Siddaramaiah will not be deterred even after leaving the CM chair!
x

ಸಿಎಂ ಡಿ.ಕೆ. ಶಿವಕುಮಾರ್‌ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ

ಸಿಎಂ ಕುರ್ಚಿ ಬಿಟ್ಟರೂ ತಗ್ಗೋದೇ ಇಲ್ಲ ಸಿದ್ದರಾಮಯ್ಯ!

ಸಂಸದ ಅಥವಾ ಸಚಿವರಾಗದೇ ಇದ್ದರೂ ಈ ಅತ್ಯುನ್ನತ ಮಂಡಳಿಯಲ್ಲಿ ಸಿದ್ದರಾಮಯ್ಯ ಸ್ಥಾನ ಪಡೆದಿರುವುದು ಅವರ ಹೈಕಮಾಂಡ್ ಮಟ್ಟದ ಪ್ರಭಾವಕ್ಕೆ ಸಾಕ್ಷಿ.


Click the Play button to hear this message in audio format

ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿದ ತಕ್ಷಣ ಸಿದ್ದರಾಮಯ್ಯ ಅವರ ರಾಜಕೀಯ ಶಕ್ತಿ ಕುಂದುತ್ತದೆ ಎಂದು ಲೆಕ್ಕಾಚಾರ ಹಾಕಿದ್ದವರಿಗೆ ಹೈಕಮಾಂಡ್ ಅಚ್ಚರಿಯ ಶಾಕ್ ನೀಡಿದೆ. ಅಧಿಕಾರ ಹಸ್ತಾಂತರ ಪ್ರಕ್ರಿಯೆ ಸುಲಲಿತವಾಗಿ ಮುಗಿಯುತ್ತಿದ್ದಂತೆ, ದೆಹಲಿ ಮಟ್ಟದಲ್ಲಿ ಸಿದ್ದರಾಮಯ್ಯ ಅವರ ತೂಕ ದುಪ್ಪಟ್ಟಾಗಿದೆ.ರಾಜ್ಯಸಭೆ ಆಫರ್ ಬೇಡ ಎಂದು ನಿರಾಕರಿಸಿದರೂ, ಸಿದ್ದರಾಮಯ್ಯ ಅವರನ್ನು ನೇರವಾಗಿ ಕಾಂಗ್ರೆಸ್‌ನ ಅತ್ಯುನ್ನತ ನಿರ್ಧಾರ ಕೈಗೊಳ್ಳುವ ವೇದಿಕೆಯಾದ ಕಾಂಗ್ರೆಸ್ ವರ್ಕಿಂಗ್ ಕಮಿಟಿ (CWC) ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ಈ ಮೂಲಕ "ರಾಜಕೀಯವಾಗಿ ಸಿದ್ದು ಮುಗಿಯಿತು" ಎನ್ನುವವರ ಬಾಯಿ ಮುಚ್ಚಿಸುವಂತಹ ಬೆಳವಣಿಗೆಗಳು ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ವೇಗವಾಗಿ ತೆರೆದುಕೊಳ್ಳುತ್ತಿವೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸಂದರ್ಭದಲ್ಲಿ ಹೈಕಮಾಂಡ್ ಸಿದ್ದರಾಮಯ್ಯ ಅವರಿಗೆ ದೆಹಲಿ ರಾಜಕಾರಣದಲ್ಲಿ ದೊಡ್ಡ ಹುದ್ದೆ ಮತ್ತು ರಾಜ್ಯಸಭೆ ಸೀಟಿನ ಆಫರ್ ನೀಡಿತ್ತು. ಆದರೆ, "ನನಗೆ ರಾಷ್ಟ್ರ ರಾಜಕಾರಣದಲ್ಲಿ ಆಸಕ್ತಿ ಇಲ್ಲ, ನಾನು ಕರ್ನಾಟಕದಲ್ಲೇ ಇರುತ್ತೇನೆ" ಎಂದು ಸಿದ್ದರಾಮಯ್ಯ ಬಹಿರಂಗವಾಗಿಯೇ ಸ್ಪಷ್ಟಪಡಿಸಿದ್ದರು. ಆದರೂ ಹೈಕಮಾಂಡ್ ಅವರನ್ನು ಕೈಬಿಡಲು ಸಿದ್ಧವಿಲ್ಲ ಎಂಬುದಕ್ಕೆ ಸಿಡಬ್ಲ್ಯೂಸಿ ನೇಮಕಾತಿಯೇ ಸಾಕ್ಷಿ.

