
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ರಾಹುಲ್‌ಗಾಂಧಿ, ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್
ರಾಷ್ಟ್ರ ರಾಜಕಾರಣಕ್ಕೆ ಎಂಟ್ರಿಕೊಟ್ಟ ಸಿದ್ದರಾಮಯ್ಯ: ಸಿಡಬ್ಲ್ಯುಸಿಗೆ ನೇಮಕ, ಒಬಿಸಿ ಸಲಹಾ ಸಮಿತಿಗೂ ಸೇರ್ಪಡೆ?
ರಾಜ್ಯ ರಾಜಕಾರಣದ ಮೇಲೆಯೇ ಹೆಚ್ಚು ಒಲವು ಹೊಂದಿರುವ ಸಿದ್ದರಾಮಯ್ಯ ಅವರ ಅಪಾರ ರಾಜಕೀಯ ಅನುಭವ ಹಾಗೂ ಜನಪ್ರಿಯತೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಬಳಸಿಕೊಳ್ಳಲು ಹೈಕಮಾಂಡ್ ನಿರ್ಧರಿಸಿದೆ.
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಇದೀಗ ಅಧಿಕೃತವಾಗಿ ರಾಷ್ಟ್ರ ರಾಜಕಾರಣಕ್ಕೆ ಹೆಜ್ಜೆ ಇಟ್ಟಿದ್ದಾರೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಘಟಕವಾದ 'ಕಾಂಗ್ರೆಸ್ ಕಾರ್ಯಕಾರಿ ಸಮಿತಿ'ಯ (ಸಿಡಬ್ಲ್ಯುಸಿ) ಸದಸ್ಯರನ್ನಾಗಿ ಸಿದ್ದರಾಮಯ್ಯ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕಾಂಗ್ರೆಸ್ ಅಧ್ಯಕ್ಷರು ನೇಮಕ ಮಾಡಿದ್ದಾರೆ.
ಈ ಕುರಿತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಜೂನ್ 2, 2026 ರಂದು ಅಧಿಕೃತ ಪತ್ರಿಕಾ ಪ್ರಕಟಣೆ ಹೊರಡಿಸಿ ಖಚಿತಪಡಿಸಿದ್ದಾರೆ. ರಾಜ್ಯ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದ ಸಿದ್ದರಾಮಯ್ಯನವರಿಗೆ ಇದೀಗ ದೆಹಲಿ ಮಟ್ಟದಲ್ಲಿ ಬಹುದೊಡ್ಡ ಜವಾಬ್ದಾರಿ ಒಲಿದುಬಂದಿದೆ.
ಎಐಸಿಸಿ ಮಟ್ಟದಲ್ಲಿ ಸಕ್ರಿಯರಾಗಲು ಹೈಕಮಾಂಡ್ ಸ್ಪಷ್ಟ ಸೂಚನೆ
ರಾಜ್ಯ ರಾಜಕಾರಣದ ಮೇಲೆಯೇ ಹೆಚ್ಚು ಒಲವು ಹೊಂದಿರುವ ಸಿದ್ದರಾಮಯ್ಯನವರಿಗೆ ಸದ್ಯಕ್ಕೆ ರಾಜ್ಯಸಭೆ ಪ್ರವೇಶಿಸುವ ಇಚ್ಛೆ ಇರಲಿಲ್ಲ. ಆದರೆ, ಕಾಂಗ್ರೆಸ್ ಹೈಕಮಾಂಡ್ ಅವರ ಅಪಾರ ರಾಜಕೀಯ ಅನುಭವ ಹಾಗೂ ಜನಪ್ರಿಯತೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಬಳಸಿಕೊಳ್ಳಲು ಆಸಕ್ತಿ ತೋರಿದೆ. ಸದ್ಯಕ್ಕೆ ರಾಜ್ಯಸಭೆ ಸದಸ್ಯರಾಗಲು ಒಪ್ಪದಿದ್ದರೂ, ಎಐಸಿಸಿ ಮಟ್ಟದಲ್ಲಿ ಅವರು ಹೆಚ್ಚು ಕ್ರಿಯಾಶೀಲರಾಗಿ ಕೆಲಸ ಮಾಡಲೇಬೇಕು ಎಂದು ವರಿಷ್ಠರು ಸ್ಪಷ್ಟ ಸೂಚನೆ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯನವರ ಪಾತ್ರ ಅತ್ಯಂತ ಪ್ರಮುಖವಾಗಲಿದೆ ಎಂಬುದು ಪಕ್ಷದ ವರಿಷ್ಠರ ಲೆಕ್ಕಾಚಾರ.
