
ಸಿದ್ದರಾಮಯ್ಯ ನನ್ನ ರಾಜಕೀಯ ಮಹಾಗುರು; 'ಕನ್ನಡ ರಾಮಯ್ಯ' ಎಂದಿಗೂ ಜೀವಂತ: ಲಾಡ್ ಭಾವುಕ ಸಂದೇಶ
"ಸಿದ್ದರಾಮಯ್ಯನವರ ಗರಡಿಯಲ್ಲಿ ಪಳಗಿ, ಅವರ ಆಡಳಿತವಧಿಯಲ್ಲಿ ಶಾಸಕನಾಗಿ, ಸಚಿವನಾಗಿ ಅವರ ಅಣತಿಯಂತೆ ಕರ್ತವ್ಯ ನಿರ್ವಹಿಸಿದ್ದೇ ನನ್ನ ರಾಜಕೀಯ ಜೀವನದ ಶಾಶ್ವತ ಸಾರ್ಥಕತೆ" ಎಂದು ಸಂತೋಷ್ ಲಾಡ್ ಶ್ಲಾಘಿಸಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ಸಿದ್ದರಾಮಯ್ಯನವರ ರಾಜೀನಾಮೆ ಬೆನ್ನಲ್ಲೇ, ಅವರ ಆಪ್ತ ವಲಯದ ಪ್ರಮುಖ ನಾಯಕ ಸಂತೋಷ್ ಲಾಡ್ ತಮ್ಮ ರಾಜಕೀಯ ಗುರುಗಳ ಕುರಿತು ಅತ್ಯಂತ ಭಾವುಕ ಹಾಗೂ ಕೃತಜ್ಞತಾ ಪೂರ್ವಕ ಸಂದೇಶವನ್ನು ಹಂಚಿಕೊಂಡಿದ್ದಾರೆ.
ಈ ಕುರಿತು ಶುಕ್ರವಾರ ತಮ್ಮ ಸಾಮಾಜಿಕ ಜಾಲತಾಣ (ಎಕ್ಸ್)ನಲ್ಲಿ ಪ್ರತಿಕ್ರಿಯಿಸಿರುವ ಅವರು, "ಸಿದ್ದರಾಮಯ್ಯನವರ ಗರಡಿಯಲ್ಲಿ ಪಳಗಿ, ಅವರ ಆಡಳಿತವಧಿಯಲ್ಲಿ ಶಾಸಕನಾಗಿ, ಸಚಿವನಾಗಿ ಅವರ ಅಣತಿಯಂತೆ ಕರ್ತವ್ಯ ನಿರ್ವಹಿಸಿದ್ದೇ ನನ್ನ ರಾಜಕೀಯ ಜೀವನದ ಶಾಶ್ವತ ಸಾರ್ಥಕತೆ," ಎಂದು ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ರಾಜಕಾರಣದ ವ್ಯಾಕರಣ ಕಲಿಸಿದ ಮಹಾಗುರು
ಸಿದ್ದರಾಮಯ್ಯನವರೊಂದಿಗಿನ ತಮ್ಮ ರಾಜಕೀಯ ಪಯಣವನ್ನು ಸ್ಮರಿಸಿರುವ ಅವರು, "ನನಗೆ ರಾಜಕಾರಣದ ವ್ಯಾಕರಣ ಹೇಳಿಕೊಟ್ಟು, ಕೈ ಹಿಡಿದು ನಡೆಸಿಕೊಂಡು ಬಂದವರು ಸಿದ್ದರಾಮಯ್ಯನವರು. ರಾಜಕೀಯದ ಪ್ರತಿ ಹೆಜ್ಜೆಯಲ್ಲೂ ನಾನು ಅವರಿಂದ ಕಲಿತ ವಿಷಯಗಳು ಅಪಾರ. ಸರ್ಕಾರದ ಪ್ರತಿಯೊಂದು ಜನಕಲ್ಯಾಣ ಯೋಜನೆಯೂ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಲೇಬೇಕು ಎಂಬ ವಿಷಯದಲ್ಲಿ ಅವರಿಗಿರುವ ಬದ್ಧತೆಗೆ ಅವರೊಬ್ಬರೇ ಸಾಟಿ," ಎಂದು ಗುಣಗಾನ ಮಾಡಿದ್ದಾರೆ.
