿಸಿಕೊಳ್ಳಲು ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ಸಿದ್ದಾರ್ಥ್ ಜಮೀನು ಕಬಳಿಕೆ ಪ್ರಸ್ತಾಪ

ಇದೇ ಸಂದರ್ಭದಲ್ಲಿ ತಮ್ಮ ರಾಜಕೀಯ ಎದುರಾಳಿ ಟಿ.ಡಿ. ರಾಜೇಗೌಡ ವಿರುದ್ಧ ವಾಗ್ದಾಳಿ ನಡೆಸಿದ ಜೀವರಾಜ್, ಕೆಫೆ ಕಾಫಿ ಡೇ ಸಂಸ್ಥಾಪಕ ದಿವಂಗತ ವಿ.ಜಿ. ಸಿದ್ದಾರ್ಥ್ ಅವರಿಗೆ ಸೇರಿದ ಜಮೀನು ಕಬಳಿಕೆ ವಿಚಾರವನ್ನು ಕೆದಕಿದ್ದಾರೆ. "ಸಿದ್ದಾರ್ಥ್ ಅವರ ಮರಣದ ನಂತರ ಅವರಿಗೆ ಸೇರಿದ್ದ ಸುಮಾರು 300 ಎಕರೆ ಜಮೀನನ್ನು ರಾಜೇಗೌಡ ಅವರು ತಮ್ಮ ಹೆಸರಿಗೆ ಮಾಡಿಕೊಳ್ಳಬಾರದಿತ್ತು. ಈ ಅಕ್ರಮದ ಬಗ್ಗೆ ಕಾನೂನು ಹೋರಾಟ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ರಾಜೇಗೌಡ ಅವರು ಆ ಜಮೀನನ್ನು ಸಿದ್ದಾರ್ಥ್ ಅವರ ಕುಟುಂಬಕ್ಕೆ ಮರಳಿಸಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ," ಎಂದು ಜೀವರಾಜ್ ಎಚ್ಚರಿಕೆ ನೀಡಿದ್ದಾರೆ.

Read More
Next Story