2028ಕ್ಕೂ ಡಿಕೆಶಿಯೇ ಸಿಎಂ ಆಗಲಿ; ಅವರ ನೇತೃತ್ವದಲ್ಲೇ ಕಾಂಗ್ರೆಸ್ ಅಧಿಕಾರಕ್ಕೆ ಬರಲಿ: ಸತೀಶ್ ಜಾರಕಿಹೊಳಿ
x

2028ಕ್ಕೂ ಡಿಕೆಶಿಯೇ ಸಿಎಂ ಆಗಲಿ; ಅವರ ನೇತೃತ್ವದಲ್ಲೇ ಕಾಂಗ್ರೆಸ್ ಅಧಿಕಾರಕ್ಕೆ ಬರಲಿ: ಸತೀಶ್ ಜಾರಕಿಹೊಳಿ

ಈ ಹಿಂದೆ 2028ರಲ್ಲಿ ಅವಕಾಶ ಸಿಕ್ಕರೆ ಮುಖ್ಯಮಂತ್ರಿ ಹುದ್ದೆಗೆ ಏರುವುದಾಗಿ ಹೇಳಿದ್ದೆ. ಆದರೆ ನನಗೆ ಇನ್ನೂ ವಯಸ್ಸಿದೆ, ನಾನು ಇನ್ನೂ ಕಾಯುತ್ತೇನೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.


2028ರ ವಿಧಾನಸಭೆ ಚುನಾವಣೆಯಲ್ಲೂ ಡಿ.ಕೆ. ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಬೇಕು. ಅವರ ನೇತೃತ್ವದಲ್ಲೇ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಹಿಂದೆ 2028ರಲ್ಲಿ ಅವಕಾಶ ಸಿಕ್ಕರೆ ತಾವು ಮುಖ್ಯಮಂತ್ರಿ ಹುದ್ದೆಗೆ ಏರುವುದಾಗಿ ಹೇಳಿದ್ದೆ. ಇದೀಗ ಡಿ.ಕೆ. ಶಿವಕುಮಾರ್ ಅವರೇ ಮುಂದೆಯೂ ತಾವೇ ಮುಖ್ಯಮಂತ್ರಿ ಆಗುವುದಾಗಿ ಹೇಳುತ್ತಿದ್ದಾರೆ. ಇದರಿಂದ ತಮಗೆ ಸಂತೋಷವಾಗಿದೆ ಎಂದು ಹೇಳಿದರು.

"2028ಕ್ಕೂ ಅವರೇ ಮುಖ್ಯಮಂತ್ರಿ ಆಗಲಿ. ಅವರಿಂದಲೇ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿ. ನನಗೆ ಇನ್ನೂ ವಯಸ್ಸಿದೆ, ನಾನು ಕಾಯುತ್ತೇನೆ" ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ಸರ್ಕಾರ ದಿವಾಳಿಯಾಗಿಲ್ಲ

ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ಹಣಕಾಸು ಇಲಾಖೆ ನೀಡಿರುವ ಪತ್ರದ ಬಗ್ಗೆಯೂ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದಾರೆ. ಸರ್ಕಾರದ ಬೊಕ್ಕಸ ಖಾಲಿಯಾಗಿದೆ ಎಂದು ಹಣಕಾಸು ಇಲಾಖೆ ಹೇಳಿಲ್ಲ. ಬಜೆಟ್‌ನಲ್ಲಿ ಘೋಷಿಸಿರುವ ಯೋಜನೆಗಳಿಗೆ ಅಗತ್ಯವಿರುವ ಹಣ ಲಭ್ಯವಿದೆ. ಆದರೆ ಹೊಸ ಯೋಜನೆಗಳು ಅಥವಾ ಘೋಷಣೆಗಳಿಗೆ ಹೆಚ್ಚುವರಿ ಹಣ ಹೊಂದಿಸುವುದು ಕಷ್ಟವಾಗಬಹುದು ಎಂದು ಇಲಾಖೆ ತಿಳಿಸಿದೆ ಎಂದು ಅವರು ಹೇಳಿದರು.

ಹೊಸ ಯೋಜನೆಗಳನ್ನು ಘೋಷಿಸುವಾಗ ಹಣಕಾಸಿನ ಲಭ್ಯತೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂಬುದು ಹಣಕಾಸು ಇಲಾಖೆಯ ಸಲಹೆ. ಕೆಲವು ಇಲಾಖೆಗಳಲ್ಲಿನ ಅನುದಾನ ಸಂಪೂರ್ಣವಾಗಿ ವೆಚ್ಚವಾಗುವುದಿಲ್ಲ. ಅಂತಹ ಹಣವನ್ನು ಅಗತ್ಯವಿರುವ ಹೊಸ ಯೋಜನೆಗಳಿಗೆ ಬಳಸಿಕೊಳ್ಳುವ ಸಾಧ್ಯತೆಯಿದೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.

