ಮಹಿಳಾ ಮೀಸಲಾತಿಗೆ ಸೋಲು| ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ಮುಳುಗಿದ ಬಿಜೆಪಿ-ಕಾಂಗ್ರೆಸ್‌
x
ಸಿದ್ದರಾಮಯ್ಯ

ಮಹಿಳಾ ಮೀಸಲಾತಿಗೆ ಸೋಲು| ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ಮುಳುಗಿದ ಬಿಜೆಪಿ-ಕಾಂಗ್ರೆಸ್‌

ಬಿಜೆಪಿಯವರು ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಲ್ಲಿ ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ನೀಡಬೇಕೆಂದು ಒತ್ತಾಯಿಸಲೇ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.


ಮಹಿಳಾ ಮೀಸಲಾತಿ ತಿದ್ದುಪಡಿ ವಿಧೇಯಕಕ್ಕೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳು ಪರಸ್ಪರ ಕೆಸರೆರಚಾಟದಲ್ಲಿ ಮುಳುಗಿವೆ. ಮಹಿಳೆಯರಿಗೆ ಕಾಂಗ್ರೆಸ್‌ ಅನ್ಯಾಯ ಮಾಡಿದೆ ಎಂದು ಬಿಜೆಪಿಗರು ಆರೋಪಿಸಿದರೆ, ರಾಜಕೀಯ ಲಾಭಕ್ಕಾಗಿ ಮಹಿಳಾ ಮೀಸಲಾತಿಯನ್ನು ದುರ್ಬಳಕೆ ಮಾಡಿಕೊಳ್ಳಲು ಬಿಜೆಪಿ ಪ್ರಯತ್ನಿಸಿತ್ತು ಎಂದು ಕಾಂಗ್ರೆಸ್‌ ಟೀಕಿಸಿದೆ.

ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮಹಿಳಾ ಮೀಸಲಾತಿ ವಿಚಾರವೇ ಹೆಚ್ಚು ರಾಜಕೀಯ ಕೋಲಾಹಲ ಸೃಷ್ಟಿಸುತ್ತಿದೆ. ಮಹಿಳಾ ಮೀಸಲಾತಿ ಮಸೂದೆಯು ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ 2023ರಲ್ಲಿಯೇ ಅಂಗೀಕಾರವಾಗಿದೆ. ಹೀಗಿದ್ದರೂ ಮಸೂದೆ ಜಾರಿಗೆ ಮುಂದಾಗದೇ ಈಗ ಕ್ಷೇತ್ರ ಮರುವಿಂಗಡಣೆಯೊಂದಿಗೆ ತಿದ್ದುಪಡಿ ಮಸೂದೆ ಮಂಡಿಸಲು ಹೊರಟಿದ್ದ ಕ್ರಮದ ಹಿಂದೆ ಹುನ್ನಾರವಿತ್ತು ಎಂದು ಕಾಂಗ್ರೆಸ್‌ ನಾಯಕರು ದೂರಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾವೇರಿಯಲ್ಲಿ ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿ, ಮಹಿಳಾ ಮೀಸಲಾತಿಗೆ ಕಾಂಗ್ರೆಸ್‌ನ ವಿರೋಧವಿಲ್ಲ. ಆದರೆ, ಈವರೆಗೂ ಮಹಿಳಾ ಮೀಸಲಾತಿ ಬಗ್ಗೆ ಚಕಾರ ಎತ್ತದ ಬಿಜೆಪಿಯವರು ಈಗ ಕ್ಷೇತ್ರ ಪುನರ್ವಿಂಗಡಣೆ ಲಾಭಕ್ಕಾಗಿ ಮಹಿಳಾ ಮೀಸಲಾತಿ ಜಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ, ಸಂವಿಧಾನದ 73, 74 ನೇ ತಿದ್ದುಪಡಿಗಳನ್ನು ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದಾಗ ತಂದಿದ್ದರು. ಆದರೆ, ಬಿಜೆಪಿಯವರು ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಗಳಲ್ಲಿ ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ನೀಡಬೇಕೆಂದು ಒತ್ತಾಯಿಸಲೇ ಇಲ್ಲ. ಈಗ ಕ್ಷೇತ್ರ ಪುನರ್ವಿಂಗಡಣೆಯೊಂದಿಗೆ ಸೇರಿಸಿ ಮಹಿಳಾ ಮೀಸಲಾತಿಗೆ ಒತ್ತಾಯಿಸುತ್ತಿರುವುದರ ಹಿಂದೆ ರಾಜಕೀಯ ಇದೆ ಎಂದು ದೂರಿದ್ದಾರೆ.

