
ಶೃಂಗೇರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ
ಶೃಂಗೇರಿ ಅಂಚೆಮತ ಮರು ಎಣಿಕೆ ಹೈಡ್ರಾಮಾ; ಫಲಿತಾಂಶ ಘೋಷಣೆ ಹೈಕೋರ್ಟ್ ಅಂಗಳಕ್ಕೆ
ಚುನಾವಣಾಧಿಕಾರಿ ಗೌರವ್ ಶೆಟ್ಟಿ ಅವರು ಮರು ಎಣಿಕೆಯ ಸಂಪೂರ್ಣ ವರದಿಯನ್ನು ಸೀಲ್ ಮಾಡಿದ ಲಕೋಟೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಮತ್ತು ಹೈಕೋರ್ಟ್‌ಗೆ ರವಾನಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ 2023ರ ಚುನಾವಣೆಯ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆಯು ತೀವ್ರ ಕುತೂಹಲ ಕೆರಳಿಸಿದ್ದು, ಒಂದು ಹಂತದಲ್ಲಿ ಹೈಡ್ರಾಮಾವಾಗಿ ಮಾರ್ಪಟ್ಟಿದೆ. ಶನಿವಾರ ಮಧ್ಯರಾತ್ರಿಯವರೆಗೂ ಸತತವಾಗಿ ನಡೆದ ಮತ ಎಣಿಕೆ ಪ್ರಕ್ರಿಯೆಯ ನಂತರ, ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳಿಬ್ಬರೂ ತಮಗೇ ವಿಜಯವಾಗಿದೆ ಎಂದು ಹೇಳಿಕೊಳ್ಳುವ ಮೂಲಕ ಕ್ಷೇತ್ರದಲ್ಲಿ ಗೊಂದಲದ ವಾತಾವರಣ ಸೃಷ್ಟಿಸಿದ್ದಾರೆ.
ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡ ಮತ್ತು ಬಿಜೆಪಿಯ ಡಿ.ಎನ್. ಜೀವರಾಜ್ ಇಬ್ಬರೂ "ಸತ್ಯಕ್ಕೆ ಜಯ ಸಿಕ್ಕಿದೆ" ಎಂದು ಜಯಘೋಷ ಹಾಕುತ್ತಿದ್ದಾರೆ. ಅಧಿಕೃತ ಫಲಿತಾಂಶದ ಕುರಿತು ಸ್ಪಷ್ಟನೆ ಸಿಗುವ ಮೊದಲೇ ಉಭಯ ಪಕ್ಷಗಳ ಬೆಂಬಲಿಗರು ಪರಸ್ಪರ ಸಂಭ್ರಮಾಚರಣೆಯಲ್ಲಿ ತೊಡಗಿದ್ದು, ರಾಜಕೀಯ ವಲಯದಲ್ಲಿ ನಾಟಕೀಯ ತಿರುವುಗಳಿಗೆ ಕಾರಣವಾಗಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಟಿ.ಡಿ. ರಾಜೇಗೌಡ ಅವರು 201 ಮತಗಳ ಅಂತರದಿಂದ ಜಯಗಳಿಸಿದ್ದರು. ಆದರೆ, ಅಂಚೆ ಮತಗಳ ಎಣಿಕೆಯಲ್ಲಿ ಲೋಪವಾಗಿದೆ ಎಂದು ಆರೋಪಿಸಿ ಡಿ.ಎನ್. ಜೀವರಾಜ್ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಆದೇಶದಂತೆ ಶನಿವಾರ (ಮೇ 2) ಚಿಕ್ಕಮಗಳೂರಿನ ಐಡಿಎಸ್‌ಜಿ ಕಾಲೇಜಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ 1,822 ಅಂಚೆ ಮತಗಳ ಮರು ಎಣಿಕೆ ನಡೆಯಿತು.
ಕಾಂಗ್ರೆಸ್ ಆರೋಪ ಏನು?
ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಅವರು ಮತಪತ್ರಗಳ ಟ್ಯಾಂಪರಿಂಗ್ (ತಿದ್ದುಪಡಿ) ಆರೋಪ ಮಾಡಿದ್ದಾರೆ. "2023ರಲ್ಲಿ ಸಿಂಧುವಾಗಿದ್ದ ಮತಗಳು ಈಗ ಹೇಗೆ ಅಸಿಂಧುವಾದವು? ಮತಪತ್ರಗಳ ಮೇಲೆ ಹೆಚ್ಚುವರಿ ಗುರುತುಗಳನ್ನು ಮಾಡಲಾಗಿದೆ" ಎಂದು ಆರೋಪಿಸಿರುವ ಅವರು, ಈ ಬಗ್ಗೆ ತನಿಖೆಗೆ ಒತ್ತಾಯಿಸಿದ್ದಾರೆ. ಅಲ್ಲದೆ, ಮರು ಎಣಿಕೆಯ ನಂತರವೂ ತಮ್ಮದೇ ಗೆಲುವು ಎಂದು ಕಾಂಗ್ರೆಸ್ ವಲಯ ಪ್ರತಿಪಾದಿಸುತ್ತಿದೆ.
