80% commission against the state government in the assembly, allegations of unnatural deaths of officials
x

ವಿಧಾನಸಭೆಯಲ್ಲಿ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ಮಾತನಾಡಿದರು. 

ರಾಜ್ಯ ಸರ್ಕಾರದ ವಿರುದ್ಧ ಶೇ. 80 ಕಮಿಷನ್, ಅಧಿಕಾರಿಗಳ ಅಸಹಜ ಸಾವು ಆರೋಪ

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಭ್ರಷ್ಟ್ರಾಚಾರ ಮಿತಿಮೀರಿದೆ. ಅಧಿಕಾರಿಗಳು ಸರ್ಕಾರದ ವಿರುದ್ಧ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಆರ್‌. ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.


Click the Play button to hear this message in audio format

ರಾಜ್ಯ ಸರ್ಕಾರ ಎಲ್ಲಾ ಕಾಮಗಾರಿಗಳಲ್ಲೂ ಶೇ.80 ಕಮಿಷನ್ ಪಡೆಯುತ್ತಿದ್ದಾರೆ ಎಂದು ಗುತ್ತಿಗೆದಾರರೂ ಸೇರಿದಂತೆ ಹಲವರು ಆರೋಪ ಮಾಡಿದ್ದಾರೆ. ಈಗ ನೀವು ಸಾಕ್ಷಿ ಕೇಳುತ್ತಿದ್ದೀರ. ನಮ್ಮ ಮೇಲೆ ಆರೋಪ ಮಾಡಿದಾಗ ಸಾಕ್ಷಿ ಕೊಟ್ಟಿದ್ದಿರಾ ? ಡಬಲ್ ಕಮೀಷನ್ ಆರೋಪ ಮಾಡಿದಾಗಲೂ ಗುತ್ತಿಗೆದಾರರ ಮೇಲೆ ನೀವು ಕ್ರಮ ಕೈಗೊಂಡಿಲ್ಲ. ಅದರರ್ಥ ನೀವು ಅಪರಾಧಿಗಳು, ಕಮೀಷನ್ ಆರೋಪ ಸತ್ಯವಾದಂತೆ ಎಂದು ಪ್ರತಿಪಕ್ಷದ ನಾಯಕ ಆರ್‌. ಅಶೋಕ್ ಆರೋಪಿಸಿದರು.

ವಿಧಾನಸಭೆಯಲ್ಲಿ ಸೋಮವಾರ(ಫೆ.2) ಮಾತನಾಡಿದ ಅವರು, ಬೆಂಗಳೂರು ಉಳಿದರೆ ಸಾಕಾಗಿದೆ. ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಬ್ರಾಂಡ್ ಬೆಂಗಳೂರು, ಗುಂಡಿ ಬೆಂಗಳೂರು ನಮಗೆ ಬೇಡ, ಸಚಿವ ಎಂ‌.ಬಿ. ಪಾಟೀಲ್ ಅವರ ಬಿಯಾಂಡ್ ಬೆಂಗಳೂರು ಬೇಡ, ನಮಗೆ ನಾಡಪ್ರಭು ಕೆಂಪೇಗೌಡರ, ಮಾಜಿ ಸಿಎಂ ಕೆಂಗಲ್ ಹನುಮಂತಯ್ಯ ಹಾಗೂ ಎಸ್‌. ಎಂ. ಕೃಷ್ಣ ಅವರ ಬೆಂಗಳೂರು ‌ಸಾಕು. ಶಾಲು ಹಾಕೊಂಡು ತಿರುಗುವ ಡಿ.ಕೆ. ಶಿವಕುಮಾರ್‌ ಕಾಣೆಯಾಗಿದ್ದಾರೆ. ನಾನು 150 ರೂ. ಶಾಲು ಹಾಕಿದರೆ ಅವರು 2.5 ಲಕ್ಷ ರೂ. ಮೌಲ್ಯದ ಶಾಲು ಹಾಕುತ್ತಾರೆ. ಈ ವೇಳೆ ಪುನಿತ್ ರಾಜ್ ಕುಮಾರ್ ಅವರ ಕಾಣದಂತೆ ಮಾಯವಾದನೋ ನಮ್ಮ ಶಿವಕುಮಾರ ಮಾಯವಾದನೊ ಎಂಬ ಹಾಡು ನೆನಪಾಗುತ್ತಿದೆ ಎಂದು ನಗೆ ಚಟಾಕಿ ಹಾರಿಸಿದರು.