ಹಿಂದುಳಿದ ವರ್ಗಗಳ ಸಲಹಾ ಸಮಿತಿಗೆ ಸಿದ್ದರಾಮಯ್ಯ ಬಲ
ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯತ್ವದ ಜೊತೆಗೆ, ಪಕ್ಷದ 'ಹಿಂದುಳಿದ ವರ್ಗಗಳ ಸಲಹಾ ಸಮಿತಿ'ಗೂ (ಒಬಿಸಿ ಅಡ್ವೈಸರಿ ಕೌನ್ಸಿಲ್) ಸಿದ್ದರಾಮಯ್ಯ ಅವರನ್ನು ಸೇರ್ಪಡೆಗೊಳಿಸಲಾಗುತ್ತದೆ ಎನ್ನಲಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿಶೇಷ ಆಸಕ್ತಿಯ ಮೇರೆಗೆ ಈ ನೇಮಕ ನಡೆಯಲಿದೆ. , ರಾಷ್ಟ್ರೀಯ ಮಟ್ಟದಲ್ಲಿ ಒಬಿಸಿ ಸಲಹಾ ಸಮಿತಿಯನ್ನು ಮತ್ತಷ್ಟು ಸಕ್ರಿಯ ಹಾಗೂ ಬಲಿಷ್ಠ ಘಟಕವನ್ನಾಗಿ ರೂಪಿಸುವ ಮಹತ್ತರ ಹೊಣೆಗಾರಿಕೆಯನ್ನು ಸಿದ್ದರಾಮಯ್ಯನವರಿಗೆ ವಹಿಸುವ ಸಾಧ್ಯತೆಗಳಿವೆ. ಕರ್ನಾಟಕದಲ್ಲಿ ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ) ವರ್ಗಗಳ ಪ್ರಶ್ನಾತೀತ ನಾಯಕರಾಗಿ ಬೆಳೆದಿರುವ ಸಿದ್ದರಾಮಯ್ಯನವರ ವರ್ಚಸ್ಸನ್ನು ಇಡೀ ದೇಶಾದ್ಯಂತ ಹಿಂದುಳಿದ ವರ್ಗಗಳ ಮತ ಕ್ರೋಢೀಕರಣಕ್ಕೆ ಬಳಸಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ಈ ಮೂಲಕ ರಣತಂತ್ರ ಹೆಣೆದಿದೆ.
ಬದಲಾಗುತ್ತಿರುವ ಕಾಂಗ್ರೆಸ್ ತಂತ್ರಗಾರಿಕೆ
ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಗೆ ಸೇರ್ಪಡೆಗೊಳಿಸಿರುವ ಹೈಕಮಾಂಡ್ ನಡೆ ಭವಿಷ್ಯದ ರಾಜಕೀಯ ಸಮೀಕರಣಗಳ ಸ್ಪಷ್ಟ ಮುನ್ಸೂಚನೆಯಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಪ್ರಬಲ ಒಬಿಸಿ ನಾಯಕರ ಕೊರತೆಯನ್ನು ಎದುರಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಸಿದ್ದರಾಮಯ್ಯನವರ ಸೇರ್ಪಡೆಯು ಹೊಸ ಬಲ ತಂದಿದೆ.

