ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಖಚಿತ?
x

ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ: ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಖಚಿತ?

ರಾಜ್ಯ ಕಾಂಗ್ರೆಸ್ ಘಟಕದಲ್ಲೂ (ಕೆಪಿಸಿಸಿ) ಮಹತ್ವದ ಬದಲಾವಣೆಯ ಪರ್ವ ಆರಂಭವಾಗಿದ್ದು, ಸ್ಥಾನಕ್ಕೆ ಪ್ರಭಾವಿ ನಾಯಕ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಹೆಸರು ಮುಂಚೂಣಿಗೆ ಬಂದಿದೆ.


Click the Play button to hear this message in audio format

ದೆಹಲಿ ಮಟ್ಟದಲ್ಲಿ ನಡೆದ ಹೈವೋಲ್ಟೇಜ್ ಸಭೆಗಳ ಬೆನ್ನಲ್ಲೇ ರಾಜ್ಯ ರಾಜಕಾರಣದಲ್ಲಿ ಮಹತ್ವದ ಹಾಗೂ ಅಚ್ಚರಿಯ ಬೆಳವಣಿಗೆಗಳು ಗರಿಗೆದರಿವೆ. ಕಾಂಗ್ರೆಸ್ ವರಿಷ್ಠರ ಸೂಚನೆಯ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದು ಬಹುತೇಕ ಖಚಿತವಾಗಿದೆ. ನಾಯಕತ್ವ ಬದಲಾವಣೆಯ ಬಿಕ್ಕಟ್ಟು ಇದೀಗ ನಿರ್ಣಾಯಕ ಘಟ್ಟ ತಲುಪಿದ್ದು, ಶೀಘ್ರದಲ್ಲೇ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಯಿದೆ.

ಹೈಕಮಾಂಡ್‌ನಿಂದ ರಾಜೀನಾಮೆ ಸೂಚನೆ ರವಾನೆಯಾದ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ತಮ್ಮ ಅಧಿಕೃತ ನಿವಾಸ 'ಕಾವೇರಿ'ಯಲ್ಲಿ ಸಚಿವರಿಗೆ ವಿಶೇಷ ಉಪಹಾರ ಸಭೆಯನ್ನು ಆಯೋಜಿಸಿದ್ದಾರೆ. ಈ ಸಭೆಯು ರಾಜ್ಯ ರಾಜಕಾರಣದ ಮುಂದಿನ ದಿಕ್ಸೂಚಿಯನ್ನು ನಿರ್ಧರಿಸುವ ವೇದಿಕೆಯಾಗುವ ಲಕ್ಷಣಗಳಿವೆ. ಗುರುವಾರದ ಈ ಮಹತ್ವದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಹೈಕಮಾಂಡ್ ತೆಗೆದುಕೊಂಡಿರುವ ನಿರ್ಧಾರವನ್ನು ಹಾಗೂ ತಮ್ಮ ಮುಂದಿನ ನಡೆಯನ್ನು ಆಪ್ತ ಸಚಿವರು ಹಾಗೂ ಸಂಪುಟ ಸಹೋದ್ಯೋಗಿಗಳ ಮುಂದೆ ಅಧಿಕೃತವಾಗಿ ತೆರೆದಿಡುವ ನಿರೀಕ್ಷೆಯಿದೆ.

ಈಗಲೇ ಬೇಡ, ಸಮಯ ಕೇಳಿ: ಸಿದ್ದರಾಮಯ್ಯ ಮೇಲೆ ಆಪ್ತರ ತೀವ್ರ ಒತ್ತಡ

ಒಂದೆಡೆ ವರಿಷ್ಠರ ಕಟ್ಟುನಿಟ್ಟಿನ ಸೂಚನೆ, ಮತ್ತೊಂದೆಡೆ ಬೆಂಬಲಿಗರ ತೀವ್ರ ಭಾವನಾತ್ಮಕ ಒತ್ತಡ. ಸಿದ್ದರಾಮಯ್ಯ ಅವರು ರಾಜೀನಾಮೆಗೆ ಮಾನಸಿಕವಾಗಿ ಸಿದ್ಧರಾಗಿದ್ದರೂ, ಅವರ ಆಪ್ತ ಸಚಿವರ ಪಡೆ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. "ಯಾವುದೇ ಕಾರಣಕ್ಕೂ ತಕ್ಷಣವೇ ರಾಜೀನಾಮೆ ನೀಡಬೇಡಿ. ವರಿಷ್ಠರ ಬಳಿ ಕೆಲವು ದಿನಗಳ ಕಾಲಾವಕಾಶ ಕೇಳಿ" ಎಂದು ಆಪ್ತ ಸಚಿವರು ಮುಖ್ಯಮಂತ್ರಿಗಳ ಮೇಲೆ ತೀವ್ರ ಒತ್ತಡ ಹೇರುತ್ತಿದ್ದಾರೆ.