ಸಿಡಬ್ಲ್ಯೂಸಿ ಎಂದರೆ ಕೇವಲ ಸಮಿತಿಯಲ್ಲ

ಎಐಸಿಸಿಯ ಪವರ್‌ ಹೌಸ್. ಪಕ್ಷದ ಚುನಾವಣಾ ತಂತ್ರ, ಮೈತ್ರಿಗಳು ಮತ್ತು ಭವಿಷ್ಯದ ದಿಕ್ಸೂಚಿ ನಿರ್ಧಾರವಾಗುವುದು ಇಲ್ಲೇ. ಸಂಸದ ಅಥವಾ ಸಚಿವರಾಗದೇ ಇದ್ದರೂ ಈ ಅತ್ಯುನ್ನತ ಮಂಡಳಿಯಲ್ಲಿ ಸಿದ್ದರಾಮಯ್ಯ ಸ್ಥಾನ ಪಡೆದಿರುವುದು ಅವರ ಹೈಕಮಾಂಡ್ ಮಟ್ಟದ ಪ್ರಭಾವಕ್ಕೆ ಸಾಕ್ಷಿ. ಡಿ. ಕೆ. ಶಿವಕುಮಾರ್‌ ಸರ್ಕಾರದ ಮೇಲೂ ಸಿದ್ದರಾಮಯ್ಯ 'ರಿಮೋಟ್ ಕಂಟ್ರೋಲ್' ಮಾಡುತ್ತಿದ್ದಾರ ಎಂಬುದು ರಾಜಕೀಯ ವಲಯದಲ್ಲಿ ಈಗ ಅತ್ಯಂತ ಪ್ರಮುಖ ಚರ್ಚೆ ಶುರುವಾಗಿರುವುದು ಇದೇ ವಿಚಾರದಲ್ಲಿ. ಮುಖ್ಯಮಂತ್ರಿ ಪೀಠದಲ್ಲಿ ಡಿ.ಕೆ. ಶಿವಕುಮಾರ್ ಕೂತಿದ್ದರೂ, ಹೊಸದಾಗಿ ರಚನೆಯಾಗುತ್ತಿರುವ ಸಚಿವ ಸಂಪುಟದ ಮೊದಲ ಪಟ್ಟಿಯಲ್ಲಿ ಸಿದ್ದರಾಮಯ್ಯ ಅವರ ಆಪ್ತರೇ ಮೇಲುಗೈ ಸಾಧಿಸಿದ್ದಾರೆ ಎಂಬ ವಿಶ್ಲೇಷಣೆಗಳು ಕೇಳಿಬರುತ್ತಿವೆ.

ರಾಜಕೀಯ ವಿಶ್ಲೇಷಕರ ಒಳನೋಟ

"ಇದು ಕೇವಲ ಡಿ.ಕೆ.ಶಿವಕುಮಾರ್‌ ಸರ್ಕಾರವಲ್ಲ, ತೆರೆಮರೆಯಿಂದ ನಿಯಂತ್ರಿಸಲ್ಪಡುವ ಡಿಕೆಶಿ ನೇತೃತ್ವದ 'ಸಿದ್ದರಾಮಯ್ಯ ಪ್ರಭಾವದ' ಸರ್ಕಾರ. "ಡಿಕೆಶಿ ಅವರು ರಾಜಕೀಯವನ್ನು 'ಚೆಸ್' ಆಟಕ್ಕೆ ಹೋಲಿಸಿದರೆ, ಸಿದ್ದರಾಮಯ್ಯ ಅವರು ಯಾವುದೇ ಹಠಕ್ಕೆ ಬೀಳದೆ ಸುಲಲಿತವಾಗಿ ಅಧಿಕಾರ ಹಸ್ತಾಂತರಿಸಿ ರಾಹುಲ್ ಗಾಂಧಿ ಕುಟುಂಬಕ್ಕೆ ಮತ್ತಷ್ಟು ಹತ್ತಿರವಾಗಿದ್ದಾರೆ. ಈ ನಡೆ ಡಿ.ಕೆ.ಶಿವಕುಮಾರ್‌ ಅವರ ಮುಂದಿನ ಆಡಳಿತಾತ್ಮಕ ನಡೆಯ ಮೇಲೆ ಸಿದ್ದರಾಮಯ್ಯ ಅವರ ಪ್ರಭಾವ ಮುಂದುವರಿಯುವಂತೆ ಮಾಡಿದೆ.

