ಸಿದ್ದರಾಮಯ್ಯ ರಾಜೀನಾಮೆ ಚರ್ಚೆ ನಡುವೆಯೇ ಜಾತಿ ಜನಗಣತಿ ವರದಿ ಸಲ್ಲಿಕೆ ಸಾಧ್ಯತೆ
x

 ಸಿದ್ದರಾಮಯ್ಯ ಅವರ ರಾಜೀನಾಮೆ ಕುರಿತ ಚರ್ಚೆಗಳು ತೀವ್ರವಾಗುತ್ತಿರುವ ಬೆನ್ನಲ್ಲೇ ಜಾತಿ ಜನಗಣತಿ ವರದಿ ಸಲ್ಲಿಕೆ ವಿಚಾರವೂ ಮತ್ತೆ ಮುನ್ನೆಲೆಗೆ ಬಂದಿದೆ.

ಸಿದ್ದರಾಮಯ್ಯ ರಾಜೀನಾಮೆ ಚರ್ಚೆ ನಡುವೆಯೇ ಜಾತಿ ಜನಗಣತಿ ವರದಿ ಸಲ್ಲಿಕೆ ಸಾಧ್ಯತೆ

ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ ಕುರಿತ ಚರ್ಚೆ ಮಧ್ಯೆ ಜಾತಿ ಜನಗಣತಿ ವರದಿ ಸಲ್ಲಿಕೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಡಿಕೆ ಶಿವಕುಮಾರ್ ದೆಹಲಿಯಲ್ಲಿ ಉಳಿದಿದ್ದು, ಕಾಂಗ್ರೆಸ್ ರಾಜಕೀಯದಲ್ಲಿ ಕುತೂಹಲ ಹೆಚ್ಚಾಗಿದೆ.


Click the Play button to hear this message in audio format

ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಕುರಿತ ಚರ್ಚೆಗಳು ತೀವ್ರವಾಗುತ್ತಿರುವ ಬೆನ್ನಲ್ಲೇ ಜಾತಿ ಜನಗಣತಿ ವರದಿ ಸಲ್ಲಿಕೆ ವಿಚಾರವೂ ಮತ್ತೆ ಮುನ್ನೆಲೆಗೆ ಬಂದಿದೆ. ಹಿಂದುಳಿದ ವರ್ಗಗಳ ಆಯೋಗ ಇಂದು ತುರ್ತು ಸಭೆ ಕರೆದಿದ್ದು, ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡುವ ಕುರಿತು ಚರ್ಚೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಮೂಲಗಳ ಪ್ರಕಾರ, ಆಯೋಗ ಈಗಾಗಲೇ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯ ವರದಿಯನ್ನು ಸಿದ್ಧಪಡಿಸಿದ್ದು, ಇದುವರೆಗೆ ಸರ್ಕಾರಕ್ಕೆ ಅಧಿಕೃತವಾಗಿ ಸಲ್ಲಿಕೆ ಮಾಡಿಲ್ಲ. ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತಿರುವ ಈ ವರದಿ ಇಂದು ಸಂಜೆ ಮುಖ್ಯಮಂತ್ರಿಗಳಿಗೆ ಸಲ್ಲಿಕೆಯಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ಕೇಳಿಬರುತ್ತಿದೆ.

ಕೆಲವು ವರದಿಗಳ ಪ್ರಕಾರ, ಜಾತಿ ಜನಗಣತಿ ವರದಿಯಲ್ಲಿ ಅಹಿಂದ ವರ್ಗದ ಜನಸಂಖ್ಯೆಯ ಪ್ರಮಾಣ ಹೆಚ್ಚಿದೆ ಎನ್ನುವ ಚರ್ಚೆಗಳು ರಾಜಕೀಯ ವಲಯದಲ್ಲಿ ನಡೆಯುತ್ತಿವೆ. ಆದರೆ ಈ ಕುರಿತು ಅಧಿಕೃತ ಮಾಹಿತಿ ಇನ್ನೂ ಬಹಿರಂಗಗೊಂಡಿಲ್ಲ.

ನಾಳೆ ಬ್ರೇಕ್‌ಫಾಸ್ಟ್‌ ಮೀಟಿಂಗ್‌

ಇನ್ನೊಂದೆಡೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ ಬೆಳಗ್ಗೆ 9 ಗಂಟೆಗೆ ಕಾವೇರಿ ನಿವಾಸದಲ್ಲಿ ಸಚಿವರೊಂದಿಗೆ ಬ್ರೇಕ್‌ಫಾಸ್ಟ್ ಸಭೆ ಆಯೋಜಿಸಿದ್ದಾರೆ. ಈ ಸಭೆಯಲ್ಲಿ ಹೈಕಮಾಂಡ್ ಸೂಚನೆಗಳು ಹಾಗೂ ರಾಜ್ಯದ ಮುಂದಿನ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ರಾಜೀನಾಮೆ ಕುರಿತ ಊಹಾಪೋಹಗಳು ಜೋರಾಗಿದ್ದು, ಸಭೆಯ ಬಳಿಕ ಮಹತ್ವದ ಘೋಷಣೆ ಹೊರಬೀಳುವ ಸಾಧ್ಯತೆ ಇದೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.

ದೆಹಲಿಯಲ್ಲೇ ಉಳಿದ ಡಿಕೆಶಿ

ಅದೇ ವೇಳೆ, ದೆಹಲಿಯಿಂದ ಇಂದು ಬೆಂಗಳೂರಿಗೆ ಆಗಮಿಸಬೇಕಿದ್ದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೊನೆಯ ಕ್ಷಣದಲ್ಲಿ ತಮ್ಮ ಪ್ರವಾಸವನ್ನು ರದ್ದುಗೊಳಿಸಿ ದೆಹಲಿಯಲ್ಲೇ ಉಳಿದಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ. ನಾಳೆ ಬೆಳಗ್ಗೆ ಅವರು ದೆಹಲಿಯಿಂದ ಬೆಂಗಳೂರಿಗೆ ಆಗಮಿಸುವ ನಿರೀಕ್ಷೆಯಿದೆ.

ರಾಜ್ಯ ಸಚಿವ ಸಂಪುಟ ಪುನಾರಚನೆ ಹಾಗೂ ಹೆಚ್ಚುವರಿ ಡಿಸಿಎಂ ಹುದ್ದೆಗಳ ನೇಮಕಾತಿ ಕುರಿತು ಹೈಕಮಾಂಡ್ ಮಟ್ಟದಲ್ಲಿ ಚರ್ಚೆಗಳು ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

Read More
Next Story