ಕಾಂಗ್ರೆಸ್‌ ಮುಖಂಡರಿಂದ ಅಧಿಕಾರಿಗಳಿಗೆ ಕಿರುಕುಳ

ಕಾಂಗ್ರೆಸ್‌ ಮುಖಂಡರಿಂದ ಅಧಿಕಾರಿಗಳನ್ನು ಹುರುದುಂಬಿಸಿ ಕೆಲಸ ಮಾಡಿಸಬೇಕಿತ್ತು. ಆದರೆ ಅವರಿಗೆ ಬೆದರಿಕೆ ಹಾಕುವ ಕೆಲಸವಾಗುತ್ತಿದೆ. ಒಂಬತ್ತು ಮಂದಿ ಪತ್ರ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 15 ಕ್ಕೂ ಹೆಚ್ಚು ಅಧಿಕಾರಿಗಳ ಅಸಹಜ ಸಾವಾಗಿದೆ. ವಾಲ್ಮೀಕಿ ಹಗರಣದಲ್ಲಿ ಅಧಿಕಾರಿ ಚಂದ್ರಶೇಖರ ಕುಟುಂಬಕ್ಕೆ ನ್ಯಾಯ ಸಿಗಲಿಲ್ಲ. ರಾಜ್ಯದಲ್ಲಿ ಅಧಿಕಾರಿಗಳ ಮೇಲೆ ದೌರ್ಜನ್ಯವಾಗುತ್ತಿದೆ. ಮಾಗಡಿ ಶಾಸಕ ಬಾಲಕೃಷ್ಣ ತಹಶೀಲ್ದಾರರಿಗೆ ಚಪ್ಪಲಿಯಲ್ಲಿ ಹೊಡೆಸುತ್ತೇನೆ ಎಂದಿದ್ದರು. ರಾಜೀವ್ ಗೌಡ ಹೇಳಬಾರದ ಪದಗಳೆಲ್ಲ ಹೇಳಿದ್ದಾನೆ. ಕಲ್ಟ್ ಸಿನಿಮಾ ಚಿತ್ರದ ಬ್ಯಾನರ್ ತೆಗೆದಿರೋದಕ್ಕೆ ವಿರೋಧ ಮಾಡಿದ್ದಾರೆ. ದೇವದುರ್ಗ ಶಾಸಕಿ ಕರೆಮ್ಮ ನಾಯಕ್ ಅವರಿಗೇ ರಕ್ಷಣೆ ಇಲ್ಲದಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಭ್ರಷ್ಟಾಚಾರ ಹೆಚ್ಚಳ

ಇನ್ಸ್‌ಪೆಕ್ಟರ್‌ ಗೋವಿಂದರಾಜು ಸಿಎಆರ್‌ ಮೈದಾನದಲ್ಲಿ ಲಂಚ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ ಎಂದು ಫೋಟೋ ಪ್ರದರ್ಶಿಸಿದ ಅವರು, ಸರ್ಕಾರದ ಭ್ರಷ್ಟಾಚಾರ ಎಲ್ಲಿಗೆ ಬಂದಿದೆ ನೋಡಿ ಎಂದರು. ಪ್ರಕರಣವೊಂದರಲ್ಲಿ 11 ಕೋಟಿ ಡೀಲ್ ಮಾಡಿ, ನಾಲ್ಕು ಲಕ್ಷ ಪಡೆಯುವಾಗ ಸಿಕ್ಕಿಬಿದ್ದು, ಬಾಯಿಬಾಯಿ ಬಡಿದುಕೊಳ್ಳುತ್ತಿದ್ದಾನೆ. ಮೊದಲು ಟೇಬಲ್ ಕೆಳಗೆ ನಡೆಯುತ್ತಿತ್ತು. ಈಗ ಸಿಎಆರ್ ಮೈದಾನದಲ್ಲಿ ನಡೆಯುತ್ತಿದೆ ಎಂದರು.

ಪೊಲೀಸರ ವರ್ಗಾವಣೆ ಸ್ಥಗಿತ

ಬೆಂಗಳೂರು ನಂದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೇಳುತ್ತಿದ್ದಾರೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ ನಾನ್ಯಾಕೆ ಇರೋದು ಎನ್ನುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ನಾನು ನಿಮ್ಮನ್ನು ಸಚಿವರನ್ನಾಗಿ ಮಾಡಿದ್ದು ಎನ್ನುತ್ತಿದ್ದಾರೆ. ಇವರ ಕಿತ್ತಾಟದಿಂದ ನಗರದಲ್ಲಿ ಪೊಲೀಸರ ವರ್ಗಾವಣೆಯಾಗುತ್ತಿಲ್ಲ ಎಂದು ಆರೋಪಿಸಿದರು.

ಬಾಂಗ್ಲಾ ವಲಸಿಗರಿಂದ ಅಪರಾಧ ಹೆಚ್ಚಳ

ಪುನೀತ್ ಕೆರೆಹಳ್ಳಿ ಅಕ್ರಮ‌ ಬಾಂಗ್ಲಾ ವಲಸಿಗರ ಬಗ್ಗೆ ಪ್ರಶ್ನೆ ಮಾಡಿದರೆ ಅವರನ್ನ ಜೈಲಿಗೆ ಹಾಕುತ್ತಾರೆ. ಬಾಂಗ್ಲಾದೇಶಿ ವಲಸಗರಿಂದ ಅಪರಾಧ ಪ್ರಮಾಣ ಹೆಚ್ಚಾಗಿದೆ ಎಂದು ಎಲ್ಲಾ ಮಾಧ್ಯಮಗಳಲ್ಲಿ ಬಂದಿದೆ. ರಾಜ್ಯದ ಹಲವೆಡೆ ಬಾಂಗ್ಲಾದೇಶಿಗರು ವಾಸ ಮಾಡುತ್ತಿದ್ದಾರೆ. ನಾನೂ ಕೂಡ ಕೆಲವು ಪ್ರದೇಶಗಳಿಗೆ ಭೇಟಿ ನೀಡಿದ್ದೆ. ಕಾಫಿ ತೋಟಗಳಲ್ಲಿ ನಮ್ಮವರು ಹೆಚ್ಚು ಕೂಲಿ ಕೇಳುತ್ತಾರೆ ಎಂದು ಬಾಂಗ್ಲಾದೇಶಿಯರಿಗೆ 300 ರೂ. ನೀಡಿದರೆ ಕಡಿಮೆ ಕೂಲಿಗೆ ಬರುತ್ತಾರೆ ಎಂದು ನೇಮಿಸಿಕೊಳ್ಳುತ್ತಿದ್ದಾರೆ. ಇದರಿಂದ ಅಪರಾಧ ಪ್ರಮಾಣವೂ ಹೆಚ್ಚಳವಾಗುತ್ತಿದೆ ಎಂದು ತಿಳಿಸಿದರು.

Read More
Next Story