
ರಾಮನಗರದಲ್ಲಿ 'SIR ಸ್ಕ್ಯಾಮ್? ಬಾಂಗ್ಲಾ ವಲಸಿಗರಿಗೆ ಮತದಾರರ ಪಟ್ಟಿಯಲ್ಲಿ ಮಣೆ; ಹೆಚ್ಡಿಕೆ
ನಿಯಮಾವಳಿಗಳ ಪ್ರಕಾರ, ಬೂತ್ ಮಟ್ಟದ ಅಧಿಕಾರಿಗಳು ಮನೆ-ಮನೆಗೆ ತೆರಳಿ ಪರಿಶೀಲನೆ ನಡೆಸಬೇಕು. ಆದರೆ, ರಾಮನಗರದಲ್ಲಿ ಟಿಪ್ಪುನಗರದ ಕಲ್ಯಾಣ ಮಂಟಪವೊಂದರಲ್ಲಿ ಸಾವಿರಾರು ಜನರನ್ನು ಒಂದೆಡೆ ಸೇರಿಸಿ, ಕಾನೂನುಬಾಹಿರವಾಗಿ 'SIR ಜಾತ್ರೆ' ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯು ರಾಮನಗರದಲ್ಲಿ ಬೃಹತ್ ಹಗರಣಕ್ಕೆ ಸಾಕ್ಷಿಯಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಈ ಅಕ್ರಮಕ್ಕೆ ಸಂಬಂಧಿಸಿದ ವಿಡಿಯೋ ಸಾಕ್ಷ್ಯಗಳನ್ನು ಬಿಡುಗಡೆ ಮಾಡಿರುವ ಅವರು, ಆಡಳಿತಾರೂಢ ಕಾಂಗ್ರೆಸ್ ಸರ್ಕಾರವು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿದೆ ಎಂದು ಕಿಡಿಕಾರಿದ್ದಾರೆ.
ಜೆಪಿ ಭವನದಲ್ಲಿ ನಡೆದ ತುರ್ತು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, "ರಾಮನಗರ ಸೇರಿದಂತೆ ರಾಜ್ಯದ ಹಲವೆಡೆ ಕಾಂಗ್ರೆಸ್ ಸರ್ಕಾರವು SIR ಪ್ರಕ್ರಿಯೆಯನ್ನು ಸಂಪೂರ್ಣವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದಕ್ಕೆ ರಾಮನಗರದಲ್ಲಿ ನಡೆಯುತ್ತಿರುವ ಅಕ್ರಮಗಳೇ ನೈಜ ಸಾಕ್ಷಿ. ಕೂಡಲೇ ರಾಮನಗರ ಜಿಲ್ಲಾಧಿಕಾರಿಯನ್ನು ಅಮಾನತುಗೊಳಿಸಬೇಕು ಮತ್ತು ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳನ್ನು ತಕ್ಷಣವೇ ಸೇವೆಯಿಂದ ವಜಾಗೊಳಿಸಬೇಕು" ಎಂದು ಆಗ್ರಹಿಸಿದರು.