ಇದನ್ನು ಸರ್ಕಾರ ದಿವಾಳಿಯಾಗಿದೆ ಎಂಬ ಅರ್ಥದಲ್ಲಿ ನೋಡಬಾರದು ಎಂದು ಅವರು ಸ್ಪಷ್ಟಪಡಿಸಿದರು. ರಾಜ್ಯದ ಹಣಕಾಸು ಪರಿಸ್ಥಿತಿ ಕುರಿತು ಇತ್ತೀಚೆಗೆ ಹಣಕಾಸು ಇಲಾಖೆ ವೆಚ್ಚದಲ್ಲಿ ಎಚ್ಚರಿಕೆ ವಹಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿರುವ ವರದಿಗಳೂ ಪ್ರಕಟವಾಗಿವೆ.

ಇಡಿ ನೋಟಿಸ್ ಬಂದರೆ ಉತ್ತರಿಸುತ್ತೇನೆ

ತಮ್ಮ ವಿರುದ್ಧ ನಡೆದ ಜಾರಿ ನಿರ್ದೇಶನಾಲಯದ ಶೋಧ ಕಾರ್ಯಾಚರಣೆಯ ಕುರಿತು ಮಾತನಾಡಿದ ಸತೀಶ್ ಜಾರಕಿಹೊಳಿ, ಯಾವುದೇ ಸಮಯದಲ್ಲಾದರೂ ಇಡಿಯಿಂದ ನೋಟಿಸ್ ಬರಬಹುದು. ನೋಟಿಸ್ ಬಂದರೆ ಅಧಿಕಾರಿಗಳ ಮುಂದೆ ಹಾಜರಾಗಿ ಅಗತ್ಯ ದಾಖಲೆಗಳೊಂದಿಗೆ ಉತ್ತರಿಸುವುದಾಗಿ ಹೇಳಿದರು. ವಿದೇಶಿ ಹೂಡಿಕೆ ಸೇರಿದಂತೆ ತನಿಖೆಗೆ ಸಂಬಂಧಿಸಿದ ವಿಚಾರಗಳನ್ನು ಸಾರ್ವಜನಿಕವಾಗಿ ಚರ್ಚಿಸುವುದಿಲ್ಲ. ಇಡಿ ಮುಂದೆ ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವುದಾಗಿ ಅವರು ತಿಳಿಸಿದರು.

ಸೆಪ್ಟೆಂಬರ್ 9 ಮತ್ತು 10ರಂದು ಸತೀಶ್ ಜಾರಕಿಹೊಳಿ, ಅವರ ಕುಟುಂಬಸ್ಥರು ಹಾಗೂ ಆಪ್ತರಿಗೆ ಸಂಬಂಧಿಸಿದ 21 ಸ್ಥಳಗಳಲ್ಲಿ ಇಡಿ ಶೋಧ ನಡೆಸಿತ್ತು. ವಿದೇಶಿ ಹೂಡಿಕೆ, ಗಡಿಯಾಚೆಗಿನ ವ್ಯವಹಾರ ಸಂಬಂಧಗಳು ಮತ್ತು ಹಣಕಾಸಿನ ಅಕ್ರಮಗಳ ಆರೋಪಗಳಿಗೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ ಎಂದು ಇಡಿ ತಿಳಿಸಿತ್ತು. ಶೋಧದ ವೇಳೆ 3.3 ಕೋಟಿ ರೂ. ನಗದು ಹಾಗೂ 15 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ಪತ್ತೆಯಾಗಿರುವುದಾಗಿ ಸಂಸ್ಥೆ ಹೇಳಿದೆ.

'ಇಡಿ ದಾಳಿ ರಾಜಕೀಯ ಪ್ರೇರಿತ' ಎಂದ ಜಾರಕಿಹೊಳಿ

ಇಡಿ ದಾಳಿ ರಾಜಕೀಯ ಪ್ರೇರಿತವಾಗಿದೆ ಎಂಬುದು ತಮ್ಮ ನಿಲುವು ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ತಮ್ಮ ವಿರುದ್ಧ ದೂರು ನೀಡಿದವರು ಯಾರು ಮತ್ತು ಅದರ ಹಿನ್ನೆಲೆ ಏನು ಎಂಬುದರ ಬಗ್ಗೆ ತಾವು ಗಮನಹರಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಆದರೆ, ಇಡಿ ತನ್ನ ತನಿಖೆಯನ್ನು ವಿದೇಶಿ ಹೂಡಿಕೆಗಳು ಮತ್ತು ಸಂಬಂಧಿತ ಹಣಕಾಸು ವ್ಯವಹಾರಗಳ ಕುರಿತು ನಡೆಸುತ್ತಿದೆ. ತನಿಖೆಯ ಮುಂದಿನ ಹಂತವು ಅಧಿಕಾರಿಗಳಿಗೆ ಸಲ್ಲಿಸಲಾಗುವ ದಾಖಲೆಗಳು ಹಾಗೂ ಇತರ ಸಾಕ್ಷ್ಯಗಳ ಆಧಾರದ ಮೇಲೆ ನಿರ್ಧಾರವಾಗಲಿದೆ.

Read More
Next Story