
Sringeri Re-counting| ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ; ಶಾಸಕ ಟಿ.ಡಿ.ರಾಜೇಗೌಡ ನಿರಾಳ
ಮರು ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುತ್ತಿದ್ದಂತೆ ಚಿಕ್ಕಮಗಳೂರಿನ ಐಡಿಎಸ್ಜಿ ಕಾಲೇಜು ಮುಂಭಾಗ ಹಾಗೂ ಶೃಂಗೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ರಾಜೇಗೌಡರ ಅಭಿಮಾನಿಗಳು ಸಂಭ್ರಮಿಸಿದರು.
ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡ ಅವರು ಗೆಲುವು ಸಾಧಿಸುವ ಮೂಲಕ ನಿಟ್ಟುಸಿರು ಬಿಟ್ಟಿದ್ದಾರೆ.
ಹೈಕೋರ್ಟ್ ಆದೇಶದ ಹಿನ್ನೆಲೆ ಶನಿವಾರ ಚಿಕ್ಕಮಗಳೂರು ನಗರದ ಐಡಿಎಸ್‌ಜಿ ಕಾಲೇಜಿನಲ್ಲಿ ನಡೆದ ಅಂಚೆ ಮತಗಳ ಮರು ಎಣಿಕೆಯು ರಾಜೇಗೌಡ ಅವರ ಶಾಸಕತ್ವಕ್ಕೆ ಜೀವ ನೀಡಿದೆ. ಮರು ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುತ್ತಿದ್ದಂತೆ ಚಿಕ್ಕಮಗಳೂರಿನ ಐಡಿಎಸ್ಜಿ ಕಾಲೇಜು ಮುಂಭಾಗ ಹಾಗೂ ಶೃಂಗೇರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ರಾಜೇಗೌಡರ ಅಭಿಮಾನಿಗಳು ಸಂಭ್ರಮಿಸಿದರು. ಪಟಾಕಿ ಸಿಡಿಸಿ, ವಿಜಯೋತ್ಸವ ಆಚರಿಸಿದರು.
ಪ್ರಕರಣದ ಹಿನ್ನೆಲೆ ಏನು?
2023ರ ವಿಧಾನಸಭಾ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ನ ಟಿ.ಡಿ. ರಾಜೇಗೌಡ ಹಾಗೂ ಬಿಜೆಪಿಯ ಮಾಜಿ ಶಾಸಕ ಡಿ.ಎನ್. ಜೀವರಾಜ್ ನಡುವೆ ಭಾರಿ ಪೈಪೋಟಿ ನಡೆದಿತ್ತು. ಅಂತಿಮವಾಗಿ ರಾಜೇಗೌಡ ಅವರು ಕೇವಲ 201 ಮತಗಳ ಅಂತರದಿಂದ ಜಯಗಳಿಸಿದ್ದರು. ಆದರೆ, ಅಂದು ಚಲಾವಣೆಯಾಗಿದ್ದ ಒಟ್ಟು 1,822 ಅಂಚೆ ಮತಗಳ ಪೈಕಿ 279 ಮತಗಳನ್ನು ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದರು.
ಇದನ್ನು ಪ್ರಶ್ನಿಸಿದ್ದ ಡಿ.ಎನ್. ಜೀವರಾಜ್ ಅವರು ಮರು ಎಣಿಕೆಗೆ ಮನವಿ ಮಾಡಿದ್ದರು. ಅಂದಿನ ಜಿಲ್ಲಾ ಚುನಾವಣಾಧಿಕಾರಿಗಳು ಆ ಮನವಿಯನ್ನು ತಿರಸ್ಕರಿಸಿ ರಾಜೇಗೌಡರ ಗೆಲುವನ್ನು ಅಧಿಕೃತವಾಗಿ ಘೋಷಿಸಿದ್ದರು. ಇದನ್ನು ಪ್ರಶ್ನಿಸಿ ಜೀವರಾಜ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಸುದೀರ್ಘ ವಿಚಾರಣೆ ನಡೆಸಿದ ಹೈಕೋರ್ಟ್, 279 ತಿರಸ್ಕೃತ ಮತಗಳ ಮರು ಪರಿಶೀಲನೆ ಹಾಗೂ ಸಂಪೂರ್ಣ ಅಂಚೆ ಮತಗಳ ಮರು ಎಣಿಕೆಗೆ ಆದೇಶಿಸಿತ್ತು.