ಬಾಂಗ್ಲಾ ನುಸುಳುಕೋರರಿಗೆ ಮಣೆ
ಮುಖ್ಯಮಂತ್ರಿಗಳ ನೇರ ಪ್ರಭಾವ ಬಳಸಿ ಬಾಂಗ್ಲಾದೇಶದ ಅಕ್ರಮ ವಲಸಿಗರಿಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವ ವ್ಯವಸ್ಥಿತ ಸಂಚು ನಡೆಯುತ್ತಿದೆ ಎಂದು ಸಚಿವರು ಬಾಂಬ್ ಸಿಡಿಸಿದ್ದಾರೆ. ನಿಯಮಾವಳಿಗಳ ಪ್ರಕಾರ, ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ-ಮನೆಗೆ ತೆರಳಿ ಪರಿಶೀಲನೆ ನಡೆಸಬೇಕು. ಆದರೆ, ರಾಮನಗರದಲ್ಲಿ ಟಿಪ್ಪುನಗರದ ಕಲ್ಯಾಣ ಮಂಟಪವೊಂದರಲ್ಲಿ ಸಾವಿರಾರು ಜನರನ್ನು ಒಂದೆಡೆ ಸೇರಿಸಿ, ಕಾನೂನುಬಾಹಿರವಾಗಿ 'SIR ಜಾತ್ರೆ' ನಡೆಸಲಾಗುತ್ತಿದೆ. ಇದು ದೇಶದ ಭದ್ರತೆಗೆ ನೇರ ಸವಾಲಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಗ್ಯಾರಂಟಿ ಹೆಸರಿನಲ್ಲಿ ಬ್ಲಾಕ್‌ಮೇಲ್
ರಾಜ್ಯ ಸರ್ಕಾರವು ಜನರಿಗೆ ನೀಡುವ 'ಗ್ಯಾರಂಟಿ' ಯೋಜನೆಗಳಿಗೆ ಕತ್ತರಿ ಬೀಳಲಿದೆ ಎಂಬ ಭೀತಿಯನ್ನು ಹುಟ್ಟುಹಾಕಿ, ಮತದಾರರನ್ನು ಬ್ಲಾಕ್‌ಮೇಲ್ ಮಾಡಲಾಗುತ್ತಿದೆ ಎಂದು ಹೆಚ್.ಡಿ.ಕೆ ಆರೋಪಿಸಿದರು. "ಮುಖ್ಯಮಂತ್ರಿಯಾದವರು ಜನರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಆದರೆ, 'ನಿಮಗೆ ಮತವಿಲ್ಲದಿದ್ದರೆ ಸೌಲಭ್ಯ ಸಿಗುವುದಿಲ್ಲ' ಎಂಬಂತಹ ಬೆದರಿಕೆ ಹಾಕುತ್ತಿರುವುದು ಶೋಭೆ ತರುವುದಿಲ್ಲ. ಕಾಂಗ್ರೆಸ್ ತನ್ನ ಓಲೈಕೆ ರಾಜಕಾರಣಕ್ಕಾಗಿ ಸರ್ಕಾರಿ ಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ" ಎಂದು ಅವರು ತೀವ್ರವಾಗಿ ಟೀಕಿಸಿದರು.
ಕೇಂದ್ರಕ್ಕೆ ದೂರು ಸಲ್ಲಿಕೆ
ಪ್ರಜಾಪ್ರಭುತ್ವದ ಕಗ್ಗೊಲೆಯಾಗಿರುವ ಈ ಘಟನೆಯನ್ನು ತಾವೇ ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಸಿದ ಕುಮಾರಸ್ವಾಮಿ, ತಮ್ಮ ಬಳಿ ಇರುವ ಎಲ್ಲಾ ವಿಡಿಯೋ ಸಾಕ್ಷ್ಯಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ತಲುಪಿಸುವುದಾಗಿ ತಿಳಿಸಿದರು. ತಕ್ಷಣವೇ ಈ ಅಕ್ರಮ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಪುನರುಚ್ಚರಿಸಿದರು.
ಆಡಳಿತ ಪಕ್ಷದ ಒತ್ತಡಕ್ಕೆ ಮಣಿದು ಅಧಿಕಾರಿಗಳು ಸಂವಿಧಾನ ಮತ್ತು ಕಾನೂನನ್ನು ಗಾಳಿಗೆ ತೂರುತ್ತಿದ್ದಾರೆ. ಈ ಅಕ್ರಮಕ್ಕೆ ಕಡಿವಾಣ ಹಾಕದಿದ್ದರೆ ಭವಿಷ್ಯದಲ್ಲಿ ದೊಡ್ಡ ಗಂಡಾಂತರ ಕಾದಿದೆ ಎಂದು ಹೆಚ್.ಡಿ. ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