ಅಧಿಕೃತ ಘೋಷಣೆ ಬಾಕಿ
ಚುನಾವಣಾಧಿಕಾರಿ ಗೌರವ್ ಶೆಟ್ಟಿ ಅವರು ಮರು ಎಣಿಕೆಯ ಸಂಪೂರ್ಣ ವರದಿಯನ್ನು ಸೀಲ್ ಮಾಡಿದ ಲಕೋಟೆಯಲ್ಲಿ ಕೇಂದ್ರ ಚುನಾವಣಾ ಆಯೋಗ ಮತ್ತು ಹೈಕೋರ್ಟ್‌ಗೆ ರವಾನಿಸಿದ್ದಾರೆ. ನಿಯಮದಂತೆ, ಮರು ಎಣಿಕೆಯ ಸಂದರ್ಭದಲ್ಲಿ ರಿಟರ್ನಿಂಗ್ ಆಫೀಸರ್ ಯಾವುದೇ ಹೊಸ 'ವಿಜಯಶಾಲಿ' ಪ್ರಮಾಣಪತ್ರ ನೀಡಲು ಅವಕಾಶವಿಲ್ಲ. ಹೈಕೋರ್ಟ್ ಈ ವರದಿಯನ್ನು ಪರಿಶೀಲಿಸಿ ಅಂತಿಮ ಆದೇಶ ಹೊರಡಿಸುವವರೆಗೂ ಶೃಂಗೇರಿಯ ಶಾಸಕರು ಯಾರು ಎಂಬ ಪ್ರಶ್ನೆಗೆ ಅಧಿಕೃತ ಮುದ್ರೆ ಬೀಳುವುದಿಲ್ಲ.
ಗೊಂದಲದ ನಡುವೆ ಬಿಜೆಪಿ ಗೆಲುವಿನ ಸಂದೇಶ
ಮರು ಎಣಿಕೆಯ ಸಂದರ್ಭದಲ್ಲಿ ಟಿ.ಡಿ. ರಾಜೇಗೌಡ ಅವರಿಗೆ ಈ ಹಿಂದೆ ಸಿಕ್ಕಿದ್ದ ಮತಗಳಲ್ಲಿ ಸುಮಾರು 255 ಮತಗಳು ಅಸಿಂಧುಗೊಂಡಿವೆ ಎಂದು ತಿಳಿದುಬಂದಿದೆ. ಇದರಿಂದ ಜೀವರಾಜ್ ಅವರು ಮುನ್ನಡೆ ಸಾಧಿಸಿದ್ದಾರೆ ಎಂದು ಬಿಜೆಪಿ ನಾಯಕರು ವಿಜಯೋತ್ಸವ ಆಚರಿಸಿದ್ದಾರೆ. ಬಿಜೆಪಿ ರಾಜ್ಯಧ್ಯಾಕ್ಷ ಬಿ.ವೈ. ವಿಜಯೇಂದ್ರ ತಮ್ಮ ಸಾಮಾಜಿಕ ಜಾಲತಾಣ (ಎಕ್ಸ್)ನಲ್ಲಿಈ ಕುರಿತು ಪ್ರತಿಕ್ರಿಯಿಸಿದ್ದು, "ಶೃಂಗೇರಿಯ ಪವಿತ್ರ ಭೂಮಿಯಲ್ಲಿ, ಸತ್ಯವು ಅಂತಿಮವಾಗಿ ವಿಜಯಶಾಲಿಯಾಗಿದೆ. ಪಕ್ಷದ ಅಭ್ಯರ್ಥಿ ಡಿ.ಎನ್. ಜೀವರಾಜ್ ಈ ಗೆಲುವು ನಮ್ಮ ಚುನಾವಣಾ ವ್ಯವಸ್ಥೆ ಮತ್ತು ನ್ಯಾಯಾಂಗದ ಮೇಲಿನ ನಂಬಿಕೆಗೆ ಸಂದ ಜಯವಾಗಿದೆ. ಈ ಸಂದರ್ಭದಲ್ಲಿ, ಶೃಂಗೇರಿ ಕ್ಷೇತ್ರದ ಎಲ್ಲಾ ಮತದಾರರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಅರ್ಪಿಸುತ್ತೇನೆ" ಎಂದಿದ್ದಾರೆ.
ಮುಂದುವರೆದು, "ಅವಿರತ ಪ್ರಯತ್ನ ಮತ್ತು ಅಚಲ ಹೋರಾಟದ ಫಲಗಳು ಸಾಕಾರಗೊಂಡಿವೆ. ಹೈಕೋರ್ಟ್ ಆದೇಶದಂತೆ ನಡೆಸಿದ ಅಂಚೆ ಮತಪತ್ರಗಳ ಮರುಎಣಿಕೆಯ ನಂತರ ಫಲಿತಾಂಶಗಳನ್ನು ಘೋಷಿಸಲಾಗಿದೆ. ಸಾಂವಿಧಾನಿಕ ಹೋರಾಟದ ಮೂಲಕ ಮತದಾರರ ಪ್ರತಿಯೊಂದು ಮತಕ್ಕೂ ಗೌರವವನ್ನು ಖಚಿತಪಡಿಸಿಕೊಂಡ ಜೀವರಾಜ್ ಅವರಿಗೆ, ನನ್ನ ಹೃತ್ಪೂರ್ವಕ ಮತ್ತು ಹೆಮ್ಮೆಯ ಅಭಿನಂದನೆಗಳು. ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿನ ಮರುಎಣಿಕೆ ಪ್ರಕರಣವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸತ್ಯವು ಎಂದಿಗೂ ಸೋಲುವುದಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ" ಎಂದು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