ರಾಷ್ಟ್ರೀಯ ಒಬಿಸಿ ರಾಜಕಾರಣದ ಹೊಸ ಮುಖ?

ಎರಡು ಅವಧಿಗಳಲ್ಲಿ ಸುಮಾರು 8 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಕರ್ನಾಟಕವನ್ನು ಮುನ್ನಡೆಸಿದ ಸಿದ್ದರಾಮಯ್ಯ ಅವರ ಆಡಳಿತದ ಅನುಭವದ ಮೇಲೆ ಹೈಕಮಾಂಡ್ ಕಣ್ಣಿಟ್ಟಿದೆ. ಪ್ರಮುಖವಾಗಿ ದಕ್ಷಿಣ ಭಾರತದಲ್ಲಿ ಕಾಂಗ್ರೆಸ್ ಅನ್ನು ಇನ್ನಷ್ಟು ಗಟ್ಟಿಗೊಳಿಸಲು ಮತ್ತು ದೇಶಾದ್ಯಂತ ಹಿಂದುಳಿದ ವರ್ಗಗಳ ಮತಬ್ಯಾಂಕ್ ಅನ್ನು ಸೆಳೆಯಲು ಸಿದ್ದರಾಮಯ್ಯ ಅವರ 'ಅಹಿಂದ' ಮತ್ತು ಸಾಮಾಜಿಕ ನ್ಯಾಯದ ವರ್ಚಸ್ಸನ್ನು ಬಳಸಿಕೊಳ್ಳಲು ಎಐಸಿಸಿಯ ಒಬಿಸಿ ಸಲಹಾ ಸಮಿತಿಯಲ್ಲೂ ಅವರಿಗೆ ಪ್ರಮುಖ ಪಾತ್ರ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ರಾಜಕೀಯ ಪಗಡೆಯಾಟದ ಮುಂದಿನ ಹಂತವೇನು?

ಮೈಸೂರಿನಲ್ಲಿ ವಿಶ್ರಾಂತ ಜೀವನ ನಡೆಸಲು ಸುಸಜ್ಜಿತ ಮನೆ ನಿರ್ಮಿಸಿದ್ದರೂ, ಸಿದ್ದರಾಮಯ್ಯ ಬೆಂಗಳೂರಿನ ತಮ್ಮ 'ಕಾವೇರಿ' ನಿವಾಸದಿಂದಲೇ ರಾಜ್ಯ ರಾಜಕಾರಣದ ಸೂತ್ರ ಹಿಡಿಯಲಿದ್ದಾರಾ ಎಂಬ ಕೌತುಕ ಮೂಡಿದೆ. ಒಟ್ಟಿನಲ್ಲಿ, ಕುರ್ಚಿ ಹೋದರೂ ಸಿದ್ದರಾಮಯ್ಯ ಅವರ ಶಕ್ತಿ ಕುಂದಿಲ್ಲ, ಬದಲಿಗೆ ದೆಹಲಿ ಮತ್ತು ಬೆಂಗಳೂರಿನ ನಡುವೆ ಅವರ ಪ್ರಭಾವದ ಹೊಸ ಅಧ್ಯಾಯವೇ ಆರಂಭವಾಗಿದೆ ಎಂಬುದು ಸದ್ಯದ ರಾಜಕೀಯ ಚಿತ್ರಣ.

Read More
Next Story