ಮಾಧ್ಯಮಗಳ ಜೊತೆ ಸಿದ್ದರಾಮಯ್ಯನವರ ಬಗ್ಗೆ ಮಾತನಾಡುತ್ತಾ ಕಣ್ಣೀರು ಹಾಕಿದ್ದ ಸಂತೋಷ್ ಲಾಡ್
ಕನ್ನಡ ಅಸ್ಮಿತೆಯ ಧೀಮಂತ ನಾಯಕ
"ನಾಡಿನ ಎಲ್ಲ ಜಿಲ್ಲೆಗಳ ಸಮಗ್ರ ಅಭಿವೃದ್ಧಿ, ಎಲ್ಲ ಸಮುದಾಯಗಳ ಅಭ್ಯುದಯ ಹಾಗೂ ವಿಶೇಷವಾಗಿ ಕನ್ನಡ ಭಾಷೆ ಮತ್ತು ನಾಡಿನ ಅಸ್ಮಿತೆಗಾಗಿ ಸಿದ್ದರಾಮಯ್ಯನವರು ಇಟ್ಟ ದಿಟ್ಟ ಹೆಜ್ಜೆಗಳು ಮತ್ತು ಅವರು ಪ್ರದರ್ಶಿಸಿದ ಧೈರ್ಯ ನಮ್ಮೆಲ್ಲರಿಗೂ ಸದಾ ಕಾಲ ಸ್ಫೂರ್ತಿಯಾಗಿರಲಿದೆ," ಎಂದು ಅವರು ಕೊಂಡಾಡಿದ್ದಾರೆ.
'ಪ್ರತಿಯೊಬ್ಬ ಕನ್ನಡಿಗನ ಎದೆಯಲ್ಲಿದ್ದಾರೆ ಕನ್ನಡ ರಾಮಯ್ಯ'
"ಇಂದು ಸಿದ್ದರಾಮಯ್ಯ ಅವರು ಅಧಿಕಾರದಿಂದ ನಿರ್ಗಮಿಸಿರಬಹುದು. ಆದರೆ ಪ್ರತಿಯೊಬ್ಬ ಕನ್ನಡಿಗರ ಎದೆಯಲ್ಲಿ, 'ಕನ್ನಡ ರಾಮಯ್ಯ' ಎಂಬ ಮಾರ್ದನಿಯಲ್ಲಿ ಅವರ ಮುಂದಾಳತ್ವ ಯಾವತ್ತಿಗೂ ಜೀವಂತವಾಗಿರುತ್ತದೆ. ನಮ್ಮ ನಾಡಿಗೆ, ಸರ್ಕಾರಕ್ಕೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಅವರ ಮಾರ್ಗದರ್ಶನ ಮುಂದಿನ ದಿನಗಳಲ್ಲೂ ಶ್ರೀರಕ್ಷೆಯಾಗಿರಲಿದೆ," ಎಂದು ತಮ್ಮ ನಾಯಕನ ಮೇಲಿರುವ ಅಚಲ ಗೌರವವನ್ನು ವ್ಯಕ್ತಪಡಿಸಿದ್ದಾರೆ.
ಕಣ್ಣೀರು ಹಾಕಿದ್ದ ಲಾಡ್
ಸಿದ್ದರಾಮಯ್ಯ ಗುರುವಾರ (ಮೇ 28) ಸಚಿವರ ಜೊತೆ ಏರ್ಪಡಿಸಿದ್ದ ಉಪಹಾರಕೂಟದಲ್ಲಿ ಮಾತನಾಡುತ್ತಾ, "ಹೈಕಮಾಂಡ್ ನಿರ್ಧಾರದಂತೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದರು". ಸಭೆ ಮಗಿದ ಬಳಿಕ ಸಂತೋಷ್ ಲಾಡ್ ಮಾಧ್ಯಮಗಳ ಜೊತೆ ಮಾತನಾಡುತ್ತಾ ಕಣ್ಣೀರು ಹಾಕಿದ್ದರು.