ಟ್ಯಾಂಪರಿಂಗ್ ಶಂಕೆ; ಆಕ್ಷೇಪ
ಹೈಕೋರ್ಟ್ ಆದೇಶದಂತೆ ಶನಿವಾರ (ಮೇ 2) ಚಿಕ್ಕಮಗಳೂರಿನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭಿಸಲಾಯಿತು. ಆದರೆ ಮತ ಎಣಿಕೆಯ ಸಂದರ್ಭದಲ್ಲಿ ಕೆಲವು ಪೆಟ್ಟಿಗೆಗಳ ಬೀಗ ಮತ್ತು ಸೀಲ್ ಇಲ್ಲದಿರುವುದನ್ನು ಗಮನಿಸಿದ ಶಾಸಕ ಟಿ.ಡಿ. ರಾಜೇಗೌಡ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ ಈ ಮತಪೆಟ್ಟಿಗೆಗಳನ್ನು ಟ್ಯಾಂಪರಿಂಗ್ ಮಾಡಿರುವ ಸಾಧ್ಯತೆ ಇದೆ ಎಂದೂ ಆರೋಪಿಸಿದ್ದರು. ಆದರೂ ಅಂತಿಮವಾಗಿ ಎಣಿಕೆ ಕಾರ್ಯ ಮುಂದುವರಿದು, ರಾಜೇಗೌಡರೇ ಗೆಲುವು ಸಾಧಿಸಿದ್ದಾರೆ ಎಂದು ಘೋಷಿಸಲಾಯಿತು.
ಸತ್ಯಕ್ಕೆ ಸಂದ ಜಯ; ಟಿ.ಡಿ. ರಾಜೇಗೌಡ ಹರ್ಷ
ಗೆಲುವಿನ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಟಿ.ಡಿ. ರಾಜೇಗೌಡ ಅವರು, "ಹೈಕೋರ್ಟ್ ಮರು ಮತ ಎಣಿಕೆಗೆ ಆದೇಶ ನೀಡಿತ್ತು. ನಾನು ಇದರ ವಿರುದ್ಧ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಬಹುದಿತ್ತು. ಆದರೆ, ಸತ್ಯ ಏನೆಂದು ಎಲ್ಲರಿಗೂ ತಿಳಿಯಲಿ ಎಂಬ ಕಾರಣಕ್ಕೆ ನಾನು ಮೇಲ್ಮನವಿ ಸಲ್ಲಿಸಲಿಲ್ಲ. ಇಂದು ಸತ್ಯಕ್ಕೆ ಜಯವಾಗಿದೆ. ನನ್ನ ವಿರುದ್ಧ ನಿರಂತರವಾಗಿ ಅಪಪ್ರಚಾರ ಮತ್ತು ಆರೋಪಗಳನ್ನು ಮಾಡಲಾಗಿತ್ತು. ಆದರೆ ಇಂದಿನ ಫಲಿತಾಂಶದಿಂದ ನನ್ನ ಕಾರ್ಯಕರ್ತರು ಮತ್ತು ಅಭಿಮಾನಿಗಳಿಗೆ ಹೆಮ್ಮೆ ತಂದಿದೆ." ಎಂದು ಹೇಳಿದ್ದಾರೆ.
ಬಿಜೆಪಿ ಅಭ್ಯರ್ಥಿ ವಿರುದ್ಧ ವಾಗ್ದಾಳಿ
"ಕಳೆದ ಬಾರಿ ಮತ ಎಣಿಕೆ ವೇಳೆ ಪ್ರತಿಯೊಂದು ಮತವನ್ನೂ ಅತ್ಯಂತ ಸೂಕ್ಷ್ಮವಾಗಿ ಪರಿಶೀಲಿಸಲಾಗಿತ್ತು. ಆದರೂ ನನ್ನ ವಿರುದ್ಧ ಆರೋಪ ಮಾಡಿದ್ದರು. ಬಿಜೆಪಿ ಅಭ್ಯರ್ಥಿ 40 ರಿಂದ 42 ಮತಗಳ ಅಂತರದಿಂದ ತಾವೇ ಗೆಲ್ಲುತ್ತೇವೆ ಎಂದು ಹೇಳಿಕೊಂಡಿದ್ದರು. ಇದು ನನಗೆ ಸಾಕಷ್ಟು ಅನುಮಾನ ಮೂಡಿಸಿತ್ತು. ಸದ್ಯ 12 ಅಂಚೆ ಮತಗಳು ನಾಪತ್ತೆಯಾಗಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೂ ಮತದಾರರ ಆಶೀರ್ವಾದದಿಂದ ನನ್ನ ಗೆಲುವಿನ ಮುನ್ನಡೆ ಮತ್ತಷ್ಟು ಹೆಚ್ಚಾಗಿದೆ," ಎಂದು ರಾಜೇಗೌಡ ತಿಳಿಸಿದ್ದಾರೆ.
ಮರು ಎಣಿಕೆ ಪ್ರಕ್ರಿಯೆಯ ಸಂಪೂರ್ಣ ವರದಿಯನ್ನು ಚುನಾವಣಾಧಿಕಾರಿಗಳು ಹೈಕೋರ್ಟ್ಗೆ ಸಲ್ಲಿಸಲಿದ್ದಾರೆ. ಅಂಚೆ ಮತಗಳ ಮರು ಎಣಿಕೆಯಲ್ಲೂ ಗೆಲುವು ಸಾಧಿಸುವ ಮೂಲಕ ಶೃಂಗೇರಿ ಕ್ಷೇತ್ರದ ಶಾಸಕರಾಗಿ ರಾಜೇಗೌಡ ಅವರ ಸ್ಥಾನ ಮತ್ತಷ್ಟು ಭದ್ರವಾಗಿದೆ.