ಕ್ಷೇತ್ರ ಮರುವಿಂಗಡಣೆಯಿಂದ ಅನ್ಯಾಯ

ಕ್ಷೇತ್ರ ಮರುವಿಂಗಡಣೆಯಿಂದ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗಲಿದೆ. ಶೇ.50 ರಷ್ಟು ಸ್ಥಾನ ಹೆಚ್ಚಿಸಿದರೆ ಉತ್ತರ ಪ್ರದೇಶದಲ್ಲಿ ಈಗ 80 ಸ್ಥಾನಗಳಿವೆ. ಕ್ಷೇತ್ರ ಪುನರ್ವಿಂಗಡಣೆ ನಂತರ ಆ ಸ್ಥಾನಗಳ ಸಂಖ್ಯೆ 120 ಆಗಲಿದೆ. ಕರ್ನಾಟಕದಲ್ಲಿ 42 ಸ್ಥಾನಗಳಾಗಲಿವೆ. ಉತ್ತರ ಭಾರತದಲ್ಲಿ ಸ್ಥಾನಗಳು ಹೆಚ್ಚಾಗುವುದರ ಬಗ್ಗೆ ನಮ್ಮ ವಿರೋಧವೇ ಹೊರತು ಮಹಿಳಾ ಮೀಸಲಾತಿಗೆ ವಿರೋಧವಿಲ್ಲ. ಅದರ ಪರವಾಗಿದ್ದೇವೆ ಎಂದು ಹೇಳಿದ್ದಾರೆ.

ಸಂವಿಧಾನ ತಿದ್ದುಪಡಿಗೆ ಮೂರನೇ ಎರಡರಷ್ಟು ಬಹುಮತ ಲೋಕಸಭೆಯಲ್ಲಿ ಇರಬೇಕು. ಶೇ. 50 ರಷ್ಟು ರಾಜ್ಯಗಳು ಇದಕ್ಕೆ ಒಪ್ಪಿಗೆ ನೀಡಬೇಕು. ಕ್ಷೇತ್ರ ಮರು ವಿಂಗಡಣೆಗೆ ವಿರೋಧ ಮಾಡಿದ್ದೇವೆ ಹೊರತು ಮಹಿಳಾ ಮೀಸಲಾತಿಗೆ ನಮ್ಮ ವಿರೋಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಧಾನಿಯಿಂದ ರಾಜಕೀಯ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಮಹಿಳಾ ಮೀಸಲಾತಿ ವಿರೋಧಿಗಳು ಎಂದು ಭಾಷಣ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ತಮಿಳುನಾಡು , ಪಶ್ಚಿಮ ಬಂಗಾಳದ ಚುನಾವಣೆ ಇರುವುದರಿಂದ ರಾಜಕೀಯ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

450 ಮತಗಳನ್ನು ಪಡೆದು ಅಂಗೀಕಾರವಾಗಿರುವ ಮಸೂದೆಯನ್ನು ಮೋದಿಯವರು ಏಕೆ ಜಾರಿ ಮಾಡಲಿಲ್ಲ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು, ಕ್ಷೇತ್ರ ಮರುವಿಂಗಡಣೆಯನ್ನು ಬೇರ್ಪಡಿಸಿ ಮಸೂದೆ ತಂದಿದ್ದರೆ ಯಾರೂ ವಿರೋಧಿಸುತ್ತಿರಲಿಲ್ಲ. ಮಹಿಳಾ ಮೀಸಲಾತಿಗೆ ಕಾಂಗ್ರೆಸ್ ಪಕ್ಷ ಎಂದಿಗೂ ವಿರೋಧ ಮಾಡಲ್ಲ, ಮಾಡುವುದೂ ಇಲ್ಲ ಎಂದಿದ್ದಾರೆ.

ಮೇಲ್ಮನವಿಗೆ ಅವಕಾಶ

ಜನಪ್ರತಿನಿಧಿಗಳು ಜೈಲು ಸೇರುತ್ತಿರುವುದರ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ಅವರು, ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ ಎಂದು ತಿಳಿಸಿದ್ದಾರೆ. ರಾಣೆಬೆನ್ನೂರು ಸುತ್ತಮುತ್ತ ಮಟ್ಕಾ ದಂಧೆ ವ್ಯಾಪಕವಾಗಿರುವ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ಈ ಬಗ್ಗೆ ಸ್ಥಳೀಯ ಶಾಸಕರು ಕ್ರಮ ಕೈಗೊಂಡಿದ್ದಾರೆ. ಪ್ರಸ್ತುತ ಮಟ್ಕಾ ದಂಧೆ ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆ..

Read More
Next Story