ಕೆಪಿಸಿಸಿ ಸಾರಥ್ಯ ಬದಲಾವಣೆ: ಸತೀಶ್ ಜಾರಕಿಹೊಳಿಗೆ ಒಲಿಯಲಿದೆಯೇ ಪಟ್ಟ?

ಸರ್ಕಾರದ ನಾಯಕತ್ವ ಬದಲಾವಣೆಯ ಚರ್ಚೆಯ ಜೊತೆಯಲ್ಲೇ, ರಾಜ್ಯ ಕಾಂಗ್ರೆಸ್ ಘಟಕದಲ್ಲೂ (ಕೆಪಿಸಿಸಿ) ಮಹತ್ವದ ಬದಲಾವಣೆಯ ಪರ್ವ ಆರಂಭವಾಗಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪ್ರಭಾವಿ ನಾಯಕ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಹೆಸರು ಮುಂಚೂಣಿಗೆ ಬಂದಿದೆ. ಅಹಿಂದ ವರ್ಗದ ಪ್ರಬಲ ನಾಯಕರಾಗಿರುವ ಸತೀಶ್ ಜಾರಕಿಹೊಳಿ ಅವರಿಗೆ ಪಕ್ಷದ ಸಾರಥ್ಯ ವಹಿಸುವ ಮೂಲಕ, ರಾಜ್ಯದಲ್ಲಿ ಹೊಸ ರಾಜಕೀಯ ಮತ್ತು ಸಾಮಾಜಿಕ ಸಮೀಕರಣವನ್ನು ಸೃಷ್ಟಿಸಲು ಹೈಕಮಾಂಡ್ ಲೆಕ್ಕಾಚಾರ ಹಾಕಿದೆ ಎನ್ನಲಾಗುತ್ತಿದೆ. ಸರ್ಕಾರದ ನಾಯಕತ್ವ ಬದಲಾವಣೆ ಹಾಗೂ ಕೆಪಿಸಿಸಿ ಪುನರ್ರಚನೆ ಎರಡೂ ಪ್ರಕ್ರಿಯೆಗಳು ಏಕಕಾಲದಲ್ಲಿ ನಡೆಯುವ ಸಾಧ್ಯಾಸಾಧ್ಯತೆಗಳು ದಟ್ಟವಾಗಿವೆ.

ಶಾಸಕಾಂಗ ಸಭೆಯತ್ತ ಎಲ್ಲರ ಚಿತ್ತ

ಸದ್ಯದ ಮಟ್ಟಿಗೆ ಗುರುವಾರ ಕಾವೇರಿ ನಿವಾಸದಲ್ಲಿ ನಡೆಯುವ ಉಪಹಾರ ಸಭೆ ಹಾಗೂ ತದನಂತರ ಕರೆಯಲಾಗುವ ಶಾಸಕಾಂಗ ಪಕ್ಷದ (ಸಿಎಲ್ಪಿ) ಸಭೆ ಸರ್ಕಾರದ ಮುಂದಿನ ಹಣೆಬರಹವನ್ನು ನಿರ್ಧರಿಸಲಿದೆ. ಶಾಸಕಾಂಗ ಸಭೆಯಲ್ಲಿ ನೂತನ ನಾಯಕನ ಆಯ್ಕೆ ಪ್ರಕ್ರಿಯೆ ಮತ್ತು ಸಿದ್ದರಾಮಯ್ಯ ಅವರ ನಿರ್ಗಮನದ ಹೆಜ್ಜೆಗಳು ಅಧಿಕೃತವಾಗಿ ಚರ್ಚೆಯಾಗಲಿವೆ.

Read More
Next Story